Site icon ಒಡನಾಡಿ

ದಾಂಡೇಲಿಯಲ್ಲಿ ಸಂಭ್ರಮದ ನವರಾತ್ರಿ ಉತ್ಸವ

ಬಗೆ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳ ಕಲರವ

ದಾಂಡೇಲಿ:  ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ನೇತೃತ್ವದಲ್ಲಿ ಕಳೆದ ಮೂರು ವರ್ಷಗಳಿಂದ ಆಯೋಜಿಸಿ ಕೊಂಡು ಬಂದಿರುವ ನವರಾತ್ರಿ ಉತ್ಸವ ಕಾರ್ಯಕ್ರಮವು ಈ ವರ್ಷ ಅಕ್ಟೋಬರ್ ಮೂರರಿಂದ ಒಂಬತ್ತು ದಿನಗಳ ಕಾಲ ಸಂಭ್ರಮದಿಂದ ದಾಂಡೇಲಿಯ ಹಳೆ ನಗರಸಭೆ ಮೈದಾನದಲ್ಲಿ ನಡೆಯಲಿದೆ.

ನಮ್ಮ ನಾಡ ಪರಂಪರೆಯ ಅತಿ ದೊಡ್ಡ ಹಬ್ಬವಾಗಿರುವ ದಸರಾ ಎಂದರೆ ದಾಂಡೇಲಿಯಲ್ಲಿ ಹಲವು ವಿಶೇಷತೆ. ಅದು ದಾಂಡಿಯ, ರಾಮಲೀಲಾ ಗಳ ಜೊತೆಗೆ ಇದೀಗ ನವರಾತ್ರಿಯ ಸಂಭ್ರಮ ಸೇರಿಕೊಂಡಿದೆ. ಇದಕ್ಕೆ ಭಾಷ್ಯ ಬರೆದವರು ಮಾಜಿ ಶಾಸಕ ಸುನಿಲ್ ಹೆಗಡೆ ಗೌರವಾಧ್ಯಕ್ಷತೆಯ ಹಾಗೂ ಟಿ.ಎಸ್. ಬಾಲಮಣಿ (ಬೇಟಾ) ಅಧ್ಯಕ್ಷತೆಯ ಸಾರಥ್ಯದ ‘ದಾಂಡೇಲಿ ನವರಾತ್ರಿ ಉತ್ಸವ ಸಮಿತಿ’ಯವರು. ದಾಂಡೇಲಿ ನವರಾತ್ರಿ ಉತ್ಸವ ಎನ್ನುವುದು ಇದೀಗ ದಾಂಡೇಲಿಗರ ಅತಿ ದೊಡ್ಡ  ಸಾಂಸ್ಕೃತಿಕ ಹಬ್ಬವಾಗಿ ಪರಿಣಮಿಸಿದೆ.

ನವರಾತ್ರಿ ಉತ್ಸವದಲ್ಲಿ ಮೊದಲ ದಿನ ದುರ್ಗಾ ದೇವಿಯ ಪ್ರತಿಷ್ಠಾಪನೆಯಿಂದ ಹಿಡಿದು ಕೊನೆಯ ದಿನ ವಿಸರ್ಜನೆಯ ನಡುವೆ ಬರುವ ಒಂಬತ್ತು ದಿನಗಳ ಕಾಲ ಪ್ರತಿನಿತ್ಯ ವೈಶಿಷ್ಟ್ಯ ಪೂರ್ಣವಾದ ರಾಜ್ಯ ಮತ್ತು ಗಮನ ಸೆಳೆದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಯಕ್ಷಗಾನ ಹಾಗೂ ಇತರೆ ಆಕರ್ಷಿಕ ಮನರಂಜನೆಗಳು ಅದರ ಜೊತೆಗೆ ನಿತ್ಯ ದಾಂಡಿಯ ಕೋಲಾಟಗಳು ನಡೆಯಲಿವೆ.  ಇದೆಲ್ಲದರ ಜೊತೆಗೆ ನಗರಸಭೆ ಮೈದಾನದಲ್ಲಿ ಬಗೆ ಬಗೆಯ ಆಹಾರ ಮಳಿಗೆಗಳು ಹಾಗೂ ಮಕ್ಕಳಿಗಾಗಿಯೇ ಇನ್ನಿತರ ಆಕರ್ಷಕ ಮನರಂಜನೆಯ ವ್ಯವಸ್ಥೆಗಳು ಕೂಡ ಇರುತ್ತವೆ. ದಾಂಡಿಯ ಸ್ಪರ್ಧೆಯ ಜೊತೆಗೆ ಮಹಿಳೆಯರಿಗಾಗಿ ಬಗೆಬಗೆಯ ಸ್ಪರ್ಧೆಗಳು ಕೂಡ ನಡೆಯುತ್ತವೆ. ಒಟ್ಟಾರೆಯಾಗಿ ದಾಂಡೇಲಿಯ ನವರಾತ್ರಿ ಉತ್ಸವ ಕೆಲ ವರ್ಷಗಳಿಂದ ದಾಂಡೇಲಿಯ ಒಂದು ಮನರಂಜನೆಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವಾಗಿ ರೂಪಗೊಂಡಿದೆ ಎಂದರೆ ಅತಿಶಯೋಕ್ತಿಯಾಗಲಾರದು.

