Site icon ಒಡನಾಡಿ

ಕಾಗದ ಕಾರ್ಮಿಕರ ವೇತನ ಒಪ್ಪಂದಕ್ಕೆ ಅಂತಿಮ ಮುದ್ರೆ

ಇಪ್ಪತ್ತು ತಿಂಗಳ ಮಾತುಕತೆಯ ನಂತರ ಅಂತಿಮ ಮುದ್ರೆ

ದಾಂಡೇಲಿ:  ನಗರದ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಆಡಳಿತ ಮಂಡಳಿ ಹಾಗೂ ಜಂಟಿ ಸಂಧಾನ ಸಮಿತಿಯ  ನಡುವೆ ಸರಿ ಸುಮಾರು 20 ತಿಂಗಳಿಗೂ ಹೆಚ್ಚಿನ ಕಾಲದ ನಿರಂತರ ಮಾತುಕತೆಯ ನಂತರ ವೇತನ ಪರಿಷ್ಕರಣೆಯ ಪ್ರಕ್ರಿಯೆಗೆ ಅಂತಿಮ ಮುದ್ರೆ ಬಿದ್ದಿದ್ದು,  ಬೆಳಗಾವಿಯ ಕಾರ್ಮಿಕ ಆಯುಕ್ತರೆದುರು ತ್ರಿಪಕ್ಷಿಯ ಒಪ್ಪಂದದ ಅಧಿಕೃತ ಸಹಿ ಬೀಳುವುದೊಂದು ಬಾಕಿ ಇದೆ.

ಪ್ರತಿ ನಾಲ್ಕು ವರ್ಷಕ್ಕೊಮ್ಮೆ ದಾಂಡೇಲಿಯ ವೆಷ್ಟ್ ಕೋಸ್ಟ್ ಪೇಪರ್ ಮಿಲ್ ನ ಜಂಟಿ ಸಂಧಾನ ಸಮಿತಿಯ ಚುನಾವಣೆ ನಡೆದು ಅವರ ಅವಧಿಯಲ್ಲಿ ವೇತನ ಪರಿಷ್ಕರಣೆ ಆಗುವ ಪ್ರಕ್ರಿಯೆ ನಡೆಯುತ್ತದೆ. ಈ ಬಾರಿಯ ಜಂಟಿಸಂಧಾನ ಸಮಿತಿ ಅಸ್ತಿತ್ವಕ್ಕೆ ಬಂದ 2023ರ ಆರಂಭದಿಂದಲೇ ವೇತನ ಪರಿಷ್ಕರಣೆಯ ಮಾತುಕತೆಯ ಮಂಡನೆಯನ್ನು ಆಡಳಿತ ಮಂಡಳಿಯ ಎದುರಿಟ್ಟಿದ್ದರು. ಹಲವು ಮನವಿ, ಮಾತುಕತೆಗಳ ನಡುವೆ, ಕಳೆದೆರಡು ತಿಂಗಳ ಹಿಂದೆ ಸರಣಿ ಧರಣಿ  ಸೇರಿದಂತೆ ವೇತನ ಪರಿಷ್ಕರಣಿಗಾಗಿ ಹಲವು ರೀತಿಯ ಆಗ್ರಹಗಳು ನಡೆದಿದ್ದವು. ಆರಂಭದಲ್ಲಿ ಜಂಟಿ ಸಂಧಾನ ಸಮಿತಿಯವರು ಕಾರ್ಮಿಕರಿಗೆ ತಗಲುವ ವೆಚ್ಚ (ಸಿಟಿಸಿ) 84 ಸಾವಿರ ರು.ಗಳಿಗೆ ಬೇಡಿಕೆ ಇಟ್ಟಿದ್ದು,  ನಿರಂತರ ಮಾತುಕತೆಯ ನಂತರ ಅದನ್ನು 9 ಸಾವಿರಕ್ಕೆ ಕಡಿಮೆ ಮಾಡುತ್ತಾ ಬಂದಿದ್ದರು. ಅಂತಿಮವಾಗಿ ಜಂಟಿ ಸಂಧಾನ ಸಮಿತಿ ಹಾಗೂ ಕಾರ್ಮಿಕರ ನಿರೀಕ್ಷೆ ಕನಿಷ್ಠ 5 ಸಾವಿರ ರೂ. ಆದರೂ ಹೆಚ್ಚಳವಾಗಬಹುದು ಎಂಬುದು ಇತ್ತು. ಈ ವಿಚಾರವಾಗಿ ಹಲವು ತಿಂಗಳುಗಳ ಕಾಲ ಜಂಟಿ ಸಂಧಾನ ಸಮಿತಿ ಮತ್ತು ಆಡಳಿತ ಮಂಡಳಿಯ ನಡುವೆ ಮಾತುಕತೆಗಳು ನಡೆಯುತ್ತಲೇ ವಿಫಲವಾಗುತ್ತಾ ಬಂದಿತ್ತು.

