ಕೆಲ ದಿನಗಳ ಹಿಂದೆ ಅಂಕೋಲಾದ ಶಿರೂರಿನಲ್ಲಿ ನಡೆದ ಗುಡ್ಡ ಕುಸಿತದ ದುರಂತದಲ್ಲಿ ಕಣ್ಮರೆಯಾಗಿರುವ ಕೇರಳದ ಲಾರಿ ಚಾಲಕ ಅರ್ಜುನ್ ಕಳೆದ ಮೂರು ವರ್ಷಗಳಿಂದ ಜೋಯಿಡಾದ ಜಗಲಪೇಟಕ್ಕೆ ಕಟ್ಟಿಗೆ ಸಾಗಾಟ ಮಾಡಲೆಂದೆ ಬಂದು ಹೋಗುತ್ತಿದ್ದರೆಂಬ ಸಂಗತಿ ತಿಳಿದು ಬಂದಿದೆ.
ಉಹಿಸಿಕೊಳ್ಳಲಾಗದ ದುರಂತವೊಂದು ಅಂಕೋಲಾದ ಶಿರೂರಿನಲ್ಲಿ ನಡೆದು ಹೋಗಿದೆ. 11 ಜನ ಸಾವನಪ್ಪಿದ್ದಾರೆ ಎಂಬ ಮಾಹಿತಿ ಇದ್ದು, ಇನ್ನು ಮೂವರ ದೇಹ ಪತ್ತೆ ಆಗಬೇಕಿದೆ. ಅವರಲ್ಲಿ ಕೇರಳದ ಲಾರಿ ಚಾಲಕ ಅರ್ಜುನ್ ಕೂಡ ಒಬ್ಬರು. ಶಿರೂರು ಘಟನೆಯಲ್ಲಿ ಸತ್ತವರ ಹಾಗೂ ಕಣ್ಮರೆಯಾದವರ ಮತ್ತು ಆ ದುರಂತದಲ್ಲಿ ನಲುಗಿದವರ ಜೊತೆಗೆ ಉಳುವರೆಯಲ್ಲಿ ನೀರು ಪಾಲಾದವರ ಸುದ್ದಿ ಒಂದು ಕಡೆಯಾದರೆ, ಕೇರಳದ ಅರ್ಜುನನ ಸುದ್ದಿಯೇ ಅಲ್ಲಿ ಸಿಂಹ ಪಾಲಾಗಿತ್ತು. ಅವನಿಗಾಗಿ ಕೇರಳದಿಂದ ಶಾಸಕರು, ಸಂಸದರು ಸೇರಿದಂತೆ ನೂರಾರು ಜನರು ಬಂದಿದ್ದರು. ಅಂದರೆ ಅರ್ಜುನ್ ಲಾರಿ ಚಾಲಕನಾಗಿದ್ದರೂ ಆ ಪ್ರದೇಶಕ್ಕೆ ಒಬ್ಬ ಜನ ಪರವಾದ, ಮಾನವೀಯ ಗುಣಗಳುಳ್ಳ ವ್ಯಕ್ತಿಯಾಗಿದ್ದ. ಆತನ ಒಳ್ಳೆಯ ನಡತೆಗಳ ಬಗ್ಗೆ ಜಗಲಪೇಟದ ಜನ ಹಾಗೂ ಅರಣ್ಯ ಸಿಬ್ಬಂದಿಗಳು ಕೂಡ ಈಗ ಆಡಿಕೊಳ್ಳುತ್ತಿದ್ದಾರೆ.
ಜೋಯಿಡಾ ತಾಲೂಕಿನ ಜಗಲಪೇಟದ ಡಿಪೋಗಳಿಂದ ಹಲವು ವರ್ಷಗಳಿಂದ ಕೇರಳಕ್ಕೆ ಕಟ್ಟಿಗೆ ನಾಟಕಗಳು ಸಾಗಾಟವಾಗುತ್ತಿವೆ. ಅವುಗಳಲ್ಲಿ ‘ಬಿಲ್ಲೆಟ್ಸ್’ (Billets) ಸಾಗಾಟ ಮಾಡುವುದು ಹೆಚ್ಚು. ಈ ಬಿಲ್ಲೆಟ್ಸ್ ನ್ನ ಕೇರಳಕ್ಕೆ ಸಾಗಿಸುವಾಗ ವಿಶೇಷವಾಗಿ ಈ ಮಾರ್ಗದ ಪರಿಚಯವಿದ್ದ ಅರ್ಜುನನ ಲಾರಿಗೆ ಎಲ್ಲರೂ ಹೇಳುತ್ತಿದ್ದರಂತೆ. ಹಾಗಾಗಿ ಈ ಅರ್ಜುನ್ ಕಳೆದ ಮೂರು ವರ್ಷಗಳಿಂದ ತಿಂಗಳಿಗೆ ಎರಡು – ಮೂರು ಬಾರಿ ಕೇರಳದಿಂದ ಜಗಲಪೇಟಕ್ಕೆ ಬಂದು ಇಲ್ಲಿಂದ ಕಟ್ಟಿಗೆಯನ್ನು ತುಂಬಿಕೊಂಡು ಹೋಗುತ್ತಿದ್ದನಂತೆ.