ನವರಾತ್ರಿ ಉತ್ಸವದ ರೂಪರೇಶೆ ಹಾಗೂ ವಿವಿಧ ಕಾರ್ಯಕ್ರಮಗಳ  ಆಯೋಜನೆಯ ಕುರಿತಂತೆ ಬುಧವಾರ ನಗರಸಭಾ ಮೈದಾನದಲ್ಲಿ ಸುದ್ದಿಗೋಷ್ಠಿ ನಡೆಸಿದ ಉತ್ಸವ ಸಮಿತಿಯ ಗೌರವಾಧ್ಯಕ್ಷ ಸುನಿಲ್ ಹೆಗಡೆಯವರು ದುರ್ಗಾದೇವಿಯ ಕೃಪಾಶೀರ್ವಾದದಿಂದ ಈ ನವರಾತ್ರಿ ಉತ್ಸವ ಆಚರಿಸಲಾಗಿದ್ದು, ಇದು ಪ್ರತಿಯೊಂದು ಮನೆಮನೆಯ ಕಾರ್ಯಕ್ರಮವಾಗಬೇಕು. ಎಲ್ಲರ ಹಬ್ಬವಾಗಬೇಕು. ಪಕ್ಷಾತೀತವಾದ ಕಾರ್ಯಕ್ರಮವಾಗಬೇಕೆಂಬುದು ನಮ್ಮ ಅಭಿಲಾಷೆಯಾಗಿದೆ. ಈ ಉತ್ಸವದಲ್ಲಿ ಸರ್ವರೂ ಸಮಭಾವದಿಂದ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದ ಅವರು ಇದೇ ಸಂದರ್ಭದಲ್ಲಿ ನವರಾತ್ರಿ ಉತ್ಸವದ ಸಂದರ್ಭದಲ್ಲಿ ಧಾರ್ಮಿಕವಾಗಿ  ಹಾಗೂ ಸಾಂಸ್ಕೃತಿಕವಾಗಿ ನಿತ್ಯ ನಡೆಯುವ ಕಾರ್ಯಕ್ರಮಗಳ ಬಗ್ಗೆ  ಜೊತೆಗೆ ದಾಂಡಿಯ ಸ್ಪರ್ಧೆ ಮತ್ತು ಇತರೆ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ನವರಾತ್ರಿ ಉತ್ಸವ ಸಮಿತಿಯ ಅಧ್ಯಕ್ಷ ಟಿ.ಎಸ್. ಬಾಲಮಣಿ, ಹಾಗೂ ಸಮಿತಿಯ ಪ್ರಮುಖ ಪದಾಧಿಕಾರಿಗಳಾದ ಅಶುತೋಷ ರಾಯ್,  ಶಶಿ ಓಶಿಮಠ,  ಬುದ್ಧಿವಂತ ಗೌಡ ಪಾಟೀಲ್, ಗುರು ಮಠಪತಿ,  ಸುರೇಶ್ ಕಾಮತ, ಮುಸ್ತಾಕ್ ಶೇಖ್,  ಸುಧಾಕರ ಶೆಟ್ಟಿ, ದಶರಥ ಬಂಡಿವಡ್ಡರ, ಮಿಥುನ್ ನಾಯಕ, ಪ್ರಶಾಂತ ಬಸೂರತೆಕರ,  ಕರುಣಾಕರ ಶೆಟ್ಟಿ,   ಗಿರೀಶ್ ಠೋಸೂರ್, ಸೇರಿದಂತೆ ಹಲವರಿದ್ದರು.

