Site icon ಒಡನಾಡಿ

ವಿದ್ಯಾರ್ಥಿ ಸ್ನೇಹಿ ಹೊನ್ನಾವರ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ

ಮಾನವನು ತನ್ನಲ್ಲಿರುವ ಆತ್ಮದ ಅರಿವಿನಿಂದ ಮಾಡಿದ್ದಾದರೆ ಕಾಯಕ ವಾಗುವುದು, ಮಾನವನು ತನ್ನಲ್ಲಿರುವ ಆತ್ಮದ ಅರಿವಿನಿಂದ ಕೊಟ್ಟಿದ್ದಾದರೆ ದಾಸೋಹವಾಗುವುದು, ಮಾನವನು ತನ್ನಲ್ಲಿರುವ ಆತ್ಮದ ಅರಿವಿನಿಂದ ಪಡೆದದ್ದಾದರೆ ಪ್ರಸಾದವಾಗುವುದು.

ಹೀಗೆ ಸರ್ವದರಲ್ಲೂ ದಾಸೋಹ ಭಾವನೆಯಿಂದ ಕೂಡಿರುವ ಈ ಸೂತ್ರಗಳು ಮನುಕುಲದ ಬದುಕಿನಲ್ಲಿ ಬೆರೆತರೆ ಬೆಳಗೇ ಬೆಳೆಗಲ್ಲದೆ ಕತ್ತಲೆಯುಂಟೆ?

ಅಜ್ಞಾನ ಕಳೆಯಬಹುದು ಅರಿವಿನಿಂದಲ್ಲದೆ, ಕತ್ತಲೆಯ ಕಳೆಯಬಹುದು ಜ್ಯೋತಿಯಿಂದಲ್ಲದೆ ಎನ್ನುವ ಸೂತ್ರದ ಈ ಸಾಲುಗಳು ಸತ್ಯ ದರ್ಶನಕ್ಕಾಗಿ ಅರಿವಿನ ಮಾರ್ಗದಲ್ಲಿ ಮುನ್ನಡೆದಿರುವ ಮಾನವನಿಗೆ ಅವನ ಮಾರ್ಗ ಮತ್ತಷ್ಟು ನಿಚ್ಚಳವಾಗಿ ಕಾಣುವಂತೆ ಮಾಡಿದೆ. ಹೇಗೆಂದರೆ ಓರ್ವ ಸಂಘಟಕ ತನ್ನ ಸಂಘಟನೆಯ ಮೂಲಕ ಸಶಕ್ತ ನಾಗಬೇಕಾದರೆ, ಮನದಲ್ಲಿ ಕವಿದಿರುವ ಕತ್ತಲೆಯನ್ನು ಕಳೆಯಬೇಕಾದರೆ ಒಂದು ಕಿರು ಜ್ಯೋತಿ ಬೆಳಗಿಸಿದರೆ ಕತ್ತಲೆ ಎಲ್ಲಿ? ಅಂತರಂಗದ ಅರಿವಿನ ಜ್ಞಾನ ಜ್ಯೋತಿಯನ್ನು ಬೆಳಗಿಸುವುದು ಅಷ್ಟೇ ಅವಶ್ಯ. ಇಂದಿನ ಪರಿಸ್ಥಿತಿಯಲ್ಲಿ ಇಂತಹ ಅಗತ್ಯತೆಯ ಅನಿವಾರ್ಯತೆಯಿದೆ. ಯಾರನ್ನೂ ನಂಬದೇ ತನ್ನ ಬದುಕನ್ನು ಕಟ್ಟಿಕೊಂಡು ತನ್ನ ಉಸಿರಾಗಿರುವ ಉಸಿರು, ತನಗರಿವಿಲ್ಲದೆ ಶ್ರೇಷ್ಠ ಸಾಧನೆ ಮಾಡಿದಾಗ ತಂದೆ-ತಾಯಿಯ ಸಂತೋಷಕ್ಕೆ ಪಾರವೇ ಇರಲಾರದು. ಏನೂ ಇಲ್ಲದ ಕಾಲಘಟ್ಟದಲ್ಲಿಯೂ ಎಲ್ಲವೂ ಇದೆ ಎಂದು ಸಾಧಿಸಿ ತೋರಿಸಿದ ಅಂತಹ ಒಂದು ಬಹುಮುಖ ಪ್ರತಿಭೆ ಸಮಾಜದ ಕಣ್ಣು ಇದ್ದಂತೆ. ಇಡೀ ಸಮಾಜ ,ಬೇರೆ ಬೇರೆ ಸಂಘಟನೆ ಆ ಬಗ್ಗೆ ಚಿಂತಿಸಬೇಕಾದ ಅಗತ್ಯತೆ ಇದೆ.

