Site icon ಒಡನಾಡಿ

ದಾಂಡೇಲಿ-ಅಳ್ನಾವರ ಪ್ಯಾಸೆಂಜರ ರೈಲು  ಪುನರಾರಂಭಿಸುವಂತೆ ದೇಶಪಾಂಡೆ ಮನವಿ

ದಾಂಡೇಲಿ: ಕೋವಿಡ ಸಂದರ್ಭದಲ್ಲಿ ಸ್ಥಗಿತಗೊಂಡಿರುವ ದಾಂಡೆರಲಿ -ಅಳ್ನಾವರ ರೈಲು ಸಂಚಾರ ಈವರೆಗೂ ಪುನರಾರಂಭಗೊಂಡಿಲ್ಲ . ಇದೀಗ ಎಲ್ಲ ರೀತಿಯ ಅನುಕೂಲತೆಗಳಿದ್ದು ಈ ರೈಲು ಸಂಚಾರವನ್ನು ಪುನರಾರಂಭಿಸುವಂತೆ ರಾಜ್ಯ ಆಡಳಿತ ಸುಧಾರಣಾ ಸಮಿತಿಯ ಅಧ್ಯಕ್ಷರೂ, ಶಾಸಕರೂ ಆದ ಆರ್.ವಿ ದೇಶಪಾಂಡೆಯವರು ರೆಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಶುಕ್ರವಾರ ಹುಬ್ಬಳ್ಳಿಯಲ್ಲಿ ಖುದ್ದಾಗಿ ಭೇಟಿಯಾಗಿ ಮನವಿ ಮಾಡಿದರು.

ದಾಂಡೇಲಿ ಔದ್ಯೋಗಿಕ ಹಾಗೂ ಕೈಗಾರಿಕಾ ನಗರವಾಗಿದ್ದು, ಮತ್ತೊಂದೆಡೆ ಪ್ರಸಿದ್ಧ ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಮೊಟ್ಟ ಮೊದಲ ರೈಲ್ವಾ ಮಾರ್ಗವಾಗಿದ್ದ ದಾಂಡೇಲಿ- ಅಳ್ನಾವರ ರೇಲ್ವೆ ಸಂಚಾರ ಹಲವು ವರ್ಷಗಳ ಹಿಂದೆಯೇ ಕಾರಣಾಂತರಗಳಿಂದ ಸ್ಥಗಿತಗೊಂಡಿತ್ತು. ದಶಕಗಳ ನಿರೀಕ್ಷೆಯ ಬಳಿಕ 2019 ರಲ್ಲಿ ಅಳ್ನಾವರ-ದಾಂಡೇಲಿ (ಅಂಬೇವಾಡಿ) ರೈಲು ಸಂಚಾರ ಪುನರಾರಂಭವಾಗಿತ್ತು. ಪ್ರಾರಂಭಗೊಂಡ ಈ ಪ್ಯಾಸೆಂಜರ್ ರೈಲು ಸೇವೆ, ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಮತ್ತೆ ಸ್ಥಗಿತಗೊಂಡಿತ್ತು.

ಈಗ ರೈಲು ಮಾರ್ಗದ ವಿದ್ಯುದ್ದಿಕರಣ ಕಾರ್ಯ ಪೂರ್ಣಗೊಂಡಿದೆ. ಸುಸಜ್ಜಿತ ನಿಲ್ದಾಣದ ಕಟ್ಟಡವೂ ಸಿದ್ಧವಾಗಿದೆ. ಈ ಹಿಂದೆಯೂ ರೈಲ್ವೆ ಸಚಿವರಿಗೆ ಮತ್ತು ಸಂಬಂದಿಸಿದ ಅಧಿಕಾರಿಗಳಿಗೆ ದಾಂಡೇಲಿ ಪ್ರಯಾಣಿಕ ರೈಲು ಸೇವೆಯನ್ನು ಪುನರಾರಂಭಿಸಲು ಮನವಿ ಮಾಡಿದ್ದೆ. ರೈಲು ಸಮಯದ ತೊಂದರೆ ಮತ್ತು ಕಡಿಮೆ ಆಕ್ಯೂಪೆನ್ಸಿ ಸಮಸ್ಯೆಗಳಿಂದಾಗಿ ಈ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂಬುದಾಗಿ ಅಧಿಕಾರಿಗಳು ಪತ್ರದಲ್ಲಿ ಉಲ್ಲೇಖಿಸಿದ್ದರು ಎಂಬುದನ್ನು ಆರ್.ವಿ ದೇಶಪಾಂಡೆಯವರು ರೇಲ್ವೆ ಸಚಿವ ವಿ. ಸೋಮಣ್ಣ ಅವರ ಗಮನಕ್ಕೆ ತಂದರು.

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ರೈಲ್ವೆ ರಾಜ್ಯ ಸಚಿವ ಶ್ರೀ ವಿ.ಸೋಮಣ್ಣ ಅವರನ್ನು ನೈರುತ್ಯ ರೈಲ್ವೆ ಇಲಾಖೆಯ ಡಿ.ಆರ್.ಎಮ್. ಸೇರಿದಂತೆ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಭೇಟಿ ಮಾಡಿದ ದೇಶಪಾಂಡೆಯವರು ದಾಂಡೇಲಿ-ಅಳ್ನಾವರ ಪ್ಯಾಸೆಂಜರ್ ರೈಲು ಸೇವೆಯನ್ನು ಪುನಃ ಪ್ರಾರಂಭಿಸಲು ಅನುಕೂಲವಾಗುವಂತೆ ಖುದ್ದಾಗಿ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲನೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.

Exit mobile version