ಜಂಟಿ ಸಂಧಾನ ಸಮಿತಿಯಲ್ಲಿ ಕಾರ್ಮಿಕ ಪ್ರತಿನಿಧಿಗಳಾಗಿದ್ದ ಎಸ್ .ವಿ. ಸಾವಂತ , ವಿಷ್ಣು ವಾಜ್ವೆ,  ಬಿ.ಡಿ ಹಿರೇಮಠ ಇವರು ಕಾರ್ಮಿಕರ ಪರ  ಮಾತುಕತೆಗೆ ಪ್ರತಿನಿಧಿಸಿದ್ದರೆ ಆಡಳಿತ ಮಂಡಳಿಯ ಪರ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಜೈನ್, ಹಿರಿಯ ಅಧಿಕಾರಿಗಳಾದ ಅಶೋಕ್ ಶರ್ಮ,  ವೇಲು ವೆಂಕಟೇಶ್, ವಿಜಯ ಮಹಾಂತೇಶ್ ಮುಂತಾದವರು ಈ ಒಪ್ಪಂದ ಮಾತುಕತೆಯ ಪ್ರಕ್ರಿಯೆಯಲ್ಲಿ ಇದ್ದರು.  ಎಲ್ಲ ಮಾತುಕತೆ,  ಹೋರಾಟಗಳ ನಡುವೆ ವೇತನ ಪರಿಷ್ಕರಣೆಗೆ ಶನಿವಾರ ರಾತ್ರಿ ಅಂತಿಮ ಮುದ್ರೆ ಬಿದ್ದಿದೆ.

*ಎಷ್ಟು ಕಾರ್ಮಿಕರಿಗೆ ಲಾಭ ?*

ಈಗ ಆಗಿರುವ ವೇತನ ಒಪ್ಪಂದ ಸುಮಾರು 400 ಸಿಬ್ಬಂದಿ (ಸ್ಟಾಪ್) ನೌಕರರು 1,900 ಕಾರ್ಮಿಕರು ಸೇರಿದಂತೆ 2300ರಷ್ಟು ಒಟ್ಟು ಕಾರ್ಮಿಕರು  ಇದರ ನೇರ ಲಾಭ ಪಡೆಯಲಿದ್ದಾರೆ. ಹಾಗೂ ಗುತ್ತಿಗೆ ಆಧಾರದ ಕೆಲವು ಕಾರ್ಮಿಕರು ಕೂಡ ಇದರ ಒಂದಿಷ್ಟು ಸೌಲಭ್ಯಗಳನ್ನು ,ಲಾಭಗಳನ್ನು ಪಡೆದುಕೊಳ್ಳಲಿದ್ದಾರೆ. ವೇತನ ಒಪ್ಪಂದ ಹೆಚ್ಚಾಯಿತೋ, ಕಡಿಮೆಯಾಯಿತೋ … ಕೊನೆಗೂ ಅಂತಿಮವಾಯಿತಲ್ಲ ಎನ್ನುವುದೇ ಕೆಲ ಕಾರ್ಮಿಕರ ಸಮಾಧಾನದ ಮಾತಾಗಿದೆ.

*ವೇತನ ಪರಿಷ್ಕರಣಿಯಲ್ಲಿ ಏನಿದೆ ?*.

