Site icon ಒಡನಾಡಿ

ಅಂದು ಪ್ರೌಢಶಾಲಾ ಶಿಕ್ಷಕ: ಇಂದು ಡಯಟ್‌ನ ಹಿರಿಯ ಉಪನ್ಯಾಸಕ…

ನನ್ನ ಅನಿಸಿಕೆಗಳು ಕಲ್ಪನೆಯ ಕೂಸಲ್ಲ
ಮೊಗೆದಷ್ಟು ಉಕ್ಕಿ ಬರುವ ನೆನಪುಗಳೆಲ್ಲ
ನೆಪಮಾತ್ರಕ್ಕೆ ಬರುವ ಗೋಪಾಲ ಇವನಲ್ಲ
ನೋವು-ನಲಿವಿನ ಒಡನಾಟ ಎದೆಯಲ್ಲಿದೆಯಲ್ಲ!

ಶಿಕ್ಷಣ ಇಲಾಖೆಯಲ್ಲಿ ಸುದೀರ್ಘ 26 ವರ್ಷಗಳ ಕಾಲ ಅತ್ಯಂತ ಜಾಗರೂಕರಾಗಿ ಇಲಾಖೆಯ ಕಾರ್ಯವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತ ದಣಿವರಿಯದೆ ದುಡಿದ ಅಪರೂಪದ ವ್ಯಕ್ತಿ ಜಲವಳಕರ್ಕಿಯ ಗೋಪಾಲಕೃಷ್ಣ ನಾಯ್ಕರು.

” ಗಗನಂ ಗಗನಾಕಾರಂ ಸಾಗರಾ ಸಾಗರೋಪಮ”. ಅಂದರೆ ” ಆಕಾಶಕ್ಕೆ ಆಕಾಶವೇ ಸಮ, ಸಮುದ್ರಕ್ಕೆ ಸಮುದ್ರವೇ ಸಮಾನ” ಎನ್ನುವಂತೆ ಗೋಪಾಲಕೃಷ್ಣರಿಗೆ ಸಮನಾರು ಎಂಬ ಪ್ರಶ್ನೆಗೆ, ಗೋಪಾಲನೇ ಎಂಬ ಉತ್ತರ ಮಾತ್ರ ಸಿಗಬಹುದು. ಯಾರನ್ನೋ ಮೆಚ್ಚಿಸುವ , ಯಾರನ್ನೋ ಹೆಚ್ಚಿಸುವ ತುರುಕಿಯ ತುಮುಲು ಇವರ ಬಳಿ ಸುಳಿಯಲಾರದು. ಹೇಳಬೇಕಾದುದನ್ನು ಯಾವ ಹಮ್ಮು- ಬಿಮ್ಮು ಇಲ್ಲದೆ ನಿರ್ಧಾಕ್ಷಿಣ್ಯವಾಗಿ ಮುಖಕ್ಕೆ ಹೊಡೆದಂತೆ ಹೇಳುವ ಧಾಟಿಯಲ್ಲಿ ಹೇಳುವ, ಹೇಳುವ ಧಾಟಿಯಲ್ಲಿ ಏನಾದರೆ ವ್ಯತ್ಯಾಸವಾದರೆ ತಕ್ಷಣ ಕ್ಷಮಿಸುವ ಹೃದಯ ವೈಶಾಲ್ಯತೆ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ಇಲಾಖೆ ನೀಡುವ ಯಾವುದೇ ಕೆಲಸಕ್ಕೂ ನುಣುಚಿಕೊಳ್ಳುವ ಸಬೂಬು ನೀಡದೇ ಅದನ್ನು ಒಪ್ಪಿ ಅಪ್ಪಿಕೊಳ್ಳುವ ಚ್ಯುತಿ ಬಾರದ ರೀತಿಯಲ್ಲಿ ಅನುಷ್ಠಾನಗೊಳಿಸುವ ಜಿ .ಎಸ್. ನಾಯ್ಕರ ಜಾಣ್ಮೆ ಅವರ ಕರ್ತವ್ಯದಲ್ಲಿ ಅಡಗಿದೆ.

