ಹಾಜರಿ ಪುಸ್ತಕವಿಲ್ಲ : ಹಾಸ್ಟೇಲಿಗೆ ತರಕಾರಿಯಿಲ್ಲ: ಪೋನ್ ಮಾಡಿದ್ರೆ ಸ್ವೀಕರಿಸೋದಿಲ್ಲ
ದಾಂಡೇಲಿಯ ಡಾ. ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಚಾರ್ಯರು ಮಂಗಳೂರಿಗೆ ವರ್ಗಾವಣೆಗೊಂಡರೂ ಮತ್ತೊಬ್ಬರಿಗೆ ಚಾರ್ಜ್ ನೀಡದೆ, ವರ್ಗಾವಣೆಯಾದ ಸ್ಥಳಕ್ಕೂ ಹಾಜರಾಗದೆ, ಬೆಂಗಳೂರಿನಲ್ಲಿ ಸೇರಿಕೊಂಡಿದ್ದಾರೆ. ಇದೀಗ ಇದು ಸ್ಥಳೀಯವಾಗಿ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ.
ವಿಶ್ವನಾಥ ಹುಲಸದಾರ ಎಂಬರು ದಾಂಡೇಲಿಯ ಅಬ್ದುಲ್ ಕಲಾಂ ವಸತಿ ಶಾಲೆಗೆ 2021 ಆಗಸ್ಟ್ 8ರಂದು ಪ್ರಾಚಾರ್ಯರಾಗಿ ಅಧಿಕಾರ ವಹಿಸಿಕೊಂಡಿದ್ದರು. ಇವರು ಪ್ರಾಚಾರ್ಯರಾಗಿ ಶಾಲೆಯ ಅಭಿವೃದ್ಧಿಗೆ ತೊಡಗಿಸಿಕೊಂಡಿದ್ದಕ್ಕಿಂರ ಅಧಿಕಾರ ಚಲಾಯಿಸಿದ್ದೇ ಹೆಚ್ಚು. ಅನಗತ್ಯವಾಗಿ ಸಿಬ್ಬಂದಿಗಳಿಗೆ ನೋಟಿಸ್ ನೀಡುವುದು, ತಮ್ಮ ವಿಷಯವನ್ನು ತರಗತಿಯಲ್ಲಿ ಬೋಧಿಸದೆ ಕಾಲಹರಣ ಮಾಡುವುದು, ಮಕ್ಕಳ ಊಟೋಪಹಾರವನ್ನು ವ್ಯವಸ್ಥೆಯನ್ನು ಸಮರ್ಪಕವಾಗಿ ನೀಡದೆ ತನ್ನ ಊರಿನ ಆಪ್ತರಿಗೆ ಉಸ್ತುವಾರಿ ನೀಡುವುದು ಸೇರಿದಂತೆ ಹಲವು ಆರೋಪಗಳು ಇವರ ಮೇಲಿದ್ದವು. ಶಾಲೆಗೆ ಬಂದ ಹಣ ದುರ್ಬಳಕೆಯಾಗಿರುವ ಬಗೆಯು ಕೂಡ ಆಕ್ಷೇಪವಿತ್ತು. ಸಿಬ್ಬಂದಿಗಳಂತೂ ಇವರ ದರ್ಬಾರಿಂದ ಬೇಸತ್ತು ಹೋಗಿದ್ದರು. ಕೆಲವರು ಬಿಟ್ಟು ಹೋಗಿದ್ದರು. ಈ ಬಗ್ಗೆ ದೂರು ಕೂಡ ಹೋಗಿತ್ತು. ಆ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಮಂಡಳಿ ಸರ್ಕಾರದ ಗಮನಕ್ಕೆ ತಂದು ಇವರನ್ನು ಜುಲೈ 31 ರಂದು ಮಂಗಳೂರಿನ ಮುರಾರ್ಜಿ ವಸತಿ ಶಾಲೆಗೆ ವರ್ಗಾಯಿಸಿ ಆದೇಶಿಸಿತ್ತು. ಈ ಆದೇಶ ಪತ್ರದಲ್ಲಿಯೇ ಪ್ರಭಾರಿ ಪ್ರಚಾರ್ಯರಾಗಿದ್ದ ದಸ್ತಗಿರಿ ಮುಲ್ತಾನಿ ಎಂಬವರಿಗೆ ಚಾರ್ಜ್ ನೀಡುವಂತೆ ನಿರ್ದೇಶಿಸಿ, ತಕ್ಷಣ ವರ್ಗಾವಣೆಗೊಂಡ ಸ್ಥಳಕ್ಕೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ ಪ್ರಾಚಾರ್ಯ ವಿಶ್ವನಾಥ್ ಅವರು ಸರಕಾರದ ಆದೇಶ ಪಾಲಿಸದೆ, ವರ್ಗಾವಣೆಗೊಂಡ ಮಂಗಳೂರಿನ ಮುರಾರ್ಜಿ ವಸತಿ ಶಾಲೆಗೂ ಹಾಜರಾಗದೆ ರಾಜಧಾನಿ ಬೆಂಗಳೂರು ಸೇರಿಕೊಂಡು ದಾಂಡೇಲಿಯಲ್ಲಿಯೇ ಮುಂದುವರಿಯುವಂತಾಗಲು ಹಲವು ರಾಜಕಾರಣಿಗಳ ದುಂಬಾಲು ಬಿದ್ದಿದ್ದರು. ಪತ್ರಿಕೆಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಸ್ಥಳೀಯ ಶಾಸಕ ಆರ್. ವಿ. ದೇಶಪಾಂಡೆಯವರನ್ನೂ ಭೇಟಿಯಾಗಿ ಅಂಗಲಾಚಿದ್ದರಂತೆ. ಆದರೆ ದೇಶಪಾಂಡೆಯವರು ಇದಕ್ಕೆ ಕಿವಿ ಕೊಡಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಇನಚಾರ್ಜ ಇಲ್ಲದೆ ಐದು ದಿನ: ಪ್ರಾಚಾರ್ಯ ವಿಶ್ವನಾಥರಿಗೆ ಜುಲೈ 31ಕ್ಕೆ ವರ್ಗಾವಣೆಯಾಗಿದೆ. ಸರಕಾರದ ಆದೇಶದಂತೆ ಅವರು ಸಹ ಪ್ರಾಚಾರ್ಯ ದಸ್ತಗಿರಿ ಮುಲ್ತಾನಿಯವರಿಗೆ ಚಾರ್ಜ್ ನೀಡಬೇಕಿತ್ತು. ಆದರೆ ಯಾವ ಮಾಹಿತಿಯನ್ನು ನೀಡದೆ, ಹಾಜರಿ ಪುಸ್ತಕ ಸೇರಿದಂತೆ ಮತ್ತಿತರೆ ದಾಖಲೆಗಳು ಹಾಗೂ ಕಚೇರಿಯ ಹಲವು ಕಪಾಟುಗಳ ಚಾವಿಯನ್ನು ತಾವೇ ಇಟ್ಟುಕೊಂಡು ರಾತೋರಾತ್ರಿ ಬೆಂಗಳೂರು ಸೇರಿದರು. ಮಳೆಯ ಕಾರಣಕ್ಕೆ ಆಗಸ್ಟ್ ನಾಲ್ಕರವರೆಗೆ ವಸತಿ ಶಾಲೆಗೂ ರಜೆ ಇತ್ತು. ರವಿವಾರದವರೆಗೆ ಈ ಸಮಸ್ಯೆ ಬಂದಿರಲಿಲ್ಲ. ಹಾಸ್ಟೆಲ ಮಕ್ಕಳ ಊಟ ಹೇಗೋ ನಾಲ್ಕು – ಐದು ದಿನಗಳ ಕಾಲ ನಡೆದು ಹೋಗಿತ್ತು. ಆಗಸ್ಟ್ 5ರಂದು ಮತ್ತೆ ತರಗತಿಗಳು ಪ್ರಾರಂಭವಾಗುತ್ತಿದ್ದಂತೆಯೇ ಕಾಲೇಜಿನಲ್ಲಿ ಸಮಸ್ಯೆಗಳು ಉಂಟಾದವು. ಕಾಲೇಜಿಗೆ ಬಂದ ಸಿಬ್ಬಂದಿಗಳು ಹಾಜರಿ ಪುಸ್ತಕ ಸಿಗದೇ ಇದ್ದಾಗ ಹಾಜರಿಯನ್ನು ಹಾಕದೆ ತಮ್ಮ ಕರ್ತವ್ಯ ನಿರ್ವಹಿಸಿದರು. ವಿದ್ಯಾರ್ಥಿಗಳಿಗೆ ತರಕಾರಿ ಹಾಗೂ ಇನ್ನಿತರ ಸಾಮಗ್ರಿಗಳು ಕಡಿಮೆ ಇದ್ದಾಗ (ವಾರ್ಡನ್ ಕೂಡ ದೀರ್ಘ ರಜೆ ಮೇಲಿದ್ದಾರೆ) ಪ್ರಭಾರಿ ಪ್ರಾಚಾರ್ಯರು ಮೇಲಾಧಿಕಾರಿಗಳ ಗಮನಕ್ಕೆ ತಂದು ತಾತ್ಕಾಲಿಕವಾಗಿ ಒದಗಿಸಿದರು. ಮೇಲಾಧಿಕಾರಿಗಳ ಸೂಚನೆಯಂತೆ ದಸ್ತಗಿರಿ ಮಲ್ತಾನಿಯವರು ಸೋಮವಾರ ಹುದ್ದೆಯ ಇನ್ ಚಾರ್ಜ್ ಪಡೆದುಕೊಂಡರು. ಕಪಾಟುಗಳಿಗೆ ಬೀಗ ಇದ್ದ ಕಾರಣ ಸಮಸ್ಯೆಯಾದರೂ ಹಾಗೂ ಹೀಗೂ ನಿರ್ವಹಿಸಿದ್ದೇನೆ. ಆದರೆ ವರ್ಗಾವಣೆಗೊಂಡ ಪ್ರಾಚಾರ್ಯರು ತಮಗೆ ಯಾವುದೇ ಅಧಿಕೃತ ಚಾರ್ಜನ್ನು ನೀಡಿಲ್ಲ ಎಂದಿದ್ದಾರೆ. ಕಪಾಟುಗಳಿಗೆ ಹಾಗೂ ಹಲವು ಮುಖ್ಯ ಕೊಠಡಿಗಳಿಗೆ ಬೀಗ ಹಾಕಿರುವುದರಿಂದ ಕೆಲಸಗಳಿಗೆ ಸಮಸ್ಯೆ ಆಗುತ್ತಿದೆ ಎಂಬ ನೋವನ್ನು ತೋಡಿಕೊಂಡಿದ್ದಾರೆ. ಈ ಬಗ್ಗೆ ವಿಚಾರಿಸೋಣ ಎಂದು ವರ್ಗಾವಣೆಗೊಂಡ ಪ್ರಾಚಾರ್ಯ ವಿಶ್ವನಾಥ್ ಹುಲಸದಾರ ಅವರಿಗೆ ದೂರವಾಣಿ ಕರೆ ಮಾಡಿದರೆ ಅವರು ಸ್ವೀಕರಿಸಿರುವುದಿಲ್ಲ.
ವಿದ್ಯಾರ್ಥಿಗಳಿಗೆ ತಾತ್ಕಾಲಿಕ ವ್ಯವಸ್ಥೆ : ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ. ಪ್ರಾಥಮಿಕ ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜಿನವರೆಗೂ ಶಿಕ್ಷಣವಿದೆ. ಇಲ್ಲಿರುವ ವಿದ್ಯಾರ್ಥಿಗಳೆಲ್ಲರೂ ಕೂಡ ಬೇರೆ ಬೇರೆ ಊರುಗಳಿಂದ ತಂದೆ, ತಾಯಿ, ಪಾಲಕರನ್ನ ಬಿಟ್ಟು ಬಂದಿರುವ ಬಡ ಮಧ್ಯಮ ವರ್ಗದ ವಿದ್ಯಾರ್ಥಿಗಳು. ಇವರಿಗೆ ಹಾಸ್ಟಲ್ ಊಟೋಪಹಾರ ಬೇಕು. ಇಲ್ಲಿನ ಪ್ರಾಚಾರ್ಯರು ವರ್ಗಾವಣೆಗೊಂಡರೂ ಚಾರ್ಜ್ ನೀಡದೇ ಹೋಗಿರುವುದರಿಂದ ವಸತಿ ಶಾಲೆಯ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಊಟೋಪಹಾರದಲ್ಲಿ. ಸಮಸ್ಯೆಯಾಗಿತ್ತು ವಿಷಯ ತಿಳಿದು ಕರಾವಳಿ ಮುಂಜಾವು ಪ್ರತಿನಿದಿ ಹಾಸ್ಟೇಲಿಗೆ ಭೇಟಿ ನೀಡಿ ವಿಚಾರಿಸಿದಾಗ ಕೆಲ ವಿದ್ಯಾರ್ಥಿಗಳು ಆಗಿರುವ ಸಮಸ್ಯೆಯನ್ನು ಗೌಪ್ಯವಾಗಿ ಹೇಳಿಕೊಂಡರು ಸಿಬ್ಬಂದಿಗಳು ಸಹ ಬೇಸರ ವ್ಯಕ್ತಪಡಿಸಿದರು. ಮುಂಜಾವು ಭೇಟಿಯ ನಂತರ ಎಚ್ಚರಗೊಂಡ ವಸತಿ ನಿಲಯದವರು ಅಗತ್ಯವಿರುವ ತರಕಾರಿ ಹಾಗೂ ಇತರ ದಿನಸಿಗಳನ್ನು ತರಿಸಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಿದರು.
