Site icon ಒಡನಾಡಿ

ಹೃದಯದುಂಬಿ ಮಾಡುವ ಪ್ರಾರ್ಥನೆಯೂ ಯೋಗ….


ಆತ್ಮ ಮತ್ತು ಪರಮಾತ್ಮನ ಮಧ್ಯೆ ಸಂಪರ್ಕ ಸೇತುವಾಗಿ ಈ ಪ್ರಾರ್ಥನೆ (ಯೋಗ) ಇದೆ. ಆತ್ಮದ ಅಭೀಪ್ಸೆಗಳ ಸ್ಪಂದನವು ನಾದದ ಅಲೆಗಳಾಗಿ ವಿಕಸನಗೊಳ್ಳುವದೇ ಪ್ರಾರ್ಥನಾ ಪಥವಾಗಿದೆ. ಹೀಗಾಗಿ ನಾದದ ಅಲೆಯು ಪ್ರಾರ್ಥನೆಯೂ ಹೌದು. ಕೇವಲ ದುಃಖದಲ್ಲಿದ್ದಾಗ ಮಾತ್ರ ಆರ್ತತೆಯಿಂದ ರಕ್ಷಣೆಗಾಗಿ ಹಂಬಲಿಸಿ ಹಂಬಲಿಸಿ ಮೊರೆಯಿಡುವ ಕೆಲವು ಪ್ರಾರ್ಥನೆಗಳು, ಒಮ್ಮೆ ಆ ದುಃಖವು ಶಮನವಾಗುತ್ತಲೇ ಮೂಲಧ್ಯೇಯವನ್ನು ಮರೆಯುವ ಸ್ವಭಾವವನ್ನೂ ಹೊಂದಿರುತ್ತವೆ. ಫಲಾಪೇಕ್ಷೆಯಿಂದ ಸಲ್ಲಿಸಲ್ಪಡುವ ಯಾವುದೇ ಬೇಡಿಕೆಯು ಪ್ರಾರ್ಥನೆ ಆಗಲಾರದು. ಅದೂ ಪರಿಶುದ್ಧ ಪಥದಲ್ಲಿಯೂ ಸಹಿತ ನಡೆಯುವ “ಲೌಕಿಕ ವ್ಯವಹಾರ”ದ ಘಟನೆಯಾಗಿ ರೂಪಿತವಾಗಿರುತ್ತದೆ. ಆದರೂ ಈ ರೀತಿಯ ಫಲಾಪೇಕ್ಷೆಯಿಂದ ಮಂಡಿಸಲ್ಪಡುವ ಬೇಡಿಕೆಗಳು “ಪ್ರಾರ್ಥನೆಯ ಪಥ”ದಲ್ಲಿ ಪ್ರಥಮ ಹೆಜ್ಜೆಗಳು ಎನ್ನುವದು ಅಷ್ಟೇ ಮುಖ್ಯ ಸಂಗತಿಯೂ ಆಗಿದೆ.


ವಿಶ್ವ ರಹಸ್ಯವನ್ನು ಅರಿಯಲು ಮನುಕುಲಕ್ಕೆ ಇರುವ ತುಡಿತ, ಅದನ್ನು ಅಭಿವ್ಯಕ್ತಗೊಳಿಸುತ್ತಿರುವ ಪಥದಲ್ಲಿ ಹಂತಗಳು ಹಲವು ಸವಾಲುಗಳನ್ನು, ವ್ಯಕ್ತಿಯ ಆತ್ಮಶೋಧಕ್ಕಾಗಿಯೇ ರೂಪಿಸಿರುತ್ತದೆ. ಗುರಿ ಹೇಗೆ ಪರಿಶುದ್ಧ ಗಮ್ಯವೋ ಹಾಗೆಯೇ ಪಥವೂ ಅಷ್ಟೇ ಪರಿಶುದ್ಧವಾದ ಹಂಥದಲ್ಲಿದ್ದಲ್ಲಿ ಮಾತ್ರ “ಪ್ರಾರ್ಥನೆಯ ಗಮ್ಯ”ವಾದ ಆ ವಿಶ್ವಪ್ರೇಮದ ಧಾರೆ ಸತತವಾಗಿ ದೊರೆಯುತ್ತದೆ. ಇದನ್ನೇ ರೀತಿಯ ಪಥ ಮತ್ತು ಗಮ್ಯದ ಸುಸಂಬದ್ಧವಾದ ಸಂರಚನೆಯ ಜೀವನ ವಿಧಾನವನ್ನು ರೂಪಿಸಿಕೊಳ್ಳಲು, ಹಾಗೂ ಆಧ್ಯಾತ್ಮಿಕ ಜೀವನದ ಗತಿ ವಿಧಾನಗಳನ್ನು ಅರಿತುಕೊಳ್ಳಲೂ ಸಹಿತ ಈ ಪ್ರಾರ್ಥನಾ ಕ್ರಮವೇ ಮಾರ್ಗದರ್ಶನ ನೀಡುತ್ತಿದೆ. ಸಂಪೂರ್ಣ ಶರಣಾಗುವದು ಎಂದರೆ ತನ್ನ ವ್ಯಕ್ತಿತ್ವವನ್ನು ಕಳೆದುಕೊಳ್ಳುವದು ಎಂದರ್ಥವಲ್ಲ. ಆ ವಿಶ್ವಪ್ರೇಮದ ಸ್ಪಂದಕ್ಕೆ ನಮ್ಮ ಸ್ಪಂದನಗಳನ್ನೂ ಸಮೀಕರಿಸಿಕೊಳ್ಳುವ ಹಂತವಿದು. ಅಲ್ಲಿ ತಾದಾತ್ಮö್ಯತೆ ಇರುತ್ತದೆ;ಏಕತೆ ಇರುತ್ತದೆ. ಅಲ್ಲಿರುವದು ನಾದಪೂರ್ಣವಾದ “ಲಯ”.

