ಬೆವರ ಸುರಿಸಿಯೇ ಬದುಕು ಕಂಡುಕೊಳ್ಳುವ ಹಲವು ವಿಭಾಗದ ಕಾರ್ಮಿಕರೇ ಈ ದೇಶದ ನಿಜವಾದ ಆಧಾರಸ್ಥಂಬಗಳು. ಕಾರ್ಮಿಕರ ದುಡಿಮೆಯೇ ಈದೇಶವನ್ನು ಮುನ್ನಡೆಸುತ್ತಿದೆ. ಹಾಗಾಗಿ ಯಾವುದೇ ಕಾರ್ಮಿಕರೂ ಕೂಡಾ ಸರಕಾರದ ಸವಲತ್ತುಗಳಿಂದ ವಂಚಿತರಾಗಬಾರದು. ಇದೀಗ ಕೋವಿಡ್ ಸಂದರ್ಭದಲ್ಲಿ ಸರಕಾರ ನೀಡುತ್ತಿರುವ ಕಿಟ್‍ಗಳೂ ಕೂಡಾ ನೊಂದಾಯಿತ ಎಲ್ಲಾ ಕಾರ್ಮಿರಿಗೂ ಸಿಗುವಂತಾಗಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ನುಡಿದರು.
ಕಿಟ್ ವಿತರಿಸುತ್ತಿರುವ ಶಾಸಕ ಆರ್.ವಿ. ದೇಶಪಾಂಡೆ
ಅವರು ದಾಂಡೇಲಿಯಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕೋವಿಡ್ 19ರ ಸಂಕಷ್ದಲ್ಲಿರುವ ದಾಂಡೇಲಿ-ಜೋಯಿಡಾದ ನೊಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಕಿಟ್ ವಿತರಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ವಿಡಿಯೋ ನೋಡಿ…
ಸರಕಾರದಲ್ಲಿ ನೊಂದಾಯಿತ ಅಸಂಘಟಿತ ಹಾಗೂ ಕಟ್ಟಡ ಕಾರ್ಮಿಕರು ಹೆಚ್ಚಿಗೆ ಇದ್ದಾರೆ. ಆದರೆ ನೀಡಿರುವ ಕಿಟ್ ಕಡಿಮೆಯಾಗಿದೆ. ಹಳಿಯಾಳ ತಾಲೂಕಿನಲ್ಲಿ 18584 ನೊಂದಾಯಿತ ಕಟ್ಟಡ ಕಾರ್ಮಿಕರಿದ್ದಾರೆ. ಆದರೆ ಸರಕಾರದಿಂದ 9104 ಕಿಟ್ ಮಾತ್ರ ಬಂದಿದೆ. ದಾಂಡೇಲಿಯಲ್ಲಿ 8478 ನೊಂದಾಯಿತ ಕಾರ್ಮಿಕರಿದ್ದಾರೆ. ಆದರೆ ಸರಕಾರದಿಂದ ಬಂದಿರೋದು 5930 ಕಿಟ್‍ಗಳು ಮಾತ್ರ. ಇದರಿಂದ ಬಹಳಷ್ಟು ಕಾರ್ಮಿಕರು ಕಿಟ್ ಸಿಗದೇ ವಂಚಿತರಾಗುತ್ತಾರೆ. ಇದೇ ಕಾರಣದಿಂದ ಈ ಕಿಟ್‍ಗಳನ್ನು ನಾನು ವಿತರಿಸುವುದಿಲ್ಲ. ಕಿಟ್ ಸಿಗದವರು ಬೇಸರಿಸಿಕೊಳ್ಳುತ್ತಾರೆ ಎಂದಿದ್ದೆ. ಆದಾಗ್ಯೂ ಸಂಘಟನೆಯವರ ಒತ್ತಾಯಕ್ಕೆ ಮಣಿದು ಕಾರ್ಯಕ್ರಮಕ್ಕೆ ಬಂದಿದ್ದೇನೆ. ಈ ಕಿಟ್ ಕಡಿಮೆ ಬಂದಿರುವುದರಲ್ಲಿ ನನ್ನ ಪಾತ್ರವೇನೂ ಇಲ್ಲ. ಹಾಗಾಗಿ ಸರಕಾರ ಯಾವ ಕಾರ್ಮಿಕರಿಗೂ ಅನ್ಯಾಯ ಮಾಡದೇ ನೊಂದಾಯಿತ ಎಲ್ಲ ಅಸಂಘಟಿತ ಕಾರ್ಮಿಕರಿಗೂ ಕಿಟ್ ವಿತರಿಸುವ ವ್ಯವಸ್ಥೆ ಮಾಡಬೇಕು. ಇದು ನನ್ನ ಒತ್ತಾಯವಾಗಿದೆ ಎಂದರು.
ಗಿಡಕ್ಕೆ ನೀರೆರೆದು ಕಾರ್ಯಕ್ರಮಕ್ಕೆ ಚಾಲನೆ
ನಗರಸಭಾ ಅಧ್ಯಕ್ಷೆ ಸರಸ್ವತಿ ರಜಪೂತ, ಉಪಾಧ್ಯಕ್ಷ ಸಂಜಯ ನಂದ್ಯಾಳಕರ, ಕಾಂಗ್ರೆಸ್ ಉಪಾಧ್ಯಕ್ಷ ವಿ.ಆರ್. ಹೆಗಡೆ, ಪ್ರಮುಖರಾದ ಮುನ್ನಾ ವಹಾಬ್, ಹರೀಶ ನಾಯ್ಕ, ತಹಶೀಲ್ದಾರ ಶೈಲೇಶ ಪರಮಾನಂದ, ಪೌರಾಯುಕ್ತ ರಾಜಾರಾಮ ಪವಾರ್ ಮುಂತಾದವರಿದ್ದರು. ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘಟನೆಯ ಅಧ್ಯಕ್ಷ ರಾಜೇಸಾಬ್ ಕೇಸನೂರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ ಕಾರ್ಮಿಕರ ಮಕ್ಕಳಿಗೆ ಸಿಗಬೇಕಿದ್ದ 45 ಲಕ್ಷ ರೂ ಶೈಕ್ಷಣಿಕ ಧನ ಸಹಾಯ ಹಾಗೂ 11 ಲಕ್ಷ ರು. ಮದುವೆ ಧನ ಸಹಾಯ ಬ್ಯಾಂಕಿನ ಕಾರಣದಿಂದಾಗಿ ಸಿಗದೇ ವಿಳಂಬವಾಗಿದ್ದಾಗ ಅದನ್ನು ತಕ್ಷಣ ಬಿಡುಗಡೆ ಮಾಡಿಸಿಕೊಟ್ಟ ಆರ್.ವಿ. ದೇಶಪಾಂಡೆಯವರನ್ನು ಅಭಿನಂದಿಸಿದರು. ಕಾರ್ಮಿಕ ನಿರೀಕ್ಷಕಿ ಲಕ್ಷ್ಮಿ ಚಿಕ್ಕನ್ನವರ ನಿರೂಪಿಸಿದರು