ಅಪ್ಪ
ಸದಾ ಸಲಿಕೆ ಗುದ್ದಲಿಗಳನ್ನು
ಹೆಗಲಿಗೇರಿಸಿಕೊಂಡು ಯುದ್ಧಕ್ಕೆ
ಹೊರಟಂಥ ಯೋಧ
ಬಾವಿ ಕಡಿಯುತ್ತಿದ್ದ ನಟ್ಟು ಕಡಿಯುತ್ತಿದ್ದ ಒಡ್ಡು ಹಾಕುತ್ತಿದ್ದ
ಪಟ್ಟಣದ ಜನರಿಗೆ ಕುಡಿಯಲಿಕ್ಕೆ
ತೊಳೆದುಕೊಳ್ಳಲಿಕ್ಕೆ ಹಿರೇ ಹೊಳಿಗೆ
ಕಾಲುವೆಯ ತೋಡುತ್ತಿದ್ದ
ಒಟ್ಟಾರೆ ನೆಲವ ಬಗೆಯುತ್ತಿದ್ದ
ಭೂಮಿಯ ಹೊರಮೈಯ ಮಣ್ಣೆಲ್ಲ
ಅವನ ಬೆವರಿಂದ ತೊಯ್ದು ಹೋಗಿದೆ
ಗರ್ಭದೊಳಗಿನ ರತ್ನವನ್ನು ಮಾತ್ರ ಮುಟ್ಟಲಿಲ್ಲ
ಸೇಂಡಿಲ್ಲದ ಲಾಠೀಣಿಗೆ ಕಡತಂದ ಚಿಮಣಿ ಎಣ್ಣಿ ಸುರಿದು
ಎಣ್ಣೆ ತೀರುವರೆಗೆ ಬತ್ತಿ ಆರುವವರೆಗೆ
ಹತ್ತಿರವೇ ಕುಳಿತು ಓದು ಬಾರದ ಅಪ್ಪ ಓದು ಕಲಿಸುತ್ತಿದ್ದ
ನನ್ನ ಒಣಗಿದ ತುಟಿಗಳಲ್ಲಿ
ಅಕ್ಷರಗಳು ಪಟಪಟಿಸುವಾಗ
ಒಡಕು ಪಾಟಿಯಮೇಲೆ ಮೊಗ್ಗುಗಳು ಬಿರಿಯುವಾಗ
ಅವನ ಕಣ್ಣುಗಳೇಕೆ ಹನಿಗೂಡುತ್ತಿದ್ದವೆಂದು ನನಗೆ ತಿಳಿದದ್ದು ತೀರ ಇತ್ತೀಚೆಗೆ
ಆಡಲು ಗುಂಡವಿರದ ನಾನು
ಬಾಬಾ ಹಕ್ಕಿ ಬಣ್ಣದ ಹಕ್ಕಿ
ಹಣ್ಣನು ಕೊಡಿವೆನು ಬಾಬಾ ಎಂದಿ
ಆಗಸವ ಗಲಗಲಿಸುತ್ತಿದ್ದ ಹಕ್ಕಿ ಸಂಕುಲವನ್ನು
ಎಷ್ಟು ಬಾರಿ ಕೈಮಾಡಿ ಕರೆದರೂ
ಒಂದು ಹಕ್ಕಿಯೂ ಬಳಿ ಸಾರಲಿಲ್ಲ
ನನ್ನ ಹತ್ತಿರ ಹಣ್ಣಿಲ್ಲದ್ದು ಹಕ್ಕಿಗಳಿಗೆ
ಗೊತ್ತಾಗಿಬಿಟ್ಟಿದೆ ಎಂದು ಅತ್ತುಬಿಡುತ್ತಿದ್ದೆ
ಅಪ್ಪ ನೆನಪಾಗಿ ಓದು ನೆನಪಾಗಿ
ಓಟ ಕೀಳುತ್ತಿದ್ದೆ…
( ಅವಸ್ಥೆ ಕವಿತೆಯ ಒಂದು ಭಾಗ, ೯೦ರ ದಶಕದಲ್ಲಿ ಬರೆದದ್ದು)
- ಡಾ. ಎಂ.ಡಿ. ಒಕ್ಕುಂದ