Site icon ಒಡನಾಡಿ

ಫೈನಾನ್ಸ್ ಕಿರುಕುಳಕ್ಕೊಳಗಾದ ಮಹಿಳೆಯರನ್ನು ಕರೆಯಿಸಿ ವಿಚಾರಣೆ ನಡೆಸಿದ ಪೊಲೀಸರು

ದಾಂಡೇಲಿ : ಮೈಕ್ರೋ ಫೈನಾನ್ಸ್ ನ ಕಿರುಕುಳಕ್ಕೆ ಒಳಗಾಗಿರುವ ದಾಂಡೇಲಿಯ ಎಂಟಕ್ಕೂ ಹೆಚ್ಚು ಮಹಿಳೆಯರನ್ನ ಠಾಣೆಗೆ ಕರೆಯಿಸಿದ ಪೊಲೀಸರು ಅವರಿಂದ ವಿವರಣೆ ಪಡೆದು ನೈತಿಕ ಧೈರ್ಯ ತುಂಬಿ ಕಳುಹಿಸಿದ್ದಾರೆ.

ಮೈಕ್ರೋ ಫೈನಾನ್ಸ್ ನವರ ಕಿರುಕುಳದ ಕುರಿತಾಗಿ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ  ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣರವರು ಈ ಬಗ್ಗೆ ನೊಂದ ಮಹಿಳೆಯರನ್ನು ಕರೆಯಿಸಿ, ಅವರಿಂದ ವಿವರಣೆ ಪಡೆಯುವಂತೆ ಸ್ಥಳೀಯ ಪೊಲೀಸರಿಗೆ ನಿರ್ದೇಶಿಸಿದ್ದರು. ಆ ಹಿನ್ನೆಲೆಯಲ್ಲಿ ಡಿವೈಎಸ್ಪಿ ಶಿವಾನಂದ್ ಮದರಖಂಡಿಯವರ ಮಾರ್ಗದರ್ಶನದಂತೆ ಪಿಎಸ್ಐ ಅಮೀನಸಾಬ ಅತ್ತಾರ ಹಾಗೂ ಕಿರಣ್ ಪಾಟೀಲ್ ಅವರು ಗಾಂಧಿನಗರ,  ಮಾರುತಿನಗರ, ಅಜಾದ್ ನಗರ ಸೇರಿದಂತೆ ಮೈಕ್ರೋ ಫೈನಾನ್ಸ್ ಗಳಿಂದ ಕಿರುಕುಳಕ್ಕೊಳಗಾದ ಎಂಟಕ್ಕೂ ಹೆಚ್ಚು ಮಹಿಳೆಯರನ್ನ ಠಾಣೆಗೆ ಕರೆಯಿಸಿ ಅವರಿಂದ ಮಾಹಿತಿಯನ್ನು ಪಡೆದಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸ ಅಧಿಕಾರಿಗಳು ‘ನಿಮಗೆ ಯಾವ ಸಮಸ್ಯೆಯೂ ಆಗದಂತೆ ನೋಡಿಕೊಳ್ಳುತ್ತವೆ’ ಎನ್ನುವ ನೈತಿಕ ಧೈರ್ಯವನ್ನು ನೀಡಿ ಫೈನಾನ್ಸ್ ನವರಿಂದ ಅವರಿಗೆ ಆಗಿರುವ ಸಮಸ್ಯೆಗಳನ್ನ ಆಲಿಸಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆಯರು ತಮಗೆ ಎಸ್. ಕೆ. ಎಸ್. ಫೈನಾನ್ಸ್ ಹಾಗೂ ಗ್ರಾಮೀಣ ಕೋಟ್,  ಚೈತನ್ಯ ಫೈನಾನ್ಸ್ ಹಾಗೂ ಧರ್ಮಸ್ಥಳ ಸಂಘ  ಇವರಿಂದ ತಾವು ಪಡೆದಿರುವ ಸಾಲಗಳು ಹಾಗೂ ತುಂಬಲು ಆಗಿರುವ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಎಸ್. ಕೆ .ಎಸ್ .ಮತ್ತು ಗ್ರಾಮೀಣ ಕೋಟ್ ಫೈನಾನ್ಸ್ ಅವರಿಂದ ಹಣ ಪಡೆದ ಮೂವರು ಮಹಿಳೆಯರು ಹಣ ತುಂಬಲಾಗದೆ ಎಲ್ಲೋ ಹೋಗಿರುವುದನ್ನ ಪೊಲೀಸರಿಗೆ ತಿಳಿಸಿರುವ ಮಹಿಳೆಯರು ಅವರ ಹಣವನ್ನು ತಮ್ಮಿಂದ ತುಂಬುವಂತೆ ಫೈನಾನ್ಸ್ ನವರು ಒತ್ತಾಯಿಸಿದ ಬಗ್ಗೆಯೂ ಹಾಗೂ ತಾವು ಎರಡು ಕಂತನ್ನು  ತುಂಬಿರುವ ಬಗ್ಗೆಯೂ ಪೊಲೀಸರ ಗಮನಕ್ಕೆ ತಂದಿದ್ದಾರೆ.

