Site icon ಒಡನಾಡಿ

ಸಾಗವಾನಿಯ ಊರಲ್ಲಿ ಬೆಂಗಳೂರಿನ ಅಕೇಶಿಯಾ ಪೀಠೋಪಕರಣಗಳ ಹಾವಳಿ

ದಾಂಡೇಲಿ : ಸಾಗವಾನಿಯ ನಗರವೆಂದೇ ಖ್ಯಾತಿ ಪಡೆದಿರುವ ದಾಂಡೇಲಿಯಲ್ಲಿ ಇದೀಗ ಬೆಂಗಳೂರಿನಿಂದ ಬಂದ ಅಕೇಶಿಯಾ ಪೀಠೋಪಕರಣಗಳ ಹಾವಳಿ ಜೋರಾಗಿದೆ.

ಹೇಳಿ ಕೇಳಿ ದಾಂಡೇಲಿ ಇದು ಅಭಯಾರಣ್ಯ. ಬಗೆ ಬಗೆಯ ಮರಗಳು ಇಲ್ಲಿ ಹೇರಳವಾಗಿವೆ. ಅದರಲ್ಲೂ ಸಾಗುವಾನಿ ಕಟ್ಟಿಗೆ ಹಾಗೂ ಪೀಠೋಪಕರಣಗಳು ಬೇಕೆಂದರೆ ಜನ ದಾಂಡೇಲಿಯ ಕಡೆ ಮುಖ ಮಾಡುತ್ತಾರೆ. ದಾಂಡೇಲಿ ಟೀಕ್ ಎಂದರೆ ಇದು ದೇಶವಷ್ಟೇ ಅಲ್ಲ. ವಿಶ್ವ ಪ್ರಸಿದ್ಧವೇ ಆಗಿದೆ. ಇಲ್ಲಿಯ ಸಾಗವಾನಿ ಕಟ್ಟಿಗಳನ್ನು ಆನ್ಲೈನ್ ಟೆಂಡರ್ ಮೂಲಕ ದೇಶ, ವಿದೇಶಗಳ ಜನರು ಪಡೆಯುತ್ತಾರೆ. ದಾಂಡೇಲಿ ಟೀಕ್ ಬೇಕೆಂದರೆ ಜನ ಚೌಕಸಿ ಮಾಡದೇ ಖರೀದಿಸುತ್ತಾರೆ. ಮನೆ ಹಾಗೂ ಕಾರ್ಯಾಲಯಗಳ ಒಳ ಅಲಂಕಾರಕ್ಕೆ ,(ಇಂಟೀರಿಯಲ್ ಡೆಕೋರೇಷನ್), ಬಾಗಿಲು, ಕಪಾಟು ಹಾಗೂ ಇನ್ನಿತರೆ ಸಾಮಗ್ರಿಗಳಿಗೆ ಡೈನಿಂಗ್ ಟೇಬಲ್ ಹಾಗೂ ಇನ್ನಿತರೆ ಪಿಟೋಪಕರಣಗಳಿಗೆ ದಾಂಡೇಲಿಯ ಸಾಗವಾನಿಯಿಂದ ಮಾಡಿಸಲು ಬಲು ಬೇಡಿಕೆ. ದಾಂಡೇಲಿಯಲ್ಲಿ ಸಾಗವಾನಿ ಜೊತೆಗೆ ಬೀಟೆ ಕೂಡಾ ಇಲ್ಲಿ ಅಷ್ಟೇ ಬೇಡಿಕೆಯುಳ್ಳದ್ದು. ಹೀಗೆ ವಿಶ್ವದೆಲ್ಲಡೆ ಬೇಡಿಕೆಯಿರುವ ದಾಂಡೇಲಿಯ ಸಾಗವನಿ ನಗರದಲ್ಲಿಯೇ ಇದೀಗ ಅಕೇಶಿಯಾ ಹಾಗೂ ಅದಕ್ಕೂ ಕನಿಷ್ಠ ಗುಣಮಟ್ಟದ ಮರಗಳಿಂದ ತಯಾರಿಸಿದ ಪೀಠೋಪಕರಣಗಳು ಮಾರಾಟವಾಗುತ್ತಿರುವುದು ಚೋದ್ಯವೆನಿಸುತ್ತಿದೆ.

