Site icon ಒಡನಾಡಿ

ಕೊರೊನಾ ಸೋಂಕಿಗೊಳಗಾಗಿ ಗುಣಮುಖರಾದ ನ್ಯಾಯವಾದಿ ಎಚ್.ಎಸ್.‌ ಕುಲಕರ್ಣಿಯವರು ಏನಂತಾರೆ…!!

“ಕೊರೊನಾ ಸೋಂಕು, ಪಾಸಿಟಿವ್ ಪ್ರಕರಣ, ಪಿಪಿಟಿ ಕಿಟ್ ಎನ್ನುತ್ತ ಜನರನ್ನು ಇದ್ದಕ್ಕಿಂತ ಹೆಚ್ಚಾಗಿ ಭಯಭೀತಗೊಳಿಸಲಾಗುತ್ತಿದೆ. ಒಬ್ಬರಿಂದ ಒಬ್ಬರಿಗೆ ಹರಡುವ ಅಪಾಯವೊಂದನ್ನು ಬಿಟ್ಟರೆ ಕೊರೊನಾ ಅಷ್ಟೊಂದು ಭೀಕರವಾಗಿಲ್ಲ. ಕೊರೊನಾ ಪಾಸಿಟಿವ್ ಬಂದಿದೆ ಎಂದು ಯಾರೂ ಕೂಡಾ ದೃತಿಗೆಡಬೇಕಾಗಿಲ್ಲ. ಇದೊಂದು ವಾಸಿಯಾಗಬಲ್ಲಂತಹ ಕಾಯಿಲೆಯಾಗಿದೆ…”
ಹೀಗೆಂದವರು ಯಾರೋ ವೈದ್ಯರೋ, ಅಥವಾ ತಜ್ಞರೋ ಅಲ್ಲ. ಇದು ಸ್ವತಃ ಕೊರೊನಾ ಸೋಂಕಿಗೊಳಗಾಗಿ, ಚಿಕಿತ್ಸೆ ಪಡೆದು, ಇದೀಗ ಗುಣಮುಖರಾಗಿ ಮನೆ ಸೇರಿರುವ ದಾಂಡೇಲಿಯ ನ್ಯಾಯವಾದಿ ಎಚ್. ಕುಲಕರ್ಣಿಯವರ ಅನುಭವದ ನುಡಿಯಾಗಿದೆ.

