ಹಿರಿಯ ನಟ ಅನಂತ್ ನಾಗ್ ಸೇರಿ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಿಂದ ನಿರ್ಧಾರಿಸಲಾಗಿದೆ ಎಂದು ವಿವಿ ಕುಲಪತಿಗಳು ಮಾಹಿತಿ ನೀಡಿದ್ದಾರೆ.
ನಟ ಅನಂತ್ ನಾಗ್, ಶಹನಾಯ್ ವಾದಕ ಎಸ್.ಬಲ್ಲೇಶ್ ಭಜಂತ್ರಿ ಹಾಗೂ ಯುಪಿಐ ಸಂಸ್ಥಾಪಕ ಶರತ್ ಶರ್ಮ ಅವರಿಗೆ ಡಾಕ್ಟರೇಟ್ ಪದವಿ ನೀಡಲು ನಿರ್ಧರಿಸಲಾಗಿದೆ.
ಕೋಲಾರದ ನಂದಿನಿ ಪ್ಯಾಲೇಸ್‌ನಲ್ಲಿ ಜುಲೈ 15 ರಂದು ನಡೆಯಲಿರುವ ವಿ.ವಿಯ ಘಟಿಕೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ ನಾರಾಯಣ ಭಾಗಿಯಾಗಿ ಗೌರವ ಪ್ರಧಾನ ಮಾಡಲಿದ್ದಾರೆ.
ಈ ಬಗ್ಗೆ ಬೆಂಗಳೂರು ಉತ್ತರ ವಿವಿಯ ಕುಲಪತಿ ಪ್ರೊ. ನಿರಂಜನ ವಾನಳ್ಳಿ ಮಾಹಿತಿ ನೀಡಿದ್ದು, ಉತ್ತರ ವಿಶ್ವವಿದ್ಯಾನಿಲಯದ ಎರಡನೇ ಘಟಿಕೋತ್ಸವ ಇದಾಗಿದೆ. ಶಾಹನಾಯ್ ವಾದಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಎಸ್. ಬಲ್ಲೇಶ್ ಭಜಂತ್ರಿ, ಬೆಂಗಳೂರಿನ ಯುಪಿಐ ಸಾಪ್ಟ್ವೇರ್ ಕಂಪನಿಯ ಸಹ ಸಂಸ್ಥಾಪಕ ಶರತ್ ಶರ್ಮ ಅವರಿಗೂ ಡಾಕ್ಟರೇಟ್ ನೀಡಲಾಗುವುದು ಎಂದು ತಿಳಿಸಿದ್ದಾರೆ.
ನಟ ಅನಂತನಾಗ್ ಇವರು ಮೂಲತಹ ಉತ್ತರ ಕನ್ನಡ ಜಿಲ್ಲೆಯವರಾಗಿದ್ದು, ಬೆಂಗಳೂರಲ್ಲಿ ವಾಸವಿದ್ದಾರೆ. 300 ಕ್ಕೂ ಹೆಚ್ಚು ಚಲನ ಚಿತ್ರಗಳಲ್ಲಿ ಅಭಿನಯಿಸಿ ಚಿತ್ರ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅನಂತನಾಗರವರು ರಾಜಕಾರಣಿಯಾಗಿಯೂ ಗಮನ ಸೆಳೆದವರು. ಸಿನಿಮಾ ರಂಗದಲ್ಲಿ ಸಲ್ಲಿಸಿದ ಸುಧೀರ್ಘ ಸೇವೆಯನ್ನು ಪರಿಗಣಿಸಿ ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯ ಇವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸುತ್ತಿದೆ.