ಹೊನ್ನಾವರ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ, ಜಿಲ್ಲಾ ಗೌರವಾಧ್ಯಕ್ಷ ಸುದೀಶ ನಾಯ್ಕ, ಜಿಲ್ಲಾ ಉಪಾಧ್ಯಕ್ಷೆ ಸಾಧನ ಬಗಿ೯ ಮುಂತಾದವರು ಕುಮಾರಿ ಭೂಮಿಕಾಳನ್ನು ಸನ್ಮಾನಿಸುತ್ತೀರುವುದು.

ಇಂತಹ ಒಂದು ಅಪರೂಪದ ಸಾಧಕರು ಇರುವುದು ಗೇರುಸೊಪ್ಪೆಯಂತ ಕಾಡಿನ ಮನೆಯಲ್ಲಿ. ಈ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ. ಆ ಮನೆಯಲ್ಲಿರುವ ಪ್ರತಿಭೆಯನ್ನು ಅನೇಕರು ಪುರಸ್ಕರಿಸುವುದಂತೂ ಸತ್ಯ. ಇಂತಹ ಒಂದು ಐತಿಹಾಸಿಕ ಸಂದರ್ಭಕ್ಕೆ ತನ್ನನ್ನು ತಾನು ತೊಡಗಿಸಿಕೊಂಡಿರುವುದು ಹೊನ್ನಾವರ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕ ಸಂಘ.ವಿದ್ಯಾರ್ಥಿ ಸ್ನೇಹಿ ಸಂಘಟನೆಯೊಂದು ಎಂ.ಜಿ.ನಾಯ್ಕರವರ ನೇತೃತ್ವದಲ್ಲಿ ಯಾವುದೇ ಭೇದವೆಣಿಸದೆ, ಉಳ್ಳವರು ಕಟ್ಟುವರು ಶಿವಾಲಯ, ನಾನೇನು ಮಾಡಲಯ್ಯ ಬಡವನಯ್ಯ ಎಂದೆಣಿಸದೇ ತನ್ನ ತಂಡದೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕುಮಾರಿ ಭೂಮಿಕ ಕೃಷ್ಣ ನಾಯ್ಕರವರ ಮನೆಯಂಗಳದಲ್ಲಿ ಸೇರಿ, ನಿರ್ಮಲ ಮನಸ್ಸಿನಿಂದ ಎಲ್ಲಾ ಮಕ್ಕಳು ಒಂದೇ ಎಂಬ ಕಟು ಸತ್ಯದ ದುರ್ಗಮ ದಾರಿಯನ್ನು ತುಳಿದು ಸಂಘದ ಸದಸ್ಯರಿಂದ ಕೂಡಿಸಿದ ಹನ್ನೆರಡು ಸಾವಿರ ರೂಪಾಯಿಗಳ ಕಟ್ಟನ್ನು ಭೂಮಿಕಾಳ ಕೈಯಲ್ಲಿಟ್ಟು, ಹರಸಿ, ಹಾರೈಸಿ ,ಹಾರ ಹಾಕಿ, ಶಾಲು ಹೊದಿಸಿ ಗೌರವಿಸಿರುವುದು ಸಂಘದ ಅಂತಃಶಕ್ತಿಯನ್ನು ನೂರ್ಮಡಿಗೊಳಿಸಿವೆ. ಮಕ್ಕಳಿದ್ದರೆ ನಗುವು, ಮಕ್ಕಳಿದ್ದರೆ ಮಾತು, ಮಕ್ಕಳೆಂಬುವ ಹೂವು ಬಾಡದಿದ್ದರೆ ಸಾಕೆಂದು ಪಾಲಕರಿಗೆ ಧೈರ್ಯ ತುಂಬಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧಿಸುವಂತಾಗಲಿ ಎಂಬುದು ಅಲ್ಲಿ ನೆರೆದವರ ಹಾರೈಕೆಯಾಗಿತ್ತು.

