Site icon ಒಡನಾಡಿ

ಕುಂಚ ಕಲೆಗೆ ಜೀವ ತುಂಬುವ ಪೇಂಟರ್ ಮಲ್ಲಪ್ಪ

ಜೀವನವೊಂದು ಕಲೆ: ಕಲೆಯ ಕಲಿಸುವುದೆಂತು?

ಸಾವಿರದ ನಿಯಮ, ಯುಕ್ತಿಗಳನೊರೆದೊಡೆಯಂ

ಆವುದೋ ಕುಶಲತೆಯದೊಂದಿರದೆ ಜಯವಿರದು

ಆ ವಿವರ ನಿನ್ನೊಳಗೆ, ಮಂಕುತಿಮ್ಮ!

   ಇದು ಬದುಕು ಮತ್ತು ಕಲೆಯ ಬಗ್ಗೆ ಡಿವಿಜಿಯವರು ಬರೆದ ಅದ್ಭುತ ಸಾಲುಗಳು.  ಜೀವನವೇ ಒಂದು ಕಲೆ. ಅದನ್ನು ಕೊಳೆಯ ಕಲೆಯಾಗಿಸಿಕೊಳ್ಳದೇ ಕಲೆಯ ಕಲೆಯಾಗಿಸಿಕೊಳ್ಳುವುದೂ ಸಹ ಒದು ಕಲೆಯೇ ಆಗದೆ.  ಕಲೆ ಎಂದರೆ ಕೇವಲ ಲಲಿತ ಕಲೆಗಳು ಮಾತ್ರವಲ್ಲ.  ಬದುಕೇ ಒಂದು ಕಲೆಯಾದರೆ…? ಅದಕ್ಕಿಂತ ದೊಡ್ಡ ಸಾರ್ಥಕತೆ ಬೇರೊಂದಿರದು.  ಕಲೆ ಮತ್ತು ಬದುಕು ಇವರಡೂ ಸಹ ಒಂದಕ್ಕೊಂದು ಹೊಂದಿಕೊಳ್ಳೂವಂತಹದ್ದಾಗಿವೆ. ಜೀವನ ಕಲೆ ಬಲ್ಲಾತ ಯಶಸ್ಸಿನ ಮೆಟ್ಟಿಲೇರಲು ಸಾದ್ಯವೆನ್ನುತ್ತಾರೆ ಅರಿತವರು. ಹಾಗಾಗಿಯೇ ಒಬ್ಬ ಕಲಾವಿದ ಕಲೆಯನ್ನೇ ಬದುಕನ್ನಾಗಿಸಿಕೊಳ್ಳುತ್ತಾನೆ. ಒಬ್ಬ ಸಾಧಕ ಬದುಕನ್ನೇ ಕಲೆಯನ್ನಾಗಿಸಿಕೊಳ್ಳುತ್ತಾನೆ.

  ಬಣ್ಣದ ಬದುಕಿನ ಅದ್ಭುತ ಕಲಾವಿದ ಮಲ್ಲು ಪೇಂಟರ್

  ಕಲೆ ಯಾರ ಸ್ವತ್ತಲ್ಲದಿದ್ದರೂ ಎಲ್ಲರೂ ಕಲವಿದರಾಗಲು ಸಾದ್ಯವಿಲ್ಲ. ಅದರಲ್ಲೂ ಯಾವ ಗುರುವಿಲ್ಲದೇ, ತರಬೇತಿಯಿಲ್ಲದೇ ಏಕಲವ್ಯನಂತೆ ತಾನು ತಾನಾಗಿಯೇ ವಿದ್ಯೆ ಕಲಿತು ಆಕ್ಷೇತ್ರದಲ್ಲಿ ಸಾಧಿಸುವುದಿದೆಯಲ್ಲ ಅದಕ್ಕಿಂತ ದೊಡ್ಡದಾದ ಹೆಚ್ಚುಗಾರಿಕೆ ಮತ್ತೊಂದಿರದು.  ಆಸಾಲಿನಲ್ಲಿ ನಮ್ಮ ಹಳೆದಾಂಡೇಲಿಯ ಯುವ ಕುಂಚ ಕಲಾವಿದ ಮಲ್ಲು ಪೇಂಟರ್ ಅಲಿಯಾಸ ಮಲ್ಲಪ್ಪ ಹರಿಜನ್ ನಿಲ್ಲುತ್ತಾರೆ. ಮಲ್ಲಪ್ಪ ಶಾಲೆ ಕಲಿತಿದ್ದು ಕೇವಲ ಎಸ್.ಎಸ್.ಎಲ್.ಸಿ ಮಾತ್ರ. ಮನೆಯಲ್ಲಿಯೂ ಹೇಳಿಕೊಳ್ಳುವಂತಹ ಸುಸ್ಥಿತಿಯಿರಲಿಲ್ಲ. ಆಗಲೇ ಹಸಿವನ್ನು ನೀಗಿಸಿಕೊಳ್ಳಲು ಈತ ರವಿ ಮೆಸ್ತಾ ಎಂಬ ಕಲಾವಿದನ ಜೊತೆ ಪೇಂಟಿಗ್ ಮತ್ತು ಇತರೆ ಕುಂಚ ಕೆಲಸಗಳಿಗೆ ಕೂಲಿಯಾಳಾಗಿ ಹೋಗಲಾರಂಬಿಸಿದ್ದ. ಯಾವ ತರಬೇತಿಗೂ ಹೋಗದೇ ಕೆಲಸ ಮಾಡುತ್ತಲೇ ಕಲಿತ. ಆತ ಈಗ ಬಹು ಬೇಡಿಕೆಯ ‘ಮಲ್ಲು ಪೇಂಟರ್’ ಆಗಿ ಬೆಳೆದು ನಿಂತಿದ್ದಾನೆ.

