Site icon ಒಡನಾಡಿ

ಮರಳಿ ಬಂದ ಲಕೋಟೆ…

ಆ ಕ್ಷಣ ನನಗಾದ ಆನಂದ ಅಷ್ಟಿಷ್ಟಲ್ಲ. ಆ ಘಳಿಗೆ ನನ್ನನು ನಾನೆ ನಂಬದಾದೆ. ಅದು ನನ್ನ ಕಥೆಯೇ..?ನಾ ಬರೆದು ಕಳಿಸಿದ ಕಥೆಯೇ… ? ಕಣ್ಣರಳಿಸಿ ನೋಡಿದೆ. ನಿಸ್ಸಂದೇಹ, ನನ್ನ ಕಥೆಯೇ ವಾರಪತ್ರಿಕೆ ಯೊಂದರಲ್ಲಿ ಪ್ರಕಟಗೊಂಡಿತ್ತು. ಮತ್ತೆ ಮತ್ತೆ ನೋಡಿದೆ. ಅನುಮಾನವೆ ಇರಲಿಲ್ಲಾ. ಸುತ್ತಲೂ ದೃಷ್ಟಿ ಹಾಯಿಸಿದೆ, ಎಲ್ಲರೂ ಓದುವುದರಲ್ಲಿ ತಲ್ಲಿನರಾಗಿದ್ದರು. ಆದರೆ ಆ ಕೊನೆಯಲ್ಲಿ ಕುಳಿತಿದ್ದ ಒಬ್ಬ ನನ್ನನು ನೋಡುತ್ತಿದ್ದ . ಬಹುಶಃ ಆತ ಕಥೆ ಓದಿರಬೇಕು. ಕಥೆ ಚೆನ್ನಾಗಿದೆ ಎನ್ನುವಂತೆ ಇತ್ತು. ಆತ ನೋಡುವ ರೀತಿ. ನನಗಾದ ಸಂತೋಷಕ್ಕೆ ಹೆಚ್ಚು ಸಮಯ ಗ್ರಂಥಾಲಯದಲ್ಲಿ ಕಳೆಯದಾಗದೆ ಆತುರದಿಂದ ಪತ್ರಿಕೆಯೊಂದನ್ನು ಕೊಂಡು ಕೊಂಡು ಮನೆಯತ್ತ ಧಾವಿಸಿದೆ. ಅವಳು ಅಡುಗೆ ಮಾಡುವುದರಲ್ಲಿ ತಲ್ಲೀನಳಾಗಿದ್ದಳು. ಲೇ..ಬಾರೆ ಇಲ್ಲಿ, ನೋಡು ಬಾ , ʼಅದೇನು ಕಥೆ ಕವನ ಬರಿತೀರೊ ಆದೇವರಿಗೆ ಗೊತ್ತು, ಯಾರ್ಯಾರೋ ಏನೇನೊ ಬರೀತಾರೆ ,ಅವರೆದೆಲ್ಲಾ ಬರುತ್ತೆ ನಿಮ್ದು ಮಾತ್ರ ಒಂದು ಪೇಪರನ್ಯಾಗ ಬಂದಿಲ್ಲಾ ಅಂತಾ ತಮಾಷೆ ಮಾಡ್ತಿದ್ದೀಯಲ್ಲಾ. ಬಾ ಇಲ್ಲಿ ನೋಡುʼ ಎಂದು ಪತ್ರಿಕೆ ಮುಂದೆ ಹಿಡಿದಾಗ ʼಹೌದಲ್ರೀ,ನಾನೇನೋ.. ಅಂದುಕೊಂಡಿದ್ದೆʼ ಎಂದು ಆಶ್ಚರ್ಯ ವ್ಯಕ್ತಪಡಿಸಿದಳು ಮುಖ ಅರಳಿಸಿ. ನನ್ನ ಆನಂದಕ್ಕೆ ಪಾರವೇ ಇರಲಿಲ್ಲಾ.

ಕಟ್.. ಕಟ್.. ಎನ್ನುವ ಬುದ್ದಿಗೆ ಕಣ್ಬಿಟ್ಟು ನೋಡಿದಾಗ, ಪೋಸ್ಟ್ ಮ್ಯಾನ್ ನಿಂತಿದ್ದ ಬಾಗಿಲಿಲ್ಲಿ. ಎದ್ದು ಬಳಿ ಹೋದೆ. ಲಕೋಟಿಯೊಂದು ಕೈ ಗಿಟ್ಟು ಹೊರಟುಹೋದ. ಕಳಿಸಿದ ಕಥೆ ಮರಳಿ ಬಂದಿತ್ತು.

ಮಧ್ಯಾನ್ಹದ ನಿದ್ದೆಯ ಮಂಪರು ಬಿಟ್ಟಿತ್ತು.

ಮುರ್ತುಜಾಹುಸೇನ್ ಆನೆಹೊಸುರ.ದಾಂಡೇಲಿ.
Exit mobile version