ಸದ್ಯ ಕೊಲ್ಕತ್ತಾದಲ್ಲಿ ಭಾರತದ ಕ್ರೀಡಾ ಪ್ರಾಧಿಕಾರದ ಸಹಾಯಕ ನಿರ್ದೇಶಕನಾಗಿ ಕ್ಲಾಸ್ ಒನ್ ಗ್ರೇಡ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ದಾಂಡೇಲಿಯ ಸಚಿನ ಹಿರೇಮಠ ಇದೀಗ ಕೇಂದ್ರ ಲೋಕ ಸೇವಾ ಆಯೋಗದ ಅತ್ಯುನ್ನತ ನಾಗರಿಕ ಸೇವೆಗಳ (ಯು.ಪಿ.ಎಸ್.ಸಿ.) ಪರೀಕ್ಷೆಯಲ್ಲಿ 213 ನೇ ರೆಂಕ್ ಪಡೆಯುವ ಮೂಲಕ ಜಿಲ್ಲೆ ಹಾಗೂ ರಾಜ್ಯದ ಗಮನ ಸೆಳೆದಿದ್ದಾರೆ.
ದಾಂಡೇಲಿಯ ಶರ್ಮಿಳಾ ನಾಯ್ಕ ಮತ್ತು ಶಿವಾನಂದ ಹಿರೇಮಠ ಶಿಕ್ಷಕ ದಂಪತಿಗಳ ಮಗ ಸಚಿನ ಹಿರೇಮಠ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿಯೂ ಅಗ್ರ ಶ್ರೇಯಾಂಕದಲ್ಲಿ ಉತ್ತೀಣರಾಗಿದ್ದರು. ದಾಂಡೇಲಿಯ ರೋಟರಿ ಕನ್ನಡ ಶಾಲೆಯಲ್ಲಿ ಕನ್ನಡ ಮಾದ್ಯಮದಲ್ಲಿಯೇ ಓದಿ ಸಾಧನೆಯ ಉತ್ತಂಗಕ್ಕೇರಿದ ಸಚಿನ ಹಿರೇಮಠ ಸಾಧನೆಗೆ ಯಾವುದೂ ಅಡ್ಡಿಯಾಗದು ಎನ್ನುತ್ತಾರೆ. ಕನ್ನಡ ಮಾದ್ಯಮದಲ್ಲಿ ಓದಿದವನೂ ಕೂಡಾ ಐ.ಎ.ಎಸ್.ಐ.ಪಿ.ಎಸ್. ಅಧಿಕಾರಿಯಾಗಬಹುದು, ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಉತ್ತೀಣನಾಗಬಹುದು ಎನ್ನುತ್ತಾರೆ. ಕೊಲ್ಕತ್ತಾಲ್ಲಿರುವ ಈ ಸಾಧಕನನ್ನುಒಡನಾಡಿ ದೂರವಾಣಿಯಲ್ಲಿ ಮಾತನಾಡಿಸಿದ್ದಾಗ…
- ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ 213 ರ್ಯಾಂಕ್ ಪಡೆದು ಉತ್ತೀಣರಾಗಿ ದಾಂಡೇಲಿಗೂ, ಜಿಲ್ಲೆಗೂ ಹೆಸರು ತಂದ ತಮಗೆ ಅಭಿನಂದನೆಗಳು.
- ಥ್ಯೆಂಕ್ಯು ಸರ್.
- ಕನ್ನಡ ಮಾದ್ಯಮದಲ್ಲೇ ಓದಿದ ತಮಗೆ ಈ ಸಾಧನೆ ಕಷ್ಟ ಎನಿಸಲಿಲ್ಲವೆ ?
