Site icon ಒಡನಾಡಿ

ದಾಂಡೇಲಿ ನಗರಸಭೆಗೆ ಅಷ್ಪಾಕ ಅಹ್ಮದ್ ಶೇಖ್ ಸಾರಥ್ಯ

ಉಪಾಧ್ಯಕ್ಷರಾಗಿ ಶಿಲ್ಪಾ ವಿಲಿಯಂ ಕೋಡೆ

ದಾಂಡೇಲಿ ನಗರಸಭೆಯ ನೂತನ ಅಧ್ಯಕ್ಷರಾಗಿ ಅಷ್ಪಾಕ ಅಹ್ಮದ ಶೇಖ್ ಹಾಗೂ ಉಪಾಧ್ಯಕ್ಷರಾಗಿ ಶಿಲ್ಪಾ ಕೋಡೆ ಆಯ್ಕೆಯಾಗಿದ್ದಾರೆ.

ನೂತನ ಅಧ್ಯಕ್ಷ ಉಪಾಧ್ಯಕ್ಷರಿಗಾಗಿ ಶನಿವಾರ ನಗರಸಭೆ ಸಭಾಭವನದಲ್ಲಿ ಚುನಾವಣೆ ಪ್ರಕ್ರಿಯೆ ನಡೆದಿತ್ತು. 31 ಸದಸ್ಯ ಬಲವಿದ್ದ ದಾಂಡೇಲಿ ನಗರಸಭೆಯಲ್ಲಿ 20 ಕಾಂಗ್ರೆಸ್ ಸದಸ್ಯರಿದ್ದರೆ 11 ಬಿಜೆಪಿ ಸದಸ್ಯರಿದ್ದರು.

ಸಾಮಾನ್ಯ ಮೀಸಲಾತಿಯಿದ್ದ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ ನಿಂದ ವಾರ್ಡ್ ನಂ.15ರ (ಸುಭಾಷ್ ನಗರ) ಅಷ್ಪಾಕ ಅಹ್ಮದ್ ಶೇಖ್ ನಾಮಪತ್ರ ಸಲ್ಲಿಸಿದ್ದರೆ, ಹಿಂದುಳಿದ ವರ್ಗ ‘ಬ’ ಮಹಿಳೆ ಮೀಸಲಾತಿಯಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ವಾರ್ಡ್ ನಂಬರ್ 26ರ (ಹಳೆ ದಾಂಡೇಲಿ ) ಶಿಲ್ಪಾ ವಿಲಿಯಂ ಕೋಡೆ ನಾಮಪತ್ರ ಸಲ್ಲಿಸಿದರು.

ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ನ ಅಷ್ಪಾಕ ಅಹ್ಮದ ಶೇಖ್ ಹಾಗೂ ಶಿಲ್ಪಾ ವಿಲಿಯಂ ಕೋಡೆಯವರು ತಮ್ಮ ಕಾಂಗ್ರೆಸ್ಸಿನ 20 ಸದಸ್ಯರ ಮತಗಳ ಜೊತೆಗೆ ಶಾಸಕ ಆರ್.ವಿ. ದೇಶಪಾಂಡೆ ಯವರ ಒಂದು ಮತವೂ ಸೇರಿ 21 ಮತಗಳನ್ನು ಪಡೆದು ಬಹುಮತದಿಂದ ಆಯ್ಕೆಯಾದರು.

ಪ್ರತಿಪಕ್ಷ ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ರೋಷನ್ ಜಿತ್, ಉಪಾಧ್ಯಕ್ಷ ಸ್ಥಾನಕ್ಕೆ ಶೋಭಾ ಜಾಧವ್ ನಾಮಪತ್ರ ಸಲ್ಲಿಸಿದರು. ಇವರು ತಮ್ಮ ಪಕ್ಷದ ಸದಸ್ಯರ 11 ಮತವನ್ನು ಪಡೆದು ನಿರೀಕ್ಷೆಯ ಪರಾಭವಗೊಂಡರು.

ಚುನಾವಣಾಧಿಕಾರಿಗಳಾಗಿ ಸಹಾಯಕ ಆಯುಕ್ತರದ ಕನಿಷ್ಕ ಕುಮಾರ್ ಕಾರ್ಯನಿರ್ವಹಿಸಿದ್ದರು. ತಹಶೀಲ್ದಾರ್ ಶೈಲೇಶ ಪಮಾನಂದ , ಪೌರಾಯುಕ್ತ ರಾಜಾರಾಮ್ ಪವಾರ್ ಚುನಾವಣಾ ಪ್ರಕ್ರಿಯೆಯಲ್ಲಿ ಸಹಕರಿಸಿದರು. ಆಯ್ಕೆಗೊಂಡ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಶಾಸಕ ಆರ್. ವಿ. ದೇಶಪಾಂಡೆ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿಯವರು ಅಭಿನಂದಿಸಿ, ನಗರದ ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಂತೆ ತಿಳಿಸಿದರು.

ಜೊತೆಯಲ್ಲಿಯೇ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನ ಪ್ರತಿಪಕ್ಷ ಬಿಜೆಪಿಯ ಸದಸ್ಯರು ಕೂಡ ಹಾರಹಾಕಿ ಅಭಿನಂದಿಸಿದ್ದು ಗಮನಾರ್ಹವಾಗಿತ್ತು.

Exit mobile version