Site icon ಒಡನಾಡಿ

ಸಿದ್ದರಾಮೇಶ್ವರ ವಚನಗಳಲ್ಲಿ ‘ವಿಭೂತಿ’ ತತ್ವ…

ಅಷ್ಟಾವರಣದ ಶರಣತತ್ವಗಳಾದ; ಗುರು ಲಿಂಗ ಜಂಗಮ ವಿಭೂತಿ ರುದ್ರಾಕ್ಷಿ ಮಂತ್ರ ಪ್ರಸಾದ ಪಾದೋದಕ ಇವುಗಳ ತಾತ್ವಿಕ ಗುಣಸ್ವರೂಪ ಮತ್ತು ಸೈದ್ಧಾಂತಿಕ ಮಹತ್ವದ ಬಗ್ಗೆ ಬಹುತೇಕ ಶರಣರು ತಮ್ಮ ವಚನಗಳಲ್ಲಿ ಚಿಂತನೆಯನ್ನು ಮಾಡಿದ್ದಾರೆ. ಅವರುಗಳ ಅನುಭಾವಿಕ ನೆಲೆಯ ತಾತ್ವಿಕ ವಿವೇಚನೆಯ ಒಳನೋಟಗಳು ಹೆಚ್ಚಿನ ಆಯಾಮದ ವಿನ್ಯಾಸಗಳಲ್ಲಿ ಚರ್ಚಿಸಲ್ಪಟ್ಟಿದೆ. ತನ್ಮೂಲಕ ಉಪಲಬ್ಧವಾದ ಚಿಂತನೆಯ ಚಿದ್ಬೆಳಗು ಅನುಭಾವದ ಅಭಿವ್ಯಕ್ತಿಯಲ್ಲಿ ಪರಿಮಳಿಸುವ ಪರಿಯನ್ನು ವಚನಗಳಲ್ಲಿ ಯಥೇಚ್ಛವಾಗಿ ಕಾಣಬಹುದಾಗಿದೆ. ಈ ಸಂಗತಿಯ ಶಿವಸುಖವನ್ನು ವಚನ ಸಾಹಿತ್ಯದ ಗಹನ ಓದು, ಧ್ಯಾನಸ್ಥಮನದ ಚಿಂತನೆ ಮತ್ತು ಅರಿವಿನ ಬೆರಗಿನ ಮೂಲಕ ದಕ್ಕಿಸಿಕೊಂಡು ಶರಣತತ್ವ ಸಿದ್ಧಾಂತಗಳ ನಿಜದ ನೆಲೆಯ ಆನಂದವನ್ನು ಅನುಭವಿಸ ಬಹುದಾಗಿದೆ.

ಈ ನಿಜಸುಖವನ್ನು ಹೊಂದುವ ಸದಾವಕಾಶವ ನ್ನು ‘ಅಷ್ಟಾವರಣದ ತಾತ್ವಿಕ ವಿವೇಚನಾ ಚಿಂತನೆ ಮಾಲಿಕೆ’ ಅಡಿಯಲ್ಲಿ; ಶರಣ ಸಾಹಿತ್ಯದಲ್ಲಿ ಹೆಚ್ಚು ಒಲವನ್ನು ಮತ್ತು ಆಸಕ್ತಿಯನ್ನು ಬೆಳೆಸಿಕೊಂಡು ಈಗಾಗಲೇ ಕ್ರಿಯಾಶೀಲರಾಗಿರುವ ಹಲವಾರು ವಚನ ಚಿಂತಕರನ್ನು ಈ ನಿಟ್ಟಿನಲ್ಲಿ ಇಲ್ಲಿ ಒಟ್ಟಿಗೆ ತಂದು, ಅಷ್ಟಾವರಣದ ಎಂಟೂ ತತ್ವಗಳನ್ನು ವಿವಿಧ ಶರಣರ ವಚನಗಳ ಮೂಲಕ ತಾತ್ವಿಕ ಚಿಂತನೆಗೆ ಅಣಿಗೊಳಿಸಲಾಗಿದೆ. ಅದರಂತೆ ಈ ಪ್ರಕ್ರಿಯೆಯ ಅಂಗವಾಗಿ ನಿತ್ಯವೂ ಅನೇಕರು ವಿವಿಧ ಶರಣರ ವಚನಗಳ ಮೂಲಕ ಎಂಟೂ ತತ್ವಗಳ ತಾತ್ವಿಕ ಚಿಂತನೆಯ ಬರಹಗಳನ್ನು ಸಲ್ಲಿಸುತ್ತಿದ್ದಾರೆ. ತನ್ಮೂಲಕ ಶರಣತತ್ವಗಳ ಬಗ್ಗೆ ಜನಮಾನಸದ ಅರಿವನ್ನು ಹೆಚ್ಚಿಸಲಾಗುತ್ತಿದೆ.

