ದಾಂಡೇಲಿ: ಕೀಟನಾಶಕ ದೇಹದೊಳಗೆ ಸೇರಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ವಿರ್ನೋಲಿ ವಲಯ ಅರಣ್ಯದ ಕುಳಗಿ ಶಾಖೆಯ ಉಪವಲಯ ಅರಣ್ಯ ಅಧಿಕಾರಿ ಯೋಗೇಶ್ ನಾಯ್ಕ ಅವರಿಗೆ ಹಳಿಯಾಳ ಉಪ ವಿಭಾಗದ ಕಾರ್ಯಾಲಯದ ಆವರಣದಲ್ಲಿ ಅರಣ್ಯ ಸಿಬ್ಬಂದಿಗಳು ಗೌರವ ವಂದನೆ ಸಲ್ಲಿಸಿದರು.
ಕುಳಗಿಯಲ್ಲಿ ಸಾಗವಾನಿ ಮಟ್ಟು ಗೆ ಕೀಟನಾಶಕ ಸಿಂಪಡಿಸುವ ವೇಳೆ ತನ್ನ ಅಜಾಗರೂಕತೆಯಿಂದ ಕೈ ಸ್ವಚ್ಛಗೊಳಿಸಿಕೊಳ್ಳದೆ ಆಹಾರ ಸೇವಿಸಿದ ಯೋಗೇಶ್ ನಾಯ್ಕ್ ನ ಆರೋಗ್ಯದಲ್ಲಿ ಏರುಪೇರಾಗಿ ಹುಬ್ಬಳ್ಳಿಯ ಎಸ್.ಡಿ.ಎಮ್. ಆಸ್ಪತ್ರೆಗೆ ದಾಖಲಾಗಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ನಂತರ ಅವರನ್ನು ಸುಚಿರಾಯು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂರ್ನಾಲ್ಕು ದಿನಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ತುರ್ತು ನಿಘಾ ಘಟಕದಲ್ಲಿದ್ದ ಯೋಗೇಶ್ ನಾಯ್ಕ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ಅವರು ಶುಕ್ರವಾರ ಸಂಜೆ ವೇಳೆ ಕೊನೆಯುಸಿರೆಳೆದಿದ್ದರು.
ಹುಬ್ಬಳ್ಳಿಯ ಕೆಎಂಸಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಶನಿವಾರ ಮುಂಜಾನೆ ಅವರ ಮೃತದೇಹವನ್ನು ಹಳಿಯಾಳದ ಉಪ ಅರಣ್ಯ ವಿಭಾಗದ ಕಾರ್ಯಾಲಯದೆದುರು ಸಾರ್ವಜನಿಕ ದರ್ಶನಕ್ಕೆ ಇಡಲಾಯಿತು. ಅಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಾಲಚಂದ್ರ ಹೆಚ್.ಸಿ., ದಾಂಡೇಲಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಕೆ. ಶೇಟ್ ಹಾಗೂ ಇನ್ನಿತರ ಅರಣ್ಯ ಅಧಿಕಾರಿಗಳು ಹಾಗೂ ದಾಂಡೇಲಿ ಹಳಿಯಾಳದ ಅರಣ್ಯ ಸಿಬ್ಬಂದಿಗಳು ಮೃತ ಯೋಗೇಶ್ ನಾಯ್ಕರಿಗೆ ಗೌರವ ವಂದನೆ ಸಲ್ಲಿಸಿ, ಅಂತಿಮ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಯೋಗೇಶ್ ನಾಯ್ಕರ ಜೊತೆಗೆ ಕಾರ್ಯನಿರ್ವಹಿಸುತ್ತಿದ್ದ ಅನೇಕ ಸಹ ಸಿಬ್ಬಂದಿಗಳು ತಮ್ಮ ಸ್ನೇಹಿತನ ಅಗಲುವಿಕೆಗಾಗಿ ಗೋಳೋ ಎಂದು ಅಳುತ್ತಿರುವುದು ಕಂಡುಬಂತು. ಮತ್ತೆ ಯೋಗೇಶನ ಮಡದಿ ಅಕ್ಷತಾಳ ರೋಧನ ಕೂಡ ಮುಗಿಲಿಮುಟ್ಟಿತು. ಅಲ್ಲಿ ಸೇರಿದವರೆಲ್ಲರೂ ಕೂಡ ಯೋಗೇಶ್ ನಾಯ್ಕನ ಕರ್ತವ್ಯ ನಿಷ್ಠೆ, ಚುರುಕುತನ ಹಾಗೂ ಅವನ ಕ್ರಿಯಾಶೀಲತೆಯ ಗುಣಗಾನ ಮಾಡುತ್ತಿದ್ದರು.
