ಉಡುಪಿ: ರಾಜ್ಯದಲ್ಲಿ ಬಹುತೇಕ ಆಗಸ್ಟ್ ನಂತರ ಶಾಲೆಗಳನ್ನು ಪ್ರಾರಂಭ ಮಾಡಬಹುದು. ಪೋಷಕರ ಅಭಿಪ್ರಾಯ ಸಂಗ್ರಹಿಸಿ, ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ನಿರ್ಧರಿಸುತ್ತೇವೆ. ಅಲ್ಲಿಯವರೆಗೆ ಯಾವುದೇ ಶಾಲೆಯನ್ನು ಪ್ರಾರಂಭಿಸುವ ಉದ್ದೇಶವೂ ಇಲ್ಲ, ತೆರೆಯುವುದೂ ಇಲ್ಲ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ಮಂಗಳವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ನಮಗೊಂದು ನಿರ್ದೇಶನ ಕೊಟ್ಟಿದೆ. ಎಲ್ಲ ಶಾಲಾ ಮಕ್ಕಳ ಪೋಷಕರ ಜೊತೆ ಸಂವಾದ ಮಾಡಬೇಕು. ಅವರ ಅಭಿಪ್ರಾಯಗಳನ್ನು ಸಂಗ್ರಹಿಸಬೇಕು, ಪೋಷಕರ ಅಭಿಪ್ರಾಯ ಕ್ರೋಢೀಕರಿಸಿ, ಅದರ ಆಧಾರದ ಮೇಲೆ ಶಾಲಾರಂಭ ಮಾಡಬೇಕಾಗಿದೆ. ಆದ್ದರಿಂದ ಬಹುತೇಕ ಆಗಸ್ಟ್ ನಂತರ ಶಾಲೆ ಶುರುವಾಗಬಹುದು ಎಂದರು.
ಶಾಲೆ ಪ್ರಾರಂಭಿಸುವ ಬಗ್ಗೆ ಸಚಿವ ಸಂಪುಟದಲ್ಲಿ ಕೂಡ ನಾವು ಚರ್ಚೆ ಮಾಡುತ್ತೇವೆ. ಆಮೇಲೆಯೇ ನಿರ್ಧಾರ ತೆಗೆದುಕೊಳ್ಳುತ್ತೇವೆ. ಅಲ್ಲಿಯವರೆಗೆ ಯಾವುದೇ ಶಾಲೆಯನ್ನು ಪ್ರಾರಂಭಿಸುವುದಿಲ್ಲ. ನನ್ನಲ್ಲಿಯೂ ಚಿಕ್ಕ ಮಕ್ಕಳನ್ನು ಸದ್ಯಕ್ಕೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪೋಷಕರು ಹೇಳಿದ್ದಾರೆ. ಮುಂದೆ ಶಾಲೆ ಆರಂಭಿಸುವಾಗಲೂ ಹಂತ ಹಂತವಾಗಿ ಪ್ರಾರಂಭಿಸುತ್ತೇವೆ. ಮೊದಲು ಪ್ರೌಢ ಶಾಲೆ, ನಂತರ ಮಾಧ್ಯಮಿಕ ಶಾಲೆ, ಆಮೇಲೆ ಹಿರಿ ಪ್ರಾಥಮಿಕ ಶಾಲೆ, ಹೀಗೆ ಎಲ್ಲರ ಹಿತವನ್ನು ಕಾಪಾಡಿಕೊಂಡು ಶಾಲಾರಂಭಿಸುತ್ತೇವೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.