ಒಂಬತ್ತು ದಿನಗಳ ಕಾಲ  ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು
ಅಕ್ಟೋಬರ 3 ರಂದು ಮುಂಜಾನೆ ದೇವಿಯ ಪ್ರತಿಷ್ಠಾಪನೆ.  ಅದು ಸಂಜೆ 6 ರಿಂದ ನಾದವರ್ಷಿಣಿ ಕಲಾ ಸಂಸ್ಥೆಯಿಂದ ಭಜನಾ ಸಂಗೀತ, ಸುಗಮ ಸಂಗೀತ. ಅ. 4 ರಂದು ಸಂಜೆ 6 ರಿಂದ ಸ್ಥಳೀಯ ಆಯ್ದ ಕಲಾವಿದರಿಂದ ಕರೋಕೆ ರಸಮಂಜರಿ ಕಾರ್ಯಕ್ರಮ. ಅ. 5 ರಂದು ಸಂಜೆ 6 ರಿಂದ ನರಗುಂದದರಾಜ್ಯ ಪ್ರಶಸ್ತಿ ವಿಜೇತ  ಜೈ ಕಿಸಾನ  ಸಾಂಸ್ಕೃತಿಕ  ಮತ್ತು ಜನಪದ ಕಲಾ ತಂಡದವರಿಂದ  ಜೋಗತಿ ನೃತ್ಯ, ಡೊಳ್ಳು ಕುಣಿತ, ಮೈಲಾರಲಿಂಗನ ಕುಣಿತ, ಜನಪದ ಗಾಯನ. ಅ. 6 ಸಂಜೆ 6 ರಿಂದ  ಝೀ ಕನ್ನಡ ವಾಹಿನಿಯ ಮಜಾ ಭಾರತ ಹಾಗೂ ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಲಾವಿದರಾದ ಮಿಮಿಕ್ರಿ ಯೋಗಿ ಗೌಡ ಹಾಗೂ ಮೆಜಿಶಿಯನ್ ಸೋಮು ಅವರಿಂದ ಕಾರ್ಯಕ್ರಮ. ಅ. 7 ರಂದು ಸಂಜೆ 6 ರಿಂದ ಸ್ಥಳೀಯ  ಕಲಾವಿದರಿಂದ ಸಮೂಹ ಭರತ ನಾಟ್ಯ ಕಾರ್ಯಕ್ರಮ. ಅ. 8 ರಂದು ರಾತ್ರಿ 9 ರಿಂದ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ‘ಮಾರುತಿ ಪ್ರತಾಪ ಹಾಗೂ ಶ್ರೀನಿವಾಸ ಕಲ್ಯಾಣ’ ಯಕ್ಷಗಾನ ಪ್ರದರ್ಶನ. ಅ. 9 ರಂದು ಸಂಜೆ 6 ರಿಂದ ‘ಕಾಂತಾರ’ ಖ್ಯಾತಿಯ ಮಾನಸಿ ಸುಧೀರ ರವರ ‘ನೃತ್ಯನಿಕೇತನ’  ಕೊಡವೂರ ಕಲಾತಂಡದಿಂದ ‘ನಾರಸಿಂಹ’ ನೃತ್ಯರೂಪಕ. ಅ.10 ರಂದು ಸಂಜೆ 6 ರಿಂದ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪ್ರದರ್ಶನ ನೀಡಿದ  ಶ್ರೀರಂಗ ಪಟ್ಟಣದ ನಿರ್ದಿಗಂತ ತಂಡದ ಕಲಾವಿದರಿಂದ ‘ತಿಂಡಿಗೆ ಬಂದ ತುಂಡೇರಾಯ’ ನಾಟಕ. ಅ. 11 ಮದ್ಯಾಹ್ನ 3.30 ರಿಂದ ಸಾಂಪ್ರದಾಯಿಕ ಉಡುಗೆ, ಸಾಂಸ್ಕೃತಿಕ ಕಲಾ ತಂಡ, ಕುಂಭ ಮೇಳಗಳೊಂದಿಗೆ ದೇವಿಯ ವಿಸರ್ಜನಾ ಮೆರವಣಿಗೆ ನಡೆಯಲಿದೆ. ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳ ನಂತರ ದಾಂಡಿಯಾ ಕೋಲಾಟ ನಡೆಯಲಿದೆ ಎಂದು ನವರಾತ್ರಿ ಉತ್ಸವ ಸಮಿತಿ ತಿಳಿಸಿದೆ.

Exit mobile version