Site icon ಒಡನಾಡಿ

ಬಹುಮುಖ ಪ್ರತಿಭೆಯ ಜಿ.ಆರ್.ತಾಂಡೇಲರಿಗೆ ಒಲಿದ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ

ಅಂಕೋಲಾ ತಾಲೂಕಿನ ಕೆನರಾ ವೆಲಫೇರ್ ಟ್ರಸ್ಟಿನ ಪಿ.ಎಮ್. ಹೈಸ್ಕೂಲಿನಲ್ಲಿ ಶಿಕ್ಷಕರಾಗಿ, ಎನ್.ಸಿ.ಸಿ. ಕಮಾಂಡರ್ ಆಗಿ ಉತ್ತಮವಾಗಿ ಸೇವೆ ಸಲ್ಲಿಸುತ್ತಿರುವ ಜಿ.ಆರ್.ತಾಂಡೇಲರಿಗೆ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಒಲಿದು ಬಂದಿರುವುದು ಅವರ ಬಹುಮುಖ ಪ್ರತಿಭೆಗೆ ಸಂದ ಗೌರವವಾಗಿದೆ.

ರಾಷ್ಟೀಯ ಶಿಕ್ಷಕರ ದಿನಾಚರಣೆಯ ನಿಮಿತ್ತ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಶಿಕ್ಷಕರ್ ಘಟಕ ವತಿಯಿಂದ ಕೊಡಮಾಡುವ ಈ ಪ್ರಶಸ್ತಿಯು ಬೆಂಗಳೂರಿನ ಕೆಪಿಸಿಸಿ ಕಚೇರಿಯ ಇಂದಿರಾ ಭವನದಲ್ಲಿ ಸೆಪ್ಟಂಬರ 5 ರಂದು ಜಿ. ಆರ್. ತಾಂಡೇಲ ರವರಿಗೆ ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜಿ. ಆರ್. ತಾಂಡೇಲ ಅವರು ಜಿಲ್ಲೆ ಕಂಡ ಶ್ರೇಷ್ಠ ಶಿಕ್ಷಕರಲ್ಲೊಬ್ಬರು ಶಾಲೆಯಲ್ಲಿ ಸರಳ ಬೋಧನೆಯೊಂದಿಗೆ ಕನ್ನಡ ವಿಷಯವನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವ ಹಾಗೆ ಬೋಧಿಸಿ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾಗಿ 2014ರಲ್ಲಿಯೇ ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದವರು. ಎನ್.ಸಿ. ಸಿ .ಆರ್ಮಿ ಘಟಕದಲ್ಲೂ ಕೆಡೆಟಗಳಿಗೆ ಉತ್ತಮವಾಗಿ ತರಬೇತಿ ನೀಡುತ್ತಾ, ಕರ್ನಾಟಕ ಮತ್ತು ಗೋವಾ ಸರ್ಕಾರದ ಎನ್.ಸಿ.ಸಿ. ಡೈರೆಕ್ಟರೇಟನಿಂದ ಡೆಪ್ಯೂಟಿ ಡೈರೆಕ್ಟರ್ ಜನರಲ್ ಆವಾರ್ಡ್ ಪಡೆದುಕೊಂಡವರು.

ಬಹುಮುಖಿ ಪ್ರತಿಭೆಯ ತಾಂಡೇಲ ಅವರು ಶಿಕ್ಷಣ ಕ್ಷೇತ್ರದ ಜೊತೆಗೆ ಕವಿಯಾಗಿ, ಸಮಾಜಮುಖಿಯಾಗಿ ಕೆಲಸ ಮಾಡುತ್ತ ಸಾಂಸ್ಕೃತಿಕ ವಲಯದಲ್ಲಿ ಹೆಸರು ಮಾಡಿದವರು, ಯಾವುದೇ ತರಗತಿಯ ವಿದ್ಯಾರ್ಥಿಗಳ ಮಟ್ಟಕ್ಕಿಳಿದು ಕಲಿಯುತ್ತ ಕಲಿಸುವ ಕಲೆ ಇವರಿಗೆ ಗೊತ್ತು. ವಿದ್ಯಾರ್ಥಿಗಳ ಮತ್ತು ಶಾಲೆಯ ಮೂಲಭೂತ ಅಗತ್ಯಗಳಿಗೆ ವೈಯಕ್ತಿಕವಾಗಿ-ದಾನಿಗಳಿಂದ ನಿರಂತರ ಸ್ಪಂದಿಸುತ್ತ ಬಂದಿದ್ದಾರೆ. ಜಿ.ಆರ್.ತಾಂಡೇಲ ಶಿಕ್ಷಣ ರಂಗದಲ್ಲಿ ಬದಲಾದ ಎಲ್ಲ ಕಾಲಘಟ್ಟಗಳಲ್ಲಿಯೂ ತಮ್ಮ ಶ್ರೇಷ್ಠತೆಯನ್ನು ಉಳಿಸಿಕೊಂಡಿದ್ದಾರೆ.ಸಾಹಿತ್ಯ ಕೃಷಿಯ ಜೊತೆ-ಕಲೆ-ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಮಕ್ಕಳ ಮನೋಗತವನ್ನು ಅರಿತು ಚಟುವಟಿಕೆಯ ಮೂಲಕ ಕಲಿಕೆಯನ್ನು ಬದುಕಿಗೆ ಅನ್ವಯಿಸುವ ತಂತ್ರಗಾರಿಕೆಯಲ್ಲಿ ನಿಪುಣರು. ಶಾಲೆಗಳ ಭೌತಿಕ ಮತ್ತು ಶೈಕ್ಷಣಿಕ ಪುರೋಭಿವೃದ್ದಿಗೆ ತಮ್ಮದೇ ಕೊಡುಗೆಯನ್ನು ನೀಡುತ್ತ ಮಕ್ಕಳ ಹೃದಯ ಕವಾಟದಲ್ಲಿ ನೆಲೆಯಾದವರು. ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಬಂದಿರುವುದು ಶಿಕ್ಷಕ ಸಮೂಹಕ್ಕೇ ಸಿಕ್ಕಷ್ಟು ಸಂಭ್ರಮ ಹಾಗೂ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿರುವುದು ವಿಶೇಷ. ಈ ಸಾಧನೆಗೆ ಪಾತ್ರರಾದ ಜಿ. ಆರ್. ತಾಂಡೇಲ ಅವರಿಗೆ ಸಹೋದ್ಯೋಗಿಗಳು, ಹಿತೈಷಿಗಳು ವಿದ್ಯಾರ್ಥಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

✍️ಮಹೇಶ ಆಯ್. ನಾಯ್ಕ , ಬಾಳೆಗುಳಿ ಅಂಕೋಲಾ

Exit mobile version