ದಾಂಡೇಲಿ: ಪ್ರತಿ ವರ್ಷವೂ ವಿಜಯದಶಮಿಯಂದು ವಿಜ್ರಂಬಣೆಯಿಂದ ನಡೆಯಲ್ಪಡುತ್ತಿದ್ದ ಜಿಲ್ಲೆಯ ಅತೀ ದೊಡ್ಡ ಜಾತ್ರೆಗಳಲ್ಲೊಂದಾದ ದಾಂಡೇಲಿಯ ಜನರ ಆರಾಧ್ಯ ದೈವ “ಸತ್ಪುರುಷ ದಾಂಡೇಲಪ್ಪಾ ಜಾತ್ರೆ” ಈ ವರ್ಷ ಕೊರೊನಾ ಕಾರಣಕ್ಕೆ ಶೃದ್ಧಾ-ಭಕ್ತಿಯೊಂದಿಗೆ ಅತ್ಯಂತ ಸರಳವಾಗಿ ಆಚರಿಸಲ್ಪಟ್ಟಿತು.
ರವಿವಾರ ನಸುಕಿನ ಜಾವ ದಾಂಡೇಲಪ್ಪನ ಪಾದುಕಾ ಪಲ್ಲಕ್ಕಿಯು ಪಾದುಕಾ ಸ್ಥಾನ ಮಿರಾಶಿಗಲ್ಲಿಯಿಂದ ಕೆರವಾಡಾ ಬಳಿ ಇರುವ ದಾಂಡೇಲಪ್ಪನ ಗದ್ದುಗೆಗೆ ಆಗಮಿಸುತ್ತಿದ್ದಂತೆಯೇ ಜಾತ್ರೆಗೆ ಸಾಂಪ್ರಾದಾಯಿಕ ಚಾಲನೆ ದೊರೆಯಿತು. ಕೊರೊನಾ ಕಾರಣಕ್ಕೆ ದಾಂಡೇಲಪ್ಪ ಜಶಾತ್ರೆಯೇ ನಡೆಯುವುದಿಲ್ಲ. ಜನರಿಗೆ ಅವಕಾಶವಿರಲಾರದು ಎಂದು ಮೊದಲು ಹೇಳಲಾಗಿತ್ತಾಗಿದ್ದರಿಂದ ಹಲವಾರು ಜನ ಒಂದು ದಿನ ಮುಂಚಿತವಾಗಿಯೇ ದಾಂಡೇಲಪ್ಪನ ಸನ್ನಿಧಿಗಾಗಮಿಸಿ ದರ್ಶನ ಪಡೆದರು. ಪೂಜೆಯೊಪ್ಪಿಸಿದರು. ಮತ್ತು ನಸುಕಿನ ಮೂರು ಗಂಟೆಯಿಂದಲೇ ಭಕ್ತರು ಆಗಮಿಸಲಾರಂಭಿಸಿದರು.
ಪ್ರತಿವರ್ಷದ ಜನಜಾತ್ರೆ ಈ ಬಾರಿ ಕಾಣದಿದ್ದರೂ ಸಹ ಮುಂಜಾನೆಯಿಂದ ಸಂಜೆಯವರೆಗೆ ಸಹಸ್ರಾರು ಭಕ್ತರು ಆಗಮಿಸಿ ದಾಂಡೇಲಪ್ಪನ ದರ್ಶನ ಪಡೆದು ಸಂಪ್ರೀತರಾದರು.ಜಾತ್ರೆಯಲ್ಲಿ ಪ್ರತೀವರ್ಷದಂತೆ ಈವರ್ಷದ ಯಾವುದೇ ಸತ್ಕಾರ ಕಾರ್ಯಗಳಿರಲಿಲ್ಲ. ದೇಣಿಗೆ ಸಂಗ್ರಹಿಸುತ್ತಿರಲಿಲ್ಲ. ವ್ಯಾಪಾರಿ ಮಳಿಗೆಗಳು, ಹಣ್ಣಿನಂಗಡಿಗಳು ಇರಲಿಲ್ಲ. ಹಾಗಾಗಿ ಯಾರಿಗೂ ಜಾತ್ರೆಯ ಅನುಭವ ಸಿಗಲಿಲ್ಲ. ದಾಂಡೇಲಪ್ಪ ಜಾತ್ರೆಯಾರಂಭವಾದ ದಿನಗಳಿಂದ ಇದುವರೆಗಿನ ಚರಿತ್ರೆಯಲ್ಲಿ ಇದೇ ಮೊದಲ ಬಾರಿಗೆ ಈರೀತಿ ಜಾತ್ರೆ ನಡೆದಿದ್ದು ಎನ್ನುತ್ತಾರೆ ಹಿರಿಯರು. ದಾಂಡೇಲಪ್ಪ ದೇವರ ಮುಖ್ಯ ಅರ್ಚಕರಾದ ಗೋಪಾಲ ಮಿರಾಶಿ ಕುಟುಂಭದವರು ಹಾಗೂ ಜಿ.