ವಿಮರ್ಶಾ ಲೇಖನ
“ಕಾವ್ಯ ಎಲ್ಲಿದೆ ಇಲ್ಲಿ?” ವಿಮರ್ಶೆ ಕುಟಿಲ ನೋಟದಿಂದ ಪ್ರಶ್ನಿಸಿತು. ಅದರ ನೀಲಿ ಕಣ್ಣಿನಲ್ಲಿ ಅಡಗಿದ್ದ ಛಾಯೆಯಿಂದಾಗಿ ಜೊತೆಗೆ ಅಲ್ಲಲ್ಲಿ ಹೇರಡೈ ಮೀರಿಯೂ ಹಣಿಕಿಕ್ಕುತ್ತಿದ್ದ ಬಿಳಿಯ ಕೂದಲಿನಿಂದಾಗಿ ಅದರ ಕುಟಿಲತೆ ಮತ್ತೂ ಗಾಢವಾಗಿಯೇ ತೋರುತ್ತಿತ್ತು.
ಇಲ್ಲಿ ಬಾ, ಈ ತೋಟ, ಈ ಗದ್ದೆ, ಇದೀಗ ತಾನೆ ಅರಳಲು ಪ್ರಾರಂಭಿಸಿರುವ ಮೊಗ್ಗು,ಜೊತೆಗೆ ಹಾಲುಗಾಳಿನಲ್ಲಿ ತುಂಬುತ್ತಿರುವ ಬದುಕಿನ ಅಮೃತ ನಿನಗೆ ಕಾಣುತ್ತಿಲ್ಲವೇ. . ? ಮುಗ್ಧತೆಯಿಂದ ರೈತನೊಬ್ಬ ಪ್ರಶ್ನಿಸಿದ,
ಹುಸಿನಗೆ ನಕ್ಕ ವಿಮರ್ಶೆ, ಅಲ್ಲಿ ಹರಿಯುತ್ತಿರುವ ನೀರಿನ ವೇಗ, ಹೊಲದ ವಿಸ್ತಾರ, ಬಿತ್ತನೆಯ ಯಂತ್ರಗಳು ಹಾಗೂ ಚೆಲ್ಲಿದ ಕೃತಕ ಗೊಬ್ಬರವನ್ನೆಲ್ಲ ಜಾಲಾಡಿತು. ಅದೇ ತಾನೇ ಮುಗುಳ್ನಗುತ್ತಾ ಸೂರ್ಯನೆಡೆ ದಿಟ್ಟಿಸುತ್ತಿದ್ದ ಪುಟ್ಟ ಸಸಿಯೊಂದನ್ನು ಬೇರು ಸಮೇತ ಕಿತ್ತು, ಪರೀಕ್ಷಿಸಿದ. .ಹೂಂ , ಹೂಂ, ಇಲ್ಲಿ ಎಲ್ಲಿಯೂ ಕಾವ್ಯ ಇಲ್ಲವೇ ಇಲ್ಲ.
ರೈತ ಮುಗುಳ್ನಕ್ಕು ಒಮ್ಮೆ ಕರುಣಾ ಭಾವದಿಂದ ವಿಮರ್ಶೆಯನ್ನು ನೋಡಿ, ತನ್ನ ಉಳುಮೆಯನ್ನು ಮುಂದುವರೆಸಿದ.
