ದಾಂಡೇಲಿ: ಕಾಳಿ ನದಿ ಜಲ ವಿದ್ಯುತ್ ಯೋಜನೆಯ ಮೊದಲನೇ ಹಂತದ ಬೊಮ್ಮನಹಳ್ಳಿ ಜಲಾಶಯದ
ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ
ಏರಿಕೆಯಾಗಿದ್ದು , ಈ ಸಂಬಂಧ ಜಲಾಶಯದ ಕೆಳ ಭಾಗದ ಜನರಿಗೆ ಪ್ರವಾಹದ ಮುನ್ನೆಚಂಚರಿಕೆ ನೀಡಲಾಗಿದೆ.
ಈ ಬಗ್ಗೆ ಕರ್ನಾಟಕ ವಿದ್ಯುತ್ ನಿಗಮದ ಆನಬೆಕಟ್ಟು ಮತ್ತು ವಿದ್ಯುದ್ದಾಗರ ವಿಭಾಗದ ಮುಖ್ಯ ಅಭಿಯಂತರರು ಪ್ರಕಟಣೆ ನೀಡಿದ್ದಾರೆ.
ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಬೊಮ್ಮನಹಳ್ಳಿ ಜಲಾಶಯದ ನೀರಿನ ಮಟ್ಟವು ಸತತವಾಗಿ ಏರುತ್ತಿದೆ.
ಕಡಿಮೆ ಸಾಮರ್ಥ್ಯವುಳ್ಳ ಬೊಮ್ಮನಹಳ್ಳಿ ಜಲಾಶಯದ ಗರಿಷ್ಟ ಮಟ್ಟ 438.38 ಮೀ (ಸಮುದ್ರಮಟ್ಟದಿಂದ) ತಲುಪಲಿದೆ. ಜುಲೈ 19 ರಂದು ಮದ್ಯಾಹ್ನ ಮೂರು ಗಂಟೆಗೆ ಜಲಾಶಯದಲ್ಲಿ ನೀರಿನ ಮಟ್ಟ 436.54 ತಲುಪಿರುತ್ತದೆ. ಹಾಗಾಗಿ ಆಣಿಕಟ್ಟು ಸುರಕ್ಷತಾ ದೃಷ್ಟಿಯಿಂದ ಹೆಚ್ಚುವರಿಯಾದ ಜಲಾಶಯದ ನೀರನ್ನು ಯಾವುದೇ ಸಮಯದಲ್ಲಿ ಹೊರಬಿಡುವ ಸಾಧ್ಯತೆಯಿದೆ. ಆದ್ದರಿಂದ, ಬೊಮ್ಮನಹಳ್ಳಿ ಜಲಾಶಯದ ಕೆಳದಂಡೆಯಲ್ಲಿ ಹಾಗೂ ನದಿಯ ಪಾತ್ರದುದ್ದಕ್ಕೂ ವಾಸಿಸುವ
ಜನರು ತಮ್ಮ ಆಸ್ತಿ ಪಾಸ್ತಿ, ಜಾನುವಾರು ಹಾಗೂ ಪ್ರಾಣಹಾನಿಯ ಬಗ್ಗೆ ಎಚ್ಚರ ವಹಿಸಿ, ಮುಂಜಾಗೃತೆಯಾಗಿ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಸಿದ್ಧತೆ ನಡೆಸಿಕೊಳ್ಳಬೇಕೆಂದು ಮುನ್ಸೂಚನಾ ಪತ್ರದಲ್ಲಿ ತಿಳಿಯಪಡಿಸಲಾಗಿದೆ.
ಹಾಗೂ ಜಲಾಶಯದ ಕೆಳ ಭಾಗದ ನದಿ ಪಾತ್ರದಲ್ಲಿ ಮೀನುಗಾರಿಕೆ, ದೋಣಿ ಸಂಚಾರ ಮತ್ತು ಇತರ
ಚಟುವಟಿಕೆಗಳನ್ನು ಮಳೆಗಾಲದ ಅವಧಿಯಲ್ಲಿ ನಡೆಸದಂತೆ ವಿನಂತಿಸಲಾಗಿದೆ. ಅಜಾಗರೂಕತೆಯಿಂದ
ಸಂಭವಿಸುವ ಯಾವುದೇ ಹಾನಿಯನ್ನು ನಿಗಮವು ಭರಿಸಲಾರದು ಎಂದು ಸಾರ್ವಜನಿಕರಿಗೆ ಪ್ರಕಟಣೆಯ ಮೂಲಕ ಕರ್ನಾಟಕ ವಿದ್ಯುತ್ ನಿಗಮ ತಿಳಿಸಿದೆ.