Site icon ಒಡನಾಡಿ

ಡಿಪ್ಲೋಮಾ ಮ್ಯಾಕಾನಿಕಲ್ ಕೈಯಲ್ಲಿ ದಾಂಡೇಲಿ ನಗರಸಭೆಯ ಚುಕ್ಕಾಣಿ

ಅಂದು ಇವರು ಬದುಕಿಗಾಗಿ ಹೊರಟಿದ್ದು ಬೆಂಗಳೂರಿಗೆ. ಮಲ್ಟಿ ನ್ಯಾಷನಲ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿಯೂ ಕೆಲಸ. ಹೆಚ್ಚಿನ ತರಬೇತಿಗಾಗಿ ಕಂಪನಿಯ ಮೂಲಕವೇ ಜರ್ಮನಿಗೆ ಪ್ರಯಾಣ. ಆದರೆ ಅವರ ಆ ವೃತ್ತಿ ಬದುಕು ರಾಜಕೀಯಕ್ಕೆ ತಿರುವು ಕೊಂಡಿದ್ದು ತನ್ನ ಸ್ವಂತ ಊರು ದಾಂಡೇಲಿಯಲ್ಲಿ. ಸಮಾಜ ಸೇವೆ ಮತ್ತು ರಾಜಕೀಯದ ಮೂಲಕ ಮೂರು ಬಾರಿ ನಗರಸಭಾ ಸದಸ್ಯರಾಗಿ ಆಯ್ಕೆಯಾದವರು. ಇದೀಗ ದಾಂಡೇಲಿಯ ನಗರಸಭೆಯ ಅಧ್ಯಕ್ಷರಾಗಿದ್ದಾರೆ.

ಹೌದು,  ಇಂದು ದಾಂಡೇಲಿ ನಗರಸಭೆಯ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಅಷ್ಪಾಕ್ ಅಹಮ್ಮದ್ ಶೇಖರದ್ದು ನಿಜಕ್ಕೂ ಆಕಸ್ಮಿಕವಾದ ರಾಜಕೀಯ ಪ್ರವೇಶ. ಅವರ ಬದುಕಿನಲ್ಲಿ ಅಂಥಹದ್ದೊಂದು ಆಸ್ಮಿಕ ಘಟನೆಯೂ ನಡೆಯುತ್ತದೆ. 2002ರಲ್ಲಿ ಅವರ ತಂದೆ ಮತ್ತು ತಾಯಿ ವಾಹನ ಅಪಘಾತವೊಂದರಲ್ಲಿ  ಸಾವನ್ನಪ್ಪುತ್ತಾರೆ. ಸಹೋದರನೊಬ್ಬನಿಗೆ ಗಂಭೀರ ಗಾಯಗಳಾಗುತ್ತದೆ. ಅಂದು ಬೆಂಗಳೂರಲ್ಲಿ ಉದ್ಯೋಗದಲ್ಲಿದ್ದ ಅಷ್ಪಾಕ ಶೇಖ್  ಈ ಘಟನೆಯ ಕಾರಣಕ್ಕಾಗಿ ಮನೆಗೆ ಬರುತ್ತಾರೆ. ತಂದೆ-ತಾಯಿಯ ಕ್ರಿಯಾ ವಿಧಿಗಳೆಲ್ಲ ಮುಗಿದ ನಂತರ  ಬೆಂಗಳೂರಿಗೆ ಮತ್ತೆ ತನ್ನ ಕೆಲಸಕ್ಕೆ ಹೋಗಬೇಕೆನ್ನುವಾಗಲೇ,  ಮನೆಯಲ್ಲಿ ಅಪಘಾತದಲ್ಲಿ ಗಾಯಗೊಂಡ ಅಣ್ಣನನ್ನು ನೋಡಿಕೊಳ್ಳಲು ಯಾರು ಇರಲಿಲ್ಲ. ಇದ್ದ ಉಳಿದಿಬ್ಬರು ಅಣ್ಣಂದಿರು ಸರಕಾರಿ ನೌಕರಿಯಲ್ಲಿದ್ದರು. ಹಾಗಾಗಿ ಗಾಯಕೊಂಡು ಹಾಸಿಗೆಯ ಮೇಲಿದ್ದ ಸಹೋದರನ ನೋಡಿಕೊಳ್ಳಲೆಂದು ಬೆಂಗಳೂರಿನ ಉದ್ಯೋಗ ಬಿಟ್ಟು ಮನೆಯಲ್ಲಿ ಉಳಿದುಕೊಂಡವರು ಅಷ್ಪಾಕ ಶೇಖ್. 

