Site icon ಒಡನಾಡಿ

ಎಡ ಬಿಡದೇ ಸುರಿದ ಮಳೆ: ದಾಂಡೇಲಿಯಲ್ಲಿ ತುಂಬಿ ಹರಿದ ನದಿ-ನಾಲಾಗಳು: ಮನೆಗಳಿಗೆ ನುಗ್ಗಿದ ನೀರು: ಕಾಳಜಿ ಕೇಂದ್ರದಲ್ಲಿ ಸಂತ್ರಸ್ಥ ಜನರು

ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆಯ ಕಾರಣದಿಂದಾಗಿ ದಾಂಡೇಲಿಯಲ್ಲಿ ಕಾಳಿ ನದಿ ಸೇರಿದಂತೆ ಸಣ್ಣ ಪುಟ್ಟ ನಾಲಾಗಳೂ ಸಹ ತುಂಬಿ ಹರಿದಿದ್ದು, ಮನೆಗಳೊಳಗೆ ನೀರು ನುಗ್ಗಿ ನೂರಾರು ಜನರು ಸಂಕಷ್ಠಕ್ಕೊಳಗಾಗಿದ್ದು ಸಂಜೆಯ ಹೊತ್ತಿಗೆ ವಾತಾವರಣ ಸಹಜ ಸ್ಥಿತಿಗೆ ಮರಳಿದೆ.

ದಾಂಡೇಲಿಯಲ್ಲಿ ಗುರುವಾರದಿಂದಲೇ ಮಳೆ ನಿರಂತವಾಗಿ ಭೋರ್ಗರೆಯುತ್ತಿದೆ. ಪರಿಣಾಮವೆಂವಂತೆ ಜಲಪ್ರವಾಹವೇ ನಿಮಾಣವಾಗಿದ್ದು, ಎಲ್ಲಡೆ ಜನ ಜವನ ಅಸ್ತವ್ಯಸ್ಥವಾಗಿದೆ. ಕಾಳಿ ನದಿ ತುಂಬಿ ಹರಿಯತ್ತಿದ್ದು ನದಿ ದಂಡೆಯಲ್ಲಿ ವಾಸಿಸುವ ಜನರ ಸ್ಥಳಾಂತರಕ್ಕೆ ಈಗಾಗಲೇ ಸೂಚನೆ ನೀಡಲಾಗಿದೆ. ಕೆಲವಡೆ ನಾಲಾ ತುಂಬಿ ಹರಿದ ಪರಿಣಾಮ ಮನೆಗಳೊಳಗೆ ನೀರು ನುಗ್ಗಿದೆ. ಅಪಾರ ಹಾನಿ ಸಂಭವಿಸಿದೆ. ನೂರಾರು ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ತಹಶೀಲ್ದಾರ ಶೈಲೇಶ ಪರಮಾನಂದ ಪೌರಾಯುಕ್ತ ರಾಜಾರಾಮ ಪವಾರ. ಪಿ.ಎಸ್.ಐ. ಯಲ್ಲಪ್ಪ ಎಸ್. ಸೇರಿದಂತೆ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಅವರವರ ಪ್ರದೇಶಗÀಳಲ್ಲಿ ಸಂಕಷ್ಠಕ್ಕೊಳಗಾದವರಿಗೆ ಸಹಾಯ ಮಾಡುತ್ತಿದ್ದಾರೆ.

