Site icon ಒಡನಾಡಿ

ಜನರಿಗೆ ಗೋಮೂತ್ರ ಕುಡಿಯಿರೆಂದರು: ತಾವು ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು

ದಾಂಡೇಲಿ: ಇಡೀ ದೇಶ ಕೊರೊನಾದಿಂದ ತತ್ತರಿಸಿದ್ದರೆ ಭಾ.ಜ.ಪ. ನೇತೃತ್ವದ ಕೇಂದ್ರ ಸರಕಾರದ ನಾಯಕರು  ಜನರಿಗೆ  ಗೋಮೂತ್ರ ಕುಡಿಯುರಿ, ಜಾಗಟೆ ಬಾರಿಸಿರಿ, ದೀಪ ಹಚ್ಚಿರಿ, ಸಗಣಿ ಹಚ್ಕೋರಿ ಎನ್ನುತ್ತ ಜನರನ್ನು ತಪ್ಪುದಾರಿಗೆಳೆಯುವ  ಉಪದೇಶ ನೀಡುತ್ತಿದ್ದರು. ಆದರೆ ತಾವು ಮಾತ್ರ ದೇಶದ ಅತ್ಯಂತ ಹೈಟೆಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಏ.ಐ.ಸಿ.ಸಿ. ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ ಆಕ್ಷೇಪಿಸಿದರು.

  ಅವರು ದಾಂಡೇಲಿಯ ಸಯ್ಯದ್ ಕಮ್ಯುನಿಟ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸಹಾಯ ಹಸ್ತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇಂದು ನಿಜವಾದ ಕೋವಿಡ್ ಸೋಂಕಿತರೆಷ್ಟು, ಸಾವಿಗೊಳಗಾದವರೆಷ್ಟು ಎಂಬ ಲೆಕ್ಕ ಸಮರ್ಪಕವಾಗಿ ಸಿಗುತ್ತಿಲ್ಲ.  ಆಕ್ಸಿಜನ್ ಸಿಗದೇ ಪ್ರ್ರಾಣ ಕಳೆದುಕೊಂಡರೆ ಅದು ಸಹಜ ಸಾವೆಂದು ಹೇಳುವ ರಾಜ್ಯ ಸರಕಾರ ಕೂಡಾ ಕೇಂದ್ರದಂತೆಯೇ  ಕೋವಿಡ್ ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ  ವಿಫಲವಾಗಿದೆ. ಇದೇ ಕಾರಣಕ್ಕಾಗಿ ನಾವು ಸಹಾಯ ಹಸ್ತ ಕಾರ್ಯಕ್ರಮ ಹಮ್ಮಿಕೊಂಡಿದ್ದು ದೇಶದಾದ್ಯಂತ ಮಾಹಿತಿ ಕಲೆ ಹಾಕುತ್ತಿದ್ದೇವೆ. ಮಹಾತ್ಮಾ ಗಾಂಧೀಜಿಯವರ ಕನಸು ನನಸು ಮಾಡುವತ್ತ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಈ ಬಾರಿ ಕೋವಿಡ್ ಬಂದಾಗ ಎಲ್ಲಡೆಯ ಬಡವರಿಗೆ ಸಹಾಯ ಮಾಡಿದೆ.

   ಯಾರೊಂದಿಗೂ ಚರ್ಚಿಸದೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗಿದ್ದು, ಇಲ್ಲಿ ಹೆಚ್ಚಾಗಿ ಕೋಮುವಾದದ ಪಾಠ ಅಳವಡಿಸಲಾಗಿದೆ. ರೈತರಿಗೆ ಕರಾಳವಾದ ಕಾನೂನು ಜಾರಿಗೆ ತರಲಾಗಿದೆ. ಕೊರೊನಾದಂತಹ ಸಂಕಷ್ಠದ ಕಾಲದಲ್ಲಿ ಜನವಿರೋಧಿ ಕಾನೂನುಗಳನ್ನು ಜಾರಿಗೆ ತಂದಿದ್ದರ ಉದ್ಧೇಶವೇನು ಎಂದು ಪ್ರಶ್ನಿಸಿದ ಹರಿಪ್ರಸಾದ ರಾಜ್ಯ ಕಾಂಗ್ರೆಸ್ ಬಹಳಷ್ಟು ಕಡೆ ವಯಕ್ತಿಕವಾಗಿ ಜನರಿಗೆ ಸಹಾಯ ಮಡುತ್ತಿದೆ ಎಂದರು.

   ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿ ಕೋವಿಡ್‍ನಿಂದ ಸಂಕಷ್ಠದಲ್ಲಿದ್ದವರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯವೆಂದು ತಿಳಿದು ಮಾಡಬೇಕು. ಹೊರತು ಪ್ರಚಾರಕ್ಕಾಗಿ, ಅಧಿಕಾರಕ್ಕಾಗಿ ಅಲ್ಲ.  ಯಾರಿಗೆ ದೇವರು ಕೊಟ್ಟಿದ್ದಾನೋ, ಅವರು ಜನರಿಗೆ ಸಹಾಯ ಮಾಡಬೇಕು.  ಇಂದು ಕಾಂಗ್ರೆಸ್ ಪಕ್ಷದ ಸಂಘಟನೆ ಆಗಬೇಕು. ಅದು ಆಧಿಕಾರಕ್ಕಾಗಿ ಅಲ್ಲ.  ಅಧಿಕಾರ ಬರುತ್ತದೆ, ಹೋಗುತ್ತದೆ. ಆದರೆ ಇದ್ದ ಅಧಿಕಾರದಲ್ಲಿ ಜನ ಸೇವೆ ಮಾಡಬೇಕು ಎಂದರು.

   ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ ಮಾತನಾಡಿ  ಕೋವಿಡ್ ಸೋಂಕು ನಿಯಂತ್ರಿಸುವಲ್ಲಿ ಭಾ.ಜ.ಪ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರಕಾರಗಳೆರಡೂ ಸಂಪೂರ್ಣವಾಗಿ ವಿಫಲವಾಗಿವೆ.  15 ಲಕ್ಷ ಉದ್ಯೋಗ ಕೊಡುತ್ತೇನೆ, ಅಚ್ಚೇದಿನ ತರುತ್ತೇನೆ ಎಂದಿದ್ದ  ನರೇಂದ್ರ ಮೋದಿ  ನುಡಿದಂತೆ ನಡೆಯದೇ ಜನರಿಗೆ ಮೋಸ ಮಾಡಿದ್ದಾರೆ. ನಾನೂ ಕೂಡಾ ಕೋವಿಡ್ ಸಂಕಷ್ಠದಲಿದ್ದವರಿಗೆ ಅಂಬ್ಯಲೆನ್ಸ್, ಆಕ್ಸಿಜನ್, ಆಹಾರದ ಕಿಟ್ ಸೇರಿದಂತೆ ಹಲವು ರೀತಿಯ ಸಹಾಯ ಮಾಡುತ್ತ ಬಂದಿದ್ದೇನೆ ಎಂದರು.

ಕಾರ್ಯಕ್ರಮದ ವಿಡಿಯೋ ನೋಡಿ…

  ನಗರಸಭಾ ಅದ್ಯಕ್ಷೆ ಸರಸ್ವತಿ ರಜಪೂತ, ಉಪಾಧ್ಯಕ್ಷ ಸಂಜಯ ನಂದ್ಯಾಳಕರ,  ಕೆ.ಪಿ.ಸಿ.ಸಿ ವೀಕ್ಷಕ ವಿ.ಆರ್. ಆರಾದ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬೀಮಣ್ಣ ನಾಯಕ,  ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತಾ ಗಾಂವಕರ,  ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ನಾಗರಾಜ ನಾರ್ವೇಕರ,  ಕಾಂಗ್ರೆಸ್ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯ್ಕ,  ಪ.ಪಂಗಡ ವಿಬಾಗದ ರಾಜ್ಯ ಉಪಾದ್ಯಕ್ಷ ಚಂದ್ರಪ್ಪ ಬೇಡರ್, ಜಿಲ್ಲಾದ್ಯಕ್ಷ ಬಸವರಾಜ,  ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ಅಬ್ದುಲ್,   ದಾಂಡೇಲಿ ದಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೇಣುಕಾ ಬಂದಂ ಮುಂತಾದವರಿದ್ದರು. ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ  ವಿ.ಆರ್. ಹೆಗಡೆ ಸ್ವಾಗತಿಸಿದರು. ಕಾರ್ಯದರ್ಶಿ ಎಸ್.ಎಸ್. ಪೂಜಾರ ವಂದಿಸಿದರು. ಯುವ ಕಾಂಗ್ರೆಸ್‍ ಜಿಲ್ಲಾ ಕಾರ್ಯದರ್ಶಿ ಜಾಫರ್‍ ಮಸನಗಟ್ಟಿ ನಿರೂಪಿಸಿದರು.

Exit mobile version