ದಾಂಡೇಲಿ: ಸಾಹಿತ್ಯ ಕೃತಿಗಳ ಓದು ವಿದ್ಯಾರ್ಥಿಗಳ ಸೃಜನಶೀಲತೆಗೆ ಪ್ರೇರಣೆ ನೀಡುತ್ತದೆ. ಸೂಕ್ಷ್ಮ ಸಂವೇದನಾಶೀಲತೆಯನ್ನು ಕಲಿಸುತ್ತದೆ. ಬದುಕನ್ನು ಅರ್ಥಪೂರ್ಣವಾಗಿ ಕಳೆಯುವ ದಾರಿಗಳನ್ನು ತೆರೆಯುತ್ತದೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾದ್ಯಾಪಕ ಡಾ. ಬಿ.ಎನ್. ಅಕ್ಕಿ ಅಭಿಪ್ರಾಯಪಟ್ಟರು.
ಅವರು ದಾಂಡೇಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ಆರಂಭವಾದ ‘ಅಭಿರುಚಿ ಪುಸ್ತಕ ಪ್ರೇಮಿ ಬಳಗ’ವನ್ನು ವಿದ್ಯಾರ್ಥಿಗಳಿಗೆ ಸಾಹಿತ್ಯ ಕೃತಿಗಳನ್ನು ನೀಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಡಾ. ವಿನಯಾ ಜಿ. ನಾಯಕ ಅವರು ವಾರಕ್ಕೊಮ್ಮೆ ಆಸಕ್ತ ವಿದ್ಯಾರ್ಥಿಗಳಿಗೆ ಕನ್ನಡದ ಶ್ರೇಷ್ಠ ಕೃತಿಗಳನ್ನು ನೀಡಿ ಓದಿಸಿ ಹಾಗೂ ಕನ್ನಡ ಸಿನಿಮಾ ತೋರಿಸಿ ಚರ್ಚಿಸುವುದು ಅಭಿರುಚಿ ಬಳಗದ ಉದ್ದೇಶವೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಎಂ. ಡಿ. ಒಕ್ಕುಂದ ಮಾತನಾಡಿ ಜಗತ್ತಿನ ದೊಡ್ಡ ವ್ಯಕ್ತಿಗಳೆಲ್ಲ ಅಧ್ಯಯನದ ಮೂಲಕವೇ ವ್ಯಕ್ತಿತ್ವವನ್ನು ಬೆಳಸಿಕೊಂಡಿದ್ದಾರೆ. ಓದು ಮನುಷ್ಯನನ್ನು ಕ್ರಿಯಾಶೀಲನನ್ನಾಗಿಡುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕಾಲೇಜಿನ ನೂರಾರು ವಿದ್ಯಾರ್ಥಿಗಳು ತಮ್ಮ ಇಷ್ಟದ ಕೃತಿಯನ್ನು ಓದಿಗೆ ಆಯ್ಕೆ ಮಾಡಿಕೊಂಡರು. ಗ್ರಂಥಪಾಲರಾದ ಶ್ರೀಮತಿ ಗೀತಾ ಕೋಟಣ್ಣವರ ಉಪಸ್ಥಿತರಿದ್ದರು. ಕುಮಾರಿ ಬೆರ್ನಾಬೆತ್ ಪ್ರಾರ್ಥಿಸಿದರು. ಕುಮಾರಿ ಕಾವ್ಯಾ ಭಟ್ ಭಾವಗೀತೆ ಹಾಡಿದರು. ಕುಮಾರಿ ಸರಿತಾ ನಂದಿ ಸ್ವಾಗತಿಸಿದರು. ಕುಮಾರಿ ಪ್ರಿಯಾಂಕಾ ಪಾತ್ರೋಟ ವಂದಿಸಿದರು. ಕುಮಾರಿ ಭಾರ್ಗವಿ ಪಿ. ನಿರೂಪಿಸಿದರು.