ಮೊದಲಿಲ್ಲ ಬೇರೆ ಬೇರೆ ನಗರಗಳಲ್ಲಿ ಹೀಗೆ ಅಕೇಶಿಯಾದ ಸಿದ್ದ ಮಾದರಿಯ ಸೋಫಾ ಹಾಗೂ ಇತರೆ ಪೀಠೋಪಕರಣಗಳನ್ನು ಮಾರಾಟ ಮಾಡುತ್ತಿದ್ದರು. ಇವುಗಳೆಲ್ಲ ಬೆಂಗಳೂರು ಹಾಗೂ ಬೇರೆ ಬೇರೆ ಕಡೆಯಿಂದ ಕಾರ್ಖಾನೆಯಿಂದ ಉತ್ಪಾದನೆಯಾಗಿ ಬಂದಂತಹ ಸಾಮಗ್ರಿಗಳಾದಿದ್ದವು. ಇತ್ತೀಚಿನ ದಿನಗಳಲ್ಲಿ ಸಾಗವಾನಿಗಾಗಿಯೇ ಪ್ರಸಿದ್ಧ ಪಡೆದಿರುವ ದಾಂಡೇಲಿಯಲ್ಲಿಯೂ ಕೂಡ ಮಾರಾಟಕ್ಕೆ ನಿಂತಿರುವುದು ಒಂದಿಷ್ಟು ಚರ್ಚೆ ನಡೆಸುವಂತಿದೆ.

ಅಕೇಶಿಯಾ ಹಾಗೂ ಇತರ ಕಟ್ಟಿಗೆಗಳಿಂದ ತಯಾರಿಸಲಾದ ಸೋಫಾ ಸೆಟ್ ಹಾಗೂ ಇತರೆ ಸಾಮಗ್ರಿಗಳನ್ನು ಮಹಾ ನಗರಗಳಿಂದ ತಯಾರಿಸಿ ತರಲಾಗುತ್ತಿದೆ. ಅವರು ಹೇಳುವ ಪ್ರಕಾರ ಇದು ಬೆಂಗಳೂರಿನಿಂದ ತಯಾರಿಸಲ್ಪಟ್ಟು ಇಲ್ಲಿಗೆ ತಂದು ಮಾರಾಟ ಮಾಡಲಾಗುತ್ತಿದೆ. ಇವೆಲ್ಲವೂ ಸಿದ್ಧ ಅಚ್ಚಿನಿಂದ (ರೆಡಿಮೇಡ್ ಮೋಲ್ಡ ) ತಯಾರಿಸಲ್ಪಟ್ಟ ಪೀಠೋಪಕರಣಗಳು ಎನ್ನಲಾಗುತ್ತಿದೆ.

ದಾಂಡೇಲಿಯಲ್ಲಿ ಒಂದು ಸಾಗವಾನಿ ಸೋಫಾ ಸೆಟ್ ಗೆ 60 ರಿಂದ 70 ಸಾವಿರ ರು. ಗಳಿದ್ದರೆ, ಬೆಂಗಳೂರಿನಿಂದ ಬಂದ ಅಕೇಶಿಯಾ ಸೋಪಾ ಸೆಟ್ ಗಳಿ 15 ರಿಂದ 20 ಸಾವಿರ ರೂಪಾಯಿಗೆ ಲಭ್ಯವಾಗುತ್ತಿದೆ. ಚೌಕಾಶಿ ಮಾಡಿದರೆ ಇನ್ನೂ ಕಡಿಮೆ ಬೆಲೆಗೆ ಲಭ್ಯ. ಹೇಳಿಕೊಳ್ಳಲು ಅಂತಹ ಆಕರ್ಷಕವಲ್ಲದಿದ್ದರೂ ಕೂಡ ಒಂದಿಷ್ಟು ಜನ ಇದನ್ನು ಖರೀದಿಸುತ್ತಿದ್ದಾರೆ. ಕಡಿಮೆ ಗುಣಮಟ್ಟದ ಕಟ್ಟಿಗೆಯಿಂದ ತಯಾರಿಸಲ್ಪಟ್ಟ ಈ ಸೋಪಾ ಸೆಟ್ ಅದೆಷ್ಟು ದಿನ ಬಾಳಿಕೆ ಬರುವುದೋ ಬಳಸಿದ ನಂತರವೇ ನೋಡಬೇಕಿದೆ.

ಅಗ್ಗ- ದುಬಾರಿಯ ನಡುವೆ ಸ್ಪರ್ಧೆ :
ದಾಂಡೇಲಿಯ ಸಾಗುವಾನಿಗೆ ಒಂದು ಘನಫೀಟ್ (ಸೇಫ್ಟಿ) ಗೆ 8-9 ಸಾವಿರ ರೂಪಾಯಿಗಳ ದರವಿದೆ. ಅಕೇಶಿಯಾ ಕಟ್ಟಿಗೆಗೆ ಒಂದು ಘನ ಫೀಟ್ ಗೆ 800 ರಿಂದ 1000 ರೂಪಾಯಿದೆ. ಒಂದು ಸೋಫಾ ಸೆಟ್ ಗೆ 5-6 ಸೇಫ್ಟಿ ಕಟ್ಟಿಗೆಯಾದರೂ ಬೇಕು. ಜೊತೆಗೆ ಸೋಫಾ ತಯಾರಿಸುವವರ ಮಜೂರಿ, ಪಾಲಿಶ್ ಹಾಗೂ ಇತರೆ ಸಾಮಗ್ರಿಗಳು. ಇವುಗಳಿಗೆ ಖರ್ಚಿದೆ. ಹೀಗೆ ಇಷ್ಟು ಕಟ್ಟಿಗೆಯನ್ನು ಬಳಸಿ ಅದು ಯಾವ ಲೆಕ್ಕದಲ್ಲಿ 15 ರಿಂದ 20 ಸಾವಿರ ರೂಪಾಯಿಗೆ ಸೋಪ್ ಸೆಟ್ ಮಾರುತ್ತಾರೆ ಎಂಬುದೇ ಪ್ರಶ್ನೆಯಾಗಿದೆ.

