Site icon ಒಡನಾಡಿ

ಕೃಷಿ ಜಾಗೃತಿ ಶಿಬಿರ ಹಾಗೂ ಪ್ರಗತಿಪರ ಕೃಷಿಕ ಮಹಿಳೆಗೆ ಸನ್ಮಾನ

ದಾಂಡೇಲಿ ತಾಲೂಕಿನ ಹಸನ್ಮಾಳದಲ್ಲಿ ಶ್ರೀಗಂಧ ಟ್ರಸ್ಟ್ ದಾಂಡೇಲಿ ಮತ್ತು ಕೆನರಾ ವೆಲ್ಫೇರ್ ಟ್ರಸ್ಟ್ ಬಿ.ಎಡ್. ಕಾಲೇಜು ದಾಂಡೇಲಿ ಇವರ ಸಹಯೋಗದಲ್ಲಿ ಬಿ.ಎಡ್ ಪದವಿ ವಿದ್ಯಾರ್ಥಿಗಳಿಗಾಗಿ ಕೃಷಿ ಜಾಗೃತಿ ಶಿಬಿರ ಮತ್ತು ಪ್ರಗತಿಪರ ಕೃಷಿಕ ಮಹಿಳೆಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೃಷಿ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪಿ.ಐ‌. ಮಾನೆಯವರು ‘ರೈತ ಈ ದೇಶದ ಬೆನ್ನೆಲುಬು. ರೈತರು ದುಡಿದರೆ ಮಾತ್ರ ನಗರದಲ್ಲಿರುವವರು ನೆಮ್ಮದಿ ಯಿಂದ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯ. ಈ ಜಗತ್ತಿನಲ್ಲಿ ಸ್ವಾಭಿಮಾನದಿಂದ ಬದುಕುವ ಉದ್ಯೋಗವಿದ್ದರೆ ಅದು ಒಕ್ಕಲುತನ ಮಾತ್ರ. ಒಕ್ಕಲುತನ ಮಾಡುವವನು ನಿಜವಾದ ಕಾಯಕಯೋಗಿಯಾಗಿರುತ್ತಾನೆ. ಇಡೀ ರಾಷ್ಟ್ರದ ಆರ್ಥಿಕ ಸ್ಥಿತಿ ಕೃಷಿ ಕ್ಷೇತ್ರದ ಮೇಲೆ ಅವಲಂಬಿತವಾಗಿದೆ. ಕೃಷಿ ಕ್ಷೇತ್ರವು ಎಲ್ಲದಕ್ಕೂ ಮೂಲ ಆಸರೆಯಾಗಿದೆ. ಇಂದು ಗ್ರಾಮೀಣ ಭಾಗದ ಯುವಕರು ಹಳ್ಳಿಯನ್ನು ತೊರೆದು ಉದ್ಯೋಗಕ್ಕಾಗಿ ದೂರದ ಊರುಗಳಿಗೆ ಹೋಗುತ್ತಿರುವುದು ಕೃಷಿ ಕ್ಷೇತ್ರದ ಬಲವರ್ಧನೆಗೆ ಹಿನ್ನಡೆ ಎಂದೇ ಹೇಳಬಹುದು. ರೈತರನ್ನು, ಕೃಷಿಕರನ್ನು ಗೌರವದಿಂದ ಕಾಣುವಂತಹ ವಾತವರಣ ನಿರ್ಮಾಣವಾಗಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆನರಾ ವೆಲ್ಫರ್ ಟ್ರಸ್ಟ್ ಬಿ.ಎಡ್ ಕಾಲೇಜಿನ ಪ್ರಾಚಾರ್ಯೆ ಡಾ.ಸಹನಾ ಸೂರ್ಯವಂಶಿ ಇಂದು ಕೃಷಿ ಕ್ಷೇತ್ರ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಮುಖ್ಯವಾಗಿ ಶಿಕ್ಷಣದ ಪ್ರಭಾವಕ್ಕೊಳಗಾಗಿ ಹಳ್ಳಿಯ ಜನ ಪಟ್ಟಣಕ್ಕೆ ಉದ್ಯೋಗಕ್ಕೆ ಹೋಗುತ್ತಿರುವುದರಿಂದ ಕೃಷಿ ಕ್ಷೇತ್ರ ಪ್ರಗತಿಗೆ ಹಿನ್ನಡೆಯಾಗುತ್ತಿದೆ. ಕೃಷಿ ಕ್ಷೇತ್ರದ ಬಗ್ಗೆ ಸಮಗ್ರವಾದ ಅರಿವು ಮತ್ತು ಆಸಕ್ತಿಯನ್ನು ಮೂಡಿಸುವ ನಿಟ್ಟಿನಲ್ಲಿ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಕಾಲಕಾಲಕ್ಕೆ ಹಮ್ಮಿಕೊಳ್ಳುವ ಅನಿವಾರ್ಯತೆ ಇದೆ ಎಂದರು.