- ಇಲ್ಲ, ಹಾಗೇನೆನಿಸಲಿಲ್ಲ. ನಮ್ಮಲ್ಲಿ ಸಾಧಿಸಬೇಕೆಬ ಆತ್ಮ ಛಲ, ಗುರಿಯಿದ್ದರೆ ಸಾಧನೆಗೆ ಯಾವ ಸಂಗತಿಯೂ ತೊಡಕಾಗುವುದಿಲ್ಲ. ನಾನು ದಾಂಡೇಲಿಯ ರೋಟರಿ ಶಾಲೆಯ ಕನ್ನಡ ಮಾದ್ಯಮದ ವಿದ್ಯಾರ್ಥಿ. ಎಸ್.ಎಸ್.ಎಲ್.ಸಿಯಲ್ಲಿ ಕನ್ನಡ ಮಾದ್ಯಮದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಬಂದಿದ್ದೆ. ಆಗ ಕನ್ನಡ ಅಭಿವೃದ್ದಿ ಪ್ರಾಧಿಕಾರದಿಂದ ನನಗೆ ರಾಜ್ಯಮಟ್ಟದ ಗೌರವವೂ ಸಿಕ್ಕಿತ್ತು. ನಾನು ಇಂಗ್ಲೀಷ್ ಭಾಷೆಯನ್ನೂ ಕಲಿಯುತ್ತಿದೆ. ಕನ್ನಡದ ಜೊತೆಗೆ ಇಂಗ್ಲೀಷ್ ಜ್ಞಾನವಿದ್ದರೆ ಯಾವುದೂ ಕಷ್ಟವಿಲ್ಲ. ಯಾವುದೇ ಉನ್ನತ ಸಾಧ£ಗೂ ಕನ್ನಡ ಮಾದ್ಯಮ ಅಡ್ಡಿಯಾಗದು. ಸಿವಿಲ್ ಸರ್ವೀಸ್ನ ಪರೀಕ್ಷೆಗಳಲ್ಲಿಯೂ ಕನ್ನಡಕ್ಕೆ ಸಾಕಷ್ಟು ಅವಕಾಶವಿದೆ.
- ಲೋಕಸೇವಾ ಆಯೋಗದ ಹಾಗೂ ಇತರೆ ಸ್ಪರ್ದಾತ್ಮಕ ಪರೀಕ್ಷೆ ಬರೆಯುವವರಿಗೆ ನಿಮ್ಮ ಸಲಹೆಯೇನು ?
- ಒಂದೇ ಪ್ರಯತ್ನಕ್ಕೆ ಎಲ್ಲರಿಂದಲೂ ಎಲ್ಲವೂ ಸಾದ್ಯವಾಗುವುದಿಲ್ಲ. ನಾನೂ ಕೂಡಾ ಯು.ಪಿ.ಎಸ್.ಸಿ. ಪರೀಕ್ಷೆಯನ್ನು ಮೂರನೆಯ ಬಾರಿ ಬರೆದು ಉತ್ತೀರ್ಣನಾಗಿದ್ದೇನೆ. ಕೆಲವರು ಯು.ಪಿ.ಎಸ್.ಸಿ ಪರೀಕ್ಷೆಯನ್ನು ಒಂದು ಎರಡು ಬಾರಿ ಬರೆದು, ಅದು ತಮ್ಮಿಂದ ಸಾದ್ಯವಿಲ್ಲ ಎನ್ನುತ್ತ ಹತಾಶರಾಗುತ್ತಾರೆ. ಹಾಗೆ ಹಶಾಗಾಗಬಾರದು. ಮರಳಿ ಪ್ರಯತ್ನ ಮಾಡಿದರೆ ಯಶಸ್ಸು ಖಂಡಿತಾ ಸಾದ್ಯ. ಯಾವುದೇ ಪರೀಕ್ಷೆಯಿದ್ದರೂ ಅದಕ್ಕೆ ಕಾಠಿಣ ಪರಿಶ್ರತಮ ಕಠಿಣ ಅಧ್ಯಯನ, ಸಾಕಷ್ಟು ಜ್ಞಾನ ಸಂಗ್ರಹದ ಅಗತ್ಯವಿದೆ. ಅದು ಇಂದು ಎಲ್ಲ ತಂತ್ರಜ್ಞನ ಮೂಲಗಳಿಂದ ಸುಲಭವಾಗಿ ದೊರೆಯುತ್ತದೆ.
- ಯು.ಪಿ.ಎಸ್.ಸಿ ಉತ್ತೀರ್ಣರಾಗಿರುವ ನೀವು ದಾಂಡೇಲಿಯ ಹೆಮ್ಮೆ. ಏನಂತೀರಿ ದಾಂಡೇಲಿಗರಿಗೆ ?