ಈಗ ಇಲ್ಲಿ ಈ ಪ್ರಸ್ತುತ ಲೇಖನವನ್ನು ಸಲ್ಲಿಸಲು ಅವಕಾಶವನ್ನು ವೇದಿಕೆ ಕಲ್ಪಿಸಿದ್ದಕ್ಕೆ ಕೃತಜ್ಞತೆಗಳ ಸಲ್ಲಿಸುತ್ತಲೇ ನಾನಿಲ್ಲಿ ಸಿದ್ದರಾಮೇಶ್ವರರ ವಚನ ಗಳನ್ನು ನನ್ನ ಓದಿನ ಹಾಗೂ ಗ್ರಹಿಕೆಯ ಅರಿವಿನ ಇತಿಮಿತಿಯಲ್ಲಿ ಚಿಂತನೆಯನ್ನು ಮಾಡಿ, ನನ್ನದೇ ಆದ ಅನುಭಾವದ ಒಂದು ಸಣ್ಣ ಪ್ರಯತ್ನವನ್ನು ಈ ಮೂಲಕ ಮಾಡಿದ್ದೇನೆ. ಅದಕ್ಕಾಗಿ ಸಹೃದಯಿ ಮನಸುಗಳಿಂದ ಮನಸಾರೆ ಪ್ರೋತ್ಸಾಹವನ್ನೂ ನಿರೀಕ್ಷಿಸುತ್ತೇನೆ.

ವಿಭೂತಿ ತತ್ವವನ್ನು ಕುರಿತು ಈಗಾಗಲೇ ಕೆಲವರು
ಶರಣರ ವಚನಗಳ ಚಿಂತನೆ ಮಾಡಿ, ಬಹಳಷ್ಟು ಮಹತ್ವದ ಹೊಸ ಚಿಂತನೆಯ ವಿವರಣೆಗಳನ್ನಿಲ್ಲಿ ಹಂಚಿಕೊಂಡಿದ್ದಾರೆ. ಪುನರಾವರ್ತನೆ ಆದರೂ ಅದನ್ನು ಗಮನದಲ್ಲಿಟ್ಟುಕೊಂಡು ನಾನು ಕೆಲವು ಶರಣರ ವಚನ ಸಾಲುಗಳನ್ನಿಲ್ಲಿ ಉಲ್ಲೇಖಿಸುತ್ತ ನನ್ನ ಪ್ರಸ್ತುತಿಗೆ ಗತಿಯನ್ನು ನೀಡಬಯಸುತ್ತೇನೆ.

‘ವಿಭೂತಿ ತತ್ವ’ವು; ಮನುಷ್ಯನ ಅಂತರಂಗದಲ್ಲಿನ ಹಾಗೂ ಬಹಿರಂಗದಲ್ಲಿನ ಅಷ್ಟಮದಗಳನ್ನ ಕುಟ್ಟಿ ಅರಿವಿನ ಅಗ್ಗಿಷ್ಟಿಕೆಯಲ್ಲಿ ಹಾಕಿ ಸುಟ್ಟು ನಿಷ್ಕಲ್ಮಶ ವಾಗಿರುವುದರ ಸಂಕೇತವಾಗಿದೆ. ಮತ್ತು ಅದನ್ನು ಬಹಿರಂಗದಲ್ಲಿ ಧರಿಸುವ ಮೂಲಕ ಧಾರ್ಮಿಕ ಲಾಂಛನವಾಗಿಯೂ ಬಳಸಲಾಗುತ್ತದೆ.

