ದಾಂಡೇಲಿ: ಸುತ್ತಲೂ ಹಸಿರು ಗಿಡ ಮರಗಳಿಂದ ಆವೃತ್ತವಾಗಿರುವ ದಂಡಕಾರಣ್ಯವೆಂಬ ದಾಂಡೇಲಿಯ ಮಾರುಕಟ್ಟೆಯಲ್ಲಿ ಇದೀಗ ಬಿಹಾರದಿಂದ ಬಂದ ಬಗೆ ಬಗೆಯ ಹೂವಿನ ಗಿಡಗಳ ಮಾರಾಟ ಬಲು ಜೋರಾಗಿಯೇ ನಡೆಯುತ್ತಿದೆ.
ದಾಂಡೇಲಿ ಎಂದರೆ ಇಲ್ಲಿ ನೈಜ ಸೌಂದರ್ಯವಿದೆ. ಪ್ರಾಕೃತಿಕ ಸೊಬಗಿದೆ. ಇದರ ನಡುವೆಯೇ ಬಿಹಾರದಿಂದ ಬಂದ ಕಸಿ ಮಾಡಿದ ಬಗೆ ಬಗೆಯ ಹೂವಿನ ಗಿಡಗಳ ಮಾರಾಟ ಕಳೆದ ಕೆಲ ದಿನಗಳಿಂದ ಗಮನ ಸೆಳೆಯುತ್ತಿದೆ.
ಮನೆಯಂಗಳದಲ್ಲಿ ಹೂವಿನ ಗಿಡಗಳನ್ನು ಬೆಳೆಸುವ ಹವ್ಯಾಸ ಅನೇಕ ಮಹಿಳೆಯರಿಗೆ ಇದೆ. ಒಂದೊಮ್ಮೆ ಇಕ್ಕಟ್ಟಾದ ಜಾಗದಲ್ಲಿ ಮನೆ ಇತ್ತೆಂದಾದರೆ ಮನೆಯ ಟೆರಸ್ ಮೇಲೆ ಹೂವಿನ ಗಿಡಗಳನ್ನು ಬೆಳೆಸುವ ಹವ್ಯಾಸ ಇತ್ತಿತ್ತಲಾಗಿ ಜೋರಾಗಿದೆ. ಬೇರೆ ಊರುಗಳಿಗೆ ಹೋದಾಗಲೆಲ್ಲ ಬೇರೆಯವರ ಮನೆಯಿಂದಲೋ , ಮಾರುಕಟ್ಟೆಯಿಂದಲೂ ಹೂವಿನ ಗಿಡಗಳನ್ನು ತರುವ ಮಹಿಳೆಯರು ಆ ಗಿಡಗಳು ಹಚ್ಚ ಹಸಿರಾಗಿ ಬೆಳೆದ ನಂತರ ಸಂಭ್ರಮಿಸುತ್ತಾರೆ. ಹಾಗೆ ನೋಡಿದರೆ ಹೂವಿನ ಗಿಡಗಳಿಗೆ ದಾಂಡೇಲಿಯಲ್ಲೋ ಅಥವಾ ಉತ್ತರ ಕನ್ನಡ ಜಿಲ್ಲೆಯಲ್ಲೋ ಕೊರತೆಯೇನೂ ಇಲ್ಲ. ಹಾಗೆ ಇರುವಾಗಲು ಕೂಡ ದೂರದ ಬಿಹಾರದ ಬಂದ ಹೂವಿನ ಗಿಡಗಳು ಮಾರುಕಟ್ಟೆಯಲ್ಲಿ ಜನಾಕರ್ಷಿಸುತ್ತಿವೆ.
ದಾಂಡೇಲಿಯ ಸಂಡೆ ಮಾರ್ಕೆಟ್ ಬಳಿ ಇರುವ ಖಾಲಿ ಜಾಗದಲ್ಲಿ ಬಿಹಾರದ ವ್ಯಕ್ತಿಯೋರ್ವ ರಾಶಿ ರಾಶಿ ಹೂವಿನ ಗಿಡಗಳನ್ನು ತಂದಿಟ್ಟಿದ್ದಾರೆ. ಲೆಕ್ಕ ಮಾಡಲು ಹೋದರೆ ಇಲ್ಲಿ ನೂರಕ್ಕೂ ಹೆಚ್ಚು ಜಾತಿಯ ಹೂವಿನ ಗಿಡಗಳು ಕಾಣುತ್ತವೆ. ಹೂವಿನ ಗಿಡಗಳ ಜೊತೆಗೆ ಹೂವು ಬಿಡದೆ ಇರುವ ಬಣ್ಣ ಬಣ್ಣದ ಎಲೆಗಳ ಆಕರ್ಷಕ ಗಿಡಗಳೂ ಕೂಡ ಇಲ್ಲಿ ಇವೆ. ಗುಲಾಬಿ, ಸೇವಂತಿಯಿಂದ ಹಿಡಿದು ಐವತ್ತಕ್ಕೂ ಹೆಚ್ಚು ಬಗೆ ಬಗೆಯ ಹೂವಿನ ಗಿಡಗಳು ಇಲ್ಲಿ ನಳನಳಿಸುತ್ತಿವೆ.
