ರಾಜಧಾನ್ಯಾಗ ಏನ ಉಳದದೋ ತಮ್ಮಾ
ರಾಜಧಾನ್ಯಾಗ ಉಳಿಯೋ ಅಂತಾದ್ದು ಏನಿದೆಯೊ ತಮ್ಮಾ,
ಒಳಗಿನ ಹೊಗಿ ಕೆರೀsತದ
ಹೊರಗಿನ ಉಗಿ ಉರೀsತದ
ಹೋದವ್ರನ್ನಂತೂ ಮರೀsತದ
ಬಂದವ್ರನ್ನೆಲ್ಲಾ ಕರೀsತದ
ಅಪ್ಪು ಹಾಕ್ಕೊಂಡು ಮುರೀsತದ
ಅವುಚಿ ಅವುಚಿ ಮೆರೀsತದ
ಬೆಂದ ಕಾಳಾಗಿದ್ರೂs
ಪ್ಲಾಸ್ಟಿಕ್ದದ ಮೊಳಕಿ ಸಿಗ್ಸಿss
ಮ್ಯಾಲೊಂದಿಷ್ಟು ಬ್ಯಾಗಡಿ ಸುತ್ತಿ
ಮೇಕಪ್ ಮಾಡಿ ನಿಲ್ಲಿಸಿ ಬಿಟ್ರs
ಡಿಸ್ಕೌಂಟ್ ಚೀಟೀಗ ಸೇಂಟ್ ಹೊಡದೂs
ಮಾಲ್ ಮಾಡೀ ಮಾಲ್ ನ್ಯಾಗ ಇಟ್ರss
ಸಾಲು ಸಾಲು ಸಾಲಾ ಮಾಡಿ
ಸಾಲಿನ್ಯಾಗs ವಾಲ್ಯಾಡ್ಕೋತ
ತೇಲ್ ನಡಿಗ್ಯಾಗs ತೇಲಾಡಕೋತ
ಕೈಯಾಗ-ಕೈ ಸಿಗಿಸಿ ಸರದಾಡಕೋತ
ಸದರ ಸಿಕ್ಕರ ಸರಗ್ಯಾಡಕೋತ
ಖಬರ್ ಇಲ್ದಂಗ ಹಾರಾಡಕೋತ
ಫಿಜ್ಜಾ ಬರ್ಗರ್ ಪಾನೀ ಪೂರಿ
ತಿಂದೂ ತಿಂದೂ ದೇಹಾ ಭಾರೀ
ಫಿಟ್ನೆಸ್ ಅಂತಾ ದಂಡಾ ಬಡದು
ಕುನ್ನೀ ಕರಕೊಂಡು ವಾಕಿಂಗ್ ಬಂದು
ಕಡ್ಡೀಪೆಟಿಗಿ ಪೇರಿಸಿದ್ಹಾಂಗ
ಗೂಡಿನ್ಯಾಗ ಕನಸು ಹೀಂಗ
ವೀಕೆಂಡ್ ಬಂದ್ರ ಭಾರೀ ಮೋಜುs
ಶೇಕ್-ಹ್ಯಾಂಡ ಅನ್ನೋದು ಹಳೇ ರಿವಾಜು
ಹಗ್ಗಿನ್ಯಾಗss ಹಿಗ್ಗು ಅನ್ಕೊಂಡ
ಎಗ್ಗು ಇಲ್ದಾಂಗ ನುಗ್ಗಿಕೊಂಡ
ಕುರುಡು ನೊಣವು ಗುಂಯ್-ಗುಟ್ಟಿದ್ಹಾಂಗ
ದೀಪಕ್ಕ ಹುಳವು ಮುತ್ತಿದ್ಹಾಂಗs
ಕುಣಿಸಿ ಕುಣಿಸೀs ಬೆರಳ್ ಸೊಟ್ಟಗಾತು
ಹಣಿಕೀ ಹಣಿಕೀ ಕೊರಳ್ ಉಳುಕಿ ಹೋತು
ರಾತ್ರೀ ಪಾಳಿಗೆ ನಿದ್ರೆ ಶಾಪ
ಹಾಡಾ ಹಗಲೇ ದೀಪಾ ಹಚ್ಚಿ
ಗಾಡಿ ಬಿಟ್ಕೊಂಡು ಓಡೋ ಕಾಲಾ
ಪೆಟ್ರೋಲ್ ಗ್ಯಾಸಿನ ವಾಸನೆ ಲೀಲಾ
ನೆಲಾನಂತೂ ಮುಟ್ಟೋದಿಲ್ಲ
ಜಲಾನಂತೂ ಕಾಣೋದಿಲ್ಲ
ರೋಬಟ್ ಹಾಂಗ ಹೂಬೇ ಹೂಬು
ತೊಗಲು ಬಾವಲಿ ಜೋತ್ ಬಿದ್ಹಾಂಗ
ಹಗಲ ಹೊತ್ತಿನ್ಯಾಗ ನಿದ್ರೆ ರಂಗ
ಸೂರ್ಯನ ಕಾಣದೆ ಬದುಕೇ ಭಂಗ