Site icon ಒಡನಾಡಿ

CPI ದೌರ್ಜನ್ಯ : ಪತ್ರಕರ್ತರಿಗೆ ಬೆಂಬಲವಾಗಿ ನಿಂತ ದಾಂಡೇಲಿಯ ಪುರಪಿತ್ರರು

ಪೊಲೀಸರು ಕರೆದ ಶಾಂತಿಪಾಲನಾ ಸಭೆಯನ್ನೇ ಬಹಿಷ್ಕರಿಸಿದ ನಗರಸಭಾ ಸದಸ್ಯರು

ದಾಂಡೇಲಿ: ಪತ್ರಕರ್ತರ ಮೇಲೆ ಪೊಲೀಸ್ ಅಧಿಕಾರಿ ನಡೆಸಿರುವ ದಬ್ಬಾಳಿಕೆಯನ್ನು ಖಂಡಿಸಿ ಪತ್ರಕರ್ತರಿಗೆ ಬೆಂಬಲವಾಗಿ ನಿಂತಿರುವ ದಾಂಡೇಲಿ ನಗರಸಭೆಯ ಪುರಪಿತೃರು ಗುರುವಾರ ಪೊಲೀಸ್ ಇಲಾಖೆ ಕರೆದಿದ್ದ  ಶಾಂತಿಪಾಲನಾ ಸಭೆಯನ್ನೇ  ಸಾಮೂಹಿಕವಾಗಿ ಬಹಿಷ್ಕರಿಸಿ ತಮ್ಮ ವಿರೋಧ ವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ. 

ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಚಾರ್ಯರ ವಿರುದ್ಧ ಅಲ್ಲಿಯ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿರುವ ವೇಳೆ ವಿದ್ಯಾರ್ಥಿಗಳ ಪರವಾಗಿ ನಿಂತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎನ್. ವಾಸರೆ ಹಾಗೂ ಉಳಿದ ಪತ್ರಕರ್ತರನ್ನು ಸಿಪಿಐ ಭೀಮಣ್ಣ ಸೂರಿಯವರು ತಮ್ಮ ಎದುರುಗಡೆಗೆಯೇ ಎಳೆದಾಡಿ ದರ್ಪವನ್ನು ತೋರಿದ್ದಾರೆ. ನಾವು ಮನವಿ ಮಾಡಿಕೊಂಡರೂ ಕೂಡ ಸಿಪಿಐ ಕೇಳಿಸಿಕೊಳ್ಳಲಿಲ್ಲ. ಅಲ್ಲಿ ಉಪಸ್ಥಿತರಿದ್ದ ನಗರಸಭಾ ಅಧ್ಯಕ್ಷ ಅಷ್ಪಾಕ ಶೇಖ್,  ಉಪಾಧ್ಯಕ್ಷೆ  ಶಿಲ್ಪಾ ಕೋಡಿ ಹಾಗೂ ಮಾಜಿ ಅಧ್ಯಕ್ಷೆ ಯಾಸ್ಮಿನ್ ಕಿತ್ತೂರು, ಸರಸ್ವತಿ ರಜಪೂತ,  ಆ ಭಾಗದ ಸದಸ್ಯ ಸಂಜಯ ನಂದ್ಯಾಳ್ಕರ್ ಸೇರಿದಂತೆ ಹಲವರು ಇದ್ದು ಪರಿಸ್ಥಿತಿಯನ್ನು ನಿಯಂತ್ರಿಸಲು, ನಡೆದ ವಿದ್ಯಾಮಾನ ತಿಳಿಸಲು ಪ್ರಯತ್ನಿಸಿದರಾದರೂ  ನಗರಸಭೆಯ ಚುನಾಯಿತ ಪ್ರತಿನಿದಿಗಳು ಎಂಬ ಗೌರವವನ್ನೂ  ನೀಡದೆ ಸಿಪಿಐ  ಭೀಮಣ್ಣ ಸೂರಿಯವರು ವಾಸ್ತವವನ್ನು ತಿಳಿದುಕೊಳ್ಳದೇ, ಮಕ್ಕಳ ನೋವು ಕೇಳದೇ ಏಕಾಏಕಿ ಪತ್ರಕರ್ತರು ಹಾಗೂ ಜನಪ್ರತಿನಿಧಿಗಳ ಮೇಲೆ ಹರಿಯುತ್ತಿದ್ದಾರೆ. ರೇಗಾಡಿದ್ದಾರೆ. ಎಳೆದಾಡಿದ್ದಾರೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಜವಾಬ್ದಾರಿ ಸ್ಥಾನದ ಅಧಿಕಾರಿಯಾಗಿ ಸಿ.ಪಿ.ಐ. ಭೀಮಣ್ಣ ಸೂರಿ ಜವಾಬ್ದಾರಿ ಸ್ಥಾನದಲ್ಲಿರುವ ಪತ್ರಕರ್ತರು ಹಾಗೂ ಜನಪ್ರತಿನಿಧಿಗಳ ಜೊತೆ ಈ ರೀತಿ ಅನುಚಿತವಾಗಿ  ನಡೆದುಕೊಂಡಿದ್ದು ಸರಿಯಾದದ್ದಲ್ಲ.