ಈ ಸಂದರ್ಭದಲ್ಲಿ ಪೊಲೀಸರೆದರು ತಮ್ಮ ಬೇಡಿಕೆಯನಿಟ್ಟ ಮಹಿಳೆಯರು ಮೈಕ್ರೋ ಫೈನಾನ್ಸ್ ನವರು ನಿಗದಿಪಡಿಸಿದ ವಾರದ ಕಂತಿನ ಬದಲಿಗೆ ತಿಂಗಳು ಕಂತು ಮಾಡುವಂತೆ ಆಗಬೇಕು. ಒಂದೊಮ್ಮೆ ಸಾಲ ಮಾಡಿದವರು ತುಂಬದೇ ಕಣ್ಮರೆಯಾದಲ್ಲಿ   ಅವರ ಸಂಘದ ಉಳಿದ ಸದಸ್ಯರು ಹಣ ತುಂಬುವಂತೆ  ಒತ್ತಾಯಿಸಬಾರದು.‌ ತಿಂಗಳ ತಂತು ಕಡಿಮೆ ಮಾಡಬೇಕು. ಬಡ್ಡಿದರವನ್ನ ಕಡಿಮೆ ಮಾಡಬೇಕು ಎಂಬ ಬೇಡಿಕೆಗಳನ್ನು ಕೂಡ ಇಟ್ಟಿದ್ದಾರೆ.

*ದೂರು ಬೇಡ*:  ಪೊಲೀಸರು ‘ನೀವು ಮೈಕ್ರೋ ಫೈನಾನ್ಸ್ ನವರಿಂದ ಕಿರುಕುಳಕ್ಕೆ ಒಳಗಾಗಿ ಅವರ ಮೇಲೆ ದೂರು ಕೊಡುವುದಿದ ದರೆ ದಾಖಲಿಸುತ್ತೇವೆ” ಎಂದಾಗ   ಆ ಮಹಿಳೆಯರು ‘ನಾವು ಸಾಲ ಪಡೆದಿದ್ದು ನಿಜ. ನಮ್ಮ ಸಮಸ್ಯೆಯಿಂದಾಗಿ ಆ ಸಂದರ್ಭದಲ್ಲಿ ತುಂಬಲಿಕ್ಕಾಗದಿರುವುದು ನಿಜ. ಆದರೆ ಸಮಯಾವಕಾಶ ನೀಡಿದರೆ ನಾವು ಸಾಲವನ್ನು ತುಂಬುತ್ತೇವೆ. ಹಾಗಾಗಿ ಯಾರು ಮೇಲೆಯೂ ದೂರು ಬೇಡ’ ಎಂದು ತಿಳಿಸಿದ್ದಾರೆ.

ಇದರ ಜೊತೆಗೆ ಈ ಮೊದಲು ಮೈಕ್ರೋ ಫೈನಾನ್ಸ್ ನವರು ನಮ್ಮ ತಮ್ಮ ಪ್ರದೇಶಕ್ಕೆ ಬಂದು,  ಮನೆಗಳಿಗೆ ಬಂದು ಕಿರುಕುಳ ನೀಡಿದ್ದು ನಿಜ. ಆದರೆ ಈಗ ಪೊಲೀಸರು ಎಚ್ಚರಿಕೆ ನೀಡಿದ ಮೇಲೆ, ಮಾಧ್ಯಮಗಳಲ್ಲಿ ಸುದ್ದಿ ಬಂದ ಮೇಲೆ ಅವರು ಆ ರೀತಿ ಮಾಡುವುದನ್ನ ನಿಲ್ಲಿಸಿದ್ದಾರೆ ಎಂದೂ ಮಹಿಳೆಯರು ತಿಳಿಸಿದ್ದಾರೆ.

Exit mobile version