ಸಾಗವಾನಿ 70 ಕ್ಕಾದರೆ ಅಕೇಶಿಯ 20ಕ್ಕೆ
ದಾಂಡೇಲಿಯ ಸಾಗವಾನಿಯಿಂದ ತಯಾರಿಸಿದ ಸೋಫಾ ಸೆಟ್ ಗೆ 60 ರಿಂದ 70 ಸಾವಿರ ರೂಪಾಯಿ ಪಡೆಯಲಾಗುತ್ತದೆ. ಆದರೆ ಬೆಂಗಳೂರಿನಿಂದ ತಂದಿರುವ ಈ ಅಕೇಶಿಯ ಸೋಫಾ ಸೆಟ್ಟನ್ನು ಕೇವಲ 15 ರಿಂದ 20 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಇನ್ನೂಂದು ಮಾಹಿತಿ ಪ್ರಕಾರ ದಾಂಡೇಲಿಯ ಕೆಲವು ವ್ಯಕ್ತಿಗಳು ಹುಬ್ಬಳ್ಳಿಯಿಂದ ಇದೇ ಆಕೇಶಿಯಾ ಕಟ್ಟಿಗೆಯಿಂದ ತಯಾರಿಸಲ್ಪಟ್ಟ ಸೋಫಾ ಸೆಟ್ ಅನ್ನ ಕೇವಲ ಎಂಟು ಸಾವಿರ ರೂಪಾಯಿಗೆ ತಂದಿದ್ದಾರೆ ಎಂದು ಹೇಳಲಾಗಿದೆ. ಅದೇನಿದ್ದರೂ ಸಾಗವಾನಿಯ ನಗರ ದಾಂಡೇಲಿಯಲ್ಲಿ ಬೆಂಗಳೂರಿನ ಅಕೇಶಿಯಾ ಸೋಫಾ ಸೆಟ್ ಒಂದಿಷ್ಟು ಹಾವಳಿ ಎಬ್ಬಿಸಿದೆ.

ಅವರ ಲೆಕ್ಕವೇ ಅರ್ಥವಾಗುತ್ತಿಲ್ಲ
ನಾವು ಬಹಳ ವರ್ಷಗಳಿಂದ ಕಟ್ಟಿಗೆಯ ಪೀಠೋಪಕರಣಗಳನ್ನು ತಯಾರಿಸಿ ಕೊಡುತ್ತಿದ್ದೇವೆ. ದಾಂಡೇಲಿಯಲ್ಲಿ ಸೀಸಂ ಹಾಗೂ ಸಾಗವಾನಿ ಎಂದರೆ ಬಲು ಬೇಡಿಕೆ. ಆದರೆ ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನವರೆಂದು ಹೇಳಿಕೊಳ್ಳುವ ಕೆಲವರು ಅಕೇಶಿಯಾ ಮತ್ತು ಅದಕ್ಕಿಂತ ಕಡಿಮೆ ಗುಣಮಟ್ಟದ ಕಟ್ಟಿಗೆಯನ್ನು ಬೆಳೆಸಿ ಸೋಫಾ ಸೆಟ್ ಹಾಗೂ ಇತರ ಪೀಠೋಪಕರಣ ಮಾರಾಟ ಮಾಡುತ್ತಿದ್ದಾರೆ. ಕಟ್ಟಿಗೆ, ಕೆಲಸಗಾರರ ಮಜೂರಿ ಹಾಗೂ ಇನ್ನಿತರ ಸಾಮಗ್ರಿಗಳ ಖರ್ಚು ಸೇರಿದಂತೆ ಯಾವುದೇ ರೀತಿಯ ಲೆಕ್ಕ ಹಾಕಿದರೂ ನಮ್ಮಿಂದ ಅಷ್ಟಕ್ಕೆ ಸೋಫಾ ಸೆಟ್ ಮಾಡಿಕೊಡಲು ಸಾಧ್ಯವಿಲ್ಲ. ನಮಗೆ ಅವರ ಲೆಕ್ಕವೇ ಅರ್ಥವಾಗುತ್ತಿಲ್ಲ ಎನ್ನುತ್ತಿದ್ದಾರೆ ಹಳೆದಾಂಡೇಲಿಯ ಕಾರ್ಪೆಂಟರ್ ಶಾಪ ಮಾಲಕ ದಿವಾಕರ ನಾಯ್ಕರು

Exit mobile version