ಹಳಿಯಾಳ: ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರದೇಶ ಸ್ಥಳಕ್ಕೆ ಜುಲೈ 21ರಂದು, ರವಿವಾರ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಶಾಸಕ ಆರ್. ವಿ. ದೇಶಪಾಂಡೆ ಭೇಟಿ ನೀಡಲಿದ್ದಾರೆ.
ಈ ಬಗ್ಗೆ ಅವರ ಶಾಸಕರ ಕಾರ್ಯಾಲಯದಿಂದ ಅಧಿಕೃತ ಮಾಹಿತಿ ಬಿಡುಗಡೆಯಾಗಿದೆ. ರವಿವಾರ ಮುಂಜಾನೆ ಬೆಂಗಳೂರಿಂದ ವಿಮಾನ ಮಾರ್ಗದ ಮೂಲಕ ಹೊರಡುವ ಆರ್. ವಿ. ದೇಶಪಾಂಡೆಯವರು ಹುಬ್ಬಳ್ಳಿಗೆ ಬಂದು ಅಲ್ಲಿಂದ ವಾಹನದ ಮೂಲಕ ಅಂಕೋಲಾಕ್ಕೆ ತೆರಳಿ ಮುಂಜಾನೆ 10 ಗಂಟೆಯ ಸುಮಾರಿಗೆ ಶಿರೂರಿನ ಘಟನಾ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.
ಗುಡ್ಡ ಕುಸಿತದ ಬಗ್ಗೆ ಸ್ಥಳೀಯ ಅಧಿಕಾರಿಗಳು ಹಾಗೂ ಐ.ಆರ್.ಬಿ. ಅಧಿಕಾರಿಗಳಿಂದ ಮಾಹಿತಿ ಪಡೆಯಲಿರುವ ಅವರು ಘಟನೆಯ ಕುಲಂಕುಶ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಗುಡ್ಡ ಕುಸಿತದಲ್ಲಿ ಸಾವನಪ್ಪಿದ ಸಂತ್ರಸ್ತರ ಮನೆಗೂ ಭೇಟಿ ನೀಡಲಿದ್ದಾರೆ ಎಂದು ಶಾಸಕರ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.