ವಿಭೂತಿ ತತ್ವದ ಬಗ್ಗೆ ಅಪ್ಪ ಬಸವಣ್ಣನವರ ‘..ಶರಣರ ನೊಸಲಿಗೆ ವಿಭೂತಿಯೇ ಶೃಂಗಾರ..’ ಎಂಬ ಮಾತನ್ನು ಗಮನಿಸಿಯೇ ಮುಂದೆ ಹೋಗಬೇಕಾಗುವುದು, ಮತ್ತು ಅಕ್ಕಮಹಾದೇವಿ ಯವರ ‘..ಶ್ರೀವಿಭೂತಿಯ ಧರಿಸಿದಡೆ ಭವವ ಪರಿವುದು, ದುರಿತಸಂಕುಲವನೊರೆಸುವುದು, ನಿರುತವಿದು ನಂಬು ಮನುಜ ಜನನ ಭೂತಿಯೇ ವಿಭೂತಿ..’ ಎನ್ನುವ ವಚನದ ಈ ಸಾಲುಗಳನ್ನು ಅರ್ಥಮಾಡಿ ಕೊಂಡಲ್ಲಿ, ಪ್ರತಿದಿನ ವಿಭೂತಿಯ ನ್ನು ಧರಿಸಿದರೆ, ಅದರಿಂದ, ಕೆಟ್ಟ ಆಚಾರ ವಿಚಾರ ಗಳನ್ನು ಅಳಿಸಿಕೊಂಡು, ಒಳ್ಳೆಯ ಸಂಸ್ಕಾರವನ್ನು ಹೊಂದಿದಂತಾಗುತ್ತದೆ. ಈ ವಿಭೂತಿ ಮನುಷ್ಯನ ಬದುಕಿನ ಕತ್ತಲೆಯನ್ನೂ ನಿವಾರಿಸುವ ಶಕ್ತಿಯನ್ನ ಹೊಂದಿದೆ ಎಂಬ ಸತ್ಯ ಶರಣರ ವಿಚಾರಗಳಲ್ಲಿ ಮಡುಗಟ್ಟಿದೆ. ಇದನ್ನು ಮನಗಂಡಾದರೂ ನಮ್ಮ ಲಿಂಗಾಯತ ಬಂಧುಗಳ ಮನಸುಗಳು ಹಿಂಜರಿ ಕೆ ಸಂಕೋಚ ಬಿಟ್ಟು ವಿಭೂತಿ ಧರಿಸುವ ಅಗತ್ಯ ಖಂಡಿತಾ ಇದೆ ಎಂಬುದನ್ನು ತಿಳಿಯ ಬೇಕಾಗಿದೆ.