ಈ “ಪಥ’ವನ್ನು ಅರಸುವ ಪ್ರಯತ್ನಕ್ಕೆ, ಮುಗ್ಧನಾಗಿದ್ದ ಮನುಜ, ಜ್ಞಾನದ ವಿಕಸನದ ಹಂತ ಹಂತಗಳಲ್ಲಿ , ಆ ಮುಗ್ಧತೆಯ ಸ್ಥಾನದಲ್ಲಿ ‘ಪ್ರಜ್ಞೆ”ಯನ್ನು ಆವಾಹಿಸಿಕೊಂಡು, ಗುರಿಯನ್ನು ಅರಸುತ್ತಾ ಹೊರಟಂತೆ, ಈ ಪಥವು “ಚೈತನ್ಯದ ನೆಲೆಗೆ” ಸಾಗುತ್ತಿರುವದನ್ನು ದರ್ಶಿಸಿದ. ಆ ಚೈತನ್ಯಕ್ಕೂ ತನ್ನ ಹೃದಯಾಂತರ್ಗತವಾಗಿರುವ ಚೇತನಕ್ಕೂ ಇರುವ ಅಪೂರ್ವವಾದ ಸಾಮ್ಯತೆಯನ್ನು ಅನುಭಾವಿಸಿದ ಘಳಿಗೆಯಲ್ಲಿ, ತಾನೇ ತಾನಾಗಿ ಹೊರಹೊಮ್ಮಿದ “ಧ್ವನಿಪೂರ್ಣ ನಾದಮಯ ಅಭಿವ್ಯಕ್ತಿ”ಯೇ ಪ್ರಾರ್ಥನೆ ಎನ್ನುವ ಆವರಣದಲ್ಲಿ ತನ್ನ ಕೃತಜ್ಞತೆಗಳನ್ನು ಸಲ್ಲಿಸಲು ಮತ್ತೆ ಮತ್ತೆ ಪ್ರಯತ್ನಿಸುತ್ತಾನೆ. ಈ ಪಥವು ಮತ್ತೂ ಮತ್ತೂ ಮುಂದುವರೆಯುತ್ತ ಅನಂತತೆಯತ್ತ ಕರೆದೊಯುತ್ತದೆ.

ಯಾವುದನ್ನು (ಗಮ್ಯತೆಯನ್ನು)ತಿಳಿದುಕೊಳ್ಳಲು ಯಾವುದರ(ಗಮ್ಯದೆಡೆಯ ಪಥದ) ಮೇಲೆ (ಗಮ್ಯದೆಡೆ ಮತ್ತು ಪಥದೆಡೆ)ಗಮನವಿಟ್ಟು ಸಾಗಬೇಕಾಗಿದೆಯೋ “ಅದೇ” ಜೀವನದ ವಿಧಾನವಾಗುತ್ತದೆ. ಹೀಗಾಗಿ ಇದನ್ನು ಕಂಡುಕೊಳ್ಳಲು ಇರುವ “ಪಥವು’ ಯಾವಾಗಲೂ ಸಾಧನಾ ಪಥವಾಗಿರುತ್ತದೆ.

-ಪುಟ್ಟು ಕುಲಕರ್ಣಿ
Exit mobile version