Site icon ಒಡನಾಡಿ

ಪ್ರಿನ್ಸಿಪಾಲ ಹಾಗೂ ಸಿ.ಪಿ.ಐ. ವಿರುದ್ದ ಮಾನವ ಹಕ್ಕುಗಳ ಆಯೋಗಕ್ಕೆ ದೂರು

ದಾಂಡೇಲಿ: ವಿದ್ಯಾರ್ಥಿಗಳ ಮೇಲೆ ದುರ್ವರ್ತನೆ ತೋರಿ ಕರ್ತವ್ಯಲೋಪವೆಸಗಿರುವ ಅಬ್ದುಲ್ ಕಲಾಂ ವಸತಿ ಶಾಲೆಯ (ವರ್ಗಾವಣೆಗೊಂಡ) ಪ್ರಾಂಶುಪಾಲ ವಿಶ್ವನಾಥ ಹುಲಸದಾರ, ಹಾಗೂ ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳು, ಪತ್ರಕರ್ತರು ಹಾಗೂ ಜನಪ್ರತಿನಿದಿಗಳ ಜೊತೆ ದರ್ಪದಿಂದ ಅನುಚಿತವಾಗಿ ನಡೆದುಕೊಂಡ ಸಿ.ಪಿ.ಐ. ಭೀಮಣ್ಣ ಸೂರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗುರುವಾರ ದಾಂಡೇಲಿ ತಹಶೀಲ್ದಾರ ಮೂಲಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಿಗೆ ದೂರು ಸಲ್ಲಿಕೆಯಾಗಿದೆ.

ಭಾರತ ವಿದ್ಯಾರ್ಥಿ ಫೆಡರೇಷನ್, ಯುವಜನ ಫೆಡರೇಷನ ಹಾಗೂ ಜನವಾದಿ ಮಹಿಳಾ ಸಂಘಟನೆಯ ನೇತೃತ್ವದಲ್ಲಿ ದೂರು ನೀಡಿದ್ದಾರೆ.

ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕಾದ ಪ್ರಾಂಶುಪಾಲರೇ ವಿದ್ಯಾರ್ಥಿ ವಿರೋಧಿ ನಡೆಯನ್ನು ಅನುಸರಿಸುತ್ತಿರುವುದು ಖೇಧಕರ. ಅಂತಹ ಪ್ರಾಂಶುಪಾಲರನ್ನು ಬೇರೆಡೆ ವರ್ಗಾವಣೆ ಮಾಡಿದರೆ ಸಾಲದು ಕೂಡಲೇ ಶಿಸ್ತು ಕ್ರಮ ಕೈಗೊಂಡು ಅಮಾನತು ಮಾಡಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ಪ್ರಾಂಶುಪಾಲರ ದುರಾಡಳಿತದಿಂದಾಗಿ ವಸತಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಕೆಲವು ಸಿಬ್ಬಂದಿಗಳು ಕೂಡ ಕೆಲಸ ತೊರೆದಿದ್ದಾರೆ. ವರ್ಗಾವಣೆಯಾದ ಪ್ರಾಚಾರ್ಯ ಬೇರೆ ಸಿಬ್ಬಂದಿಗೆ ಅಧಿಕೃತವಾಗಿ ಉಸ್ತುವಾರಿ ನೀಡಬೇಕಿತ್ತು‌‌. ಆದರೆ ಹಾಗೇ ಮಾಡದೇ ವಿಶ್ವನಾಥ ಹುಲಸದಾರ ಕರ್ತವ್ಯಲೋಪವೆಸಗಿದ್ದಾರೆ‌. ಇವರ ಕರ್ತವ್ಯ ಲೋಪದ ಪರಿಣಾಮವಾಗಿ ಹಾಸ್ಟೇಲ್ ನಲ್ಲಿರುವ ಬಡ ಹಿಂದುಳಿದ 400 ವಿದ್ಯಾರ್ಥಿಗಳಿಗೆ ನಿಯಮಿತವಾಗಿ ದೊರಕಬೇಕಿದ್ದ ಆಹಾರ ಸೇರಿದಂತೆ ಇನ್ನಿತರೇ ಯಾವುದೇ ಸೌಲಭ್ಯಗಳು ಸಮರ್ಪಕವಾಗಿ ದೊರೆಯದೆ ತೊಂದರೆಯನ್ನು ಅನುಭವಿಸಿರುವುದು ನೋವಿನ ಸಂಗತಿಯಾಗಿದೆ. ಪ್ರಾಚಾರ್ಯರ ಮೇಲೆ ಇನ್ನೂ ಹಲವು ದೂರುಗಳಿವೆ. ಇಲಾಖೆಯ ಮೇಲಾಧಿಕಾರಿಗಳ ನಿರ್ಲಕ್ಷ್ಯವೂ ಕೂಡಾ ಇದರಲ್ಲಿ ಎದ್ದು ಕಾಣುತ್ತಿದೆ ಎಂದಿದ್ದಾರೆ.

