Site icon ಒಡನಾಡಿ

ಅಪ್ಪಾ, ಎಲ್ಲದಕ್ಕಿಂತ ನೀನೇ ಮೇಲು…

ತಂದೆ ಏಕೇ ನೀನು ದೂರ
ನೀನು ಎಂದರೆ ಏನೋ ಕಾತುರ
ನೀನು ನನಗೆ ಹೊಳೆವ ಅಂಬರ ನಾನು ನಿಂತ ನೆಲೆಯ ಸೂರ:
ನಿನ್ನ ಕಣ್ಣು ನೋಡುವಾಶೆ
ನನ್ನ ಬಿಂಬ ತೊಟ್ಟ ಶೀಶೆ
ನೋವು ಮೆಟ್ಟಿ ಕನಸು ಕುಟ್ಟಿ ರೂಪ ಕೊಟ್ಟ ಮುದ್ದು ಮೂಸೆ!

…..
ಭವದ ಭಾರ ಎತ್ತಿಕೊಂಡು
ಹಗಲು ರಾತ್ರಿ ದುಡಿದು ಮಿಡಿದು
ಎಣಿಕೆ ಇಲ್ಲದ ಬದುಕು ನಡೆದು ದೂರ ನಿಂತ ನಿನ್ನ ಕಂಡೆ:
ತಾಯಿ ನನಗೆ ಹೃದಯ ಎಂದೆ
ನಿಜದ ಬದುಕು ನೀನು ತಂದೆ
ಸಿಟ್ಟು ಸಿಡುಕಿನಲ್ಲೇ ನಾನು ಮಧುರ ಭಾವ ಬೆದರಿ ಉಂಡೆ!

….
ಪ್ರೀತಿ ನೀತಿ ಕಲಿಸಿ ಕೊಟ್ಟು
ಕುಂದು ಕೊರತೆ ಆಗದಿರಲು
ಮುಚ್ಚಿಕೊಂಡು ಎಲ್ಲ ದಿಗಿಲು ಜೀವ ಕಾದ ನಮ್ಮ ಕೋಲು:
ಜಗದ ನೆರಳಿಗಿಂತ ಮಿಗಿಲು
ನೀನು ಕೊಟ್ಟ ನಿನ್ನ ಹೆಗಲು
ನೂರು ಭ್ರಮೆಯ ಅಳಿದು ಬಂದೆ ಎಲ್ಲಕ್ಕಿಂತ ನೀನೇ ಮೇಲು!


-ಡಾ. ಶ್ರೀಶೈಲ ಮಾದಣ್ಣವರ

ಲೇಖಕರ ಪರಿಚಯ: ಡಾ. ಶ್ರೀಶೈಲ ಮಾದಣ್ಣವರ ಅವರು ವೃತ್ತಿಯಲ್ಲಿ ಸರಕಾರಿ ವೈದ್ಯರು. ಬರಹ ಇವರ ಹವ್ಯಾಸ. ತಮ್ಮ ಹನಿಗವನ, ಕವನ ಹಾಗೂ ಹಲವು ಲೇಖನಗಳ ಮೂಲಕ ಇವರು ಸಾಹಿತ್ಯ ವಲಯದಲ್ಲಿಯೂ ಪರಿಚಿತರಾದವರು.

Exit mobile version