Site icon ಒಡನಾಡಿ

ಪ್ರಾಮಾಣಿಕ ಸೇವೆಗೆ ಮತ್ತೊಂದು ಹೆಸರು ದೈಹಿಕ ಶಿಕ್ಷಣ ಪರಿವೀಕ್ಷಕ ಗಜಾನನ ನಾಯ್ಕ

ಸಾವಿರ ಆತ್ಮಬಲ, ಸಾಧಿಸುವ ವೀರ ಛಲ
ನಿದ್ದೆಗೆಡಿಸಲು ಬಲ್ಲ, ನಿದ್ದೆ ಬಿಡಲೂ ಬಲ್ಲ
ನಂಬಿದವರಿಗೆ ಜೀವ ಜೀವವನೇ ಕೊಡಬಲ್ಲ
ನಗರೆಯ ನಗು ಮೊಗದ ಗಜಾನನನೆಂಬ ಕಲಿ ಮಲ್ಲ

“ಮಾತು ಕಡಿಮೆ ದುಡಿಮೆ ಹೆಚ್ಚು” ಎಂಬ ಗಾದೆ ಮಾತಿಗಂಟಿದ ಮೌನ ಕಾಯಕಯೋಗಿಯಾಗಿ ಶಿಕ್ಷಣ ಇಲಾಖೆಯಲ್ಲಿ ಸುದೀರ್ಘ ೩೬ ವರ್ಷಗಳ ಕಾಲ ಸೇವೆ ಸಲ್ಲಿಸಿ ಇಂದು ನಿವೃತ್ತಿಯಾದವರು ಹೊನ್ನಾವರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಜಿ.ಎಚ್. ನಾಯ್ಕರವರು.

ಶಿಕ್ಷಣ ಇಲಾಖೆ ಮತ್ತು ದೈಹಿಕ ಶಿಕ್ಷಣ ಒಂದೇ ನಾಣ್ಯದ ಎರಡು ಮುಖಗಳಂತೆ. ಒಂದು ಮಾನಸಿಕ ಸದೃಢತೆಯ ಭಾಗವಾದರೆ, ಇನ್ನೊಂದು ದೈಹಿಕ ಶಿಕ್ಷಣದ ಸದೃಢತೆಯ ಭಾಗವಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ದೈಹಿಕ ಶಿಕ್ಷಣಾಧಿಕಾರಿ ಎರಡು ಹುದ್ದೆಗಳು ಜೋಡೆತ್ತಿನಂತೆ. ಇವೆರಡು ಸಮ್ಮಿಳಿತವಾಗಿ ದುಡಿದಾಗಲೇ ಇಲಾಖೆಯ ಘನತೆ,ಗೌರವ ಹೆಚ್ಚಿಸುವುದರ ಜೊತೆಗೆ ಸದೃಢವಾದ, ಆರೋಗ್ಯಕರವಾದ ಸಮಾಜ ನಿರ್ಮಾಣವಾಗಲು ಸಾಧ್ಯ.

ಇಂತಹ ಪವಿತ್ರ ಕಾರ್ಯದಲ್ಲಿ ಕೈಜೋಡಿಸಿ ತಮ್ಮ ಸುಧೀರ್ಘ ಸೇವೆಯಲ್ಲಿ ಒಮ್ಮೆಯೂ ಕಪ್ಪು ಚುಕ್ಕೆ ಇಲ್ಲದೆ ಶುಭ್ರ ಮನಸ್ಸಿನ ಸರದಾರರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿ ಇಲಾಖೆಯ ಘನತೆ ಗೌರವ ಹೆಚ್ಚಿಸಿದ ಸರಳ, ಸಜ್ಜನರು.

“ಸವಾಲುಗಳ ಮಧ್ಯದಲ್ಲೂ ಗೆಲ್ಲುವ ನೆಲ್ಲು
ಗೆದ್ದೆನೆಂದು ಬೀಗದ ಪ್ರಾಮಾಣಿಕ ಸೊಲ್ಲು” –

ತಾಲೂಕಿನಲ್ಲಿ ನಡೆಯುವ ಯಾವುದೇ ಕ್ರೀಡಾ ಕಾರ್ಯಕ್ರಮವಿರಲಿ ಅಲ್ಲೆಲ್ಲ ಜಿ.ಎಚ್. ನಾಯ್ಕರ ಉಪಸ್ಥಿತಿ ಇದ್ದದ್ದೇ.

