Site icon ಒಡನಾಡಿ

ಬಲ್ಲವನೇ….ಬಲ್ಲ..!

ಅರಿವಿನ ಬೆನ್ನ ಹತ್ತದವಗೆ ಅರಗೋಲು
ಮುತ್ತಾಗದೇ ವ್ಯರ್ಥ ಸುರಿದ ಇಳೆಗೆ ಹನಿ
ಮರೆವಿನ ಹೊದಿಕೆಯ ಚಿಪ್ಪಿನೋಳು
ನಭದ ಸುಖಗಳೆಲ್ಲ ರೆಕ್ಕೆ ಮುರಿದು
ನೆಲಕೆ ಉದುರಿದ ನಕ್ಷತ್ರಗಳಂತೆ
ಮೋಡಗಳ ಹೆರಳಲ್ಲಿ ನರಳುತ್ತ
ಗುರಿ ಕಾಣದಾ ಪಂಜರದ ಕಂಬಿಯೋಳು
ಮಡುಗಟ್ಟಿ ನಿಂತಿವೆ ಸುಂದರ ಕನಸುಗಳು
ಭವದೆಲ್ಲೆಡೆ ಆವರಿಸಿದ ಅಜ್ಞಾನದಲಿ
ದಿವ್ಯಾನುಭವ ಗೋಚರಿಸದ ಕ್ಷಣಗಳು
ಅಂಧಕಾರ ಕರಗದ ಲಕ್ಷಣಗಳು
ಅದು ಹೇಗೆ ಒಲಿಯುವುದೆಂಬ ಚಿಂತೆ
ಬುದ್ದನ ಮಾರ್ಗ ಬಲ್ಲವನೇ ಬಲ್ಲ
ಬಸವನ ತತ್ವ ಅನುಭವಿಸಿದವನೇ ಬಲ್ಲ
ಕಣ್ಣು ಮುಚ್ಚಿ ಧ್ಯಾನಿಸುವ ಗಳಿಗೆಗಳಲ್ಲಿ
ಮೂರ್ತ ರೂಪಕ್ಕೆ ಬರದ ಬಿಂಬಕ್ಕೆ
ದಿಕ್ಕು ತೋರುವವರಾರು?
ಮಂಪರಿನ ಹಂಪ ಹರಿವವರಾರು?
ಏಕಲವ್ಯನ ಮರೆಯಾಗಲಾದಿತೆ?
ಗುರುವೆಂಬ ಹಣತೆ ದಿಕ್ಸೂಚಿಯಂತೆ.
ಮಬ್ಬು ಕವಿದವನ ಹೃದಯದಲ್ಲಿ ಪೂರ್ಣ
ದಿಬ್ಬಣದ ತೇರ ಎಳೆಯುವವರಾರು?
ಅರಿವೆ ಗುರುವೆಂಬ ಜಪದ ಮಾಲೆ
ಇರುಳ ಸಿಳಿದ ಬೆಳಕಿನ ಜ್ಯೋತಿಗೆ
ಗುರುವೆಂಬ ಸಕಲ ಐಶ್ವರ್ಯದಾ ನೆಲೆ
ಜ್ಞಾನ ದಾಹಿಗೆ ಹೆಜ್ಜೆ ಹೆಜ್ಜೆಗೂ ಭದ್ರನೆಲೆ
ಜಗದ ಬೆಳಕು ಗುರುವಲ್ಲಿ ಲೀನ
ಗುರುವೆ ಅರಿವಿನ ಜಾಲತಾಣ……

-ಶಿವಲೀಲಾ ಹುಣಸಗಿ, ಯಲ್ಲಾಪುರ
Exit mobile version