ಸೂರ್ಯನ ತೇಜಸ್ಸನ್ನು, ಅಗ್ನಿಯ ಶಾಖವನ್ನು ಸತ್ಯವೆಂದು ಹೇಳ ಬೇಕಾದ, ಪ್ರತಿಪಾದಿಸಬೇಕಾದ ಪ್ರಮಯವೇ ಬರುವುದಿಲ್ಲ .ಇದೆಲ್ಲ ತ್ರಿಕಾಲಬಾಧಿತ ಸತ್ಯ .ಅಂತಹ ಸ್ನೇಹಮಯಿ ಅಧಿಕಾರಿಯ ಒಡನಾಟ ಬಲ್ಲವನೇ ಬಲ್ಲ ! ದಕ್ಷ ಅಧಿಕಾರಿ ಎಂದು ಒತ್ತಿ ಹೇಳಬೇಕಾದ ಅಗತ್ಯ ಇಲ್ಲ. ಏಕೆಂದರೆ ಹೊನ್ನಾವರದ ಪ್ರತಿಯೊಂದು ಜನಧ್ವನಿ ಅವರನ್ನು ಗುರುತಿಸಿದೆ. ಆದರೂ ಬಂಗಾರಕ್ಕೆ ಪುಟ ಕೊಟ್ಟಾಗ ಮಾತ್ರ ಮೆರಗು ಬರುತ್ತದೆ. ಪಾತ್ರೆಯನ್ನು ಉಜ್ಜಿದಾಗ ಮಾತ್ರ ಹೊಳಪು ಇನ್ನಷ್ಟು ಹೆಚ್ಚಾಗುತ್ತದೆ. ಹಾಗೇ ಉತ್ತಮರ ಆಡಳಿತದ ಗುಣವಿಶೇಷತೆಯನ್ನು ಸಹೃದಯದವರಲ್ಲಿ ಹಂಚಿಕೊಂಡಾಗ ಅವರ ಅಂತಃಸತ್ವ ಉದ್ದೀಪನಕ್ಕೆ ಕಾರಣವಾಗುತ್ತದೆ. ಆ ಕಾರಣಕ್ಕಾಗಿಯೇ ಜಿ.ಎಸ್ . ನಾಯ್ಕರು ಶಿಕ್ಷಣ ಇಲಾಖೆಯಲ್ಲಿ ಅಪರೂಪದ ಸಾಧಕರಂತೆ. ಅಪಾರ ಜೀವನ ಪ್ರೀತಿಯ ಗುರುಗಳಂತೆ.

ಹೊನ್ನಾವರ ತಾಲೂಕು ಮುಖ್ಯಾಧ್ಯಾಪಕರ ಸಭೆಯಲ್ಲಿ ಸನ್ಮಾನಿಸಿದ ಸಂದರ್ಭ

“ವಿದ್ಯೆ ವಿನಯದಿಂದ ಶೋಭಿಸುತ್ತದೆ” ಎನ್ನುವ ಹಾಗೆ ಸ್ನೇಹಪರತೆ, ಸರಳ ಸ್ವಭಾವ, ಇಲಾಖೆಯ ಹಿರಿ ಕಿರಿಯರನ್ನು ಪ್ರೀತಿಸುವುದರ ಮೂಲಕ ಜನಾನುರಾಗಿಯಾದ ನಾಯ್ಕ ರು 1971 ರಲ್ಲಿ ಜಲವಳ ಕರ್ಕಿಯಲ್ಲಿ ಜನಿಸಿ, ಎಂಎಸ್ಸಿ ಪದವಿ ಪಡೆದ ಪ್ರತಿಭಾವಂತರು.19 94ರಲ್ಲಿ ಹಾವೇರಿ ಜಿಲ್ಲೆಯಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ನೇಮಕವಾಗಿ ಒಂದು ವರ್ಷ ಸೇವೆ ಸಲ್ಲಿಸಿದರು .ನಂತರ ಸಿರ್ಸಿತಾಲೂಕಿನ ಬೀಳೂರು ಪ್ರೌಢಶಾಲೆಯಲ್ಲಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿ 1999 ರಲ್ಲಿ ಪ್ರೌಢಶಾಲಾ ಮುಖ್ಯ ಅಧ್ಯಾಪಕರಾಗಿ ಬಡ್ತಿ ಹೊಂದಿ ತಾಲೂಕಿನ ಗೇರುಸೊಪ್ಪೆ ಯಲ್ಲಿ ಸೇವೆ ಪ್ರಾರಂಭಿಸಿದರು. 2000ನೇ ಇಸವಿಯಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿಯಾಗಿ ನಿಯೋಜನೆ ಹೊಂದಿ ತಾಲೂಕ ಮಟ್ಟದಲ್ಲಿ ಸೇವೆ ಪ್ರಾರಂಭಿಸಿ 2002ರಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಹುದ್ದೆಗೆ ಆಯ್ಕೆಯಾದರು.

