ದಾಂಡೇಲಿ: ಬೊಮ್ನಳ್ಳಿ ಡ್ಯಾಂನಲ್ಲಿ ಸ್ವಚ್ಚತಾ ಕಾರ್ಯ ನಿರ್ವಹಿಸುತ್ತಿದ್ದ ಹಂಗಾಮಿ ಕಾರ್ಮಿಕನೋರ್ವ ಡ್ಯಾಂನಿಂದ ಆಯತಪ್ಪಿ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಬೊಮ್ನಳ್ಳಿಯ ಸುಭಾಷ ಬಸಪ್ಪ ಹರಿಜನ್ (35) ಎಂಬಾತನೇ ಈ ದುರಂತಕ್ಕೊಳಗಾಗಿರುವ ದುರ್ದೈವಿಯಾಗಿದ್ದು, ಈ ಬಗ್ಗೆ ಅವರ ಸಹೋದರ ರಮೇಶ ಹರಿಜನ್‍ರವರು ಮುಂಜಾವುಗೆ ಮಾಹಿತಿ ನೀಡಿದ್ದಾರೆ. ಶುಕ್ರವಾರ ಮದ್ಯಾಹ್ನದ ಸುಮಾರಿಗೆ ಘಟನೆ ನಡೆದಿದೆ. ಈತ ಕರ್ನಾಟಕ ವಿದ್ಯುತ್ ನಿಗಮದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಹಂಗಾಮಿ ಕಾರ್ಮಿಕನಾಗಿದ್ದು ಕಳೆದ 7 ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಎಂದಿನಂತೆ ಶುಕ್ರವಾರವೂ ಈತ ಮನೆಯಿಂದ ಬೊಮ್ನಳ್ಳಿ ಡ್ಯಾಂನಲ್ಲಿ ಸ್ವಚ್ಚತಾ ಕಾರ್ಯಕ್ಕೆ ಬಂದಿದ್ದಾನೆ. ಈ ಕೆಲಸದ ಸಂದರ್ಭಲ್ಲಿ ಈತ ಮೇಲಿಂದ ಕೆಳಗೆ ನದಿಯಲ್ಲಿ ಬಿದ್ದಿಬಹುದೆಂದು ಅಂದಾಜಿಸಲಾಗಿದೆ.
ಈತ ಡ್ಯಾಂನಲ್ಲಿ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಆತ ಧರಿಸುತ್ತಿದ್ದ ಚಪ್ಪಲಿ ಹಾಗೂ ಕೊಯಿತಾ (ಕತ್ತಿ) ದೊರೆತಿದ್ದು, ಇದು ಈ ದುರಂತ ನಡೆದಿರುವ ಸಾದ್ಯತೆಗಳ ಬಗ್ಗೆ ಹೆಚ್ಚಿನ ಪುಷ್ಠಿ ನೀಡುತ್ತಿವೆ. ಆದರೆ ಆತ ಮೇಲಿಂದ ಬಿದ್ದಿರುವುದನ್ನು ಯಾರೂ ಕಂಡಿಲ್ಲ. ಜೊತೆಗೆ ಡ್ಯಾಂನಲ್ಲಿ ಸಿಸಿ ಕ್ಯಾಮರಾಗಳೂ ಕೂಡಾ ಕಾರ್ಯ ನಿರ್ವಹಿಸಿರಲಿಲ್ಲ ಎನ್ನಲಾಗಿದೆ.
ಶನಿವಾರ ಬೆಳಗಾವಿಯಿಂದ ಮುಳುಗು ತಜ್ಞರು ಆಗಮಿಸಿದ್ದು, ಕಾಣೆಯಾಗಿರುವ ವ್ಯಕ್ತಿಯ ದೇಹದ ಹುಡುಕಾಟದಲ್ಲಿದ್ದಾರೆ. ಶನಿವಾರ ಸಂಜೆಯವರೆಗೂ ಪತ್ತೆಯಾಗಿರುವುದಿಲ್ಲ. ಸ್ಥಳಕ್ಕೆ ದಾಂಡೇಲಿ ತಹಶಿಲ್ದಾರ ಶೈಲೇಶ ಪರಮಾನಂದ, ತಾ.ಪಂ. ಕಾರ್ಯನಿರ್ವಹಣಾ ಅಧಿಕಾರಿ ಪರಶುರಾಮ ಗಸ್ತಿ, ಅಂಬಿಕಾನಗರದ ಪೊಲೀಸ್ ಹಾಗೂ ಕೆ.ಪಿ.ಸಿ. ಅಧಿಕಾರಿಗಳಿದ್ದರು. ಸಂಜೆ ಎರಡನೆಯ ಹಂತದ ಕಾರ್ಯಾಚರಣೆ ನಡೆದಿದ್ದು, ಕಾಣೆಯಾಗಿರುವ ವ್ಯಕ್ತಿ ಪತ್ತೆಯಾಗಿರುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ನಿಗಮದವರ ನಿಷ್ಕಾಳಜಿ: ನನ್ನ ಸಹೋದರ ಸುಭಾಷ ಹರಿಜನ ಬೊಮ್ನಳ್ಳಿ ಡ್ಯಾಂನಲ್ಲಿ ಕೆಲಸ ಮಾಡುತ್ತಿರುವಾಗ ಮೇಲಿನಿಂದ ಬಿದ್ದಿರುವ ಶಂಖೆಯಿದೆ. ಘಟನೆ ನಡೆದು ಎರಡು ದಿನವಾದರೂ ಈವರೆಗೂ ಪತ್ತೆಯಾಗಿರುವುದಿಲ್ಲ. ಕರ್ನಾಟಕ ವಿದ್ಯುತ್ ನಿಗಮದವರು ಈ ಘಟನೆಗೆ ಸಂಬಂಧಿಸಿ ಹೆಚ್ಚಿನ ಮುತುವರ್ಜಿ ವಹಿಸುತ್ತಿಲ್ಲ. ಈ ಬಗ್ಗೆ ನಮಗೆ ಬೇಸರವಿದೆ ಎಂದು ಡ್ಯಾಂನಿಂದ ಕೆಳಗಡೆ ಬಿದ್ದಿರಬಹುದೆಂದು ಹೇಳಲಾಗಿರುವ ಸುಭಾಷ ಹರಿಜನನ ಸಹೋದರ ರಮೇಶ ಹರಿಜನ ತಿಳಿಸಿದ್ದಾರೆ.