ಇದೋ ನೋಡಿ, ಬಾನಂಗಳದ ತುಂಬೆಲ್ಲಾ ಹರಡಿರುವ ನೀಲಛಾಯೆ, ಅನೂಹ್ಯವನ್ನು ಅರಸುತ್ತಾ ಹೊರಟು ಶುಭ್ರಾತಿಶುಭ್ರವಾಗಿ ಹೊಳೆಯುತ್ತಿರುವ ಆಗಸದಲ್ಲಿನ ತಾರೆಗಳ ಸಾಲಿನ ಕಿರಣದ ಕುಣಿತ, ಮನಸ್ಸನ್ನು ಕತ್ತಲು ಆವರಿಸಬಾರದೆಂದು ಸರದಿಯಲ್ಲಿ ಬರುತ್ತಿರುವ ಸೂರ್ಯ-ಚಂದ್ರ, ಹೃದಯದ ಆಶೆಗಳಂತೆಯೇ ದೂರದಲ್ಲೆಲ್ಲೋ ಇದ್ದರೂ ಮಿನುಗುತ್ತರುವ ಧ್ರುವನಕ್ಷತ್ರ ಹಾಗೂ ಆಕಾಶಗಂಗೆಯ ರಂಗೋಲಿ, ಇವೆಲ್ಲದರ ಮಧ್ಯದಲ್ಲಿ ಅಮೂರ್ತವಾಗಿರುವ ವಿಶ್ವಶಕ್ತಿ ಕಾವ್ಯವಲ್ಲೇ? ಎಂದು ಕ್ಷಿತಿಜವು ವಿಮರ್ಶೆಯನ್ನು ಕೇಳಿತು
‘ನೀಲಿ ಕೇವಲ ಭ್ರಮೆ, ಬೆಳಕಿನ ವಿನ್ಯಾಸ ಮಾತ್ರ. ಧೂಳಿನ ಕಣಗಳ ಪ್ರತಿಫಲನದ ಪ್ರತಿಬಿಂಬ ಮಾತ್ರ ಅದು! ರೂಪವೇ ಇರದ ನೀರಾವಿಗೇಕೆ ಉನ್ನತ ಸ್ಥಾನ? ಗಗನಕುಸುಮಗಳಾದ ತಾರೆಗಳು ಸ್ಪರ್ಶಕ್ಕೂ ಸಿಗವು, ದರ್ಶನಕ್ಕೂ ಪೂರ್ತಿ ದಕ್ಕವು. ಅವುಗಳ ಮಧ್ಯದಲ್ಲಿ ಗೆರೆ ಎಳೆದುಕೊಂಡು ವಿನ್ಯಾಸ ರೂಪಿಸಿದ ಹುಚ್ಚು ಮನಸ್ಸಿನ ಉದ್ವೇಗದ ಹುರುಡು ಗಳಪು ಈ ಜಾಲ. ಎಂದೂ ಯಾರಿಗೂ ತನ್ನ ಅಸ್ತಿತ್ವವನ್ನೇ ತೋರದ ವಿಶ್ವಶಕ್ತಿಯನ್ನು ನಿಯಂತ್ರಕವೆನ್ನುವ ದಾದರೂ ಹೇಗೆ” ವಿಮರ್ಶೆ ತನ್ನ ಹುಟ್ಟು ಗುಣವಾದ ಕೇಶಚ್ಛೇದನದಲ್ಲಿಯೇ ಕುಟುಕಿತು. ಜೊತೆಗೆ ತನ್ನ ಬುದ್ಧಿಗೆ ತಾನೇ ಸಾಣೆ ಹಿಡಿದುಕೊಂಡ ಹಾಗಿ ಭ್ರಮಿಸಿ ಹುಬ್ಬು ಗಂಟಿಕ್ಕಿತು.
ಕ್ಷಿತಿಜವು ಆತ್ಮದಲ್ಲಿಯೇ ಮಂದಸ್ಮಿತಗೊಂಡು ಮತ್ತೂ
ಘನಮೌನದಲ್ಲಿಯೇ ಮತ್ತೂ ವಿಸ್ತಾರಗೊಂಡಿತು.
