ಭಾಷಾ ವ್ಯವಸ್ಥೆಯಲ್ಲಿ ಇರುವ ಈ “ಲಿಂಗದ” ಕಲ್ಪನೆ ಮತ್ತು ಪ್ರತಿಪಾದನೆ ಒಮ್ಮೊಮ್ಮೆ ವರದಂತೆ ಕಂಡರೂ ಮರಕ್ಷಣವೇ ಶಾಪದಂತೆಯೇ ತೋರುತ್ತಿವೆ. ಪಾಣಿನಿಯ ಲಾಕ್ಷಣಿಕ ನಿಯಮದ ಆಧಾರದಲ್ಲಿ ರೂಪಿತಗೊಂಡು ಮಾರ್ಪಾಟು ಹೊಂದಿದ ಭಾರತೀಯ ಭಾಷೆಗಳ ಪೈಕಿ ಕನ್ನಡವೂ ಅದರಿಂದ ಹೊರತಾಗಲಿಲ್ಲ. ಈಗ ಈ ಪ್ರಶ್ನೆಯನ್ನು ಕೇಳಿಕೊಳ್ಳುವ ಮನಸ್ಸು , ಈ ಲಿಂಗಸಂಬಂಧಿ ವಿಷಯಗಳ ಗೋಜಿಗೆ ಸಿಲುಕಿ ಒದ್ದಾಡುತ್ತಿದೆ ಎಂದೆನಿಸುತ್ತಿದೆ.
ಹಾಗಾದರೆ ಈ ಲಿಂಗದ ಕಲ್ಪನೆ ಬಂದದ್ದು ಎಲ್ಲಿಂದ? ಲಾಕ್ಷಣಿಕರು ಹುಟ್ಟು ಹಾಕಿದ್ದೇ? ಅಥವಾ ಅದನ್ನು ಅವರು ವರ್ಗೀಕರಿಸುವ ಕಾರ್ಯ ನೆರವೇರಿಸಿದ್ದಾರೆಯೇ? ಪ್ರಾಯಃ ಎರಡನೇಯದು ನಿಜವೆಂದು ಭಾವಿಸಬಹುದು. ಇಡೀ ವಿಶ್ವವೇ (ಸಧ್ಯ ಭೂಮಂಡಳದ ಪರಿಧಿ) ಸೃಷ್ಟಿಕ್ರಿಯೆಯ ಮೂಲಕವೇ ಮುಂದುವರೆದಿರುವ ಜಗತ್ತು ಹೆಣ್ಣು-ಗಂಡು (ಪ್ರಕೃತಿ-ಪುರುಷ) ಎನ್ನುವ ದ್ವೈತದಲ್ಲಿಯೇ ಇರುವದನ್ನು ಕಾಣುತ್ತೇವೆ. ಮಾನವ-ಪಶು-ಪ್ರಾಣಿ-ಕೀಟ -ವೃಕ್ಷಗಳಲ್ಲಿಯೂ ಸಹಿತ ಈ ಪುರುಷ-ಪ್ರಕೃತಿಯ ವೈವಿಧ್ಯತೆ ಸಹಜ ಸ್ಥಿತಿ ಎಲ್ಲಡೆಗೂ ಇದೆ.
