ದಾಂಡೇಲಿ : ವೆಸ್ಟ್ ಕೋಸ್ಟ್ ಪೇಪರ್ ಮಿಲ್ನ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ( ಸಿಎಸ್ಆರ್) ಧಾರವಾಡದ ಖ್ಯಾತ ಮಕ್ಕಳ ತಜ್ಞರಾದ ರಾಜನ್ ದೇಶಪಾಂಡೆಯವರ ವಿಠ್ಠಲ ಮಕ್ಕಳ ವೈದ್ಯಕೀಯ ಮತ್ತು ಸ್ಪೆಶಾಲಿಟಿ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಫೆಬ್ರುವರಿ 9ರಂದು ಬೃಹತ್ ಪ್ರಮಾಣದ ಚಿಕ್ಕ ಮಕ್ಕಳ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಎಂದು ಕಾಗದ ಕಂಪನಿಯ ಸಾರ್ವಜನಿಕ ಸಂಪರ್ಕ ವಿಭಾಗದ ಅಧಿಕಾರಿ ರಾಜೇಶ ತಿವಾರಿ ತಿಳಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡುತ್ತಿದ್ದರು.
ಕಾಗದ ಕಂಪನಿಯ ಬಂಗೂರನಗರದ ಆಸ್ಪತ್ರೆಯಲ್ಲಿ ನಡೆಯಲಿರುವ ಚಿಕ್ಕ ಮಕ್ಕಳ ವೈದ್ಯಕೀಯ ಶಿಬಿರದಲ್ಲಿ ಮಕ್ಕಳ ತಜ್ಞರಾದ ಡಾ. ರಾಜನ್ ದೇಶಪಾಂಡೆ ಸೇರಿದಂತೆ ಮಕ್ಕಳ ಹೃದ್ರೋಗ, ನರರೋಗ, ಕಿವಿ, ಕಣ್ಣು, ಮೂಗು, ಗಂಟಲು, ಹಲ್ಲು, ಅನೇಕ ವಿಭಾಗಗಳಲ್ಲಿ ತಪಾಸಣೆ ನಡೆಸಲಿರುವ 15ಕ್ಕೂ ಹೆಚ್ಚು ನುರಿತ ವೈದ್ಯರು ಭಾಗವಹಿಸಲಿದ್ದಾರೆ. ಮುಂಜಾನೆ 9 ಗಂಟೆಯಿಂದ ರಂಗನಾಥ ಸುಭಂಗಣದಲ್ಲಿ ನೊಂದಣಿ ಆರಂಭವಾಗಲಿದ್ದು 9:30 ರಿಂದ ಆಸ್ಪತ್ರೆಯಲ್ಲಿ ತಪಾಸಣೆ ನಡೆಯಲಿದೆ. ದಾಂಡೇಲಿ ನಗರದ ಮಕ್ಕಳಿಗೂ ಸೇರಿದ ಹಾಗೆ ಸುತ್ತಮುತ್ತಲಿನ ಎಲ್ಲ ಜನರಿಗೆ ವಿಶೇಷವಾಗಿ ಬುಡಕಟ್ಟು ಗೌಳಿ ಸಮುದಾಯದ ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ಈ ಶಿಬಿರ ಆಯೋಜಿಸಲಾಗಿದ್ದು ಗ್ರಾಮೀಣ ಭಾಗದಿಂದ ಬಂದು ಹೋಗುವವರಿಗೆ ವಾಹನ ವ್ಯವಸ್ಥೆಯನ್ನೂ ಮಾಡಲಾಗಿದೆ. ನೊಂದಣಿ ಮಾಡಿಕೊಂಡ ಎಲ್ಲರಿಗೂ ಊಟದ ವ್ಯವಸ್ಥೆ ಇರುತ್ತದೆ. ತಪಾಸಣೆಗೆ ಒಳಗಾಗಿರುವ ಎಲ್ಲ ಮಕ್ಕಳಿಗೆ ಉಚಿತ ಔಷಧೋಪಚಾರದ ವ್ಯವಸ್ಥೆ ಕೂಡ ಇರುತ್ತದೆ. ಮಕ್ಕಳಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯವಿದ್ದಲ್ಲಿ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸುವ ಸಹಾಯವನ್ನೂ ಮಾಡಲಾಗುತ್ತದೆ.
ಕಾಗದ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಜೈನರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಬೃಹತ್ ಉಚಿತ ಮಕ್ಕಳ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ರಾಜೇಶ ತಿವಾರಿ ಮನವಿ ಮಾಡಿದರು.
ಸಾರ್ವಜನಿಕ ಸಂಪರ್ಕ ವಿಭಾಗದ ಅಧಿಕಾರಿ ರಾಘವೇಂದ್ರ ಎಚ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ ಮುಂತಾದವರಿದ್ದರು.
ರಾಜೇಶ ತಿವಾರಿ ಏನಂದ್ರು…. ವಿಡಿಯೋ ನೋಡಿ