ಪಂ ಮಾಜಿ ಸದಸ್ಯ ವಾಮನ ಮಿರಾಶಿ, ದಾಂಡೇಲಪ್ಪ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಾ ಪೂಜಾರಿ ಹಾಗೂ ಜಾತ್ರಾ ಕಮಿಟಿಯವವರು ಸರಳ ಜಾತ್ರೆಯ ಆಚರಣೆಗೆ ಅನುವು ಮಾಡಿಕೊಟ್ಟಿದ್ದರಲ್ಲದೇ, ಕೊರೊನಾ ಸೋಂಕು ಹರಡದಂತೆ ಸೆನಿಟೈಸರ್ ಬಳಸುವ ಹಾಗೂ ಮಾಸ್ಕ್ ಕಡ್ಡಾಯವಾಗಿ ಬಳಸುವ ಹಲವು ನಿಯಮಗಳಿಗೆ ಆದ್ಯತೆ ನೀಡಿದ್ದರು.
ಜಾತ್ರೆಯೇ ನಡೆಯುವುದಿಲ್ಲ, ದಾಂಡೇಲಪ್ಪನ ದರ್ಶನಕ್ಕೆ ಅವಕಾಶವೇ ಸಿಗದು ಎಂದು ಭಾವಿಸಿಕೊಂಡಿದ್ದ ಜನರನೇಕರು, ಇಷ್ಟಾದರೂ ಅವಕಾಶ ದೊರೆಯಿತಲ್ಲಾ, ವರ್ಷಂಪ್ರತಿಯಂತೆ ದಾಂಡೇಲಪ್ಪನ ಜಾತ್ರೆಯಂದು ದಾಂಡೇಲಪ್ಪನ ದರ್ಶನವಾಯಿತಲ್ಲಾ ಎಂಬ ಧನ್ಯತೆಗೊಳಗಾದರು.
ಗಣ್ಯರ ಬೇಟಿ: ಮಾಜಿ ಸಚಿವ, ಶಾಸಕ ಆರ್.ವಿ. ದೇಶಪಾಂಡೆ, ವಿ.ಪ. ಸದಸ್ಯ ಎಸ್.ಎಲ್. ಘೋಟ್ನೇಕರ, ಮಾಜಿ ಶಾಸಕ ಸುನೀಲ ಹೆಗಡೆ, ತಹಶೀಲ್ದಾರ ಶೈಲೇಶ ಪರಮಾನಂದ ಸೇರಿದಂತೆ ಹಲವಾರು ಗಣ್ಯರು, ರಾಜಕೀಯ ಪ್ರಮುಖರು ಆಗಮಿಸಿ ದಾಂಡೇಲಪ್ಪನ ದರ್ಶನ ಪಡೆದರು.
ಸೂಕ್ತ ಭದ್ರತೆ: ಡಿ.ವೈ.ಎಸ್.ಪಿ ಶಿವಾನಂದ ಛಲವಾದಿ, ಸಿ.ಪಿ.ಐ ಪ್ರಭು ಗಂಗನಳ್ಳಿ ನೇತೃತ್ವದಲ್ಲಿ ಗ್ರಾಮೀಣ ಠಾಣೆಯ ಪಿ.ಎಸ್.ಐ ಹನುಮಂತ ಬಿರಾದರ, ನಗರ ಠಾಣೆಯ ಪಿ.ಎಸ್.ಐ ಯಲ್ಲಪ್ಪ ಎಸ್. ಹಾಗೂ ಇತರೆ ಅಧಿಕಾರಿಗಳು, ಸಿಬ್ಬಂದಿಗಳು ಸೂಕ್ತ ಬಂದೋಬಸ್ತ ನೀಡಿದ್ದರು.