ಟ್ರಾಫಿಕ್ ಗೌಜು ಗದ್ದಲದ ನಡುವೆ
ಕಾಗೆ ಪಕ್ಷಿಯ ಪಿಚಕಾರಿಯ ಸಿಂಪಡನೆಯ ಜಾಗದಲ್ಲಿ
ಮಳೆ ಬಿಸಿಲು ಚಳಿ ಗಾಳಿಯ ನಡುವೆ
ಮಳೆಯ ಮಿಂಚಿಗೆ ಕನ್ನಡಕ ಸರಿಮಾಡಿಕೊಂಡು ಕೋಲನ್ನು ಆಣಿಸಿಕೊಂಡು ನಿಂತಿದ್ದಾನೆ ನಮ್ಮ ಸರ್ಕಲ್ ಗಾಂಧೀ…!
ಇಲ್ಲಿ ನಾಲ್ಕು ಬೀದಿ ಕೂಡಿದ್ದು ನಿಜ
ನಾಲ್ಕು ಮತ ಕೊಡುವುದು ಕಷ್ಟ…
ಹಲವು ನಮೂನೆಯ ಹಾರ್ನ್ ಸದ್ದಿಗೂ
ಬಂದ್ ಪ್ರತಿಭಟನೆ ಸದ್ದಿಗೂ
ಜಗಳ ಹಾರಾಟ ಸದ್ದಿಗೂ
ರಾತ್ರಿ ಕುಡುಕರ ನೀತಿಪಾಠದ ಭೋದನೆಯ ಸದ್ದಿಗೂ
ಲಂಚ ಪಡೆಯುವ ಕೈ ಜೇಬಿನ ಕುಹಕು ನಗುವಿನ ಸದ್ದಿಗೂ
ಬಡವರ ಖಾಲಿ ಹೊಟ್ಟೆಯ ಕರುಳಿನ ಸದ್ದಿಗೂ
ಒಂದೇ ನೋಟ, ಒಂದೇ ಭಂಗಿ, ಒಂದೇ ನಗು ನಮ್ಮ ಸರ್ಕಲ್ ಗಾಂಧೀ…!
ಸತ್ಯ, ಅಹಿಂಸೆ, ದಯೆ, ಪ್ರಮಾಣಿಕತೆ ನನ್ನ ತತ್ವಗಳು
ಇವುಗಳೆ ನನ್ನ ಹೋರಾಟದ ಆಯುಧಗಳು…
ನಾನು ಮಣ್ಣಾದೆ, ನನ್ನ ತತ್ವಗಳು ಜೀವಂತ ಎಂದು ಸಂತಸಪಟ್ಟೆ
ತಡಮಾಡದೆ ಸ್ವಾರ್ಥದ ಜಲ್ಲಿಕಲ್ಲು ಸಿಮೆಂಟು ಹಾಕಿ ಸರ್ಕಲ್ ನಲ್ಲಿ ನಿಲ್ಲಸಿ ಬಿಟ್ಟರು
ಸ್ವತಂತ್ರಕ್ಕಾಗಿ ಹೋರಾಡಿದ್ದಕ್ಕೆ ರಾಷ್ಟ್ರಪಿತ ಎಂದರು
ನನ್ನ ತತ್ವವನ್ನು ಅಳವಡಿಸಿಕೊಳ್ಳಲು ತಯಾರಿಲ್ಲ
ನನ್ನ ತತ್ವ ಆದರ್ಶಗಳು ನನ್ನಂತೆ ಕಲ್ಲಾಗಿ ಬಿಟ್ಟೆವು…!
ಆದರೂ ಗಾಂಧೀ ಬದುಕಿದ್ದೇನೆ ಸರಕಾರಿ ಕಛೇರಿಯ ಫೋಟೋದೊಳಗೆ
ನೀವು ಚಲಾಯಿಸುವ ನೋಟಿನೊಳಗೆ…