ಮುಖ್ಯ ರಸ್ತೆಯ ಪಕ್ಕದಲ್ಲಿ ರಾಶಿ ಇಟ್ಟಿರುವ ಈ ಹೂವಿನ ಗಿಡಗಳನ್ನು ಕಂಡು ಜನ ಮುಗಿ ಬೀಳುತ್ತಿದ್ದಾರೆ. ಮಹಿಳೆಯರಂತೂ ಗಂಟೆಗಟ್ಟಲೆ ನೋಡಿ, ಲೆಕ್ಕಹಾಕಿ,ಅಳೆದು, ತೂಗಿ ಹೂವಿನ ಗಿಡಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. 50 ರು.ಗಳಿಂದ 250 ರೂಪಾಯಿಗಳವರೆಗೂ ಕೂಡ ಈ ಹೂವಿನ ಗಿಡಗಳ ದರ ನಿಗದಿಪಡಿಸಲಾಗಿದೆ. ದುಬಾರಿ ಎನಿಸಿದರೂ ಕೂಡ ಜನ ಚೌಕಾಸಿ ಮಾಡಿ ಖರೀದಿಸುತ್ತಿದ್ದಾರೆ.
ಬಿಹಾರದಿಂದಲೇ ಬಂದಿರುವ ವ್ಯಕ್ತಿಯೋರ್ವ ಹೇಳುವ ಪ್ರಕಾರ ಇದು ಬಿಹಾರದ ಫಲವತ್ತಾದ ಮಣ್ಣಿನಲ್ಲಿ ಗೊಬ್ಬರ ಹಾಗೂ ಔಷಧಿಯನ್ನು ಹಾಕಿ ಬೆಳೆಸಿರುವ ಹೂವಿನ ಗಿಡಗಳು. ನಾವು ಟ್ರಕ್ ಮೇಲೆ ತುಂಬಿಕೊಂಡು ಹೂವಿನ ಗಿಡಗಳನ್ನು ಇಲ್ಲಿಗೆ ತಂದಿದ್ದೇವೆ. ವ್ಯಾಪಾರ ಸುಮಾರಾಗಿ ನಡೆಯುತ್ತಿದೆ. ನಮ್ಮವರು ಬೇರೆ ಬೇರೆ ನಗರಗಳಲ್ಲಿ ಈ ಹೂವಿನ ವ್ಯಾಪಾರವನ್ನು ಮಾಡುತ್ತಿದ್ದಾರೆ ಎನ್ನುತ್ತಾರೆ. ಕೆಲವರು ಹೇಳುವ ಪ್ರಕಾರ ಈ ಹೂವಿನ ಗಿಡಗಳು ಕಸಿ ಮಾಡಿದ ಹೂವಿನ ಗಿಡಗಳಾಗಿದ್ದು, ಇವುಗಳ ಬೇರಿಗೆ ಸರಿಯಾಗಿ ಮಣ್ಣಿನ ಹೊಂದಿಕೆಯಾಗದೆ ಇದ್ದರೆ ಇವು ಬಾಳಿಕೆ ಬರುವುದಿಲ್ಲ. ಕೆಲವು ದಿನಗಳ ನಂತರ ಸತ್ತು ಹೋಗುತ್ತವೆ ಎನ್ನುತ್ತಾರೆ. ಆದರೆ ಅದನ್ನು ಬಿಹಾರದ ವ್ಯಕ್ತಿ ಅಲ್ಲಗಳೆಯುತ್ತಾರೆ.
ಬಗೆ ಬಗೆಯ ಅಲಂಕಾರಿಕ ಬುಟ್ಟಿಗಳು ಜೊತೆಗೆ ಗೊಬ್ಬರಗಳ ಮಾರಾಟ
ಬಿಹಾರದ ಹೂವಿನ ಗಿಡಗಳನ್ನು ಖರೀದಿಸುವ ಜೊತೆಗೆ ಮನೆ ಎದುರು ಹುವಿನ ಗಿಡ ಇಡುವ ಬಗೆ ಬಗೆಯ ಅಲಂಕಾರಿಕ ಪ್ಲಾಸ್ಟಿಕ್ ಬುಟ್ಟಿಗಳನ್ನು ಕೂಡ ಇಲ್ಲಿ ಮಾರಾಟ ಮಾಡಲಾಗುತ್ತಿದೆ. ಜೊತೆಗೆ ಮನೆಯ ಎದುರುಗಡೆ ತೂಗು ಹಾಕುವ ಚಂದದ ಪ್ಲಾಸ್ಟಿಕ್ ಬುಟ್ಟಿಗಳಿವೆ. ಇದರ ಜೊತೆಗೆ ಹೂವಿನ ಗಿಡಗಳಿಗೆ ಸಿಂಪಡಿಸುವ ಔಷಧಿ ಹಾಗೂ ಗಿಡಗಳಿಗೆ ಬಳಸುವ ಗೊಬ್ಬರಗಳನ್ನು ಕೂಡ ಇಲ್ಲಿ ಮಾರಾಟ ಮಾಡಲಾಗುತ್ತಿದೆ.