ಇನ್ನು ವ್ಯಾಕರಣಗಳಲ್ಲಿ ನಪುಂಸಕವೆಂದು ವರ್ಗೀಕರಿಸಲ್ಪಟ್ಟಿರುವ ಯಾವುದೇ ವಸ್ತುವೂ ಭಾಔಪ್ರಪಮಚಕ್ಕೆ , ಸಾಮಾಜಿಕ ಪ್ರಪಮಚಕ್ಕೆ ಬಂದಾಗ ಪುಲ್ಲಿಂಗವೋ ಸ್ತ್ರೀಲಿಂಗವೋ ಆಗಿ ಪರಿವರ್ತನಗೊಳ್ಳುವ ಚೋದ್ಯವನ್ನು ವಿಶ್ಲೇಷಣೆಗೆ ಒಳಪಡಿಸಬೇಕಿದೆ. ಎಲ್ಲಿಯವರೆಗೂ ಮನುಷ್ಯ ಪ್ರಕೃತಿಯನ್ನು ಅವಲಂಬಿಸಿಕೊಮಡು ಬದುಕಿನ ರೇಖೆಗಳನ್ನು ರೂಪಿಸಿಕೊಳ್ಳುತ್ತದ್ದನೋ ಅಲ್ಲಿಯವರೆಗೂ ಅವನು/ಅವಳು ಕಂಡ ಪ್ರತಿಯೊಂದು ವಸ್ತುವೂ ವ್ಯಕ್ತಿವಾಚಕವಾಗಿಯೇ ರೂಪುಗೊಳ್ಳುತ್ತಿತ್ತು. ಇದು ಪ್ರಕೃತಿಯೊಂದಿಗಿನ ಅವಿನಾಭಾವ ಸಂಬಂಧದ ಅಸ್ಮಿತೆಯ ಸ್ಥಿತಿಯಾಗಿತ್ತು. ತುಲಸೀವಿವಾಹದ ಹಿಂದಿನ ಪುರಾಣ ಏನೇ ಇರಲಿ , ತುಲಸಿ ಕೇವಲ ವೃಕ್ಷವಲ್ಲ ಅವಳು ಸ್ತ್ರೀ!. ಅವಳಿಗೂ ವಿವಾಹವಿದೆ. ಗಿಡಗಳಲ್ಲಿಯೂ ಗಂಡು ಗಿಡ-ಹೆಣ್ಣುಗಿಡ ಎನ್ನುವ ವರ್ಗೀಕರಣ ಸಾಮಾನ್ಯ ಸಂಗತಿ. ಇದೇ ತೆರನಾದ ಬೇವಿನ ಮರ ಮತ್ತು ಅರಳೀ ಮರ ಒಂದೇ ಕಡೆ ಬೆಲೆದರೆ ಅದಕ್ಕೆ , “ದಂಪತಿಗಳೆಂದು” ಮದುವೆ ಮಾಡುವ ಪರಂಪರೆ ಈಗಲೂ ಇದೆ. ಬಹುಷಃ ಡೇಟಿಂಗ್ ನೋಡಿ ಮದುವೆ ಮಾಡಿಬಹುದಾದ ಸಂಗತಿಯೂ ಇರಬಹುದು.
ಮನೆಗಳಿಗೆ ಮರವನ್ನು ಕಡಿಯುವಾಗಲೂ ಸಹಿತ ಅದು ಹೆಣ್ಣೊ ಗಂಡೋ ಎನ್ನುವದನ್ನು ನೋಡುವ ಪರಿಪಾಠ , ಮಿಷನ್ ಗರಗಸ ಬರುವವರೆಗೂ ಇದ್ದದ್ದು ಸುಳ್ಳಲ್ಲವಲ್ಲ .ಫಲ ಬಿಡುವ ಮರಗಳನ್ನು ಹೆಣ್ಣು ಎಂದೂ ಫಲ ಬಿಡದ ಮರಗಳನ್ನು ಗಂಡುಗಿಡವೆಂದೂ ವರ್ಗೀಕರಿಸುತ್ತಿರುವ ಭಾವಪ್ರಪಂಚ , ಎಂದೂ ಈ ಲಿಮಗ ಸಂಬಂಧಿಯಾಗಿ ಗೊಂದಲಕ್ಕೆ ಒಳಗಾಗಿಲ್ಲ. ಹಸಿರುಕ್ರಾಂತಿಯ ಅತ್ಯಾಧುನಿಕ ವೈಜ್ಞಾನಿಕ ಬೆಳೆಯ ವಿಧಾನದಲ್ಲಿಯೂ ಗಂಡು ಬೀಜ ಹೆಣ್ಣು ಬೀಜದ ವಿಧಾನವನ್ನೇ ಬಳಸುತ್ತಿದೆ. ಪ್ರಕೃತಿ ಸಹಜದ ಈ ಭವಪ್ರಪಂಚ , ಮನುಷ್ಯನಿಗೆ ಶಬ್ದ ಗೊತ್ತಾಗಿ, ಅದಕ್ಕೊಂದು ಅಕ್ಷರದ ರೂಪ ಕಂಡುಕೊಂಡ ನಂತರದಲ್ಲಿ, ಭವಪ್ರಪಂಚದಲ್ಲಿ ಸ್ವತಂತ್ರವಾಗಿದ್ದ ಈ ನಿಯಮಬದ್ಧ ವ್ಯವಸ್ಥೆಯು ಭಾವಪ್ರಪಂಚದ -ಜೀವಾವಧಿ ಶಿಕ್ಷೆಯ ಹಂತಕ್ಕೆ ಸಿಲುಕಿದಂತೆ ಕಾಣುತ್ತಿದೆ.