ಮುಖ್ಯ ಅತಿಥಿಗಳಾಗಿದ್ದ ದಾಂಡೇಲಪ್ಪ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಕೃಷ್ಣ ಪೂಜಾರ ಕೃಷಿ ಕ್ಷೇತ್ರದ ಬಗ್ಗೆ ಜನ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಶ್ರೀಗಂಧ ಟ್ರಸ್ಟ್ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಪರಿಣಾಮಕಾರಿಯಾಗಿದೆ ಎಂದರು.

ಯುವ ನ್ಯಾಯವಾದಿ ಆಪ್ರೀನ್ ಕಿತ್ತೂರ,
ಶ್ರೀಗಂಧ ಟ್ರಸ್ಟಿನ ಕಾರ್ಯದರ್ಶಿ ಸುದೀರ ಶೆಟ್ಟಿ , ಎಲ್. ಎಸ್ ಗಸ್ತಿ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷ ಸಿದ್ದರಾಜು ಗಸ್ತಿ, ಪ್ರಗತಿಪರ ಯುವ ಕೃಷಿಕ ಜ್ಯೋತಿಬಾ ಪಾಟೀಲ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ಮಹಿಳೆ ಪಾರ್ವತಿ‌ ಮೋಹನ‌ ಪಾಟೀಲ್ ರನ್ನು ಶ್ರೀಗಂಧ ಟ್ರಸ್ಟ್ ಪರವಾಗಿ ಸನ್ಮಾನಿಸಿ ಗೌರವಿಸಿದರು. ಸಭಾ ಕಾರ್ಯಕ್ರಮದ ಕೊನೆಯಲ್ಲಿ ಭತ್ತದ ನಾಟಿ ಪ್ರಾತ್ಯಕ್ಷಿಕೆಯನ್ನು ನಡೆಯಿತು.

ಕೆನರಾ ವೆಲ್ಫರ್ ಟ್ರಸ್ಟ್ ಬಿ.ಎಡ್ ಕಾಲೇಜಿನ ವಿದ್ಯಾರ್ಥಿನಿ ಶೃತಿ ಹುಂದ್ರಿ ಪ್ರಾರ್ಥಿಸಿದರು. ಹಿರಿಯ ಉಪನ್ಯಾಸಕ ನೀಲಕಂಠ ಜಿ. ನಾಯ್ಕ ಸ್ವಾಗತಿಸಿದರು. ಶ್ರೀಗಂಧ ಟ್ರಸ್ಟಿನ ಅಧ್ಯಕ್ಷ ಹಾಗೂ ಪತ್ರಕರ್ತ ರಾಜೇಶ್ ತಳೆಕರ್ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ನಾಗೇಶ ನಾಯ್ಕ‌ ವಂದಿಸಿದರು. ಆಶಾಕಿರಣ ಐಟಿಐ ಕಾಲೇಜಿನ ಪ್ರಾಚಾರ್ಯರಾದ ಎನ್.ಆರ್. ನಾಯ್ಕ ನಿರೂಪಿಸಿದರು.

Exit mobile version