Site icon ಒಡನಾಡಿ

ಜಿಲ್ಲೆಯಲ್ಲಿ ಕೊರೊನಾ ಸಮುದಾಯದೊಳಗೆ ಹರಡಿಲ್ಲ: ಅನಗತ್ಯ ಪ್ರಚಾರ ಒಪ್ಪುವುದಿಲ್ಲ- ಡಿ.ಸಿ.

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ನಿಜ. ಈ ಸಂಖ್ಯೆಗಳ ಆಧಾರದಲ್ಲಿ ಜನ ಆತಂಕಗೊಳ್ಳುವ ಅಗತ್ಯವಿಲ್ಲ. ಕೊರೊನಾ ಈಗಾಗಲೇ ಸಮುದಾಯದೊಳಗೆ ಹರಡಿದೆ ಎಂದು ಹೇಳುವುದನ್ನು ಹಾಗೂ ಅದಕ್ಕೆ ಸಂಬಂಧಿಸಿ ಆಗುವ ಅನಗತ್ಯ ಪ್ರಚಾರಗಳನ್ನು ಒಪ್ಪುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ತಿಳಿಸಿದರು.

ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಮಾತನಾಡುತ್ತಿರುವುದು


ದಾಂಡೇಲಿ ನಗರಸಭೆಯಲ್ಲಿ ಹಳಿಯಾಳ-ದಾಂಡೇಲಿ-ಜೋಯಿಡಾ ಅಧಿಕಾರಿಗಳ ಸಭೆ ನಡೆಸಿದ ನಂತರದಲ್ಲಿ ನಡಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದೆಯಾದರೂ ಗುಣಮುಖರಾದವರ ಸಂಖ್ಯೆಯೂ ಅಷ್ಟೇ ಗಣನೀಯವಾಗಿದೆ. ಪರೀಕ್ಷೆಗಳಗಾದವರಲ್ಲಿ ಶೇ. 86 ಕ್ಕೂ ಹೆಚ್ಚಿನ ಜನರಲ್ಲಿ ಯಾವುದೇ ರೋಗ ಲಕ್ಷಣ ಇರುವುದಿಲ್ಲ. ಜಿಲ್ಲೆಯ 16 ಲಕ್ಷ ಜನರಲ್ಲಿ 800 ಜನರಿಗೆ ಕೊರೊನಾ ಸೋಂಕು ದೃಢವಾಗಿದೆಯಾದರೂ, ಜಿಲ್ಲೆಯಲ್ಲಿ ಈ ಸಮಯದಲ್ಲಿ ಜ್ವರ, ನೆಗಡಿಯಿಂದ ಇದಕ್ಕೂ ಹೆಚ್ಚಿನ ಜನ ಬಳಲಿದ್ದಾರೆ.