ಸಿದ್ದರಾಮೇಶ್ವರರು ಶರಣರಾಗುವ ಮೊದಲಲ್ಲಿ ಅಂದರೆ, ಅಲ್ಲಮಪ್ರಭುಗಳ ಸಂಪರ್ಕಕ್ಕೆ ಬರುವ ಮೊದಲು ಶಿವಯೋಗಿ,ಕರ್ಮಯೋಗಿ ಆಗಿದ್ದರು. ಕಲ್ಯಾಣಕ್ಕೆ ಬಂದ ನಂತರದಲ್ಲಿನ ಸಂಗತಿಗಳ ಬಗ್ಗೆ ಬಹುತೇಕರಿಗೆ ತಿಳಿದೇಯಿದೆ. ಹಾಗಾಗಿ, ಸಧ್ಯಕ್ಕೆ ಇಲ್ಲಿ ಅವರ ವಚನಗಳಲ್ಲಿ ‘ವಿಭೂತಿ’ ತತ್ವ ಕುರಿತು ಯಾವ ರೀತಿಯ ಚಿಂತನೆ ಪ್ರತಿಪಾದನೆಯಾಗಿದೆ ಎನ್ನುವ ಸಂಗತಿಯನ್ನೀಗ ಅವರ ಕೆಲ ವಚನಗಳ ಪರಿಶೀಲನೆ ಮಾಡುವ ಮೂಲಕ ತಿಳಿಯೋಣ.
ವಚನ ೧.
ಆಧೇಯಾಧಾರವಿಲ್ಲದಂದಿನ ಶ್ರೀವಿಭೂತಿಯನೆನ್ನ ಲಲಾಟದಲ್ಲಿ ಪಟ್ಟವ ಕಟ್ಟಿದನಯ್ಯಾ, ಎನ್ನ ತಂದೆ ಬಸವಣ್ಣನು.
ಆ ವಿಭೂತಿಯನೆನ್ನಂಗದಲ್ಲಿ ಧರಿಸಿದಲ್ಲದೆ
ಲಿಂಗಾರ್ಚನೆಯ ಮಾಡೆನಯ್ಯಾ.
ಆ ವಿಭೂತಿಯನಾಗಮಸ್ಥಾನವನರಿದು
ಧರಿಸಿ ನಿಮ್ಮಡಿಯ ನಂಬಿದೆನಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ.
**
ಶ್ರೀ ವಿಭೂತಿಯ ಘನತೆಯನ್ನು ಹಾಗೂ ಅದರ ಮಹತ್ವವನ್ನು ಈ ವಚನದಲ್ಲಿ ಸಿದ್ದರಾಮೇಶ್ವರರು ಅದ್ಭುತವಾಗಿ ಎತ್ತಿ ತೋರಿಸಿದ್ದಾರೆ. ಸೃಷ್ಟಿ ರಚನೆಗೆ ಬರುವ ಪೂರ್ವದಲ್ಲಿ ವಿಭೂತಿ ತತ್ವ ಇತ್ತು ಎಂಬ ವಿಚಾರವನ್ನು ಹೇಳಿ, ಅಪ್ಪ ಬಸವಣ್ಣನವರೇ ತನ್ನ ಹಣೆಗೆ ಶ್ರೀ ವಿಭೂತಿಯನ್ನು ಹಚ್ಚಿ ಪಟ್ಟಗಟ್ಟಿದರು ಎಂದು ಹೇಳುವರು. ಈ ವಿಭೂತಿಯನ್ನು ಧರಿಸ ದೇ ಲಿಂಗಾರ್ಚನೆಯನ್ನು ಮಾಡಲಾರೆ ಎನ್ನುವಲ್ಲಿ ಶ್ರೀ ವಿಭೂತಿಯ ತಾತ್ವಿಕ ಮಹತ್ವ ಎಷ್ಟೊಂದು ಘಟ್ಟಿಯಾದದ್ದೆಂದು ತಿಳಿಯುತ್ತದೆ.
ವಚನ ೨
ಭಸ್ಮವ ಹೂಸಿದಲ್ಲಿ ಶರಣನೆ? ಅಲ್ಲಲ್ಲ ;
ಮಾಡುವ ಕ್ರಿಯೆ ಭಸ್ಮವಾದಡೆ ಶರಣ.
ನೋಡುವ ಕೃತ್ಯ ರುದ್ರಾಕ್ಷಿಯಾದಡೆ ಶರಣ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ.