ಕಾಳಿ ಸೇತುವೆ ಮೇಲೆ ಹರಿದ ಪ್ರವಾಹ:: ದಾಂಡೇಲಿಯಲ್ಲಿ ಕಾಳಿ ನದಿಗೆ ಎರಡು ಸೇತುವೆಗಳಿವೆ. ಅದರಲ್ಲಿ ಹಳೆದಂಡೇಲಿ-ಬೈಲಪಾರ ಕೂಡಿಸುವ ಸೇತುವೆ ಹಳೆಯದ್ದಾಗಿದ್ದು, ಇದರ ಎತ್ತರ ಕೂಡಾ ಕಡಿಮೆಯಿದೆ. ಶುಕ್ರವಾರ ಮದ್ಯಾಹ್ನದ ಹೊತ್ತಿಗೆ ಕಾಳಿ ಪ್ರವಾಹ ಹೆಚ್ಚಾಗಿದ್ದು ಸೇತುವೆಯ ಮೇಲೆಯೇ ನೀರು ತುಂಬಿ ಹರಿದಿದೆ. ಸೇತುವೆಯ ಮೇಲೆ ಒಂದು ಮರ ಕೂಡಾ ಮುರಿದು ಬಿದ್ದಿದೆ. ಸೇತುವೆಯ ಮೇಲಿನ ಸಂಚಾರ ಸ್ಥಗಿತವಾಗಿದ್ದು, ಪೊಲೀಸ್ ಬದೋಬಸ್ತ ಒದಗಿಸಲಾಗಿದೆ. ಹಳೆದಾಂಡೇಲಿಯಲ್ಲಿ ಕಾಳಿ ನದಿ ದಂಡೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಕಾಳಿ ರಿವರ್ ಪಾರ್ಕ ಕೂಡಾ ನೀರಲ್ಲಿ ಮುಳುಗಿದೆ. ಅಳ್ನಾವರಕ್ಕೆ ನೀರು ಸಾಗಿಸುವ ಜ್ಯಾಕ್‍ವೆಲ್ ಕಾಮಗಾರಿ ಕೂಡಾ ಮುಳುಗಿದೆ.

ತುಂಬಿ ಹರಿದ ಹಾಲಮಡ್ಡಿ ಬಳಿಯ ನಾಲಾ: ನಗರದ ಹಲವು ಪ್ರದೇಶಗಳಿಂದ ಹಾದು ಬಂದು, ಕಾಗದ ಕಂಪನಿಯೊಳಗಿಂದ ಬರುವ ನಾಲಾ ತನ್ನ ಮಟ್ಟ ಮೀರಿ ಹರಿದ ಪರಿಣಾಮ ಹಾಲಮಡ್ಡಿ ಬಳಿಯ ಕಿರು ಸೇತುವೆ ಮುಳುಗಿತ್ತು. ಇದರಿಂದಾಗಿ ಸಂಚಾರ ಸಂಪರ್ಕ ಕಡಿತವಾಗಿತ್ತು. ಜೊತೆಗೆ ಹಾಲಮಡ್ಡಿ ಬಳಿಯ ಹಲವು ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ. ಸ್ಥಳಕ್ಕೆ ಅಧಿಕಾರಿಗಳು, ಜನಪ್ರತಿನಿದಿಗಳು ಬೇಟಿ ನೀಡಿದ್ದರು. ಸ್ಥಳೀಯರು ಸಹಕರಿಸಿದ್ದರು.

ಮನೆಗಳೊಳಗೆ ನುಗ್ಗಿದ ನೀರು: ಕಾಳಿನದಿ ದಂಡೆಯಲ್ಲಿರುವ ಕೋಗಿಲಬನ ಗ್ರಾಮದಲ್ಲಿ ಅರಣ್ಯದಿಂದ ಬಂದ ನೀರು ಪ್ರವಾಹದೊಳಗೆ ಸೇರದೇ ಜನವಸತಿ ಪ್ರದೇಶದಲ್ಲಿಯೇ ತುಂಬಿಕೊಂಡ ಪರಿಣಾಮ ಅಲ್ಲಿ ಹಲವು ಮನೆಗಳೊಳಗೆ ನೀರು ನುಗ್ಗಿದೆ. ಹಾಲಮಡ್ಡಿ, ಕೆರವಾಡಾ ಸೇರಿದಂತೆ ಹಲವೆಡೆ ಮಳೆ ಮತ್ತು ನಾಲಾ ನೀರುಗಳು ಮನೆಗಳೊಳಗೆ ನುಗ್ಗಿ ಅಪಾರ ಹಾನಿ ಸಂಭವಿಸಿದೆ. ತಕ್ಷಣ ಮನೆಗಳ ಜನರನ್ನು ಅಲ್ಲಿಂದ ಸುರಕ್ಷಿತ ಸ್ಥಳಕ್ಕೆ ಸಾಗಿಸುವ ಕೆಲಸ ಮಾಡಲಾಗಿದೆ. ಆದ್ದಾಗ್ಯೂ ಮನೆಗಳೊಳಗಿದ್ದ ಧವಸ, ಧಾನ್ಯ ಹಾಗೂ ಇತರೆ ಸಾಮಗ್ರಿಗಳು ನೀರು ಪಾಲಾಗಿದ್ದು ಅಪಾರ ಹಾನಿ ಸಂಭವಿಸಿದೆ.

