‘ಎಷ್ಟು ಹಣತೆಗಳಿಂದ ಕತ್ತಲೆ ಕರಗುವುದು
ಎಷ್ಟು ಕವಿತೆಗೆ ಜಗದ ಕಣ್ಣು ತೆರೆಯುವುದು
ಒಂದಿದ್ದರೂ ಸಾಕು ಮನೆಗೆ ಬೆಳಕಾಗುವುದು
ಒಂದು ಕವಿತೆಗೆ ಕೂಡ ಮನ ಕರಗುವುದು…’
ಕಣವಿಯವರ ಈ ಕವನದ ಸಾಲಿನ ತಾತ್ಪರ್ಯ ಇಷ್ಟೇ!, ಮನೆ ಬೆಳಗಲು ಒಂದು ಹಣತೆಯಾದರೂ ಸಾಕೆನಿಸಿದರೆ, ಒಂದು ಕವಿತೆಯಿಂದಾದರೂ ಮನ ಕರಗಿದರೆ ಅಷ್ಟೇ ಸಾಕು, ಎನ್ನುವಂತೆ ಸಾವಿರ ಸಾವಿರ ಶಿಕ್ಷಕರ ಮಧ್ಯೆ ದಯಾನಂದನೆಂಬ ಓರ್ವ ದಯಾಮಯಿಯಿಂದ ಏನೆಲ್ಲ ಮಾಡಲು ಸಾಧ್ಯ ಎನ್ನುವುದಕ್ಕೆ ಸಾಕ್ಷಿಯಾದವರು ಪ್ರೌಢ ಶಾಲೆಯ ಮುಖ್ಯಾಧ್ಯಾಪಕರಾದ ಶ್ರೀ ದಯಾನಂದ ನಾಗೇಂದ್ರ ದೇಶಭಂಡಾರಿಯವರು. ಇತರರಿಗೆ ಪ್ರೇರಕ, ಪೂರಕ ಶಕ್ತಿ. ಯಾವುದಕ್ಕಾದರೂ ತೀವ್ರವಾಗಿ ಸ್ಪಂದಿಸುವ ಗುಣ, ಸಾಮಾಜಿಕ ಕಳಕಳಿ, ಸೃಜನಶೀಲತೆ, ಸದಾ ಹೊಸತನಕ್ಕೆ ತುಡಿಯುವ ಶ್ರೀ ದಯಾನಂದ ದೇಶಭಂಡಾರಿಯವರು ಸುಧೀರ್ಘ ಶಿಕ್ಷಕ ವೃತ್ತಿಯನ್ನು ಅನುಭವಿಸಿ ಮಕ್ಕಳ ಪಾಲಿನ ಆರಾಧ್ಯರು ಕೂಡ.
ಅಕ್ಷರ ವಂಚಿತ ಬಡ ಕುಟುಂಬಕ್ಕೆ ಅಕ್ಷರದಿಂದಲೇ ಅನ್ನ ನೀಡುವ ಮಹತ್ಕಾರ್ಯಕ್ಕೆ ಮುಂದಾದವರು ದೊಡ್ಮನೆ ಜಾನಕಿ ವೆಂಕಟರಮಣ ಶೆಟ್ಟಿಯವರು. ಅವರ ಹೆಸರಿನಲ್ಲಿ ಪ್ರಾರಂಭವಾದ ಈ ಸಂಸ್ಥೆ ಹುಟ್ಟಿದ್ದು 1990 ರಲ್ಲಿ. ಬಡ ವಿದ್ಯಾರ್ಥಿಗಳ ಪಾಲಿನ ಆಶಾ ಕಿರಣದಂತಿರುವ ಈ ಪ್ರೌಢಶಾಲೆ ಪ್ರಾರಂಭದಲ್ಲಿ ಬಾಡಿಗೆ ಕಟ್ಟಡದಲ್ಲಿ ಪ್ರಾರಂಭವಾಯಿತು. ಘನ ಉದ್ದೇಶ ಹೊತ್ತ ಈ ಶಿಕ್ಷಣ ಸಂಸ್ಥೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕರಾಗಿ ನೇಮಕರಾದ ಶ್ರೀ ದಯಾನಂದ ದೇಶ ಭಂಡಾರಿಯವರು ಸುದೀರ್ಘ ಮೂರು ದಶಕಗಳಿಗೂ ಹೆಚ್ಚು ಕಾಲ ಒಂದು ಸಂಸ್ಥೆಯನ್ನು ಮುನ್ನಡೆಸಿದ ಹೆಗ್ಗಳಿಕೆ ಇವರದ್ದಾಗಿದೆ.