ಪ್ರೌಢಶಾಲಾ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಸತೀಶ ನಾಯ್ಕ ರವರು ಕುಮಾರಿ ಭೂಮಿಕಾಳನ್ನು ಸನ್ಮಾನಿಸುತ್ತಿರುವುದು.ಅವರ ಜೊತೆಯಲ್ಲಿ ಕಾಯ೯ದಶಿ೯ ಸತೀಶ ನಾಯ್ಕ ಜಲವಳ್ಳಿ, ಕೋಶಾಧ್ಯಕ್ಷ ರೋಹಾನಿ ಗೊನ್ಸಾಲ್ವಿಸ್ ಉಪಸ್ಥಿತರಿದ್ದರು.

ಯಾವುದೇ ನೌಕರರ ಸಂಘಟನೆಯಿರಲಿ ಅವುಗಳ ಮುಖ್ಯ ಉದ್ದೇಶ ನೌಕರರ ಹಿತ ಕಾಪಾಡುವುದು. ಅವರವರ ಸಂಘಟನೆ ಅಡಿಯಲ್ಲಿ ಬರುವ ನೌಕರರಿಗೆ ಯಾವುದೇ ಸಮಸ್ಯೆಯಾದರೂ ತಕ್ಷಣ ಸ್ಪಂದಿಸುವುದು, ಸಮಸ್ಯೆ ಪರಿಹಾರಕ್ಕಾಗಿ ಹೋರಾಡುವುದು.ಪ್ರಾಥಮಿಕ ಸಂಘ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆಯಾದರೆ, ಪ್ರೌಢ ಸಂಘ ಪ್ರೌಢಶಾಲಾ ಶಿಕ್ಷಕರ ಸಂಘಟನೆಯಾಗಿದೆ. ಇವೆರಡು ಮಾತ್ರ ಮಾತೃ ಸಂಘಗಳು.ಸರ್ಕಾರಿ ನೌಕರರ ಸಂಘ ಸರ್ವ ನೌಕರರ ಹಿತ ಕಾಪಾಡಲು ಹುಟ್ಟಿಕೊಂಡ ಸಂಘವಾಗಿದೆ. ಸರಕಾರಿ ನೌಕರರಾದ ನಮಗೆಲ್ಲ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ರಾಜರಾದರೆ, ಉಳಿದೆಲ್ಲ ಸಂಘದ ಅಧ್ಯಕ್ಷರು ತುಂಡು ರಾಜನಂತೆ.ಎಲ್ಲ ಸಂಘಟನೆಗಳು ಅನ್ಯೊನ್ಯವಾಗಿದ್ದಾಗ ಮಾತ್ರ ಸಾಧ್ಯ.ಆ ದಿಶೆಯಲ್ಲಿ ಈಗಿರುವ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಷಡಕ್ಷರಿಯವರು ಸಂಘಟಿ ಸುತ್ತಿರುವುದು ಶ್ಲಾಘನೀಯವಾಗಿದೆ.

ಹಿರಿಯ ಪ್ರಾಥಮಿಕ ಶಾಲೆ ಮುಗಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾದ ಶ್ರೀ ಕೆ. ಎಂ. ಹೆಗಡೆಯವರೊಂದಿಗೆ ಕುಮಾರಿ ಭೂಮಿಕಾ.