ನ್ಯಾಯವಾದಿ ಹನ್ಮಂತ ಕುಲಕರ್ಣಿಯವರು ಯಾವುದೋ ಖಾಸಗಿ ಕಾರ್ಯಕ್ರಮಕ್ಕೆ ಹುಬ್ಬಳ್ಳಿಗೆ ಹೋಗಿ ಬಂದಿದ್ದರು. ನಂತರದಲ್ಲಿ ಅವರಲ್ಲಿ ಜ್ವರ ಕಾಣಿಸಿಕೊಂಡಿತ್ತು. ಖಾಸಗಿ ವೈದ್ಯರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜ್ವರ ಉಲ್ಬಣಗೊಂಡಾಗ ಅವರಲ್ಲಿ ನ್ಯುಮೋನಿಯಾ ಅಂಶ ಕೂಡಾ ತಿಳಿದು ಬಂತು. ಅವರನ್ನು ಧಾರವಾಡದ ಎಸ್.ಡಿ.,ಎಮ್..ಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ದರೆ, ಕೊರೊನಾ ಕಾರಣಕ್ಕೆ ಅವರನ್ನು ದಾಖಲಿಸಿಕೊಳ್ಳಲಿಲ್ಲ. ನಂತರ ಅನಿವಾರ್ಯವಾಗಿ ಅವರನ್ನು ಹುಬ್ಬಳ್ಳಿಯ ಕೆ.ಎಮ್.ಸಿ. ಗೆ ದಾಖಲಿಸಲಾಯಿತು. ಆರಂಭದಲ್ಲಿ ಇವರಿಗೆ ಜ್ವರದ ಚಿಕಿತ್ಸೆ ನೀಡಲಾಗಿತ್ತು. ಗಂಟಲು ದ್ರವದ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದ ತಕ್ಷಣ ಇವರನ್ನು ಕಿಮ್ಸ್‍ನ ಕೊರೊನಾ ವಾರ್ಡಗೆ ಸ್ಥಳಾಂತರಿಸಲಾಗಿತ್ತು. ಆಗ ತಮಗೆ ಪಾಸಿಟಿವ್ ಬಂದಿರುವುದನ್ನ ಅವರೇ ದೂರವಾಣಿ ಮೂಲಕ ತಮ್ಮ ಆಪ್ತರಿಗೆ ತಿಳಿಸಿದ್ದರು.
ನಂತರ ಕೊರೊನಾ ಸೋಂಕಿತನಾಗಿ ಅವರ ಅನುಭವದಲ್ಲಿಯೇ ಹೇಳುವುದಾದರೆ, ಕಿಮ್ಸ್‍ನಲ್ಲಿ ಕೊರೊನಾ ವಾರ್ಡಲ್ಲಿ ಚಿಕಿತ್ಸೆ ಪಡೆಯುವಾಗ ಅವರಿಗೆ ಯಾವ ಸಮಸ್ಯೆಯೂ ಆಗಿಲ್ಲ. ಶುಚಿಯಾದ ವಾತಾವರಣ. ಬಿಸಿ ನೀರಿನ ಸೇವನೆ, ನಿತ್ಯ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಆಕ್ಸಿಜನ್‍ಗಳ ಪರೀಕ್ಷೆ. ವಿಟಾಮಿನ್ ಹಾಗೂ ಜಿಂಕೋ ಮಾತ್ರೆ, ಜ್ವರದ ಮಾತ್ರೆಗಳನ್ನು ಬಿಟ್ಟರೆ ಬೇರೆ ಹೆಚ್ಚಿನ ಚಿಕಿತ್ಸೆಯಾಗಲೀ, ಚುಚ್ಚು ಮದ್ದಾಗಲೀ ಇರಲಿಲ್ಲ. ದಿನಕ್ಕೊಂದು ರೀತಿಯಲ್ಲಿ ರುಚಿಯಾದ ಊಟ, ಉಪಹಾರ, ಪೌಷ್ಠಿಕಾಂಶದ ವಿವಿಧ ರೀತಿಯ ಹಣ್ಣುಗಳು. ಊಟೋಪಹಾರ ನೀಡುವವರ ಅಪ್ಯಾಯಮಾನತೆ. ನರ್ಸಗಳ ಮಮತೆ, ಕಾಳಜಿ… ಇವೆಲ್ಲವುಗಳಿಂದ ನಮಗೆ ಯಾವುದೇ ರೋಗ ಅತವಾ ನಾವು ರೋಗಿಯೆಂಬ ವಿಚಾರವೇ ಬರುತ್ತಿರಲಿಲ್ಲ.
ನಮ್ಮ ವಾರ್ಡಲ್ಲಿ ಆರು ಜನರಿದ್ದು ಎಲ್ಲರೂ ಖುಶಿ ಖುಶಿಯಾಗಿ ಲವಲವಿಕೆಯಿಂದ ಇರುತ್ತಿದ್ದೆವು. ಕಷ್ಠ, ಸುಖ, ಅದೂ ಇದು ಹರಟೆಗಳಲ್ಲಿ, ಮೊಬೈಲ್‍ಗಳಲ್ಲಿ ಸಮಯ ಕಳೆಯುತ್ತಿದ್ದೆವು. ಹಾಗಾಗಿ ಈ ಕೊರೊನಾ ಪಾಸಿಟಿವ್ ಬಂದವರು ಯಾವ ಆತಂಕವನ್ನೂ ಪಡಬೇಕಾಗಿಲ್ಲ. (ನಮ್ಮಿಂದ ಬೇರಯವರಿಗೆ ಹರಡುತ್ತಿದೆಯಲ್ಲಾ ಎಂಬ ಬೇಸರ ಮಾತ್ರ ನಮಗಿದೆ) ಇದು ಗುಣಮುಖ ಹೊಂದುವಂತಹ ಒಂದು ಸಾಮಾನ್ಯ ಖಾಯಿಲೆಯಾಗಿದೆ. ಯಾರೂ ಕೂಡಾ ಹೆದರಬೇಕಾಗಿಲ್ಲ ಆದರೆ ಇದು ಒಬ್ಬರಿಂದ ಒಬ್ಬರಿಗೆ ಹರುಡುವುದೊಂದೇ ಅಪಾಯಕಾರಿಯಾಗಿದೆ ಎನ್ನುತ್ತಾರೆ ನ್ಯಾಯವಾದಿ ಹನ್ಮಂತ ಕುಲಕರ್ಣಿ.‌

ಹರಡುವ ಭಯದಲ್ಲಿ ಆಸ್ಪತ್ರೆಗೆ
ಕೊರೊನಾ ಇದು ವಾಸಿಯಾಗುವ ಖಾಯಿಲೆ. ಆಸ್ಪತ್ರೆಯಲ್ಲಿಯೂ ಅಂತಹ ದೊಡ್ಡ ಚಿಕಿತ್ಸೆಯಿರುವುದಿಲ್ಲ. ಆದರೆ ಪಾಸಿಟಿವ್ ಆದವ ಮನೆಯಲ್ಲೇ ಇದ್ದರೆ ಅಲ್ಲಿ ಅವಶ್ಯ ರಕ್ಷಣಾ ವ್ಯವಸ್ಥೆಗಳಿಲ್ಲದಿರುವುದರಿಂದ ಅದು ಇನ್ನೊಬ್ಬರಿಗೆ ಹರಡುವ ಆತಂಕವಿರುತ್ತದೆ. ಕೊರೊನಾ ವೈರಾಣು ರೋಗಕ್ಕಿಂತ ಹರಡುವ ಭೀತಿಯೇ ಹೆಚ್ಚಾಗಿದ್ದುದರಿಂದ ಆಸ್ಪತ್ರೆಯಲ್ಲಿರಬೇಕಾಗುತ್ತದೆ ಎಂದಿರುವ ಕುಲಕರ್ಣಿಯವರು ದಯವಿಟ್ಟು ಎಲ್ಲರೂ ಆರೋಗ್ಯ ಇಲಾಖೆ ಹೇಳುವ ಮುಂಜಾಗೃತಾ ನಿಯಮ ಪಾಲಿಸಬೇಕು. ಕೊರೊನಾ ಸೋಂಕಿತನಾಗಿ ಗುಣಮುಖನಾಗಿರುವ ನಾನು ನಾಲ್ಕು ಜನರಿಗೆ ಇದರ ವಾಸ್ತವ ತಿಳಿಯಲೆಂದು, ಹಾಗೂ ಜನರು ದೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಲಿ ಎಂದು ಈ ವಿವರ ನೀಡಿದ್ದೇನೆ ಎಂದಿದ್ದಾರೆ.

Exit mobile version