ನಗರಸಭಾ ಸದಸ್ಯರ ಭೇಟಿ : ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಆಗಿರುವ ಸಮಸ್ಯೆಯ ವಿಷಯ ತಿಳಿಯುತ್ತಿದ್ದಂತೆಯೇ ನಗರಸಭಾ ಸದಸ್ಯರಾದ ಯಾಸ್ಮಿನ್ ಕಿತ್ತೂರ, ಸಂಜಯ್ ನಂದ್ಯಾಳ್ಕರ್, ಅಷ್ಪಾಕ ಶೇಖ್, ಮಜೀದ ಸನದಿ, ಮೌಲಾಲಿ ಮುಲ್ಲಾ , ಮಾಜಿ ಸದಸ್ಯ ರಿಯಾಜ ಸಯ್ಯದ್ ಮುಂತಾದವರು ಭೇಟಿ ನೀಡಿ ಪರಿಶೀಲಿಸಿದರು. ಹಾಸ್ಟೇಲ್ ಸಮಸ್ಯೆಯಿದ್ದರೆ ತಿಳಿಸುವಂತೆಯೂ, ಮಕ್ಕಳಿಗೆ ಸಮಸ್ಯೆ ಆಗದಂತೆ ಕಾರ್ಯ ನಿರ್ವಹಿಸುವಂತೆಯೂ ತಿಳಿಸಿದ್ದಾರೆ.
ಕರೆದರೂ ಬಾರದ ಸಿಬ್ಬಂದಿ
: ಹಾಸ್ಟೆಲಗೆ ಅವಶ್ಯವಿರುವ ದಿನಸಿ ಹಾಗೂ ಕಿರಾಣಿ ಸಾಮಾನು ತರಲು ವರ್ಗಾವಣೆಗೊಂಡ ಪ್ರಾಚಾರ್ಯರ ಆಪ್ತನೊಬ್ಬನಿದ್ದ. ಗುತ್ತಿಗೆ ಅಧಾರದ ಕೆಲಸಗಾರ. ಪ್ರಾಚಾರ್ಯರು ತಮ್ಮ ಊರಿನವನನ್ನೇ ಇಟ್ಟುಕೊಂಡಿದ್ದಾರಂತೆ. ಪ್ರಾಚಾರ್ಯ ಚಾರ್ಜ್ ಕೊಡದೇ ಹೋದರೂ ಈತನೇ ಹಾಸ್ಟೇಲ್ ಉಸ್ತುವಾರಿ ಇದ್ದ. ಸೋಮವಾರ ವಸತಿನಿಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಆ ಸಿಬ್ಬಂದಿಯನ್ನು ಕರೆದರೆ ಆತ ಬಾರದೇ ನಿರ್ಕ್ಷಿಸಿ. ಪ್ರಭಾರಿ ಪ್ರಾಚಾರ್ಯರಿಗೂ ಮಾಹಿತಿ ನೀಡದೇ ಹೊರಗಡೆ ಹೋಗಿದ್ದು, ಇದು ಕರ್ತವ್ಯ ಲೋಪ ಎನ್ನಲಾಗಿದೆ.
ನಿಯಮ ಉಲ್ಲಂಘಿಸಿದರೆ ಕ್ರಮ :
ದಾಂಡೇಲಿ ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಚಾರ್ಯರು ವರ್ಗಾವಣೆಯಾಗಿರುವುದು ಗೊತ್ತು. ನಾನೇ ರಿಲೀವ್ ಮಾಡಿರುವೆ. ಅದರೆ ಅವರು ಚಾರ್ಜ್ ನೀಡದೇ ಇರುವ ಬಗ್ಗೆ ಮಾಹಿತಿ ಇರಲಿಲ್ಲ. ಇಂದು ಪ್ರಭಾರಿ ಪ್ರಾಚಾರ್ಯರಿಗೆ ದೂರವಾಣಿ ಮೂಲಕ ಕಾರ್ಯ ನಿರ್ವಹಿಸಲು ಹೇಳಿರುವೆ. ಹಿಂದಿನ ಪ್ರಾಚಾರ್ಯರು ನಿಯಮ ಮೀರಿ ವ್ಯವಹರಿಸಿದ್ದರೆ ಇಲಾಖೆ ಕ್ರಮ ಕೈಗೊಳ್ಳುತ್ತದೆ ಎಂದಿದ್ದಾರೆ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧಿಕಾರಿ ಫಕೀರಪ್ಪ ಪೂಜಾರವರು.