ಜಿಲ್ಲಾಡಳಿತದ ಜೊತೆಗೆ ಮಾದ್ಯಮದವರೂ ಸೇರಿದಂತೆ ಇಡೀ ಸಮುದಾಯ ಜನರಲ್ಲಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸುವ ಕೆಲಸ ಮಾಡಬೇಕು. ಕೊರೊನಾ ಪಾಸಿಟಿವ್ ಅಂದಾಕ್ಷಣ ಅವರನ್ನು ಸಂಶಯದಿಂದ ನೋಡುವ ಹಾಗಿಲ್ಲ. ಕೊರೊನಾ ಸೋಂಕಿತರು ಮೃತರಾದಲ್ಲಿ ಅವರ ಅಂತ್ಯ ಸಂಸ್ಕಾರವನ್ನು ಆಡಳಿತವೇ ಮಾಡಬೇಕೆಂದಿಲ್ಲ. ಮನೆಯವರು ತಮಗೆ ಸಂಬಂದವೇ ಇಲ್ಲ ಅನ್ನುವಂತೆಯೂ ಇಲ್ಲ. ಶವ ಸಂಸ್ಕಾರವನ್ನು ಗೌರವದಿಂದಲೆ ಮಾಡಬೇಕು. ಪಾಪಪ್ರಜ್ಞೆ ರೋಗಿಯಲ್ಲಿ ಬಾರದಂತೆ ಪ್ರತಿಯೊಬ್ಬರೂ ನೋಡಿಕೊಳ್ಳಬೇಕು ಎಂದರು.
ನಾವು ಎಲ್ಲದರಲ್ಲೂ ಸರಿಯಾಗಿದ್ದಿವಿ ಅಂತಲ್ಲ. ಇದು ಎಂತಹ ಕಷ್ಠದ ಸಮಯ ಎನ್ನುವುದು ಎಲ್ಲರಿಗೂ ತಿಳಿದಿದೆ. ಪಾಸಿಟಿವ್ ಬಂದ ಮೇಲೆ ಆಸ್ಪತ್ರೆಗೆ ದಾಖಲಿಸಲು, ನಂತರ ಡಿಸ್‍ಚಾರ್ಜ ಆಗಲು ವಿಳಂಬ ಆಗುತ್ತಿದೆ ಎಂದು ಆಕ್ಷೇಪಿಸುತ್ತಾರೆ. ಅದೇ ಕೆಲ ಮಾದ್ಯಮಗಳಲ್ಲಿ ದೊಡ್ಡದಾಗಿ ಪ್ರಕಟವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು ನಾವು ಈ ಎಲ್ಲ ಪ್ರಕ್ರಿಯೆಗಳನ್ನು ಸರಕಾರದ ಮಾನದಂಡದ ಪ್ರಕಾರವೇ ಮಾಡುತ್ತೇವೆ. ಆಸ್ಪತ್ರೆ, ಕ್ವಾರೆಂಟೈನ್ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುವವರ ಬಗ್ಗೆಯೂ ಜನ ವಿಚಾರ ಮಾಡಬೇಕು. ಯಾರೂ ಸಹ ನಮ್ಮ ಅಧಿಕಾರಿಗಳ ಸ್ಥೈರ್ಯವನ್ನು ಕುಂದಿಸುವ ಕೆಲಸ ಮಾಡಬಾರದು. ದಾಂಡೇಲಿಯಲ್ಲಿಯೂ ಸಹ ತಹಶೀಲ್ದಾರ ನೇತೃತ್ವಲ್ಲಿ ಎಲ್ಲ ಸ್ಥಳೀಯ ಅಧಿಕಾರಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ. ಉತ್ತಮವಾದ ಕೋವಿಡ್ ಕೇರ್ ಸೆಂಟರ್ ಮಾಡಿದ್ದಾರೆ. ಜನ ಸಹ ಬೆಂಬಲಿಸಬೇಕೆಂದರು.

ಮನೆಯಲ್ಲಿಯೂ ಚಿಕಿತ್ಸೆ: ಕೊರೊನಾ ಬಂದರೆ ಅಗತ್ಯ ರಕ್ಷಣೆಗಳೊಂದಿಗೆ ಮನೆಯಲ್ಲಿಯೂ ಚಿಕಿತ್ಸೆ ಪಡೆಯಬಹುದು. ಅವರಲ್ಲಿ ಎಲ್ಲ ರೀತಿಯ ಸುಕ್ಷತೆಗಳಿದ್ದರೆ, ನೋಡಿಕೊಳ್ಳುವವರಿದ್ದರೆ ನಾವು ಅದಕ್ಕೂ ಅವಕಾಶ ಮಾಡಿಕೊಡುತ್ತೇವೆ. ಜೊತೆಗೆ ಅವರಿಷ್ಠ ಪಟ್ಟ ಖಾಸಗಿ ಆಸ್ಪತ್ರೆಯಲ್ಲಿಯೂ ಸಹ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಯಾರೂ ಸಹ ಕೊರೊನೊ ಸೋಂಕಿನ ಲಕ್ಷಣವಿದ್ದವರು ಸತ್ಯ ಮುಚ್ಚಡಬಾರದು. ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಬೇಕೆಂದರು.

ಪ್ರತೀ ಬೂತ್‍ಗಳಲ್ಲಿ ಯುವ ಪಡೆ :
ಕೊರೊನಾ ನಿಂತ್ರಿಸುವುದಕ್ಕಾಗಿ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ನೇತೃತ್ವದಲ್ಲಿ ಪ್ರತೀ ಭೂತ್ ಮಟ್ಟದಲ್ಲಿ ‘ ನಮ್ಮ ಆರೋಗ್ಯ, ನಮ್ಮ ರಕ್ಷಣೆ’ ಘೋಷ ವಾಖ್ಯದಲ್ಲಿ ‘ಯುವ ಪಡೆ’ಯೊಂದನ್ನು ರಚಿಸಿ ವ್ಯಾಪಕ ಆಂದೋಲನ ನಡೆಸಲಾಗುವುದು. ಕೊರೊನಾ ಬಗ್ಗೆ ಮುಂಜಾಗೃತೆ ಹಾಗೂ ಅರಿವು ಮೂಡಿಸುವ ಕೆಲಸ ಮಾಡಲಾಗುವುದು.