ನಂತರ ಅಲ್ಲಿಂದ ಮೃತದೇಹವನ್ನು ಯೋಗೇಶ್ ನಾಯ್ಕನ ಹುಟ್ಟೂರಾದ ಕುಮಟಾ ತಾಲೂಕಿನ ಬಾಡ ಗ್ರಾಮಕ್ಕೆ ಸಾಗಿಸಲಾಯಿತು. ಅಲ್ಲಿಯೂ ಕೂಡ ಹೊನ್ನಾವರ ಉಪ ವಿಭಾಗದ ಅರಣ್ಯಾಧಿಕಾರಿಗಳು, ಕತಗಾಲ ವಲಯದ ಸಿಬ್ಬಂದಿಗಳು ಯೋಗೇಶ್ ನಾಯ್ಕರಿಗೆ ಗೌರವ ವಂದನೆ ಸಲ್ಲಿಸಿ ಅಂತಿಮ ದರ್ಶನ ಪಡೆದರು. ಸೇರಿದ ಸಾವಿರಾರು ಗ್ರಾಮಸ್ಥರು ಕೂಡ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು . ಒಬ್ಬ ದಕ್ಷ ಹಾಗೂ ಪ್ರಾಮಾಣಿಕ ಮತ್ತು ಕ್ರಿಯಾಶೀಲ ಅರಣ್ಯ ಅಧಿಕಾರಿಯ ಅನ್ಯಾಯದ ಸಾವು ಎಲ್ಲರಲ್ಲೂ ಕೂಡ ದುಃಖವನ್ನುಂಟು ಮಾಡಿತು. ಅದು ಕಂಬನಿಯಾಗಿ ಹರಿದಿತ್ರು. ಇಲಾಖೆಯೂ ಸೇರಿದಂತೆ ಸಾಮಾಜಿಕವಾಗಿಯೂ ಅತ್ಯಂತ ಚುರುಕುತನದಿಂದಿರುತ್ತಿದ್ದ ಯೋಗೇಶ್ ನಾಯಕ್ ಇನ್ನು ನೆನಪು ಮಾತ್ರ.
ಯೋಗೇಶ ನಾಯ್ಕ ಒಬ್ಬ ಉತ್ತಮ ಅಧಿಕಾರಿಯಾಗಿದ್ದ. ಕ್ರಿಯಾಶೀಲನಾಗಿದ್ದ. ಎಲ್ಲರ ಜೊತೆ ಉತ್ತಮ ಬಾಂದವ್ಯ ಹೊಂದಿದವನಾಗಿದ್ದ. ಒಬ್ಬ ಕ್ರಿಡಾಪಟು ಕೂಡಾ. ಇಂತಹ ವ್ಯಕ್ತಿಗೆ ಈ ರೀತಿಯ ಅಕಾಲಿಕ ಸಾವು ಬಂದಿರುವುದು ನಮಗೂ ನೋವನ್ನುಂಟುಮಾಡಿದೆ. ಪೊಲೀಸ್ ಹಾಗೂ ಮರಣೋತ್ತರ ಪರೀಕ್ಷೆಯ ವರಧಿಯನ್ನಾಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಮಾನವೀಯತೆಯ ದೃಷ್ಠಿಯಿಂದ ಸಹಕರಿಸಲಾಹುವುದು ಎಂದು ಹಳಿಯಾಳ ಉಪ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಲಚಂದ್ರ ಎಚ್.ಸಿ. ತಿಳಿಸಿದ್ದಾರೆ.
ಸಂತಾಪ: ಉಪ ವಲಯ ಅರಣ್ಯಾಧಿಕಾರಿ ಯೋಗೇಶ್ ನಾಯ್ಕ ಅವರ ನಿಧನಕ್ಕೆ ಶಾಸಕ ಆರ್.ವಿ. ದೇಶಪಾಂಡೆ, ಮಾಜಿ ಶಾಸಕ ಸುನಿಲ್ ಹೆಗಡೆ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ, ಹಳಿಯಾಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಾಲಚಂದ್ರ ಎಚ್.ಸಿ. , ದಾಂಡೇಲಿ ಸಹಾಯಕ ಅರಣ್ಯ ಸುರಕ್ಷಣಾಧಿಕಾರಿ ಜಿ.ಕೆ. ಶೇಟ್ ಮಂತಾದವರು ಯೋಗೇಶ ನಾಯ್ಕ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.