ಹಾಗಾಗಿ ನಾವು ಕೂಡ ಪೊಲೀಸರಿಗೆ ದಬ್ಬಾಳಿಕೆಯನ್ನು ಖಂಡಿಸುವ ಜೊತೆಗೆ ಪತ್ರಕರ್ತರ ಮೇಲಾದ ದೌರ್ಜನ್ಯವನ್ನು ಕೂಡ ಖಂಡಿಸುತ್ತಿದ್ದೇವೆ. ಜೊತೆಗೆ ಪತ್ರಕರ್ತರ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುತ್ತಿದ್ದೇವೆ. ಆ ಮೂಲಕ ಮೊದಲ ಎಚ್ಚರಿಕೆಯಾಗಿ ಗಣೇಶ ಚತುರ್ಥಿ ಹಾಗೂ ಬಕ್ರಿದ್ ಹಬ್ಬದ ಪ್ರಯುಕ್ತವಾಗಿ ಪೊಲೀಸ್ ಇಲಾಖೆಯಿಂದ ಗುರುವಾರ ದಾಂಡೇಲಿಯಲ್ಲಿ ನಡೆದ ಶಾಂತಿಪಾಲನ ಸಭೆಯಲ್ಲಿ ನಾವು ನಗರಸಭಾ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು ಭಾಗವಹಿಸದೆ ನಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದೇವೆ ಎಂದು ತಿಳಿಸಿದ್ದಾರೆ.

ನಗರಸಭೆಯಲ್ಲಿರುವ ಕಾಂಗ್ರೆಸ್ ಹಾಗೂ ಬಿಜೆಪಿಯ ಎಲ್ಲ 31 ಸದಸ್ಯರು ಪಕ್ಷ ಬೇಧವನ್ನು ಮರೆತು ಪೊಲೀಸರ ಶಾಂತಿಪಾಲನಾ ಸಭೆಯನ್ನು ಬಹಿಷ್ಕರಿಸಿರುವುದು ಗಮನಾರ್ಹ ಸಂಗತಿಯಾಗಿದೆ. ಈ ಸಂಗತಿಯನ್ನು ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯತೆಯಿದ್ದು,  ನಡೆದಿರುವ ಘಟನೆಯ ಬಗ್ಗೆ ಮಧ್ಯಪ್ರವೇಶ ಮಾಡಿ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಮುಂದುವರಿಯಬೇಕು ಎಂದು ನಗರಸಭಾ  ಅಧ್ಯಕ್ಷರು , ಸದಸ್ಯರು ಒತ್ತಾಯಿಸಿದ್ದಾರೆ .

Exit mobile version