ತಮ್ಮ ಅಪ್ಪ ಅಮ್ಮನ ಹೆಸರಲ್ಲಿ ಬೈದಿರುವ ಇಂಥಹ ಪ್ರಾಚಾರ್ಯ ತಮಗೆ ಬೇಡ ಎಂದು ವಿದ್ಯಾರ್ಥಿಗಳು ಪ್ರತಿಭಟಿಸುವ ವೇಳೆ ಜನಪ್ರತಿನಿದಿಗಳು, ಸಂಘಟನೆಗಳು ಹಾಗೂ ಪತ್ರಕರ್ತರು ಬೆಂಬಲಕ್ಕೆ ನಿಂತಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ಸಿಪಿಐ ಭೀಮಣ್ಣ ಸೂರಿ ಅಲ್ಲಿಯ 400 ವಿದ್ಯಾರ್ಥಿಗಳ ಹಾಗೂ ಪಾಲಕರ ನೋವು ಹಾಗೂ ಅವರ ಭಾವನೆಗಳನ್ನು ಅರಿಯದೇ ಕೇವಲ ಪ್ರಾಂಶುಪಾಲರ ರಕ್ಷಣೆಗೆ ಮುಂದಾಗಿ ಪ್ರತಿಭಟಿಸಿದವರ ಮೇಲೆ ದಮನಕಾರಿ ನೀತಿ ಅನುರಿಸಿದ್ದು ಖಂಡನೀಯ. ಇದು ಮಾನವ ಹಕ್ಕುಗಳ ಉಲ್ಲಂಘನೆಯೂ ಆಗಿದೆ.

ವಿದ್ಯಾರ್ಥಿಗಳ ಪರ ಧ್ವನಿ ಎತ್ತಿದ ಪ್ರತಿಭಟನಾಕಾರರ ಮೇಲೆ ಪುಂಡರ ರೀತಿಯಲ್ಲಿ ಸ್ವತಃ ಪೋಲಿಸರೇ ಅಮಾನವೀಯವಾಗಿ ತಳ್ಳಾಡಿದರಲ್ಲದೇ ಪ್ರತಿಭಟನಾಕಾರರನ್ನು ಬಂಧಿಸುವುದಾಗಿ ಬೆದರಿಕೆ ಹಾಕಿ ದರ್ಪ ಮೆರೆದಿರುವುದು ಸರಿಯಲ್ಲ. ಹಿರಿಯ ಪತ್ರಕರ್ತರು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅದ್ಯಕ್ಷರಾದ ಬಿ.ಎನ್. ವಾಸರೆಯವರ ಮೇಲೆಯೂ ಕೂಡ ಸಿ.ಪಿ.ಐ. ಹಾಗೂ ಪೋಲಿಸ್ ದೌರ್ಜನ್ಯ ಅಕ್ಷಮ್ಯವಾದುದು.

ಜನರಿಗೆ ಉತ್ತರದಾಯಿಯಾಗಿರಬೇಕಾದ ಪೋಲಿಸರೇ ಸ್ವತಃ ತಾವೇ ಪ್ರಾಂಶುಪಾಲರನ್ನು ಪಲಾಯನ ಮಾಡಿಸಿರುವುದು ಇಲಾಖೆಯ ನೈತಿಕ ಅಧಃಪತನಕ್ಕೆ ಸಾಕ್ಷಿಯಾಗಿದೆ. ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯೂ ಆಗಿದೆ. ಹಾಗಾಗಿ ಇಂತಹ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಡಿ.ಸ್ಯಾಮಸನ್, ಇಮ್ರಾನ ಖಾನ್, ರತ್ನದೀಪಾ ಎನ್.ಎಮ್. , ಆಫ್ರಿನ್ ಕಿತ್ತೂರ್, ಇರ್ಶಾದ ಬೈಲೂರ, ಸಾಹಿಲ್ ಶೇಖ್, ಮಹಮ್ಮದ್ ಗೋಸ್, ಇಸಾಕ ಅಲಿ, ಗೌತಮ ಮುಂತಾದವರಿದ್ದರು. ಪ್ರಭಾರ ಉಪ ತಹಶಿಲ್ದಾರ ಗೋಪಿ ಚೌಹಾಣ ಮನವಿ ಸ್ವೀಕರಿಸಿದರು.

Exit mobile version