ಕಾಳಜಿ ಕೇಂದ್ರಗಳು: ಮಳೆ ಹಾಗೂ ನಾಲಾ ನೀರಿನಿಂದ ಸಮಸ್ಯೆಗೊಳಗಾದ ಜನರನ್ನು ತಾಲೂಕು ಆಡಳಿತ ಗ್ರಾಮ ಗ್ರಾಮ ಪಂಚಾಯತಗಳು ಗೊತ್ತು ಮಾಡಿದ ಕಾಳಜಿ ಕೇಂದ್ರಗಳಿಗೆ ಸಾಗಿಸಲಾಗಿದೆ. ಕೋಗಿಲಬನದ ಸಂತ್ರಸ್ಥರನ್ನು ಕೋಗಿಲಬನ ಶಾಲೆಯಲ್ಲಿ ಹಾಗೂ ಹಾಲಮಡ್ಡಿ ಬಳಿಯ ಸಂತ್ರಸ್ಥರನ್ನು ಜನತಾ ವಿದ್ಯಾಲಯದ ಕಾಳಜಿ ಕೇಂದ್ರದಲ್ಲಿಡಲಾಗಿದೆ. ಕೋಗಿಲಬನದ ಕಾಳಜಿ ಕೇಂದ್ರವರಿಗೆ ಸ್ಥಳೀಯ ಜಂಗಲ್ ಲಾಡ್ಜ್ ಎಂಡ್ ರೆಸಾರ್ಟನವರು ಊಟದ ವ್ಯವಸ್ಥೆ ಮಾಡಿ ಸಹಕರಿಸಿದ್ದಾರೆ.

ಸಹಕರಿಸಿದ ಜನಪ್ರತಿನಿದಿಗಳು: ನಗರಸಭಾ ಅಧ್ಯಕ್ಷೆ ಸರಸ್ವತಿ ರಜಪೂತ, ಉಪಾಧ್ಯಕ್ಷ ಸಂಜಯ ನಂದ್ಯಾಳಕರ ಹಾಗೂ ಇತರೆ ಸದಸ್ಯರು ಅವರವರ ವಾರ್ಡುಗಳಲ್ಲಿ ಮಳೆಯಿಂದಾಗುವ ಸಮಸ್ಯೆಯ ಸಂದರ್ಭದಲ್ಲಿ ಜನರಿಗೆ ಸಹಕರಿಸಿದ್ದಾರೆ. ಕೋಗಿಲಬನ ಗ್ರಾ.ಪಂ ಅಧ್ಯಕ್ಷ ಅಶೋಕ ನಾಯ್ಕ, ಸದಸ್ಯ ರಮೇಶ ನಾಯ್ಕ, ಆಲೂರು ಪಂಚಾಯತ ಸದಸ್ಯ ಅಶೋಕ ಭೋವಿವಡ್ಡರ, ಮಾಜಿ ಸದಸ್ಯ ದೇವೇಂದ್ರಪ್ಪ ಹನಮಶೆಟ್ಟರ್, ಇತರೆ ಜನಪ್ರತಿನಿದಿಗಳು ಹಾಗೂ ಹಲವಾರು ನಾಗರಿಕರು ಜನರ ಜೊತೆಗಿದ್ದು ಸ್ಪಂದಿಸಿದ್ದಾರೆ. ಕಾಗದ ಕಂಪನಿಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ ಹಾಲಮಡ್ಡಿ ನಾಲಾದ ಬಳಿ ನಿಂತು ಅಧಿಕಾರಿಗಳ ಜೊತೆ ಸಹಕರಿಸಿದ್ದಾರೆ.