ಇತ್ತೀಚಿನ ದಿನಗಳಲ್ಲಿ ಮಾತೃ ಸಂಘದ ಹೊರತಾಗಿಯೂ, ಪ್ರಾಥಮಿಕ ಶಿಕ್ಷಕರು ಬಹುಸಂಖ್ಯಾತರಾಗಿರುವ ದರಿಂದ ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಬೇರೆಬೇರೆ ಸಂಘಟನೆಗಳನ್ನು ಹುಟ್ಟುಹಾಕಿ ಕೆಸರಾಟ ನಡೆಸುತ್ತಿರುವುದಂತೂ ಸತ್ಯ. ಗ್ರಾಮೀಣ ಭಾಗದ ಶಿಕ್ಷಕರಿಗೆ ಗ್ರಾಮೀಣ ಸಂಘ,ಪಟ್ಟಣದ ಸುತ್ತಮುತ್ತಲಿನವರಿಗೆ ಪಟ್ಟಣ ಸಂಘ, ಮಹಿಳೆಯರಿಗೆ ಮಹಿಳಾ ಸಂಘ, ಪದವೀಧರರ ಸಂಘ,ಪದೋನ್ನತ ಮುಖ್ಯಾಧ್ಯಾಪಕರ ಸಂಘ, ಪದವಿಧರೇತರ ಸಂಘ, ಖಾಸಗಿ ಶಿಕ್ಷಕರ ಸಂಘ, ಅನುದಾನಿತ ಸಂಘ, ಅನುದಾನರಹಿತ ಸಂಘ, ಅಂಗವಿಕಲರ ಸಂಘ ದೈಹಿಕ ಶಿಕ್ಷಕರ ಸಂಘ,ಎಜಿಟಿ,ಟಿಜಿಟಿ…… ಇನ್ನು ನಾನಾ ತರದ, ನಾನಾ ವೇಶದ ಸಂಘವು ಸಂಘಟನೆಯಾಗಿ ಮೂಲ ಸಂಘಕ್ಕೆ ಕೊಡಲಿಯೇ ಕುಲಕ್ಕೆ ಮೃತ್ಯುವಾದಂತೆ. ಇಂತಹ ಅದೆಷ್ಟು ಸಂಘಟನೆಗಳು ನಮ್ಮ ಕಣ್ಮುಂದೆ ಇದೆಯಲ್ಲವೇ? ಇಲಾಖೆಯ ಕಾರ್ಯಕ್ರಮದಲ್ಲಿ ಇವರಿಗೆ ವೇದಿಕೆಯಲ್ಲಿ ಒಂದು ಖುರ್ಚಿ ಕಾಯ್ದಿಡಲೇ ಬೇಕು. ಕಾರ್ಯಕ್ರಮದ ಸಂಘಟಕರು ಇವರನ್ನು ಸಮಾಧಾನಪಡಿಸುವಲ್ಲಿ ಹೈರಾಣಾಗಿರುವುದಂತೂ ಸತ್ಯ. ಮಕ್ಕಳಿದ್ದರೆ ಮಾತ್ರ ನಾವು ಎನ್ನುವ ಸತ್ಯವನ್ನೇ ಮರೆತು, ಸೃಜನಾತ್ಮಕ ಚಟುವಟಿಕೆಯಿಂದ ಗಾವುದ ದೂರ ಉಳಿಯುವ ಅದೆಷ್ಟೊ ಸಂಘಟನೆಗಳು ನಮ್ಮೆದುರಿಗಿಲ್ಲ.ಪಾಪ! ಅವರಿನ್ನು ಗೇರುಸೊಪ್ಪ ನೋಡಲಿಲ್ಲ. ಆ ವಿದ್ಯಾರ್ಥಿ ನಮ್ಮ ಶಾಲೆಯ ವಿದ್ಯಾರ್ಥಿಯಲ್ಲ! ಇಂಥ ಮನೋಧೋರಣೆ ಹೊಂದಿರುವ ಸಂಘಟನೆಗಳಿಗೆ ನಮ್ಮ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಮ್ಮ ಕತ೯ವ್ಯದ ಮೂಲಕ ಸರಿಯಾಗಿಯೇ ಉತ್ತರ ನೀಡಿದೆ. ವಿದ್ಯಾರ್ಥಿ ಸ್ನೇಹಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಎನ್ನುವುದನ್ನು ಸಾದರಪಡಿಸಿದೆ. ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿ ಧೈರ್ಯ ತುಂಬಿ,ವಿದ್ಯಾರ್ಥಿಯ ಮನೋಬಲವನ್ನು ಹಿಗ್ಗಿಸಿ, ಧೈರ್ಯದಿಂದ ಮುನ್ನಡೆಯಲು ಹೆದ್ದಾರಿ ನಿರ್ಮಿಸಿರುತ್ತಾರೆ.