2018 ರಿಂದ 22ರ ಅವಧಿಯಲ್ಲಿ ನಡೆದ ವೇತನ ಪರಿಷ್ಕರಣೆಯಲ್ಲಿ ಕಾರ್ಖಾನೆಗೆ ತಗಲುವ ವೆಚ್ಚ (ಸಿಟಿಸಿ) 4, 100 ರು.  ಆಗಿತ್ತು. ಅದರ ನಂತರ 2023ರಿಂದ ಇಲ್ಲಿಯವರೆಗಿನ ವೇತನ ಪರಿಷ್ಕರಣೆ,  ಶನಿವಾರ ಶನಿವಾರ ರಾತ್ರಿ ಅಂತಿಮವಾದಂತೆ ಕಾರ್ಖಾನೆಗೆ ಪ್ರತಿ ಕಾರ್ಮಿಕನ ಮೇಲೆ ಮಾಸಿಕವಾಗಿ  ತಗಲುವ ವೆಚ್ಚ (ಸಿಟಿಸಿ) 4’700 ರು.  ಕಳೆದ ಅವಧಿಯ ಪರಿಷ್ಕರಣಿಗಿಂತ ಕೇವಲ 600 ರೂಪಾಯಿಗಳು  ಮಾತ್ರ ಹೆಚ್ಚಳವಾಗಿದೆ. ಇನ್ನು ಕಾರ್ಮಿಕರ ಮೂಲವೇತನಕ್ಕೆ ನೇರವಾಗಿ  ತಿಂಗಳಿಗೆ 2424 ರು. ಹೆಚ್ಚಳವಾಗುತ್ತದೆ.  ಆರಂಭದಲ್ಲಿ ಸಿಟಿಸಿ 84 ಸಾವಿರ ರೂಪಾಯಿಗಳನ್ನು ಕೇಳಿದ್ದ ಜೆ.ಎನ್.ಸಿ.  ಕೊನೆಗೆ 4,700ಗಳಿಗೆ ಒಪ್ಪಿಕೊಂಡಂತಾಗಿದೆ. ವೇತನ ಪರಿಷ್ಕರಣಿಯೇನೋ ಅಂತಿಮವಾಯಿತಾದರೂ ಕೂಡ ಕನಿಷ್ಠ 5 ಸಾವಿರ ರು. ಗಳಾದರೂ  ಸಿಟಿಸಿ  ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಕಾರ್ಮಿಕರಿಗೆ ಒಂದಿಷ್ಟು ಅಸಮಾಧಾನವೇ ಆಗಿದೆ. ಈ ಪರಿಷ್ಕರಣೆಯಲ್ಲಿ 20 ಪೈಸೆ ತುಟ್ಟಿ ಭತ್ಯೆಯ ಜೊತೆಗೆ ಇನ್ನೂ ಹಲವು ಸೌಲಭ್ಯಗಳು ಸಿಗಲಿವೆ ಎನ್ನಲಾಗಿದೆ.

*ನಿರಂತರ ಹೋರಾಟದ ನಂತರ ಒಪ್ಪಂದ*
ಜಂಟಿ ಸಂದಾನ ಸಮಿತಿಯ ನೇತೃತ್ವದಲ್ಲಿ ನಾವು ಕಳೆದ 20 ತಿಂಗಳುಗಳಿಗೂ ಹೆಚ್ಚು ಕಾಲ ಕಾಗದ ಕಂಪನಿಯ ಆಡಳಿತ ಮಂಡಳಿಯ ಜೊತೆಗೆ ಮಾತುಕತೆಯನ್ನು ನಡೆಸಿದ್ದು , ನಿರಂತರ ಹೋರಾಟದ ಫಲವಾಗಿ ವೇತನ ಒಪ್ಪಂದ ಪ್ರಕ್ರಿಯೆ ಅಂತಿಮವಾಗಿದೆ.  ನಾಳೆ ಸೋಮವಾರ ಬೆಳಗಾವಿಯ ಕಾರ್ಮಿಕ ಇಲಾಖೆಯಲ್ಲಿ ವಿಭಾಗಿಯ ಕಾರ್ಮಿಕ ಆಯುಕ್ತರ ಎದುರು ತ್ರಿಪಕ್ಷೀಯ ಒಪ್ಪಂದದ  ಒಪ್ಪಂದ ಪ್ರಕ್ರಿಯೆಗೆ ಅಧಿಕೃತ ಸಿಹಿ ಬೀಳಲಿದೆ. ನಮ್ಮ ಕಾರ್ಮಿಕರಿಗೆ ಯಾವುದೇ ರೀತಿಯ ಅನ್ಯಾಯವಾಗಬಾರದೆಂದು ಅಂತಿಮವಾಗಿ ವೇತನ ಒಪ್ಪಂದವನ್ನು ಪೂರ್ಣಗೊಳಿಸಿದ್ದೇವೆ ಎಂದು ಜಂಟಿ ಸಂಧಾನ ಸಮಿತಿಯ ಅಧ್ಯಕ್ಷ ಎಸ್.ವಿ. ಸಾವಂತ ತಿಳಿಸಿದ್ದಾರೆ.

Exit mobile version