Site icon ಒಡನಾಡಿ

ಅಕ್ಷರ ಬೀಜ ಬಿತ್ತುವ ಕ್ರಿಯಾಶೀಲ ಶಿಕ್ಷಕ ರವೀಂದ್ರ ಭಟ್ ಸೂರಿ


ಶಾಲೆ ಪಾಂಡಿತ್ಯ ಸಂಪಾದನೆಯ ಸ್ಥಳವಷ್ಟೇ ಅಲ್ಲ. ವಿಶಾಲ ವಿಶ್ವಕ್ಕೆ ಅವಶ್ಯಕವಾದ ಶಾಶ್ವತ ಪ್ರಭಾವವುಳ್ಳ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಶಿಸ್ತಿನ ಶಿಕ್ಷಣ ನೀಡುವ ಸ್ಥಳ. ಶಿಕ್ಷಣ ತಜ್ಞರ ಈ ಮಾತು ವಿದ್ಯಾಮಂದಿರಕ್ಕೆ ಓರ್ವ ಶಿಸ್ತಿನ ಶಿಕ್ಷಕ ಅಗತ್ಯ ಎನ್ನುವುದನ್ನು ಸಾರಿ ಹೇಳುತ್ತದೆ. ಮಾನವತೆಯ ವಿಕಾಸದೆಡೆಗೆ ತುಡಿವ ಶಿಕ್ಷಕನೇ ಮಕ್ಕಳ ಮನಸ್ಸನ್ನು ಗೆಲ್ಲಬಲ್ಲ ಎಂಬುದಕ್ಕೆ ನಮ್ಮ ನಡುವಿನ ಶಿಕ್ಷಕ ರವೀಂದ್ರ ಭಟ್ ಸೂರಿಯವರೇ ಸಾಕ್ಷಿ.

ಕುಮಟಾ ತಾಲೂಕಿನ ಹೆಗಡೆಯಲ್ಲಿ ತಂದೆ ಕೃಷ್ಣಭಟ್ಟ, ತಾಯಿ ಸೀತಾಬಾಯಿ ಅವರಿಗೆ ಎರಡನೆ ಮಗನಾಗಿ ಜನಿಸಿದರು. ಬಾಲ್ಯದಿಂದಲೇ ಸದಾ ಒಂದಿಲ್ಲೊಂದು ಕಾರ್ಯಚಟುವಟಿಕೆಯಲ್ಲಿ ತೊಡಗಿಕೊಳ್ಳುವ ರವೀಂದ್ರ 1994ರಲ್ಲಿ ದೈಹಿಕ ಶಿಕ್ಷಕರಾಗಿ ಭಟ್ಕಳ ತಾಲೂಕಿನಲ್ಲಿ ಸೇವೆ ಪ್ರಾರಂಭಿಸಿದರು. ವೃತ್ತಿ ಬದುಕಿನ ಜೊತೆಗೆ ನಿರೂಪಣಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದರು . ಜಿಲ್ಲೆ,ರಾಜ್ಯಮಟ್ಟದ ವಿವಿಧ ಕಾರ್ಯಕ್ರಮಗಳಲ್ಲಿ ತಮ್ಮ ವಾಕ್ ಝರಿಯ ಮೂಲಕ ಜಿಲ್ಲೆಯಾದ್ಯಂತ ಪರಿಚಿತರಾದರು. ದೈಹಿಕ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾ ಶೈಕ್ಷಣಿಕ ,ಸಾಮಾಜಿಕ, ಸಾಹಿತ್ಯಕ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಹೆಗ್ಗಳಿಕೆ ಇವರದ್ದು. ಇವರ ಬಹುಮುಖ ಪ್ರತಿಭೆಯನ್ನು ಗುರುತಿಸಿ ಇಂಟರ್ನ್ಯಾಷನಲ್ ಗ್ಲೋಬಲ್ ಪೀಸ್ ಯೂನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪಡೆದ ಮೊದಲ ವ್ಯಕ್ತಿಯಾದರು.

ಇಂತಹ ಪ್ರಶಸ್ತಿಗೆ ಭಾಜನರಾದ ರವೀಂದ್ರ ಭಟ್ ರವರು ನಿರೂಪಣೆ, ಭಾವಜೀವಿ, ನಡೆಯಲೊಂದು ನುಡಿ ,ದೈಹಿಕ ಶಿಕ್ಷಕರ ಕೈಪಿಡಿ, ಭಾವಾಂತರಂಗ ಎಂಬ ಕೃತಿಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡರು.ಇನ್ನೂ ನಾಲ್ಕು ಕೃತಿಗಳು ಅಚ್ಚಿನಲ್ಲಿವೆ. ಸಾಮಾಜಿಕವಾಗಿ ಸದಾ ಒಂದಿಲ್ಲೊಂದು ಕಾರ್ಯಕ್ರಮ ಸಂಘಟಿಸುತ್ತ ಸರಕಾರಿ ನೌಕರರ ಸಂಘದ ಕುಮಟಾ ಶಾಖೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವುದು ಇವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅವರ ಅಧಿಕಾರಾವಧಿಯಲ್ಲಿ ಹಿಂದೆ ಬಾಕಿ ಉಳಿದ ಸುಮಾರು 48 ಲಕ್ಷ ರೂಪಾಯಿ ಮೆಡಿಕಲ್ ಬಿಲ್ಲನ್ನು ಪಾವತಿಸಿ ಗಮನಾರ್ಹ ಸಾಧನೆ ಮಾಡಿರುತ್ತಾರೆ. ಭಟ್ಕಳದಲ್ಲಿಯೂ ಎರಡು ಅವಧಿಗಳ ಕಾಲ ನೌಕರರ ಸಂಘದ ಸದಸ್ಯರಾಗಿ, ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅನುಭವ ಇವರಿಗಿದೆ.

ಸರ್ಕಾರಿ ಶಾಲೆಯನ್ನು ಮೇಲ್ದರ್ಜೆಗೆರಿಸಿ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಲನಗದ್ದೆ, ಬಾಡದಲ್ಲಿ ಸಮುದಾಯದ ಸಹಕಾರದೊಂದಿಗೆ 24 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಶಾಲಾ ವಾಚನಾಲಯ ,ವಿಜ್ಞಾನ ಪ್ರಯೋಗಾಲಯ, ನೂತನ ಕಂಪ್ಯೂಟರ್ ಕೊಠಡಿ ,ಯೋಗ ಸಭಾಭವನ ನಿರ್ಮಾಣ ಮಾಡುವಲ್ಲಿ ಇವರ ಶ್ರಮ ಅಡಗಿದೆ. ಶ್ರೇಷ್ಠ ಸಾಧನೆಗಳೆಲ್ಲವೂ ಬಲದಿಂದ ಸಾಧಿಸಲ್ಪಟ್ಟವುಗಳಲ್ಲ , ಬಿಡದ ಪ್ರಯತ್ನದಿಂದ ಎಂಬಂತೆ ನಿರಂತರ ಓದಿನ ಮೂಲಕ ನಿರ್ದಿಷ್ಟ ಗುರಿಯೆಡೆಗೆ ಸಾಗುವ ಛಲದೊಂದಿಗೆ ನಿರೂಪಣೆಗಷ್ಟೇ ಸೀಮಿತವಾಗಿರದ ದೈಹಿಕ ಯೋಗಿ ರವೀಂದ್ರ ಭಟ್ ರವರು ಯೋಗ ತರಬೇತಿ, ಮಾಸದ ಪ್ರತಿಭೆ, ಪ್ರಕೃತಿಯಲ್ಲಿ ಕಲಿಕೆ ,ತಿಂಗಳ ಹಕ್ಕಿಗಳ ಲೋಕ, ಮಾಸದ ಮಾತು ಮುಂತಾದ ನಾವಿನ್ಯಯುತ ಚಟುವಟಿಕೆಗಳನ್ನು ,ಸ್ಮಾರ್ಟ್ ಕ್ಲಾಸ್, ಡಿಜಿಟಲ್ ಕ್ಲಾಸ್ ರೂಮ್ ಅಳವಡಿಸಿ ಆಕರ್ಷಕ ಕಲಿಕಾ ವಾತಾವರಣ ನಿರ್ಮಿಸಿ ಮಕ್ಕಳ ಮನಸ್ಸನ್ನು ಗೆದ್ದರು.

ರಾಜ್ಯ ಸಂಪನ್ಮೂಲ ಶಿಕ್ಷಕರಾಗಿ ಸದಾ ಚಟುವಟಿಕೆಯಲ್ಲಿ ನಿರತರಾದರು. ಜನ ಮೆಚ್ಚಿದ ಶಿಕ್ಷಕ, ಕನ್ನಡ ರತ್ನ ಶಿಕ್ಷಕ,ಗುರು ಶ್ರೇಷ್ಠ ಪ್ರಶಸ್ತಿಗಳು ಇವರನ್ನು ಅರಸಿ ಬಂದವು. ರೂಪಕ, ನಾಟಕ, ಕಿರು ಚಿತ್ರಗಳಲ್ಲಿ ಅಭಿನಯಿಸಿ ಬಹುಮುಖ ಪ್ರತಿಭೆಗೆ ಸಾಕ್ಷಿಯಾದರು. ಓರ್ವ ದೈಹಿಕ ಶಿಕ್ಷಕರಾಗಿ ಶಿಕ್ಷಣ ಇಲಾಖೆಯ ವಿವಿಧ ಕ್ಷೇತ್ರಗಳಲ್ಲಿ ಕೈಯಾಡಿಸಿ ಸೈ ಎನಿಸಿಕೊಂಡರು. ಈ ವರ್ಷದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪುರಸ್ಕೃತರಾದರು. ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಪರಿವರ್ತಿಸಿ ಸಮಾಜದ ಪ್ರೀತಿಗೆ ಪಾತ್ರರಾದ ರವೀಂದ್ರ ಭಟ್ ರವರಿಗೆ ಇನ್ನಷ್ಟು ಪ್ರಶಸ್ತಿ ,ಪುರಸ್ಕಾರಗಳು ಅರಸಿ ಬರಲೆಂದು ಹಾರೈಸೋಣ.

-ಪಿ.ಆರ್.ನಾಯ್ಕ. ಹೊಳೆಗದ್ದೆ.ಕುಮಟಾ.


Exit mobile version