ಅಲ್ಲಿ ಹೊರಟಿರುವ ಮೋಡಗಳನ್ನು ಎಣಿಸಬಲ್ಲೆ, ಕಾಮನಬಿಲ್ಲನ್ನು ಏರಿ ಸೀದಾ ಚಂದ್ರನ ಮಡಿಲಲ್ಲಿ ಆಡಬಲ್ಲೆ, ಏಣಿ ಮೇಲೆ ಏಣಿ ಮತ್ತೂ ಏಣಿ ಮೇಲೆ ಏಣಿ ಇಟ್ಟು, ಒಂದೆರಡು ತಾರೆಗಳನ್ನು ಹಿಡಿದು, ಪೆಟ್ಟಿಗೆಯಲ್ಲಿ ತಂದು ಆಡಬಲ್ಲೆ, ಹಣ್ಣು ತುಂಬಿದ ಮರವನ್ನು ತಂದು ಅಮ್ಮನ ಕೈಯಲ್ಲಿ ಕೊಟ್ಟರೆ , ಅಮ್ಮನಿಗೂ ಹಿಗ್ಗು ‘ಎಂದು ಅಂಗಳದಲ್ಲಿ ಆಟವಾಡುತ್ತಿದ್ದ ಹಾಲುಗಲ್ಲದ ಮಗುವೊಂದು ತೊದಲು ನುಡಿಯಲ್ಲಿ ನುಡಿಯಿತು. ತನ್ನನ್ನೇ ದಿಟ್ಟಿಸುತ್ತಾ ನಿಂತಿದ್ದ ವಿಮರ್ಶೆಯನ್ನು ಒಂದರೆ ಕ್ಷಣ ಅಚ್ಚರಿಯ ನೋಟ ಬೀರಿತು.
ತನ್ನ ಕಾಲ ಬಳಿಯಲ್ಲಿ ಸುಳಿಯುತ್ತಿದ್ದ, ಇನ್ನೂ ಸರಿಯಾಗಿ ಜೊಲ್ಲನ್ನೂ ಒರೆಸಿಕೊಳ್ಳಲು ಗೊತ್ತಿರದ ಮಗುವನ್ನು, ವಿಮರ್ಶೆ ಕಡೆಗಣಿಸಿ ‘ ಬಾಲಿಶ ಕಲ್ಪನೆ” ಎಂದು ಮೂಗು ಮುರಿದುಕೊಂಡು, ಅಸ್ತಮಿಸುತ್ತಿದ್ದ ತನ್ನ ಪಶ್ಚಿಮದ ಮನೆಗೆ ಸೇರಿಕೊಂಡಿತು.
ಮಗುವಿನ ಬಾಯಿಯಿಂದ ಉಕ್ಕುತ್ತಿದ್ದ ಜೊಲ್ಲಿನಲ್ಲಿ ಕಿರಣ ಪ್ರತಿಫಲಿಸಿ, ನಕ್ಕಾಗ ಮತ್ತೆ ಮಗುವು ಮಣ್ಣಿನಲ್ಲಿ ಮನೆ ಕಟ್ಟುವ ಆಟ ಮುಂದುವರೆಸಿತು.
ಕವಿ ಮೌನವಾಗಿ ಇವೆಲ್ಲವನ್ನೂ ನೋಡುತ್ತಲೇ ಹಿಂಬಾಲಿಸಿದ್ದ. ರೈತ ಬೆಳೆದ ಸಮೃದ್ಧ ಹಸಿರು, ಬಾನಿನ ನೀಲಿ ಮಿಲನವನ್ನು ತನ್ನ ಹೃದಯದಲ್ಲಿ ಪ್ರತಿಷ್ಠಾಪಿಸಿಕೊಳ್ಳುತ್ತಿರುವ ಕ್ಷಿತಿಜ, ಅದರ ಅಂಚಿನಲ್ಲಿ ಆಟದಲ್ಲಿರುವ ಮುಗ್ಧಮಗುವಿನ ನಗೆಯಲ್ಲಿ ಕವಿಯ ಮೌನ ಅರಳುತ್ತಿತ್ತು.
- ಪುಟ್ಟು ಕುಲಕರ್ಣಿ, ಕುಮಟಾ