ದೀವಗಿಯ ತುಂಬೆಲ್ಲ ವಾಸವಾಗಿರುವ ಬಡ ಮೀನುಗಾರರ ಕುಟುಂಬದಿಂದ ಬಂದ ಮಕ್ಕಳೇ ಅಧಿಕವಾಗಿರುವ ಸಂಸ್ಥೆಯಲ್ಲಿ ಸಹಾಯಕ ಶಿಕ್ಷಕರಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿ, ನಂತರ 27 ವರ್ಷಗಳ ಕಾಲ ಮುಖ್ಯಾಧ್ಯಾಪಕರಾಗಿ ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗೆ ಕಾರಣಿಕರ್ತರಾಗಿರುತ್ತಾರೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಪಾಲಿನ ಅಚ್ಚುಮೆಚ್ಚಿನ ಗುರುಗಳಾದರು.
ಗುರುವಿಂದಧಿಕ ದೈವವಿಲ್ಲ!
ಗುರು ಬಿಟ್ಟರೆ ಮುಂದೆ ಗತಿ ಇಲ್ಲ!
ಗುರುವಿಗೆ ಸಂಬಂಧಪಟ್ಟ ಇಂತಹ ಲೋಕೋಕ್ತಿಗಳೆಲ್ಲ ಬದುಕಿಗೆ ಅನ್ವಯಿಸಿಕೊಂಡು ಸಂಸ್ಥೆಯ ಜವಾಬ್ದಾರಿಯೊಂದಿಗೆ ಸಾಮಾಜಿಕ ಜಾಗೃತಿಗೂ ಕಾರಣರಾದರು.
ಅನುಭವವು ಕುದುರಿಸಿದ ಕಾವ್ಯವೇ ಚೆನ್ನ!
ಮಡಿಕೆಯಲ್ಲಿ ಓಡಾಡಿ ಬೆಂದಂತೆ ಅನ್ನ!–ಎನ್ನುವ ಕವಿವಾಣಿಯಂತೆ ತನ್ನ ಅನುಭವದ ಬಲದಿಂದ ಹಾಗೂ ದಾನಿಗಳ ಸಾಂಗತ್ಯದಿಂದ ಶಾಲೆಗೆ ಅಗತ್ಯವಾದ ಪೀಠೋಪಕರಣಗಳನ್ನು ರೋಟರಿ ಮ್ಯಾಚಿಂಗ್ ಗ್ರಾಂಟ್ ಮೂಲಕ ಪಡೆದಿದ್ದು, ಬೆಂಗಳೂರಿನ ಯುಥ್ ಫಾರ್ ಸೇವಾ ಸಂಸ್ಥೆಯಿಂದ1.75 ಲಕ್ಷ ರೂಪಾಯಿಯ ಹೈಟೆಕ್ ಶೌಚಾಲಯ, 35,000 ರೂಪಾಯಿ ಮೌಲ್ಯದ ಶುದ್ಧ ಕುಡಿಯುವ ನೀರಿನ ಘಟಕ, ಸಿಸ್ಕೋ ಸೋಲಾರ್ ರವರಿಂದ 90,000 ರೂಪಾಯಿ ಮೌಲ್ಯದ ಸ್ಮಾರ್ಟ್ ಕ್ಲಾಸ್ ಉಪಕರಣ ಪಡೆದುಕೊಂಡು ಶಾಲೆಯ ಅಭಿವೃದ್ಧಿಗಾಗಿ ದುಡಿದಿರುತ್ತಾರೆ.