ನಡುಗಡ್ಡೆಯಂತಾದ ದಾಂಡೇಲಿ : ನಿರಂತರ ಮಳೆಯಿಂದಾಗಿ ದಾಂಡೇಲಿಯ ನಾಲ್ಕೂ ದಿಕ್ಕುಗಳಲ್ಲಿ ಬರುವ ನದಿ-ನಾಲಾಗಳು ತುಂಬಿ ಹರಿಯುತ್ತಿದ್ದ ಪರಿಣಾಮ ದಾಂಡೇಲಿ ನಡುಗಡ್ಡೆಯಂತಾಗಿದೆ. ಕೆಸರೊಳ್ಳಿಯಲ್ಲಿ ಸೇತುವೆ ಮೇಲೆ ನೀರು ತುಂಬಿದ್ದರಿಂದ ದಾಂಡೇಲಿಯಿಂದ ಹುಬ್ಬಳ್ಳಿ-ಧಾರವಾಡದ ಮಾರ್ಗದ ಸಂಪರ್ಕ ಕಡಿತವಾಗಿದೆ. ಜನತಾ ಕಾಲನಿಯ ಬಳಿ ರಸ್ತೆಯ ಮೇಲೆ ನೀರು ತುಂಬಿದ್ದ ಪರಿಣಾಮ ಜೋಯಿಡಾ-ದಾಂಡೇಲಿ ರಸ್ತೆ ಸಂಪರ್ಕ ಕಡಿತವಾಗಿತ್ತು. ಅಣಶಿ ಗುಡ್ಡ ಕುಸಿತವಾಗಿದ್ದರಿಂದ ಕಾÀರವಾರ ಸಂಪರ್ಕವೂ ಕಡಿತ. ಭರ್ಚಿ ಬಳಿಯ ಹಳ್ಳ ತುಂಬಿ ಹದಿದ್ದತಿಂದ ದಾಂಡೇಲಿಯಿಂದ ಗಣೇಶಗುಡಿ ಬೆಳಗಾವಿ ಹೋಗುವ ಮಾರ್ಗವೂ ಬಂದಾಗಿದೆ. ಬೊಮ್ನಳ್ಳಿ ಜಲಾಶಯದಿಂದ ನೀರು ಹೊರಬಿಟ್ಟಿದ್ದರಿಂದ ಅಲ್ಲಿಯ ರಸ್ತೆಯ ಮೇಲೆ ನೀರು ಹರಿದಿದ್ದು ಯಲ್ಲಾಪುರ ರಸ್ತೆಯೂ ಸ್ಥಗಿತವಾಗಿದೆ. ದಾಂಡೇಲಿಯನ್ನು ಸಂಪರ್ಕಿಸುವ ಎಲ್ಲಾ ರಸ್ತೆಗಳ ಸಂಪರ್ಕವೂ ಕಡಿತವಾಗಿದ್ದು ದಾಂಡೇಲಿ ನಡುಗಡ್ಡೆಯಂತಾಗಿದೆ.

