ದಾಂಡೇಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದಶಮಾನೋತ್ಸವದ ಅಂಗವಾಗಿ ಕಾಲೇಜಿನ ಯುವ ರೆಡ್‌ಕ್ರಾಸ್, ಎನ್.ಸಿ.ಸಿ, ಎನ್.ಎಸ್.ಎಸ್, ಸ್ಕೌಟ್ಸ್ & ಗೈಡ್ಸ್ ಘಟಕಗಳು, ಶ್ರೀ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್, ಹಳಿಯಾಳ, ಕೆನೆರಾ ಬ್ಯಾಂಕ್ ದೇಶಪಾಂಡೆ ಆರ್.ಸೆಟಿ ಹಳಿಯಾಳ, ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆ, ರಕ್ತ ಭಂಡಾರ ಕೇಂದ್ರ, ನವನಗರ, ಹುಬ್ಬಳಿ, ಸಾರ್ವಜನಿಕ ಆಸ್ಪತ್ರೆ, ದಾಂಡೇಲಿ, ಇವರ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟನ ಆಡಳಿತಾಧಿಕಾರಿ ಪ್ರಕಾಶ ಪ್ರಭು ಅವರು ಎಲ್ಲ ದಾನಗಳಲ್ಲಿಯೂ ರಕ್ತದಾನವೇ ಶ್ರೇbಷ್ಠವಾದುದು. ರಕ್ತವನ್ನು ಕೃತಕವಾಗಿ ಸೃಷ್ಟಿಮಾಡಲು ಅಸಾಧ್ಯವಾದುದರಿಂದ ರಕ್ತದಾನವು ಮಹಾದಾನವಾಗಿದೆ. ಅದು ಸಂಕಷ್ಟದಲ್ಲಿರುವ ಜೀವವೊಂದಕ್ಕೆ ಪುನರ್ ಜನ್ಮ ನೀಡುತ್ತದೆ. ರಕ್ತದಾನ ಮಾಡಿದವರ ಬದುಕನ್ನು ಸಾರ್ಥಕಗೊಳಿಸುತ್ತದೆ. ಹೀಗಾಗಿ ಅನ್ನದಾನ, ಧನದಾನಗಳಿಗಿಂತ ರಕ್ತದಾನ ಶ್ರೇಷ್ಠವಾದದ್ದು. ಇಂದಿನ ಯುವಕ ಯುವತಿಯರು ರಕ್ತದಾನ ಮಾಡಿ ಸಮಾಜಕ್ಕೆ ಮಾದರಿಯಾಗಬೇಕು. ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿಯೂ ರಕ್ತದಾನ ಜಾಗೃತಿ ಹೆಚ್ಚಿರುವುದರಿಂದ ದೊಡ್ಡ ಪ್ರಮಾಣದಲ್ಲಿ ಹೆಣ್ಣು ಮಕ್ಕಳು ರಕ್ತದಾನ ಮಾಡುತ್ತಿರುವುದು ಅಭಿಮಾನದ ಸಂಗತಿಯಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಹುಬ್ಬಳ್ಳಿಯ ಕರ್ನಾಟಕ ಕಾನ್ಸರ್ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆ, ರಕ್ತ ಭಂಡಾರ ಕೇಂದ್ರದ ಮುಖ್ಯಸ್ಥರಾದ ಡಾ. ಉಮೇಶ ಹಳ್ಳಿಕೆರೆ ರಕ್ತದಾನದ ಪ್ರಯೋಜಗಳನ್ನು ಕುರಿತು ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ.ಎಂ.ಡಿ.ಒಕ್ಕುಂದ ಸಮಾಜದ ಅಸಂಖ್ಯ ಋಣಗಳ ಮೊತ್ತವಾಗಿರುವ ನಾವೆಲ್ಲ ರಕ್ತದಾನದ ಮೂಲಕ ಸಮಾಜದ ಕಿಂಚಿತ್ ಋಣವನ್ನಾದರೂ ತೀರಿಸಬೇಕೆಂದರು. ಪ್ರಾದ್ಯಾಪಕ ಡಾ. ಬಿ.ಎನ್.ಅಕ್ಕಿ ಉಪಸ್ಥಿತರಿದ್ದರು.
ಕು. ಕಾವ್ಯಾ ಭಟ್ ಪ್ರಾರ್ಥಿಸಿದರು. ಡಾ. ನಾಸೀರಅಹ್ಮದ ಜಂಗೂಭಾಯಿ ಸ್ವಾಗತಿಸಿದರು. ತಸ್ಲೀಮಾ ಜೋರುಮ್ ಅತಿಥಿಗಳನ್ನು ಪರಿಚಯಿಸಿದರು.ಸುನಿತಾ ಜೋಗ ವಂದಿಸಿದರು. ಡಾ. ಮಂಜುನಾಥ ಜಿ. ಚಲವಾದಿ ನಿರೂಪಿಸಿದರು. ಶಿಬಿರದಲ್ಲಿ ವಿದ್ಯಾರ್ಥಿಗಳೂ ಸೇರಿ 50 ಜನ ರಕ್ತದಾನ ಮಾಡಿದರು.