Site icon ಒಡನಾಡಿ

ದಾಂಡೇಲಿಯಲ್ಲೊಬ್ಬ ಅಪರೂಪದ ಪೊಲೀಸ್‌ ಅಧಿಕಾರಿ

ಪೊಲೀಸ್ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳೆಂದರೆ (ಕೆಲವರನ್ನು ಹೊರತು ಪಡಿಸಿ) ಜನ ಸಂಶಯಂದಲೇ ನೋಡುವಂತಹ ಕಾಲ ಇದು. ಆದರೆ ಕೆಲವರು ಮಾತ್ರ ಈ ಅಪವಾದಗಳಿಗೆ ಹೊರತಾಗಿರುವವರಿರುತ್ತಾರೆ. ಅಂಥವರಲ್ಲಿ ಇತ್ತೀಚೆಗೆ ನಿವೃತ್ತರಾದ ಪಿ.ಎಸ್.ಐ ಪಿ.ಎಚ್. ಶೇತಸನದಿ ಒಬ್ಬರು ಎಂದರೆ ಅತಿಶಯೋಕ್ತಯಾಗಲಾರದು. 

     ಪರಮೇಶ್ವರಪ್ಪ ಹನ್ಮಂತಪ್ಪ ಶೇತಸನದಿ ಎಂಬ ಪಿ.ಎಸ್.ಐ ಸುಮಾರು 38 ವರ್ಷಗಳ ಕಾಲ ಇಲಾಖೆಯಲ್ಲಿ ಪೋಲಿಸ್ ಪೇದೆಯಿಂದ ಪಿ.ಎಸ್.ಐ ವರೆಗೂ ಸೇವೆ ಸಲ್ಲಿಸಿ ನಿವೃತ್ತನಾದರೂ ಒಂದೇ ಒಂದು ಗುಂಟೆ ಜಾಗ ಖರೀದಿಸಿಲ್ಲ. ಒಂದೇ ಒಂದು ಸಣ್ಣ ಮನೆ ನಿರ್ಮಿಸಿಕೊಂಡಿಲ್ಲ ಅಂದರೆ ನಂಬಲಾಗುತ್ತಿಲ್ಲ ಅಲ್ವೆ.  ಆದರೆ ನಂಬಲೇಬೇಕಾದ ವಾಸ್ತವ ಇವರದ್ದು.  ಮೂಲತಹ  ಹಾವೇರಿ ಜಿಲ್ಲೆಯ ಹಿರೇಕೆರೂರಿನವರಾಗಿರುವ ಇವರು ಬಹಳ ಬಡಕುಟಂಭದಿಂದ ಬಂದವರು. ಹಿರಿಯ ಸಹೋದರನ ನಿಧನಾನಂತರ ಕುಂಟಭದ ಭಾರವೆಲ್ಲ ಇವರ ಮೇಲೆ.  ಪಿ.ಯು.ಸಿ. ಮುಗಿಸಿದ ತಕ್ಷಣ ಪೊಲೀಸ್ ಇಲಾಖೆಗೆ ಆಯ್ಕೆ.  1980 ರಲ್ಲಿ ಕಾರವಾರದಿಂದ ಸೇವೆಯಾರಂಭಿಸಿದ ಇವರು ನಂತರ ಹೊನ್ನಾವರ,  ಮುಂಡಗೋಡ, ಶಿರಸಿ, ದಾಂಡೇಲಿಯಲ್ಲಿ ಕಾರ್ಯನಿರ್ವಹಿಸಿ 2012ರಲ್ಲಿ  ಇಲ್ಲಿಂದ ಪಿ.ಎಸ್.ಐ ಆಗಿ ಪದೋನ್ನತ್ತಿಗೊಂಡು ಕಾರವಾರ, ಭಟ್ಕಳ, ಅಬಿಕಾನಗರ, ಕಾರವಾರ ಕಾವಲು ಪಡೆಯಲ್ಲಿ ಕಾರ್ಯ ನಿರ್ವಹಿಸಿ ಕೊನೆಯಲ್ಲಿ ದಾಂಡೇಲಿ ಗ್ರಾಮೀಣ ಠಾಣೆಯ ಅಪರಾಧ ವಿಭಾಗದ ಪಿ.ಎಸ್.ಐ ಆಗಿ ಸೇವೆ ಸಲ್ಲಿಸಿ ಮೇ 31ಕ್ಕೆ ನಿವೃತ್ತರಾದರು.  ತಮ್ಮ  ಖಾಸಗಿ ಹಾಗೂ ವೃತ್ತಿ ಜೀವನದುದ್ದಕ್ಕೂ ಯಾರಿಗೂ  ನೋಯಿಸಿದವರಲ್ಲ. ವೃತ್ತಿಯಲ್ಲಿ ಯಾರಿಗೂ ಪೀಡಿಸಿದವರಲ್ಲ. ಕೈ ಚಾಚಿದವರಲ್ಲ. ಪೊಲೀಸ್ ಇಲಾಖೆಯಲ್ಲಿಯೇ ಒಬ್ಬ ‘ಡಿಪರೆಂಟ್’ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದವರು. ಸರಳತೆಯ ಬದುಕು ನಡೆಸಿದವರು. ‘ ನಾನು ಬಡತನದಿಂದ ಬಂದವ. ಬಡತನದ ಅರಿವು ನನಗಿದೆ. ಹಾಗಾಗಿ ನನಗೆ ಬೇರೆಯವರಿಗೆ ತೊಂದರೆಕೊಡುವ ಮನಸ್ಸಾಗುತ್ತಿರಲಿಲ್ಲ’ ಎಂದು ಹೇಳುವ ಇವರು ತಮ್ಮ ಸಂಬಳ ಬಿಟ್ಟು ಗಿಂಬಳಕ್ಕಾಗಿ ಯಾರಿಗೂ ಕಾಡಿಸಿದವಲ್ಲ. ಇಂತಹ ಒಬ್ಬ ಪ್ರಾಮಾಣಿಕ ಅಧಿಕಾರಿ ತನ್ನ ಇಡೀ ವೃತ್ತಿ ಜೀನವನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದಿದ್ದಾರೆಬುದೇ ನಮ್ಮ ಹೆಮ್ಮೆ. 