ಜಲಾಶಯದ ನೀರು ಬಿಟ್ಟರೆ ಸಮಸ್ಯೆ: ಳೆದೆರಡು ವರ್ಷಗಳ ಹಿಂದೆ ಇದೇ ರೀತಿ ಜಲ ಪ್ರವಾಹ ದಾಂಡೇಲಿಯಲ್ಲಾಗಿತ್ತು. ಆದರೆ ಆಸಂದರ್ಭದಲ್ಲಿ ಸುರಿಯುತ್ತಿದ್ದ ಮಳೆಯ ಜೊತೆಗೆ ಸೂಪಾ ಜಲಾಶಯದ ನೀರನ್ನೂ ಕೂಡಾ ಹೊರ ಬಿಡಲಾಗಿತ್ತು. ಇದರ ಪರಿಣಾಮ ಪ್ರವಾಹ ಹೆಚ್ಚಿನ ಸ್ವರೂಪದಲ್ಲಿ ಬಂದಿತ್ತು. ಆದರೆ ಈಬಾರಿ ಇನ್ನೂ ಜಲಾಶಯದ ನೀರನ್ನು ಹೊರ ಬಿಟ್ಟಿಲ್ಲ. ಆದರೆ ಮಳೆಯಿಂದಾಗಿಯೇ ಈರೀತಿ ಜಲ ಪ್ರವಾಹ ನಿರ್ಮಾಣವಾಗಿದೆ. ಇನ್ನು ಇದೇ ಸಂದರ್ಭದಲ್ಲಿ ಜಲಾಶಯದ ನೀರನ್ನೆನಾದರೂ ಹೊರ ಬಿಟ್ಟರೆ ಅಪಾಯ ಇನ್ನಷ್ಟು ಹೆಚ್ಚುವ ಸಾದ್ಯತೆಯಿದೆ ಎಂದೇ ಹೇಳಲಾಗುತ್ತಿದ್ದು, ಮಳೆ ಕಡಿಮೆಯಾದ ನಂತರ ಜಲಾಶಯದ ನೀರು ಹೊರಬಿಡುವುದೊಳಿತೆಂಬ ಮಾತು ಕೇಳಿ ಬರುತ್ತಿದೆ.

ಸಂಜೆ ಸಹಜ ಸ್ಥಿತಿಗೆ: ಮುಂಜಾನೆಯಿಂದ ಮಳೆ-ಹೊಳೆ ಎನ್ನುವ ಭಯದಲ್ಲೇ ಇದ್ದ ದಾಂಡೇಲಿ ಸಂಜೆಯ ಹೊತ್ತಿಗೆ ಒಂದಿಷ್ಟು ಸಹಜ ಸ್ಥಿತಿಗೆ ಮರಳಿದೆ. ಮಳೆ ಕಡಿಮೆಯಾಗಿದೆ. ಕಾಳಿ ನದಿಯ ಪ್ರವಾಹದಲ್ಲಿ ಇಳಿಕೆಯಾಗಿದೆ. ಸೇತುವೆಯ ಮೇಲೆ ಹರಿದ ನೀರು ಕಡಿಮೆಯಾಗಿ, ಸೇತುವೆ ಸಂಚಾರ ಮುಕ್ತವಾಗಿದೆ. ತಹಶೀಲ್ದಾರ ಶೈಲೇಶ ಪರಮಾನಂದ ಪೌರಾಯುಕ್ತ ರಾಜಾರಾಮ ಪವಾರ ನೇತೃತ್ವದಲ್ಲಿ ಜೆ.ಸಿ.ಬಿ. ಮೂಲಕ ಸೇತುವೆ ಸ್ವಚ್ಚಗೊಳಿಸುವ ಕಾರ್ಯ ನಡೆದಿದೆ. ನಾಲಾ ಗಳಲ್ಲಿ ತುಂಬಿದ ನೀರೂ ಕೂಡಾ ಕಡಿಮೆಯಾಗಿದೆ. ಹಳ್ಳಿಗಳ ರಸ್ತೆಗಳಲ್ಲಾದ ಜಲಾವೃತ್ತವೂ ಇಳಿಕೆಯಾಗಿದೆ. ಜನ ಒಂದಿಷ್ಟು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Exit mobile version