**
ಎನ್ನುವಲ್ಲಿ, ವಿಭೂತಿಯನ್ನು ದೇಹಕ್ಕೆ ಧರಿಸಿದರ ಷ್ಟೇ ಶರಣನಾಗಲು ಸಾಧ್ಯವಿಲ್ಲ. ಮಾಡುವ ಕ್ರಿಯೆ ಭಸ್ಮವಾದರೆ ಶರಣ ಎನ್ನುವಲ್ಲಿ, ‘ಮಾಡುವ ಮಾಟದಲ್ಲಿ ತಾನಿಲ್ಲದಿರಬೇಕೆಂಬ’ ಶರಣತತ್ವದ ನಿರ್ವಿಕಲ್ಪ ನುಡಿಯ ಗುಣಗೌರವವನ್ನಿಲ್ಲಿ ಶರಣ ಸಿದ್ದರಾಮೇಶ್ವರರು ಅನುಮೋದನೆ ಮಾಡುವು ದು ಕಂಡುಬರುತ್ತದೆ.
ವಚನ ೩
ಶ್ರೀವಿಭೂತಿ ರುದ್ರಾಕ್ಷಿಯನು ಧಾತಪ್ಪ ಬಸವಾಕ್ಷರತ್ರಯವನಾರಯ್ಯ ಅರಿದು ಉಚ್ಚರಿಸುವರು ಅವರಂಘ್ರಿಯಂಬುಜದಾಮೋದಭ್ರಮ ಆನಯ್ಯ. ಅವರು ಆ ನಾದಬ್ರಹ್ಮವು ತಾವಾಗಿಪ್ಪರಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
**
ಶ್ರೀ ವಿಭೂತಿ ಮತ್ತು ರುದ್ರಾಕ್ಷಿಯನ್ನು ಕರುಣಿಸಿ ಕೊಟ್ಟಂಥ ಅಪ್ಪ ಬಸವಣ್ಣನವರ ‘ಬಸವ’ ಎಂಬ ತ್ರಯಾಕ್ಷರದ ಮಹತ್ವವನ್ನು ಯಾರು ತಿಳಿದು ಅರಿತುಕೊಂಡು ಹೇಳುವರೋ ಅಂಥವರ ಕರಕಮಲದೋಳಗೆ ಬಂಡುಂಡು ಆಡುವ ಭ್ರಮರ ತಾವು. ಆ ಭ್ರಮರ ನಾದವೇ ಅಪ್ಪ ಬಸವಣ್ಣನವರೆಂದು ಹೇಳುವ ಮೂಲಕ ಸಿದ್ದರಾಮೇಶ್ವರರು ಶ್ರೀ ವಿಭೂತಿ ತತ್ವದ ಹಿರಿಮೆ ಗರಿಮೆಯನ್ನು ಹೆಚ್ಚಿಸಿರುವರು.
**
ಅಷ್ಟೇ ಅಲ್ಲದೇ, ವಿಭೂತಿ-ರುದ್ರಾಕ್ಷಿ ಸಾಕ್ಷಾತ್ ಶಿವನೆಂದೇ ಅರಿಯಬೇಕೆಂದು ಸಿದ್ದರಾಮೇಶ್ವರ ರು ತಮ್ಮ ವಚನವೊಂದರಲ್ಲಿ ಸ್ಪಷ್ಟವಾಗಿಯೇ ಹೇಳಿರುವರು. ಅದರಂತೆಯೇ ಇನ್ನೊಂದು ತಮ್ಮ ವಚನದಲ್ಲಿ; ‘.. .ಒಲಿವೆ ವಿಭೂತಿ – ರುದ್ರಾಕ್ಷಿ ಲಾಂಛನ ಧಾರಿಯ..’ ಎನ್ನುವಲ್ಲಿ ವಿಭೂತಿ ತತ್ವವ ನ್ನು ಅತ್ಯಂತ ಉನ್ನತ ನೆಲೆಯಲ್ಲಿ ಕಂಡು ಆದರಿಸಿ ಗೌರವವಿಸಿರುವುದು ಕಂಡುಬರುತ್ತದೆ.
**

–ಅಳಗುಂಡಿ ಅಂದಾನಯ್ಯ
Exit mobile version