ಸಚಿನ: ದಾಂಡೇಲಿ ನನ್ನ ತವರು ನೆಲ. ದಾಂಡೇಲಿಯ, ದಾಂಡೇಲಿಗರ ಋಣವನ್ನು ನಾನೆಂದೂ ಮರೆಯಲಾರೆ. ದಾಂಡೇಲಿಯಲ್ಲಿ ಸ್ಪರ್ದಾತ್ಮಕ ಪರೀಕ್ಷೆ ಎದುರಿಸಲು ಅವಶ್ಯವಿರುವ ಸೌಕರ್ಯಗಳ ಕೊರತೆಯಿದೆ ಎನಿಸುತ್ತದೆ. ಅದು ಇಲ್ಲಿ ಸಾದ್ಯವಾಗಬೇಕು. ನಮ್ಮ ದಾಂಡೇಲಿ ಮಕ್ಕಳು ಹೆಚ್ಚೆಚು ಸ್ಪರ್ದಾತ್ಮಕ ಪರೀಕ್ಷೆ ಬರೆಯುವಂತಾಗಬೇಕು. ನಾನಂತೂ ನನ್ನಿಂದ ನನ್ನ ದಾಂಡೇಲಿಯ ಪ್ರತಿಭೆಗಳಿಗೆ ಸಹಾಯ ಮಾಡಲು ಸಿದ್ದನಿದ್ದೇನೆ.
- ನಿಮ್ಮ ಸಾಧನೆಯ ಬಗ್ಗೆ ನಿಮಗೇನೆನಿಸುತ್ತಿದೆ ಮುಂದೇನಾಗಬೇಕೆಂದುಕೊಂಡಿದ್ದೀರಿ?
ಸಚಿನ: ಖುಶಿಯಾಗುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಈ ಸಾಧನೆಗಾಗಿ ನಿರಂತರ ಪ್ರಯತ್ನದಲ್ಲಿದ್ದೆ. ಮೂರನೆ ಬಾರಿಯ ಪ್ರಯತ್ನದಲ್ಲಿ ಸಾದ್ಯವಾಗಿದೆ. ಮನಸ್ಸು ನಿರಾಳವಾಗಿದೆ. ಗುರಿ ಸಾದೀಸಿದ ತೃಪ್ತಿಯೆನಿಸುತ್ತಿದೆ. ಮುಂದೆ ಮಾಡಬೇಕಾಗಿರುವುದು ಇನ್ನೂ ಬಹಳ ಇದೆ. ಐ.ಎ.ಎಸ್. ಆಗುವ ಹಂಬಲವಿದೆ. ಐ.ಆರ್.ಎಸ್.ಗೂ ಅವಕಾಶವಿದೆ. ನೋಡೋಣ. ಪ್ರಯತ್ನವಂತೂ ಇದ್ದೇ ಇದೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ದೇಶಕ್ಕಾಗಿ ನನ್ನಿಂದಾದ ಕೊಡುಗೆ ನೀಡಲೇ ಬೇಕೆಂಬ ಮಹತ್ವಾಕಾಂಕ್ಷೆಯಿದೆ. ಜೊತೆಗೆ ಇನ್ನು ಯು.ಪಿ.ಎಸ್.ಸಿ. ಬರೆಯುವಂತಹವರ ಅನುಕೂಲಕ್ಕೆಂದು ನನ್ನದೇ ಆದ ಬ್ಲಾಗ್ ಮಾಡಿ ಅಲ್ಲಿ ನಮ್ಮ ಪ್ರಯತ್ನ ಹಾಗೂ ಓದಿನ ಮಾಹಿತಿ ನೀಡಬೇಕೆಂದುಕೊಂಡಿರುವೆ. ಯಾವ ವಿದ್ಯಾರ್ಥಿಗಳೂ ಸಹ ಯಾವುದೂ ತಮ್ಮಿಂದ ಸಾದ್ಯವಿಲ್ಲ ಅಂದುಕೊಳ್ಳಬಾರದು. ಗುರಿಯಿದ್ದರೆ, ಪ್ರಯತ್ನವಿದ್ದರೆ ಎಲ್ಲವೂ ಸಾದ್ಯ. ನನ್ನ ಈ ಸಾಧನೆಗೆ ಕಾರಣರಾದ ನನ್ನ ಅಪ್ಪ, ಅಮ್ಮ, ಸಹೋದರಿ, ನನಗೆ ಶಿಕ್ಷಣ ನೀಡಿದ ಎಲ್ಲ ಗುರು ಹಿರಿಯನ್ನು ಸ್ಮರಿಸುವೆ.
- ಥೆಂಕ್ಯು ಸಚಿನ್. ನಿಮ್ಮ ಸಾಧನೆಯ ಪಥ ಹೀಗೆಯೇ ಮುಂದುವರೆಯಲಿ.
- ಥೆಂಕ್ಯು ಒಡನಾಡಿ ಬಳಗಕ್ಕೆ.
ಸಂದರ್ಶನ: ಬಿ.ಎನ್. ವಾಸರೆ