ಮುಂದಿನ ಮೂರು ವರ್ಷಗಳ ಕಾಲ ಕ್ಷೇತ್ರ ಸಮನ್ವಯಾಧಿಕಾರಿಯಾಗಿ ಶಿಕ್ಷಕರ ಅಚ್ಚು ಮೆಚ್ಚಿನ ಅಧಿಕಾರಿಯಾದರು. ನಂತರ 2006 ಮಾಚ 31ಕ್ಕೆ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾಗಿ ಹೊನ್ನಾವರಕ್ಕೆ ವರ್ವಗಾಣೆಗೊಂಡರು. ದಾಸೋಹದ ಮೂಲಕ ಪಾಲಕರ ಮತ್ತು ಶಿಕ್ಷಕರ ಮನ ಗೆದ್ದ ಜಿ.ಎಸ್.‌ ನಾಯ್ಕರು ಅಲ್ಲಿ ತಮ್ಮ ಸೇವೆಯನ್ನು ಮೂರು ವಷಗಳ ಕಾಲ ಪೂರೈಸಿ 2015ರಲ್ಲಿ ಎರಡನೇ ಅವಧಿಗೆ ಕ್ಷೇತ್ರ ಸಮನ್ವಯಾಧಿಕಾರಿ ಹುದ್ದೆಯನ್ನು ವಹಿಸಿಕೊಂಡರು. ಶಿಕ್ಷಣ ಇಲಾಖೆಯ ವಿವಿಧ ಸ್ಥರದ ಅಧಿಕಾರವನ್ನು ಸಾಲಂಕರಿಸಿ ತಮ್ಮ ಪ್ರಾಮಾಣಿಕ ಸೇವೆಯನ್ನು ಪೂರೈಸಿ 2018ರಲ್ಲಿ ಸರಕಾರಿ ಪ್ರೌಢಶಾಲಾ ಮುಖ್ಯಾದ್ಯಪಕರಾಗಿ ವರ್ಗಾವಣೆಗೊಂಡರು. ಸುಮಾರು ಎರಡು ವರ್ಷಗಳ ಕಾಲ ತಾವು ಕಲಿತ ಶಾಲೆಯಲ್ಲಿಯೇ ಮುಖ್ಯಾದ್ಯಾಪಕರಾಗಿ ಸೇವೆ ಸಲ್ಲಿಸಿ ಕುಮಟಾದ ಡಯಟ್‌ಗೆ ಹಿರಿಯ ಉಪನ್ಯಾಸಕರಾಗಿ ಪದೋನ್ನತ್ತಿಕೊಂಡು ಇದೀಗ ಆ ಹುದ್ದೆಗೆ ಹಾಜರಾಗಿದ್ದಾರೆ.

ಸುಮಾರು ಎರಡುವರೆ ದಶಕಗಳ ಕಾಲ ಶಿಕ್ಷಣ ಇಲಾಖೆಯಲ್ಲಿ ವಿವಿಧ ಹಂತದ ಹುದ್ದೆ-ಅಧಿಕಾರವನ್ನು ನಡೆಸಿದರಾದರೂ ತಮ್ಮ ವೃತ್ತಿ ಬದುಕಿಗೆ ಎಳ್ಳಷ್ಟು ಚ್ಯುತಿ ಬಾರದ ರೀತಿಯಲ್ಲಿ ಸೇವೆ ಸಲ್ಲಿಸಿದವರು. ʼಕತವ್ಯವೇ ದೇವರೆಂದುʼ ನಂಬಿದ ಜಿ.ಎಸ್.‌ ನಾಯಕ್‌ ರ ಬದುಕು ಸದಾ ಹಸನಾಗಿರಲೆಂಬುದು ಹೊನ್ನಾವರ ನೌಕರರ ಬಳಗದ ಹಾರೈಕೆಯಾಗಿದೆ.

ಲೇಖನ:ಪಿ.ಆರ್.‌ ನಾಯ್ಕ, ಹೊಳೆಗದ್ದೆ
Exit mobile version