  ತಾನು ನೌಕರಿ ಸೇರುತ್ತಿದ್ದಂತೆಯೇ ತನ್ನ ಬೆನ್ನಿಗೆ ಬಿದ್ದ ಇಬ್ಬರು ಸಹೋದರಿಯರನ್ನು, ಒಬ್ಬ ಸಹೋದರನ್ನು ಮದುವೆ ಮಾಡಿ ಹಿರಿಯನಾದರೂ ನಂತರ ತಾನು ವೈವಾಹಿಕ ಜೀವನಕ್ಕೆ ಕಾಲಿರಿಸಿದವರು. ಊರಲ್ಲಿರುವ ಮನೆ ಹೊಲವನ್ನು ಸಹೋದರನ ದೇಖರಿಕೆಗೆ ಬಿಟ್ಟಿವರು. ಆಸ್ತಿ ಬೇಕೆಂದವರಲ್ಲ.  ಈಗ ನಿವೃತ್ತಿಯಾಗಿದೆ. ಊರಲ್ಲಿ ಒಂದು ಮನೆಯಾಗುವಷ್ಟು ತುಂಡು ಜಾಗ ನೋಡಿ ಸಣ್ಣ ಮನೆಕಟ್ಟಿಕೊಂಡು ತನ್ನ ಇಬ್ಬರು ಗಂಡು ಮಕ್ಕಳ ಮದುವೆ ಕಾರ್ಯ ನೆರವೇರಿಸಿದರೆ ಸಾಕು ಎನ್ನುತ್ತಿದ್ದಾರೆ ಪರಮೇಶ್ವರಪ್ಪ ಶೇತಸನದಿ. ಪೊಲೀಸ್ ಇಲಾಖೆಯಲ್ಲಿಯೂ ಸಹ ಯಾರ್ಯಾರೋ ಪ್ರಶಸ್ತಿ ಗಿಟ್ಟಿಸಿಕೊಳ್ಳುತ್ತಾರೆ. ಆದರೆ ಇಂತಹ ಓರ್ವ ಪ್ರಾಮಾಣಿಕ  ಪೋಲಿಸ್ ಅಧಿಕಾರಿ ಸರಕಾರದ ಗೌರವಗಳಿಂದ ವಂಚಿಸಲ್ಪಡುವುದು ವಿಪರ್ಯಾಸ.  ಇಂತಹ ಪೋಲೀಸ್ ಅಧಿಕಾರಿ ನಮ್ಮೆದುರು ಎಷ್ಟು ಜನ ಸಿಗಬಹುದು. ನಿಜಕ್ಕೂ ಇವರು ಪೊಲೀಸ್ ಇಲಾಖೆಗೂ, ಸಿಬ್ಬಂದಿಗಳಿಗೂ ಮಾದರಿಯಾಗಲಿ ಎಂದು ಹೇಳೋಣವೆ…

                          -ಬಿ.ಎನ್.‌ ವಾಸರೆ

Exit mobile version