ಬೆಂಗಳೂರು : ಶೀಘ್ರವೇ ಅಂಗನವಾಡಿ ಶಿಕ್ಷಕಿಯರ ನೇಮಕಾತಿ ಪ್ರತಿಕ್ರಿಯೆ ನಡೆಯಲಿದೆ. ಈಗಾಗಲೇ ಆನ್‌ಲೈನ್ ಮೂಲಕ ಅರ್ಜಿ ಕರೆದಿದ್ದು, ಜಿಲ್ಲಾಧಿಕಾರಿಗಳ, ಜಿಲ್ಲಾ ಪಂಚಾಯಿತಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ (ಸಿಇಒ) ಒಳಗೊಂಡ ಜಿಲ್ಲಾ ಮಟ್ಟದ ಸಮಿತಿಯಲ್ಲಿ ನೇಮಕಾತಿ ನಡೆಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಕಲಾಪದಲ್ಲಿ ಶುಕ್ರವಾರ ನಡೆದ ಪ್ರಶ್ನೋತ್ತರ ವೇಳೆ ಸದಸ್ಯ ಕೆ.ಅಬ್ದುಲ್ ಜಬ್ಬರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅದಷ್ಟು ಬೇಗ ಅಂಗನವಾಡಿ ಶಿಕ್ಷಕಿಯರ ನೇಮಕಾತಿ ನಡೆಯಲಿದೆ ಎಂದರು. ಅಂಗನವಾಡಿಯ ಮೂಲ ಉದ್ದೇಶ, ಉತ್ತಮ ಶಿಕ್ಷಣದ ಜೊತೆಗೆ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವುದು. ಮುಖ್ಯಮಂತ್ರಿಗಳು ಈಗಾಗಲೇ ಮೌಕಿಕವಾಗಿ ಆದೇಶ ನೀಡಿದ್ದು, ಇದೇ 22 ರಿಂದ ಅಂಗನವಾಡಿ ಕೇಂದ್ರಗಳಲ್ಲಿ ಸರ್ಕಾರಿ ಮಾಂಟೆಸ್ಸರಿ ತರಗತಿಗಳನ್ನು ಆರಂಭಿಸಲಾಗುತ್ತಿದ್ದು, ಅಂಗನವಾಡಿ ಕೇಂದ್ರಗಳನ್ನು ಉನ್ನತೀಕರಣ ಮಾಡಲಾಗುವುದು ಎಂದರು.
ಅಂಗನವಾಡಿ ಮಕ್ಕಳಿಗೆ ಗುಣಮಟ್ಟದ ಆಹಾರ ಪೌಷ್ಠಿಕ ಆಹಾರ ಯೋಜನೆಯಡಿ ಅಕ್ಕಿ, ಗೋಧಿಯನ್ನು ಕೇಂದ್ರ ಸರ್ಕಾರದ ಎಫ್.ಸಿ.ಐ ಮೂಲಕ, ಹಾಲಿನ ಪುಡಿಯನ್ನು ಕೆ.ಎಂ.ಎಫ್ ಮೂಲಕ ಖರೀದಿಸಲಾಗುತ್ತಿದೆ. ಕೋಳಿಮೊಟ್ಟೆಗಳನ್ನು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಸ್ಥಳೀಯವಾಗಿ ಖರೀದಿಸಲಾಗುತ್ತಿದೆ ಎಂದರು.
ಹೇಮಲತಾ ನಾಯಕ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, 49 ವರ್ಷ ಇತಿಹಾಸ ಹೊಂದಿರುವ ರಾಜ್ಯದ ಅಂಗನವಾಡಿಯಲ್ಲಿ ಇದುವರೆಗೂ ಅಹಿತಕರ ಘಟನೆ ವರದಿಯಾಗಿಲ್ಲ. ನಾನೇ ಖುದ್ದು ಕೆಲವೊಂದು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ ಎಂದು ಹೇಳಿದರು. ಪೌಷ್ಠಿಕ ಆಹಾರ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಒಂದು ಮಗುವಿಗೆ 8 ರೂಪಾಯಿಯಂತೆ ನಿಗದಿಪಡಿಸಿದೆ. ಕಳೆದ 9 ವರ್ಷಗಳಿಂದ ಈ ಮೊತ್ತವನ್ನು ಕೇಂದ್ರ ಸರ್ಕಾರ ಪರಿಷ್ಕರಿಸಿಲ್ಲ. ಈ ಮೊತ್ತದಲ್ಲೇ ಸರ್ಕಾರ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುತ್ತಿದೆ ಎಂದರು.
2017ರಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ವೇಳೆ ಸೃಷ್ಠಿ ಎಂಬ ಯೋಜನೆ ಆರಂಭಿಸಿ, ಪೌಷ್ಠಿಕ ಆಹಾರ ನೀಡುವ ಸಲುವಾಗಿ ಮಕ್ಕಳಿಗೆ ಮೊಟ್ಟೆ ನೀಡಲು ತೀರ್ಮಾನಿಸಿತು. ರಾಜ್ಯದಲ್ಲಿ 69 ಸಾವಿರ ಅಂಗನವಾಡಿ ಕೇಂದ್ರಗಳಿದ್ದು, ಈ ಪೈಕಿ ಕೆಲವೊಂದು ಕೇಂದ್ರಗಳಲ್ಲಿ ಸಮಸ್ಯೆಗಳು ಬಂದಿದ್ದು, ಇದರ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.