ಗುತ್ತಿಗೆದಾರನ ಬೇಜವಾಬ್ದಾರಿತನ: ಡ್ಯಾಂನಲ್ಲಿ ಈರೀತಿ ಕೆಲಸ ಮಾಡಿಸಲು ಗುತ್ತಿಗೆ ನೀಡಲಾಗಿದೆ. ಆದರೆ ಇದರ ಗುತ್ತಿಗೆ ಪಡೆದ ಗುತ್ತಿಗೆದಾರ ಅವಶ್ಯ ರಕ್ಷಣಾ ವ್ಯವಸ್ಥೆಗಳನ್ನು ಮಾಡಿಕೊಂಡಿಲ್ಲ ಎಂಬ ಆಕ್ಷೇಪವಿದೆ. ತನ್ನ ಕೆಲಸಗಾರನನ್ನು ಡ್ಯಾಂನ ಮೇಲಕ್ಕೆ (ಫಿಲ್ಲರ್) ಹತ್ತಿಸುವಾಗ ಸೇಪ್ಟಿ ಕವಚಗಳನ್ನು ನೀಡಿರಲಿಲ್ಲ ಎನ್ನಲಾಗುತ್ತಿದ್ದು, ಈಬಗ್ಗೆ ತನಿಖೆಯಾಗಬೇಕೆಂಬ ಒತ್ತಾಯ ಕುಟುಂಭದವರದ್ದಾಗಿದೆ.
ಡ್ಯಾಂನಲ್ಲೊಂದು ಸಿಸಿ ಕ್ಯಾಮರಾವೂ ಇಲ್ಲ ?
ಜಲಾಶಯ, ಆಣೆಕಟ್ಟುಗಳೆಂದರೆ ಇದು ಸೂಕ್ಷ ಮವಲಯಗಳೆಂದೇ ಗುರುತಿಸಲ್ಪಡುತ್ತದೆ. ಇಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾ ಕಣ್ಗಾವಲಿರಲೇಬೇಕು. ಆದರೆ ಬೊಮ್ನಳ್ಳಿ ಡ್ಯಾಂನ ಸುತ್ತಲೂ ಸಿಸಿ ಕ್ಯಾಮರಾಗಳೇ ಇಲ್ಲವೇ ಎಂಬ ಪ್ರಶ್ನೆಯಿದೆ. ಒಂದೊಮ್ಮೆ ಸಿಸಿ ಕ್ಯಾಮರಾ ಇದ್ದಿದ್ದರೇ ಈ ವ್ಯಕ್ತಿ ಡ್ಯಾಂನಿಂದ ಕೆಳಗಡೆ ಬೀಳುವಾಗ ಕ್ಯಾಮರಾದಲ್ಲಿ ಸೆರೆಯಾಗಿರುತ್ತಿತ್ತು ಎನ್ನುತ್ತಾರೆ ಸಾರ್ವಜನಿಕರು. ಎಲ್ಲದಕ್ಕೂ ಬದ್ರತೆ ಎನ್ನು, ತಮ್ಮ ಜನವಸತಿ ಪ್ರದೇಶಕ್ಕೂ ಹೊರಗಿನವರನ್ನು ಬಿಡುವಾಗ ತಪಾಸಣೆ ಮಾಡುವ ನಿಗಮದವರು ಡ್ಯಾಂ ನಲ್ಲಿ ಸಿಸಿ ಕ್ಯಾಮರಾ ಅಳವಡಿಸಿರಲಿಲ್ಲವೇ ಎಂಬುದು ಪ್ರಶ್ನೆಯಾಗಿದೆ.