ಸರಕಾರಿ ನೌಕರರ ಬಳಕೆ: ಉಪ ವಿಭಾಗಾಧಿಕಾರಿಗಳ ನೇತೃತ್ವÀದಲ್ಲಿ ಆಯಾ ಪ್ರದೇಶದಲ್ಲಿ ಇನ್ನು ಮುಂದೆ ಕೊರೊನಾ ಕೆಲಸಕ್ಕೆ ವಿವಿಧ ಸರಕಾರಿ ಸಿಬ್ಬಂದಿಗಳನ್ನೂ ಬಳಸಿಕೊಳ್ಳಲಾಗುವುದು. ಈಗ ಕೆಲ ಸರಕಾರಿ ನೌಕರರು ಕೊರೊನಾ ಕಾರಣದಿಂದ ಖಾಲಿಯಿದ್ದು, ಆತಹವರನ್ನು ಬಳಸಿಕೊಂಡು ಒಂದು ತಂಡವಾಗಿ ಕಾರ್ಯ ನಿರ್ವಹಿಸಲಾಗುವುದು. ನಾವು ಬಳಲಿದ್ದೇವೆ, ಅಥವಾ ನಮ್ಮಿಂದ ಆಗುವುದಿಲ್ಲ ಎನ್ನುವುದು ಯುದ್ದ ಭೂಮಿಯಲ್ಲಿ ಒಬ್ಬ ಯೋಧನ ಉತ್ತರವಲ್ಲ. ನಮ್ಮದೇನಿದ್ದರೂ ಗೆಲ್ಲುವ ಹೋರಾಟ ಎಂದು ಜಿಲ್ಲಾಧಿಕಾರಿ ಹರೀಶಕುಮಾರ ಮಾರ್ಮಿಕವಾಗಿ ನುಡಿದರು.

ಕಾಗದ ಕಂಪನಿಗೆ ನಿರ್ದೇಶನ: ಕಾಗದ ಕಂಪನಿಯೊಳಗೆ ಕೆಲ ಪಾಸಿಟಿವ್ ಪ್ರಕರಣ ಬಂದಿರುವ ಸಂಬಂಧ ಅಧಿಕಾರಿಗಳನ್ನು ಸಭೆಗೆ ಕರೆಯಿಸಿ ಅವಶ್ಯ ಮುಂಜಾಗರೂಕತೆ ಕೈಗೊಳ್ಳಲು ನಿರ್ದೇಶನ ನೀಡಿದ್ದೇವೆ. ಕಂಪನಿಯವರೇ ಸ್ಲೆಬ್ ಟೆಸ್ಟ್‍ಗೆ ವ್ಯವಸ್ಥೆ ಮಾಡಿಕೊಳ್ಳುವಂತೆ, ಸೋಂಕಿತರು ಹಾಗೂ ಅವರ ಸಂಪರ್ಕದಲ್ಲಿದ್ದವರಿಗೆ ಕಂಪನಿಯಿಂದಲೇ ಕ್ವಾರೆಂಟೈನ್ ವ್ಯವಸ್ಥೆ ಮಾಡುವಂತೆ, ಕಂಪನಿಯೊಳಗಡೆ ಕಾರ್ಮಿಕರ ಶೀತ, ಜ್ವರ ತಪಾಸಣೆ ಹಾಗೂ ಇತರೆ ಮುಂಜಾಗೃತಾ ಕ್ರಮ ಕೂಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಕಾರ್ಮಿಕರ ಸುರಕ್ಷತೆ ಕಾದುಕೊಳ್ಳುವಂತೆ ಹೇಳಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಉಪ ವಿಭಾಗಾಧಿಕಾರಿ ಪ್ರಿಯಾಂಗಾ ಎಮ್. ದಾಂಡೇಲಿ ತಹಶಿಲ್ದಾರ್ ಶೈಲೇಶ ಪರಮಾನಂದ, ಪೌರಾಯುಕ್ತ ಡಾ. ಸಯ್ಯದ್ ಜಾಹೇದ್ ಅಲಿ, ಹಳಿಯಾಳ ತಹಶೀಲ್ದಾರ ವಿದ್ಯಾಧರ ಗುಳಗುಳಿ, ಜೋಯಿಡಾ ತಹಶೀಲ್ದಾರ ಸಂಜಯ ಕಾಂಬಳೆ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಪರಶುರಾಮ ಗಸ್ತಿ ಸಿ.ಪಿ.ಐ ಪ್ರಭು ಗಂಗನಳ್ಳಿ, ಜೋಯಿಡಾ ಸಿ.ಪಿ.ಐ. ಹುಲ್ಲಣ್ಣವರ, ಹಳಿಯಾಳ ಸಿ.ಪಿ.ಐ. ಮೋತಿಲಾಲ ಪವಾರ್ ಮುಂತಾದವರಿದ್ದರು.


Exit mobile version