ವಿಪರೀತ ಮಳೆಗಾಲದಲ್ಲೂ ಪ್ರಾರಂಭವಾಗುವ ಕ್ರೀಡಾಕೂಟಕ್ಕೆ ಎಲ್ಲಿಲ್ಲದ ಸಮಸ್ಯೆ ,ಸವಾಲು. ಅವೆಲ್ಲವನ್ನು ಮೆಟ್ಟಿ ನಿಂತು, ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ, ಆರೋಗ್ಯಕರ ವಾತಾವರಣ ನಿರ್ಮಿಸಿ ಮಕ್ಕಳ ಪ್ರತಿಭೆಗೆ ಸ್ವಲ್ಪವೂ ಚ್ಯುತಿ ಬಾರದ ರೀತಿಯಲ್ಲಿ ಕ್ರೀಡಾಕೂಟ ನಡೆಸಿ ಅದರಲ್ಲಿ ಯಶಸ್ಸುಗಳಿಸುವ ಹೆಗ್ಗಳಿಕೆ ಇವರದ್ದು. ತಮ್ಮ ಕ್ರಿಯಾಶೀಲ ಪ್ರವೃತ್ತಿಯಿಂದಾಗಿ ಯಾರೇ ಏನನ್ನಾದರೂ ಹೇಳಿದರೂ, ಅದರಿಂದ ವಿಚಲಿತರಾಗದೇ, ದೈಹಿಕ ಶಿಕ್ಷಕರ ಬೆನ್ನು ತಟ್ಟಿ, ದುಡಿದು ದಣಿವರಿಯದ ಹಿರಿಯ ಅಧಿಕಾರಿಯಾಗಿ “ಹಿಂದಿನನುಭವ ಇಂದಿಗೆ, ಇಂದಿನದು ನಾಳೆಗೆ” ಎನ್ನುವ ಮನೋಧೋರಣೆಯೊಂದಿಗೆ ಇಲಾಖೆಯ ಕೆಲಸಕ್ಕೆ ಎಂದು ಸಬೂಬು ನೀಡದೆ, ಹೊಸ ಸಬೂಬಿಗೆ ತಲೆಯಾಡಿಸದೆ ಪ್ರೀತಿಯಿಂದ ಎಲ್ಲರನ್ನು ಗೆಲ್ಲುವ ವಿಶಾಲ ಹೃದಯಿಗಳು ಕೂಡ.

ಹೊನ್ನಾವರ ತಾಲೂಕಿನ ನಗರೆ ಎಂಬ ಪುಟ್ಟ ಗ್ರಾಮದಲ್ಲಿ ಕೃಷಿಕರಾದ ತಂದೆ ಹೊನ್ನಪ್ಪ ನಾಯ್ಕ, ತಾಯಿ ರಾಧಾ ನಾಯ್ಕರವರ ಮಗನಾಗಿ ೧೯೬೨ ರಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣ ಹುಟ್ಟೂರಿನಲ್ಲಿಯೂ, ಪ್ರೌಢ ಶಿಕ್ಷಣ ಕವಲಕ್ಕಿಯಲ್ಲಿಯೂ, ಪದವಿ ಪೂರ್ವ ಶಿಕ್ಷಣ ಹೊನ್ನಾವರದ ಎಸ್‌ಡಿಎಂ ಕಾಲೇಜಿನಲ್ಲಿಯೂ, ಪದವಿ ಶಿಕ್ಷಣ ಸಿರ್ಸಿಯಲ್ಲಿಯೂ, ಧಾರವಾಡದ ಮಲ್ಲಜ್ಜನ ವ್ಯಾಯಾಮ ಶಾಲೆಯಲ್ಲಿ ಬಿಪಿಎಡ್ ಪದವಿ ಪೂರೈಸಿ ೧೯೮೬ ರಲ್ಲಿ ಕೋಲಾರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರುಗಮಲೆ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಪ್ರಾರಂಭಿಸಿ, ಐದು ವರ್ಷಗಳ ಕಾಲ ತಮ್ಮ ಸೇವಾವಧಿಯಲ್ಲಿ ವಿದ್ಯಾರ್ಥಿಗಳ ಪಾಲಿನ ಅಚ್ಚುಮೆಚ್ಚಿನ ದೈಹಿಕ ಶಿಕ್ಷಕರೆನಿಸಿಕೊಂಡರು.

ನಂತರ ಮಂಗಳೂರು ನಗರ, ಸಿದ್ದಾಪುರದ ಕಾನಗೋಡು, ಹೊನ್ನಾವರದ ಮಂಕಿ, ಪ್ರಭಾತನಗರ, ಹಡಿನ ಬಾಳದಲ್ಲಿ ಸೇವೆ ಸಲ್ಲಿಸಿ, ೨೦೧೮ ರಿಂದ ಪ್ರಭಾರ ದೈಹಿಕ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಅಪಾರ ಅನುಭವ ಹೊಂದಿರುತ್ತಾರೆ. ನಂತರ ೨೦೨೧ ಕ್ಕೆ ಬಡ್ತಿ ಹೊಂದಿ ಹೊನ್ನಾವರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ತಮ್ಮ ಸೇವೆ ಮುಂದುವರಿಸಿ, ಮಕ್ಕಳಲ್ಲಿಯೇ ದೈವತ್ವವನ್ನು ಕಂಡ ಹಿರಿಯ ಚಿಂತಕರು ಇಂದು ನಿವೃತ್ತಿಯಾಗಿರುತ್ತಾರೆ.

ಪತ್ನಿ ಭಾರತಿ, ಮಗ ಹರ್ಷಿತ್,ನಿಶಾಂತ ರವರೊಂದಿಗೆ ತುಂಬ ಸಂಸಾರದ ನೊಗ ಹೊತ್ತ ಜಿ.ಎಚ್.ನಾಯ್ಕರವರು ನೂರ್ಕಾಲ ಬದುಕಿ, ಬಾಳಿರೆಂದು ತಾಲೂಕಿನ ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತ್ತೇನೆ.

ಪಿ.ಆರ್. ನಾಯ್ಕ ಹೊಳೆಗದ್ದೆ.

Exit mobile version