Site icon ಒಡನಾಡಿ

ಶಿಕ್ಷಣ ಇಲಾಖೆಯಲ್ಲಿ ಹೆಜ್ಜೆ ಗುರುತ್ತೊಂದನ್ನು ಮೂಡಿಸಿದ ಮಲ್ಲಾಪುರದ ಗುರುಪ್ರಸಾದ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಂ.ಟಿ. ಗೌಡ

ಬದುಕಲೇಬೇಕೆಂದಿದ್ದರೆ
ನಡೆಯಿರಿ ತಲೆ ಮೇಲೆತ್ತಿ
ನಡೆಯಲ್ಲಿ ನುಡಿಯಲ್ಲಿ ತಗ್ಗದಿರಿ
ನೀಡಬಂದರೂ ಬಂಗಾರದ ಕತ್ತಿ-ಎಂಬ ಕವಿವಾಣಿಯಂತೆ ಯಾವುದೇ ಆಸೆ- ಆಮೀಷಗಳಿಗೆ ಬಲಿಯಾಗದೇ ತಂದೆ-ತಾಯಿಯವರ ಆದರ್ಶದ ನಡೆ,ನುಡಿಯಲ್ಲಿ ಮುನ್ನಡೆಯುತ್ತಾ,ತಗ್ಗದೆ ಬಗ್ಗದೆ ದಿಟ್ಟತನದಿಂದ ಬದುಕಿ, ದಟ್ಟವಾದ ಹೆಜ್ಜೆ ಗುರುತ್ತೊಂದನ್ನು ಮೂಡಿಸಿದವರು ಕುಮಟಾದ ಮಹಾಬಲೇಶ್ವರ ತಿಮ್ಮಪ್ಪ ಗೌಡರವರು. ಜಿಲ್ಲೆಯ ತುಂಬೆಲ್ಲ ಎಂ.ಟಿ. ಗೌಡರೆಂದು ಚಿರಪರಿಚಿತರಾಗಿ, ಶೈಕ್ಷಣಿಕ ಚಿಂತನೆಯ ಸಮಗ್ರ ದೃಷ್ಟಿ ಕೋನದ ಹರಿಕಾರರಾಗಿ, ಅಕ್ಷರ ವಂಚಿತ ಕುಟುಂಬಕ್ಕೆ ಆಸರೆಯಾದ ಸರಳ ಸಜ್ಜನರು.

ಎಲ್ಲರೊಡನಿದ್ದು ಎಲ್ಲರಂತಾಗದೇ ನಿಜದ ನೇರಕೆ ನಡೆದು ತನ್ನ ವೃತ್ತಿ ಬದುಕಿನ ಪಾವಿತ್ರ್ಯತೆಗೆ ಸದಾ ಹೋರಾಟ ನಡೆಸಿ ಮಲ್ಲಾಪುರದ ಗುರುಪ್ರಸಾದ ಪ್ರೌಢಶಾಲೆಯನ್ನು ಒಂದು ಮಾದರಿ ಶಾಲೆಯಾಗಿ ಪರಿವರ್ತಿಸುವಲ್ಲಿ ಇವರ ಶ್ರಮ ಸಾರ್ಥಕವಾಗಿದೆ ಆ ಕಾರಣಕ್ಕಾಗಿ ಶಿಕ್ಷಣ ಇಲಾಖೆ ಇವರ ಪ್ರಾಮಾಣಿಕ ಸೇವೆಯನ್ನು ಪರಿಗಣಿಸಿ ರಾಜ್ಯಮಟ್ಟದ ಪುರಸ್ಕಾರ ನೀಡಿ ಶಿಕ್ಷಣ ಸಚಿವರಿಂದ ಸನ್ಮಾನಕ್ಕೊಳಪಟ್ಟಿರುವುದು ಇವರ ಕಾರ್ಯದಕ್ಷತೆಗೆ ಹಿಡಿದ ಕೈಗನ್ನಡಿಯಾಗಿದೆ.