ಕುಮಟಾ ತಾಲೂಕಿನ ಮುಖ್ಯಾಧ್ಯಾಪಕರ ಸಂಘದ ಅಧ್ಯಕ್ಷರಾಗಿ, ಸಮಾಜ ವಿಜ್ಞಾನ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಸುಮಾರು 10 ವರ್ಷ ಸೇವೆ ಸಲ್ಲಿಸಿ, ಪ್ರಸ್ತುತ ಉತ್ತರ ಕನ್ನಡ ಜಿಲ್ಲಾ ಮುಖ್ಯಾಧ್ಯಾಪಕರ ಸಂಘದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಸುಮಾರು 19 ವರ್ಷಗಳ ಕಾಲ ಅನುದಾನ ರಹಿತ ಡಿ.ಜೆ. ವಿ. ಎಸ್. ಪ್ರೌಢಶಾಲೆಯ ಮುಖ್ಯಾಧ್ಯಾಪಕರಾಗಿ ಬದುಕಿನ ನಡಿಗೆಯಲ್ಲಿ ನೆಗೆವಲ್ಲಿ ನಗೆದು, ದಾಟುವಲ್ಲಿ ದಾಟಿ, ಜಿಗಿವಲ್ಲಿ ಜಿಗಿದು ತನಗೊಪ್ಪಿಸಿದ ಕೆಲಸವನ್ನು ಅತ್ಯಂತ ಪ್ರೀತಿಯಿಂದ, ನಿಷ್ಠೆಯಿಂದ ಪೂರೈಸಿ ಶಿಕ್ಷಕ ವಲಯದಲ್ಲಿ ಸೈಎನಿಸಿಕೊಂಡಿರುತ್ತಾರೆ.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಅನೇಕ ಪ್ರೌಢಶಾಲೆಗಳಲ್ಲಿ ಶಾಲಾ ಮಕ್ಕಳಲ್ಲಿ ದುಶ್ಚಟ ಮುಕ್ತಗೊಳಿಸಲು ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಮತ್ತು ಮಹಿಳಾ ಜ್ಞಾನವಿಕಾಸ ಕೇಂದ್ರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಜಾಗೃತಿ ಮೂಡಿಸಿದ ಹೆಗ್ಗಳಿಕೆ ಇವರದ್ದಾಗಿದೆ.
ಗತಿ-ಸ್ಥಿತಿಗಳ ಕುರಿತು ಚಿಂತಿಸುವ, ಯೋಚಿಸುವ, ಯೋಜಿಸುವ ವಿಚಾರವಾದಿ. ಶ್ರೀ ದಯಾನಂದ ದೇಶಭಂಡಾರಿ ಅವರು ಮೂಲತ: ಕುಮಟಾ ತಾಲೂಕಿನ ಹೊಳೆಗದ್ದೆಯವರು. ತಂದೆ ದಿವಂಗತ ನಾಗೇಂದ್ರ ದೇಶ ಭಂಡಾರಿ ಯಕ್ಷಗಾನ ಕಲಾವಿದರು. ತಾಯಿ ರಾಧಾ ರವರ ಮುದ್ದಿನ ಮಗನಾಗಿ ಜನಿಸಿ ಎಲ್ಲರೊಳಗೊಂದಾಗಿ, ಎಲ್ಲರಂತಾಗದೆ ವಿಶಿಷ್ಟ ವ್ಯಕ್ತಿತ್ವದ ಮೂಲಕ ತಾಲೂಕಿನಾದ್ಯಂತ ಚಿರಪರಿಚಿತರು. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶ್ರೀಯುತರು ಮೇ ತಿಂಗಳ 31ರಂದು ವೃತ್ತಿಯಿಂದ ನಿವೃತ್ತಿಯಾಗಲಿದ್ದಾರೆ. ಸದಾ ಲವಲವಿಕೆಯ ಕ್ರಿಯಾಶೀಲ ವ್ಯಕ್ತಿತ್ವದ ಶ್ರೀ ದಯಾನಂದರವರು ನೂರ್ಕಾಲ ಬಾಳಿ ಬದುಕಲೆಂದು ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತ್ತೇನೆ.
- ಪಿ.ಆರ್.ನಾಯ್ಕ, ಹೊಳೆಗದ್ದೆ