ಜಗಲಪೇಟಕ್ಕೆ ಬಂದಾಗ ಲಾರಿ ಲೋಡ್ ಆಗುವಾಗ ಒಂದೆರಡು ದಿನ ಅಲ್ಲೇ ಉಳಿಯಬೇಕಾಗುತ್ತಿತ್ತು. ಆ ಸಂದರ್ಭದಲ್ಲಿ ಆತ ಅಲ್ಲಿಯ ಜನರೊಟ್ಟಿಗೆ , ಅರಣ್ಯ ಸಿಬ್ಬಂದಿಗಳ ಜೊತೆಗೆ ತೀರ ಸ್ನೇಹಪರ ರಾಗಿರುತ್ತಿದ್ದರಂತೆ. ಒಂದಿಷ್ಟು ಜನರ ಸ್ನೇಹವನ್ನು ಬೆಳೆಸಿಕೊಂಡಿದ್ದರಂತೆ. ಇದೀಗ ಆ ಭಾಗದ ಅನೇಕ ಜನ ಅರ್ಜುನನ ನಡತೆಯ ಬಗ್ಗೆ ಗುಣಗಾನ ಮಾಡುತ್ತಿದ್ದಾರೆ.
ಕಳೆದ ಜುಲೈ 14ರಂದು ಜಗಲಪೇಟಕ್ಕೆ ಬಂದಿದ್ದ ಅರ್ಜುನ್ ಜುಲೈ 15ರಂದು ತನ್ನ ಲಾರಿಯಲ್ಲಿ ಬಿಲ್ಲೆಟ್ಸ್ (ಅಕೇಶಿಯಾದ ಕಟ್ಟಿಗೆ ತುಂಡು) ಲೋಡ್ ಮಾಡಿಕೊಂಡಿದ್ದಾರೆ. ಜುಲೈ 15 ರ ಸಂಜೆ 4:57 ಕ್ಕೆ ಅರ್ಜುನ ತನ್ನ ಲಾರಿಯಲ್ಲಿ ತುಂಬಿಕೊಂಡ ಕಟ್ಟಿಗೆಯ ಪಾಸ್ ಅನ್ನು ಜಗಲ್ ಪೇಟದ ಅರಣ್ಯ ಇಲಾಖೆಯಿಂದ ಪಡೆದುಕೊಂಡಿದ್ದಾನೆ ಎನ್ನುತ್ತಾರೆ ಸಹಾಯಕ ಅರಣ್ಯ ಸುರಕ್ಷಣಾಧಿಕಾರಿ ಕೇ.ಡಿ. ನಾಯ್ಕರು. ಆತ ಕಟ್ಟಿಗೆಯನ್ನ ಪಡೆದು ಪಾಸ್ ಪಡೆದುಕೊಂಡಿರುವ ಬಗ್ಗೆ ಆನ್ ಲೈನ್ ದಾಖಲೆ ಜಗಲಪೇಟ್ ಅರಣ್ಯ ಇಲಾಖೆಯ ಕಾರ್ಯಾಲಯದಲ್ಲಿದೆ.ಸುಮಾರು 5. 15ಕ್ಕೆ ಆತ ಅಲ್ಲಿಂದ ಹೊರಟಿದ್ದಾನೆ. ರಾಮನಗರ ಚೆಕ್ ಪೋಸ್ಟ್ ನಲ್ಲಿ ಈ ಲಾರಿ ಸಂಜೆ 6 ಗಂಟೆಗೆ ಪಾಸ್ ಆಗಿದೆ. ಅಣಶಿ ಮಾರ್ಗ ಕಿರಿದ್ದಾಗಿದ್ದರಿಂದ ಅರ್ಜುನ್ ಪ್ರತೀಬಾರಿ ಜಗಲಪೇಟದಿಂದ ರಾಮನಗರ ಮಾರ್ಗವಾಗಿ ಅಳ್ಳಾವರಕ್ಕೆ ಸಾಗಿ ಅಲ್ಲಿಂದ ಹಳಿಯಾಳಕ್ಕೆ ಬಂದು ಭಾಗವತಿಯ ಮೂಲಕ ಯಲ್ಲಾಪುರ ಮಾರ್ಗವಾಗಿ ಅಂಕೋಲಾಕ್ಕೆ ಸಾಗಿದ ಅರ್ಜುನ್ ನಸುಕಿನ ಜಾವ ಶಿರೂರು ಬಳಿ ಲಾರಿ ನಿಲ್ಲಿಸಿ ನಿದ್ರೆಗೆ ಜಾರಿದ್ದ. ಇದು ಪ್ರತಿಭಾರಿಯ ಅತನ ದಾರಿಯ ದಿನಚರಿ. ಬೆಳಗಾಯಿತಂದರೆ ಅಲ್ಲಿ ಲಕ್ಷ್ಮಣನ ಅಂಗಡಿಯಲ್ಲಿ ಚಹಾ ಕುಡಿದು ಹೊರಡುವ ಆತ ಕುಂದಾಪುರ, ಮಂಗಳೂರು ಮಾರ್ಗವಾಗಿ ಕ್ಯಾಲಿಕೆಟ್ ಗೆ ಹೋಗುತ್ತಿದ್ದ. ಆದರೆ ಜುಲೈ 16ರ ಮುಂಜಾನೆ ನಸುಕಿನ ಜಾವ ಆ ಶಿರೂರು ಗುಡ್ಡ ಕುಸಿತದಲ್ಲಿ ಲಾರಿಯ ಜೊತೆ ಕಣ್ಮರೆಯಾದವ ಈವರೆಗೂ ಪತ್ತೆಯಾಗದೆ ಇರುವುದು ದುರ್ವಿಧಿಯೇ ಸರಿ.
ಕಳೆದ ಮೂರು ವರ್ಷಗಳಿಂದ ಕೇರಳದಿಂದ ಜೋಯಿಡಾದ ಜಗಲಪೇಟಕ್ಕೆ ಬಂದು ಹೋಗುತ್ತಿದ್ದ ಅರ್ಜುನ್ ಇನ್ನು ಮತ್ತೆ ನಮ್ಮೂರಿಗೆ ಬರಲಾರನೇ ಎಂದು ಜಗಲಪೇಟದ ಅರಣ್ಯ ಸಿಬ್ಬಂದಿಗಳು ತಮ್ಮನ್ನ ತಾವೇ ಕೇಳಿಕೊಳ್ಳುತ್ತಿದ್ದಾರೆ.
ಏನಿದು 'ಬಿಲ್ಲೆಟ್ಸ್' : 1 ಮೀಟರ್ ಗೆ ಕಡಿಮೆ ಇಲ್ಲದ, 60 ಸೆಂಟಿಮೀಟರ್ ಗಿಂತ ದಪ್ಪ ಇರುವ ಕಟ್ಟಿಗೆಯ ತುಂಡನ್ನ 'ಬಿಲ್ಲೆಟ್ಸ್' ಅನ್ನುತ್ತಾರೆ. ಇದು ನಾಟಾಕ್ಕಿಂತ ಚಿಕ್ಕದಿರುತ್ತದೆ. ಊರುವಲು ಕಟ್ಟಿಗೆ ಗಿಂತ ದೊಡ್ಡದಿರುತ್ತದೆ. ಇದು ಅಖೇಶಿಯಾದಿಂದ ಮಾಡಿಸಿದ ಬಿಲ್ಲೆಟ್ಸ್. ಕೇರಳ ಹಾಗೂ ಮುಂತಾದ ಪ್ರದೇಶಗಳಲ್ಲಿ ದಾಂಡೇಲಿಯ ಅಖೇಶಿಯಾ ಮರಗಳನ್ನು ಸಾಗವನಿಗೆ ಪರ್ಯಾಯವಾಗಿ ಬಳಸುತ್ತಾರೆ. ಹಾಗಾಗಿ ಇಲ್ಲಿಯ ಅಕೇಶಿಯ ಬಿಲ್ಲೆಟ್ಸ್ ಗಳನ್ನ ಕೇರಳಕ್ಕೆ ಸಾಗಿಸಿ ಅಲ್ಲಿ ಹಲಗೆ ಮಾಡಿ ಮನೆಯ ಬಾಗಿಲು ಹಾಗೂ ಇನ್ನಿತರ ಕೆಲಸಗಳಿಗೆ , ಪೀಠೋಪಕರಣಗಳಿಗೆ , ಬೋಟ್ ಮತ್ತು ಇತರ ಕೆಲಸಗಳಿಗೆ ಈ ಕಟ್ಟಿಗೆಯನ್ನು ಬಳಸುತ್ತಾರೆ ಎನ್ನುತ್ತಾರೆ ಅರಣ್ಯ ಅಧಿಕಾರಿಗಳು.