ವನ್ಯಜೀವಿ, ಪರಿಸರವೆಂದರೆ ಪ್ರೀತಿ

   ಏನನ್ನೇ ತೋರಿಸಿದರೂ ಅದಕ್ಕೆ ತದ್ರೂಪವಾಗಿ ಚತ್ರ ಬಿಡಿಸಬಲ್ಲಂತಹ ಕೌಶಲ್ಯವಿರುವ ಮಲ್ಲಪ್ಪ ಹರಿಜನ ಈಗ ಹೆಚ್ಚಾಗಿ ತೊಡಗಿಸಿಕೊಂಡಿರುವುದು ವನ್ಯಜೀವಿಗಳ ಚಿತ್ರ ಬಿಡಿಸುವುದರಲ್ಲಿ. ಯಾಕೆಂದರೆ ಅವನಿಗೆ ಅರಣ್ಯ ಇಲಾಖೆಯ ಬೇಡಿಕೆಯೂ ಹೆಚ್ಚಿದೆ. ದಾಂಡೇಲಿ ಅರಣ್ಯದಲ್ಲಿ ಕಾಣಸಿಗುವ, ಆನೆ, ಹುಲಿ, ಕರಡಿ, ಹಾರ್ನಬಿಲ್ ಸೇರಿದಂತೆ ಹಲವು ವನ್ಯಜೀವಿಗಳನ್ನು ಯಥಾವತ್ತಾಗಿ ಚಿತ್ರಿಸುವ ಮಲ್ಲಪ್ಪ ಕಾಡಿನ ಮರ, ಗಿಡಗಳನ್ನು ಬಿದಿರನ್ನೂ ಕೂಡಾ ಹುಬೇ ಹುಬೇ ಅನ್ನುವ ರೀತಿಯಲ್ಲಿ ತನ್ನ ಬಣ್ಣದಿಂದ ಅರಳಿಸುತ್ತಾನೆ. ಜೊತೆಗೆ ಸಿಮೆಂಟ್‍ನಿಂದ ಪ್ರಾಣಿ ಪಕ್ಷಿಗಳನ್ನು ತಯಾರಿಸಿ ಅವುಗಳಿಗೆ ಬಣ್ಣ ಹಚ್ಚಿ ಜೀವ ತುಂಬುತ್ತಾನೆ.  

 ದಾಂಡೇಲಿಯಷ್ಟೇ ಅಲ್ಲದೇ, ಹಳಿಯಾಳ, ಯಲ್ಲಾಪುರ ದಿಂದ ಗುಲ್ಬರ್ಗಾ, ಅಳಂದದವರೆಗೂ ತನ್ನ ಕುಂಚ  ಕಲೆ ಮೂಡಿಸಿ ಬಂದಿರುವ  ಈತ ನಿಸರ್ಗ ಧಾಮಗಳಿಗೂ ಕೂಡಾ ಪಕೃತಿಗೆ ಹತ್ತಿರವಾದ ಬಣ್ಣ ಹಚ್ಚಿದ್ದಾನೆ. ಸದ್ಯಕ್ಕಂತೂ ಈತ ಬಹು ಬೇಡಿಕೆಯ ಕಲಾವಿದನಾಗಿದ್ದು, ಈ ಕಲೆಯನ್ನೇ ತನ್ನ ಬದುಕು ಮತ್ತು ದುಡಿಮೆಯನ್ನಾಗಿ ಮಾಡಿಕೊಂಡಿದ್ದಾನೆ. ಈತನ ಪೇಂಟಿಗ್‍ನ್ನು ನೋಡಿದರೆ ಜೀವಂತ ಪ್ರಾಣಿ, ಪಕ್ಷಿಗಳೆ ಎದುರು ನಿಂತಿವೆಯೇನೋ ಎಂಬಂತೆ ಭಾಸವಾಗುತ್ತಿದ್ದು,  30ರ ಹರೆಯದಲ್ಲಿರುವ ಈ ಎಳೆಯ ಇನ್ನೂ   ಬೆಳೆಯಬೇಕೆಂಬುದೇ ಎಲ್ಲರ ಆಶಯ.

-ಬಿ.ಎನ್.ವಾಸರೆ

Exit mobile version