ಚಿನ್ನ ಬೆಳ್ಳಿಗಳು ಮಾತ್ರ ನಾಣ್ಯವಲ್ಲ, ಗುಣವು ನಾಣ್ಯವೇ. ಇದು ಜಗತ್ತಿನ ಎಲ್ಲಾ ಕಡೆಗೂ ಚಲಾವಣೆಯಲ್ಲಿರುತ್ತದೆ ಎಂಬ ಹಿರಿಯರ ಆಶಯದಂತೆ ತಮ್ಮ ವಿಶಿಷ್ಟ ವ್ಯಕ್ತಿತ್ವದ ಮೂಲಕ ಮಂದಸ್ಮಿತ ನಗೆಯೊಂದಿಗೆ ಸರ್ವರೊಡನೆ ಸಮಭಾವದೊಳು ಕುಶಲ ವಾರ್ತೆಯನ್ನು ಹಂಚಿಕೊಳ್ಳುವ ಅವರ ಆದರಣೀಯ ಮಾತಿನ ಸೊಗಡು ಆತ್ಮೀಯತೆಗೆ ಸಾಕ್ಷಿಯಾಗಿದೆ.

ಸಮಾಜಮುಖಿ ಚಿಂತನೆಯ ಜೊತೆಗೆ ತನ್ನ ಶಾಲೆಯ ಸರ್ವತೋಮುಖ ಪ್ರಗತಿಗಾಗಿ ದಾನಿಗಳಿಂದ ಸುಮಾರು ಒಂದು ಮುಕ್ಕಾಲು ಕೋಟಿಗೂ ಅಧಿಕ ಹಣ ಸಂಗ್ರಹಿಸಿ ಸಮಗ್ರ ಅಭಿವೃದ್ಧಿಗೆ ಕಾರಣರಾದ ಎಂ.ಟಿ.ಗೌಡರವರು ಕಲಾವಿದರು ಹಾಗೂ ಕ್ರೀಡಾಪಟುಗಳು ಕೂಡ. ಶೈಕ್ಷಣಿಕವಾಗಿ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗೆ ಸೂಕ್ತ ಅವಕಾಶ ಕಲ್ಪಿಸಿ ರಾಜ್ಯ, ರಾಷ್ಟ್ರಮಟ್ಟದ ಸಾಧನೆಗೂ ಇವರ ಮಾರ್ಗದರ್ಶನ ಪ್ರಮುಖವಾಗಿದೆ. ಇಚ್ಛೆಯೊಂದಿದ್ದರೆ ಕಾರ್ಯ ಕ್ಷೇತ್ರ ಕೊನೆಯಿಲ್ಲದ ಆಗಸದಂತೆ ಎನ್ನುವುದಕ್ಕೆ ಅವರ ವೃತ್ತಿ ಬದುಕಿನ ವಿವಿಧ ಕಾರ್ಯಚಟುವಟಿಕೆಗಳು ಹಾಗೂ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಮಕ್ಕಳು ಮಾಡಿರುವ ಶೇಕಡ ನೂರರಷ್ಟು ಸಾಧನೆ ರಾಜ್ಯದ ಗಮನ ಸೆಳೆದಿದೆ.

ಆಗಾಗ ಏಳುವ
ಬಿರುಗಾಳಿಗೆ ಸಿಕ್ಕಿದಾಗ
ನಿನಗಿಂತ ಘನವಾದ
ಅಲೆಗಳ ನಾ ಹೊರಹೊಮ್ಮಿಸ ಬಲ್ಲೆ-ಎಂದು ಕಡಲಲೆಗಳ ಕೈ ಹಿಡಿದು ಮಾತನಾಡಿಸಬಲ್ಲ ಎದೆಗಾರಿಕೆಯೊಂದಿಗಿನ ಅಪರೂಪದ ವ್ಯಕ್ತಿತ್ವ ಸಾವಿರಾರು ವಿದ್ಯಾರ್ಥಿಗಳಿಗೆ ನಿರಂತರ ಮಾರ್ಗದರ್ಶನ ಮಾಡುವುದರ ಮೂಲಕ ಸತತ ಮೂರುವರೆ ದಶಕಗಳಿಗೆ ಹೆಚ್ಚು ಕಾಲ ಒಂದು ಸಂಸ್ಥೆಯನ್ನು ಮುನ್ನಡೆಸಿದ ಬಹುಮುಖ ಪ್ರತಿಭಾವಂತರು.