ಇನ್ನು ಭಾಷೆಯ ವ್ಯವಸ್ಥೆ ಸಂಕೀರ್ಣದ್ದೋ ಅಥವಾ ಭಾಷಾಸೌಂದರ್ಯದ ಸಲುವಾಗಿ ಲಕ್ಷಣಗಳ ಹೆಸರಿನಲ್ಲಿ ನವೀಕರಣಗೊಳ್ಳುತ್ತ ಲಾಕ್ಷಣಿಕರ ಮೂಲಕವಾಗಿ ರೂಪಣೆಗೊಂಡಿರುವ ಶಬ್ದಗಳು ಮತ್ತು ಅವುಗಳ ಗುಣವಿಶೇಷಗಳು ಸಂಕೀರ್ಣವೋ ಎನ್ನುವದು ಜಿಜ್ಞಾಸೆಯ ವಿಷಯ. ಇದೊಂದು ಬೀಜ-ವೃಕ್ಷದ ನ್ಯಾಯ. ಈ ರೀತಿಯ ಲಕ್ಷಣ-ವಿಲಕ್ಷಣಗಳ ಅಧ್ಯಯನವನ್ನು ಲಾಕ್ಷಣಿಕರಿಗೆ ಬಿಟ್ಟುಕೊಟ್ಟ ಜನಸಮುದಾಯ ಮಾತ್ರ , ನಿಸರ್ಗಸಹಜವಾದ ಪುರುಷ-ಪ್ರಕೃತಿ , ಜೊತೆಗೆ ಎರಡೂ ಅಲ್ಲದ ವಿಷಯಗಳನ್ನು ಗಮನಿಸಿ ಅದಕ್ಕೊಂದು ತಮ್ಮದೇ ಆದ ಮಾನಕವನ್ನು ರೂಪಿಸಿಕೊಂಡಿದೆ. ಸಮುದ್ರರಾಜ(ಗಂಡು) , ಮೇಘರಾಜ(ಗಂಡು), ಆಕಾಶರಾಜ(ಗಂಡು) , ಮಳೆರಾಯ (ಗಂಡು) ಆದರೆ ನೆಲಕ್ಕೆ ಮುಟ್ಟಿದ ಈ ಮಳೆ ನೀರಾದಾಗ ಹೆಣ್ಣು (ಹೊಳೆಗಂಗವ್ವ) . ಪಡೆಯುವ ಭೂಮಿ ಹೆಣ್ಣೂ. ಅರಿಷಿಣದ ಪ್ರಕೃತಿ ಸಹಜ ಗಂಟುಗಳು ಮಕ್ಕಳು. ಜೋಡುಕಾಯಿ ಆಥವಾ ಹಣ್ಣು ಇದ್ದಲ್ಲಿ ಅಕ್ಕತಂಗಿಯರು . . . ಎಂದೆಲ್ಲಾ ಸಾಮಾನ್ಯದಲ್ಲಿ ಸಾಮಾನ್ಯವೆಂದು ಕಾಣುವ ಸಾಮಾಜಿಕ ಘಟನೆಗಳಲ್ಲೆಲ್ಲ ಈಗಲೂ ಪುಲ್ಲಿಂಗ-ಸ್ತ್ರೀಲಿಂಗವಾಚಕ ಪದಪ್ರಯೊಗವನ್ನೇ ಕಾಣುತ್ತೇವೆ. ಆದರೆ ಪ್ರಮಾಣ ಕಡಿಮೆಯಾಗುತ್ತಿದೆ.