ಭೂಮಿಕಾಳ ಇಕ್ಕಟ್ಟಾದ ಮನೆ ದಾರಿ ಹಿಡಿದು ಸಾಗುತ್ತೀರುವ ಶಿಕ್ಷಕ ಸಂಘದವರು.

ಅಂದಿನ ಕಾರ್ಯಕ್ರಮಕ್ಕೆ ಸಾಕ್ಷಿಯಾದವರು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಗೌರವಾಧ್ಯಕ್ಷ ಸುದೀಶ ನಾಯ್ಕ, ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ. ಜಿ. ನಾಯ್ಕ, ಜಿಲ್ಲಾ ಶಿಕ್ಷಕ ಸಂಘದ ಉಪಾಧ್ಯಕ್ಷೆ ಸಾಧನ ಬಗಿ೯, ಉಪಾಧ್ಯಕ್ಷ ಸುರೇಶ ನಾಯ್ಕ,ಪ್ರಧಾನ ಕಾರ್ಯದರ್ಶಿ ಕೆ.ಎಂ.ಹೆಗಡೆ,ಕೋಶಾಧ್ಯಕ್ಷ ಎಂ.ಎನ್. ಗೌಡ, ಸಹಕಾರ್ಯದರ್ಶಿ ಎಂ.ಡಿ.ನಾಯ್ಕ, ಮಹಿಳಾ ಉಪಾಧ್ಯಕ್ಷೆ ಲಕ್ಷ್ಮಿ ಹೆಚ್. ಸದಸ್ಯರಾದ ಮೋಹನ ನಾಯ್ಕ, ಯೋಗೇಶ ನಾಯ್ಕ, ಪ್ರತಿಮಾ ಹೆಗಡೆ, ಸುನಂದಾ ಭಟ್, ಗಣೇಶ ಹಳದೀಪುರ, ಶಂಕರ ನಾಯ್ಕ, ಜೆ.ಎಚ್.ಲೋಪೀಸ್, ಗೌರಿ ಭಟ್ಟ ಉಪಸ್ಥಿತರಿದ್ದರು.

ಹೊನ್ನಾವರ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ
ಜಿಲ್ಲಾ ಶಿಕ್ಷಕ ಸಂಘದ ಗೌರವಾಧ್ಯಕ್ಷ ಸುದೀಶ ನಾಯ್ಕ
ಜಿಲ್ಲಾ ಶಿಕ್ಷಕ ಸಂಘದ ಉಪಾಧ್ಯಕ್ಷೆ ಸಾಧನಾ ಬಗಿ೯.

ಇದೇ ಸಂದರ್ಭದಲ್ಲಿ ಪ್ರೌಢಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಸತೀಶ ನಾಯ್ಕ, ಪ್ರಧಾನ ಕಾರ್ಯದರ್ಶಿ ಸತೀಶ ನಾಯ್ಕ, ಜಲವಳ್ಳಿ,ಕೋಶಾಧ್ಯಕ್ಷ ರೋಹಾನಿ ಗೊನ್ಸಾಲ್ವಿಸ್ ಉಪಸ್ಥಿತರಿದ್ದು ಕುಮಾರಿ ಭೂಮಿಕಾಳನ್ನು ಸಂಘದ ಪರವಾಗಿ ಸನ್ಮಾನಿಸಿ ಗೌರವಿಸಿದರು.

ಭೂಮಿಕಾಳ ಮಾತು ಕೇಳಿ...

https://odanadi.com/wp-content/uploads/2021/08/VID-20210815-WA0778.mp4
-ಪಿ.ಆರ್. ನಾಯ್ಕ ಹೊಳೆಗದ್ದೆ


Exit mobile version