ಮೂಲತಃ ಹೊನ್ನಾವರ ತಾಲೂಕಿನ ಕಾಸರಕೊಡಿನವರಾಗಿ ತಂದೆ ತಿಮ್ಮಪ್ಪ ಗೌಡ, ತಾಯಿ ದೇವಿ ಯವರ ಮಗನಾಗಿ ೧೯೬೩ ರಂದು ಕೃಷಿ ಕುಟುಂಬದಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣ ಯಲ್ಲಾಪುರ ತಾಲೂಕಿನ ಕುಂದರಗಿಯಲ್ಲಿಯೂ, ಪ್ರೌಢ ಶಿಕ್ಷಣ ಭರತನಹಳ್ಳಿಯಲ್ಲಿಯೂ, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ ಶಿಕ್ಷಣ ಮತ್ತು ಚಿತ್ರಕಲಾ ಪದವಿಯನ್ನು, ಬಿಇಡಿ ಪದವಿಯನ್ನು ಪೂರೈಸಿದರು.೧೯೮೬ರಲ್ಲಿ ಮಲ್ಲಾಪುರದ ಗುರುಪ್ರಸಾದ್ ಪ್ರೌಢಶಾಲೆಯಲ್ಲಿ ಸಹಾಯಕ ಶಿಕ್ಷಕರಾಗಿ ಸೇವೆ ಪ್ರಾರಂಭಿಸಿ, ಸುಮಾರು ೨೪ ವರ್ಷಗಳ ಕಾಲ ಶಿಕ್ಷಕ ಹುದ್ದೆಯಲ್ಲಿ ಮುಂದುವರೆದು, ನಂತರ ಮುಖ್ಯಾಧ್ಯಾಪಕರಾಗಿ ಬಡ್ತಿ ಹೊಂದಿ ಸುಮಾರು ೧೨ ವರ್ಷಗಳ ಕಾಲ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದ್ದು. ಸುದೀರ್ಘ ಮೂರುವರೆ ದಶಕಗಳಿಗೂ ಹೆಚ್ಚು ಕಾಲ ಒಂದು ಸಂಸ್ಥೆಯನ್ನು ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಮುನ್ನಡೆಸಿದ ಶೈಕ್ಷಣಿಕ ಸಾಧಕರು.

ಪ್ರೀತಿ ವಶವಾಗದಿಹ ಜೀವ ಜಗದೊಳಗಿಲ್ಲ
ಪ್ರೀತಿಸಲು ಬಲ್ಲವರೇ ಬಲ್ಲರಿದನು!
ಪ್ರೀತಿ ಮಾಡುತ್ತ ನಲಿ, ಪ್ರೀತಿ ಮಾಡುತ್ತಾ ಕಲಿ
ಪ್ರೀತಿ ಅಕ್ಷಯ ಪಾತ್ರೆ; ಬಲ್ಲಿ ರೇನು?-ಎಂಬ ಹಿರಿಯರ ತತ್ವಕ್ಕೆ ಒಲಿದು-ಬಲಿತ ಕಾಯಕಯೋಗಿ, ಸ್ನೇಹಪರ ಸರಳ ಸಜ್ಜನ, ಎಂ. ಟಿ.ಗೌಡ ರವರನ್ನು ಶಿಕ್ಷಣ ಇಲಾಖೆ ಗುರುತಿಸಿ ಗೌರವಿಸಿರುವುದು ಇಡೀ ಶಿಕ್ಷಕ ಕುಲಕ್ಕೆ ಸಂದ ಗೌರವವಾಗಿದೆ. ತನ್ನ ವೃತ್ತಿ ಬದುಕಿನ ಪಾವಿತ್ರ್ಯತೆಯ ಜೊತೆಗೆ ಶಿಕ್ಷಣ ಇಲಾಖೆಯ ಘನತೆ ಗೌರವವನ್ನು ಹೆಚ್ಚಿಸುವಲ್ಲಿ ವಿವೇಕದಿಂದ ಕೆಲಸ ನಿರ್ವಹಿಸಿ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಕಾರಣೀಕರ್ತರಾಗಿರುತ್ತಾರೆ. ಮಹಾಬಲೇಶ್ವರವರ ಧರ್ಮಪತ್ನಿ ಮೀರಾರವರು ಸಹ ಉಪನ್ಯಾಸಕರು. ಮಗ ಭರತ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿ ಬಿ.ಇ. ಪದವಿಯನ್ನು ಪೂರೈಸಿರುತ್ತಾರೆ. ಚಿಕ್ಕ-ಚೊಕ್ಕ ಸಂಸಾರದ ನೊಗ ಹೊತ್ತ ಎಂ.ಟಿ. ಗೌಡರವರು ನೂರ್ಕಾಲ ಬದುಕಿ ಬಾಳಿರೆಂದು ತಾಲೂಕಿನ ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತ್ತೇನೆ.

ಲೇಖಕರು : ಪಿ.ಆರ್. ನಾಯ್ಕ, ಹೊಳೆಗದ್ದೆ

Exit mobile version