ಮತ್ತೆ ಕೆಲಸಕ್ಕಾಗಿ ಬೇರೆ ಕಡೆ ಮುಖ ಮಾಡದೆ ದಾಂಡೇಲಿಯಲ್ಲಿಯೇ ಬದುಕು ಕಂಡುಕೊಂಡರು. ದುಡಿಮೆಗಾಗಿ ತಮ್ಮದೇ ಸ್ವಂತ ಬಿಸನೆಸ್. ಅಣ್ಣನ ಆರೈಕೆ ಮಾಡುತ್ತಲೇ ತನ್ನ ಸುತ್ತಲೂ ಇರುವ ಸಮಾಜಕ್ಕಾಗಿ ಕೆಲಸ ಮಾಡಿದರು.  ಯುವ ಲೋಕ ಮಿತ್ರ ಸಂಘಟನೆಯ ಮೂಲಕ ತನ್ನದೇ ಆದ ಯುವಜನರ ತಂಡ ನಿರ್ಮಿಸಿಕೊಂಡು ಸಾಕಷ್ಟು ಹೋರಾಟ, ಸಾಮಾಜಿಕ ಕೆಲಸಗಳನ್ನು ಮಾಡಿದವರು.  ಜನ ಸೇವಾ ಕಾರ್ಯದ ಮೂಲಕವೇ ಮೂರು ಬಾರಿ ನಗರಸಭಾ ಸದಸ್ಯರಾಗಿ , ಈಗ ಅಧ್ಯಕ್ಷರಾಗಿ ದಾಂಡೇಲಿಯ ಪ್ರಥಮ ಪ್ರಜೆ ಎನಿಸಿಕೊಂಡರು.

ಮೂಲತಃ ಮುಂಡಗೋಡ ತಾಲೂಕಿನವರಾಗಿರುವ ಇವರ ತಂದೆ ಶಿಕ್ಷಕರಾಗಿರುವ ಕಾರಣಕ್ಕೆ ದಾಂಡೇಲಿ  ವರ್ಗಾವಣೆಗೊಂಡು ಬಂದ ನಂತರದಲ್ಲಿ  ಇಲ್ಲಿಯೇ ನೆಲೆಸಿದರು. ಆರನೇ ತರಗತಿವರೆಗೆ ಕಾರವಾರದಲ್ಲಿ ಶಿಕ್ಷಣ ಮುಗಿಸಿದ  ಅಷ್ಪಾಕ ನಂತರದ ಶಿಕ್ಷಣ ಪಡೆದಿದ್ದು ದಾಂಡೇಲಿಯಲ್ಲಿ. ಡಿಪ್ಲೋಮೋ ಮೆಕಾನಿಕಲ್ ಹಾಗೂ ಡಿಪ್ಲೋಮೋ ರೇಡಿಯೋಗ್ರಫಿ ಪದವಿಯನ್ನು ಪಡೆದ ಅಷ್ಪಾಕ ಶೇಖ್ ರು ಕನ್ನಡ , ಹಿಂದಿ,  ಇಂಗ್ಲಿಷ್, ಮರಾಠಿ, ಉರ್ದು ಭಾಷೆಯನ್ನು ಪ್ರಬುದ್ಧವಾಗಿ ಮಾತನಾಡಬಲ್ಲಂತವರು.

2007ರಲ್ಲಿ ಮೊಟ್ಟಮೊದಲ ಬಾರಿಗೆ ರಾಜಕೀಯ ಪ್ರವೇಶಿಸಿದ ಅಷ್ಪಾಕ ಸುಭಾಷ್ ನಗರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಗರಸಭೆಗೆ ಸ್ಪರ್ಧಿಸಿ,  ಎಲ್ಲರ ನಿರೀಕ್ಷೆಯನ್ನು ಗೊಳಿಸಿ ಗೆಲುವು ಸಾಧಿಸಿದರು. ನಂತರ ಕಾಂಗ್ರೆಸ್ ಸೇರ್ಪಡೆಗೊಂಡರು.  ಅದೇ ಅವಧಿಯಲ್ಲಿ ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದರು. 2013ರಲ್ಲಿ ಕಾಂಗ್ರೆಸನಿಂದ ಸ್ಪರ್ಧಿಸಿ ಮತ್ತೆ ಸುಭಾಷ ನಗರದಲ್ಲಿ ಗೆಲುವು ಕಂಡ ಅಷ್ಪಾಕ್ ಶೇಖ್  ನಗರಸಭೆಯ ಉಪಾಧ್ಯಕ್ಷರೂ ಆದರು. 2018ರಲ್ಲಿಯೂ ಕೂಡ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆಲುವು ಕಂಡ  ಇವರು ಇದೀಗ ನಗರಸಭೆಯ ಅಧ್ಯಕ್ಷರಾಗುವ  ಮೂಲಕ ನಗರದ ಪ್ರಥಮ ಪ್ರಜೆ ಎನಿಸಿಕೊಂಡಿದ್ದಾರೆ. ತನ್ನ ರಾಜಕೀಯ ಹಾಗೂ ಸಾಮಾಜಿಕ ಜೀವನದಲ್ಲಿ ಜೊತೆಯಾದವರನ್ನು ಮತ್ತು ಈ ಉನ್ನತ ಹುದ್ದೆಯನ್ನು ಅಲಂಕರಿಸಲು ನೆರವಾದವರನ್ನು ಮನತುಂಬಿ ಸ್ಮರಿಸುತ್ತಾರೆ. ನಿಜ ಹೇಳಬೇಕೆಂದರೆ  ನಗರಸಭೆಯಲ್ಲೊ ಸತತ ಮೂರು ಅವಧಿಯನ್ನು  ಕಂಡಿರುವ  ಅಷ್ಪಾಕ ಶೇಖ್ ದಾಂಡೇಲಿ  ನಗರಸಭೆಯ ಎಲ್ಲ ಮಜಲುಗಳನ್ನು ಬಲ್ಲವರು. ಚುರುಕುತನ ಉಳ್ಳವರು. ತಮ್ಮ ಅವಧಿಯಲ್ಲಿ ಅದೇನು ಹೊಸತನ ನೀಡುತ್ತಾರೋ ಕಾದು ನೋಡಬೇಕು.

ಸ್ವಚ್ಛತೆ ಮತ್ತು ಅಭಿವೃದ್ಧಿಗೆ ಆದ್ಯತೆ:
ಈ ನಗರದಲ್ಲಿ ಸ್ವಚ್ಛತೆಗಾಗಿ ಮೊದಲ ಆದ್ಯತೆಯನ್ನು ನೀಡುತ್ತೇನೆ. ರಸ್ತೆ ಹಾಗೂ ಚರಂಡಿಗಳ ನಿರ್ಮಾಣಕ್ಕಾಗಿ,   ಮಧ್ಯಮ ವರ್ಗದ ನಿವೇಶನ ರಹಿತರಿಗೆ ಪ್ಲಾಟ್ ಮೂಲಕ ನಿವೇಶನ ನೀಡಲು ಕ್ರಮ,  ನಗರದಲ್ಲಿರುವ ಪಾರ್ಕಿಂಗ್ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕ್ರಮ, ಲೀಜಿ್  ಜಾಗವನ್ನು ಸಕ್ರಮಗೊಳಿಸುವಲ್ಲಿ ಕಾನೂನು ಪ್ರಕಾರ  ಕೆಲಸ, ಇಂತಹ ಹಲವಾರು ತುರ್ತು ಕೆಲಸಗಳ  ಜೊತೆಗೆ ಹಲವಾರು ನಗರದ ಅಭಿವೃದ್ಧಿಯ ಕೆಲಸಗಳನ್ನು ಮಾಡಬೇಕಿದೆ.   ದಾಂಡೇಲಿಯ ಪ್ರತಿಯೊಬ್ಬ ನಾಗರಿಕರನ್ನು ಕೂಡ ನನ್ನ ಅವಧಿಯಲ್ಲಿ ಗೌರವದಿಂದ ಕಾಣಬೇಕು. ಪ್ರತಿಯೊಬ್ಬರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎನ್ನುವುದು ನನ್ನ ಅಭಿಲಾಷೆಯಾಗಿದೆ ಎನ್ನುತ್ತಾರೆ ಅಷ್ಪಾಕ  ಶೇಖ್.

ಕಲಿತಿದ್ದು ನರ್ಸಿಂಗ್ : ಈಗ ನಗರಸಭೆಯ ಉಪಾಧ್ಯಕ್ಷೆ

ದಾಂಡೇಲಿ ನಗರಸಭೆಯ ಉಪಾಧ್ಯಕ್ಷರಾಗಿರುವ ಶಿಲ್ಪಾ ಕೋಡೆಯವರು ಕಲಿತಿದ್ದು ದ್ವಿತೀಯ ಪಿಯುಸಿ ಹಾಗೂ ನರ್ಸಿಂಗ್ ಕೋರ್ಸ್. ಇವರ ಮೂಲ ಊರು ಹೊನ್ನಾವರ.  ಮದುವೆಯಾಗಿ ಬಂದಿದ್ದು ಹಳೆ ದಾಂಡೇಲಿಗೆ. ಹೊನ್ನಾವರದಲ್ಲಿರುವಾಗ ಇವರು ಖಾಸಗಿ ನರ್ಸಿಂಗ್ ಹೋಮ್ ಒಂದರಲ್ಲಿ ಮೂರು ವರ್ಷಗಳ ಕಾಲ ಸಿಸ್ಟರ್ ಆಗಿ ಕೆಲಸ ನಿರ್ವಹಿಸಿದ್ದರು. ಹಳೆ ದಾಂಡೇಲಿ ವಾರ್ಡ್ ನಿಂದ ಮೊದಲ ಬಾರಿ  ನಗರಸಭೆಗೆ ಆಯ್ಕೆಯಾಗಿರುವ ಇವರಿಗೆ ಇದೀಗ ನಗರಸಭೆಯ ಉಪಾಧ್ಯಕ್ಷತೆಯ ಗೌರವ ಒಲಿದು ಬಂದಿದೆ.

Exit mobile version