ಆಧುನಿಕ ಬದುಕಿನ “ನಪುಂಸಕಲಿಂಗದ”ವಸ್ತುಗಳ ಬಳಕೆಯೇ ಜಾಸ್ತಿಯಾಗಿರುವ ಇಂದಿನ ಈ ವೈಜ್ಞಾನಿಕ ಸಾಮಾಜಿಕ ಘಟನೆಗಳಲ್ಲಿ ಈ ರೀತಿಯ ಲಿಂಗಸಂಬಂಧಿ ಪದಗಳ ಕುರಿತು ತಿರಸ್ಕಾರಭರಿತ ಕುತೂಹಲವಿದೆ. ಅದರಲ್ಲೂ ಮೆಟ್ರಿಕ್ ಹಂತದ ಮತ್ತು ಪಿಯುಸಿ ಹಂತದ ವಿದ್ಯಾರ್ಥಿಗಳಿಗೆ ಈ ಲಿಂಗಸಂಬಂಧಿ ವ್ಯಾಕರಣ ಕಲಿಸುವಾಗ , ಎಷ್ಟೋ ಬಾರಿ ಮುಜುಗರದ(/ಗೊಂದಲ)ದಲ್ಲಿಯೇ ಇಡೀ ವ್ಯಾಕರಣವನ್ನೇ ಹಾರಿಸಿಕೊಮಡು ಹೋಗುವ ಪರಿಪಾಠವೂ ಹೊಸದೆನಲ್ಲ. ಜೈವಿಕವಾಗಿರುವ ಹೆಣ್ಣು-ಗಂಡು ವ್ಯವಸ್ಥೆಯನ್ನು ಭಾಷಾಪದ್ಧತಿಯಲ್ಲಿಯೆ ಸಾಮಾಜಿಕ ವಿಷಯಗಳಿಗೆ ಅನ್ವಯಿಸಿ ಹೇಳುವದು ಒಂದು ಸವಾಲಾಗುತ್ತಿದೆ ಎನಿಸುತ್ತಿದೆ.
ಒಂದು ಪ್ರಕೃತಿ ಸಹಜ ಘಟನೆ ಭಾವವಾಗಿ ತದನಂತರ ಮತ್ತೆ ಅಭಿವ್ಯಕ್ತಗೊಳ್ಳಬೇಕೆಂಬ ತುಡಿತದಲ್ಲಿ ಬಂದಾಗ , ಅದಕ್ಕೆ ಸಹಕಾರಿಯಾಗಿ ನಿಲ್ಲುವ , ದೇಹದ ವ್ಯವಸ್ಥೆಯಲ್ಲಿಯೇ ರೂಪಣೆಗೊಂಡ ಧ್ವನಿಯ ವ್ಯವಸ್ಥೆಯ ಮೂಲಕವಾಗಿ ನಿರ್ಮಾಣಗೊಳ್ಳುವ ಶಬ್ದಗಳಲ್ಲಿ ಅಭಿವ್ಯಕ್ತಗೊಳ್ಳುವಾಗ , ನಂತರ ಶ್ರಾವ್ಯಗೊಳ್ಳುವಾಗ ಬರುವ ಈ ಸಮಸ್ಯೆ , ಶಬ್ದದ ಅಭಿವ್ಯಕ್ತಿ(ಉತ್ಪತ್ತಿ) ಮಾಡಿದವನಿಗೆ ಅದೊಂದು ಅನುಭವದ ಸಂಗತಿಯಾದರೆ , ಅದೇ ಶ್ರಾವ್ಯ ಮಾಡುತ್ತಿರುವ ವ್ಯಕ್ತಿಗೆ ಇದೊಂದು ಅವಸ್ಥೆ ಮಾತ್ರ. ಕೇಳಿಸಿಕೊಳ್ಳುತ್ತಿರುವ ವ್ಯಕ್ತಿಯಲ್ಲಿ ಈಗಾಗಲೇ ಆ ಶಬ್ದದ ಬಗೆಗೆ ಜ್ಞಾನವಿದ್ದಲ್ಲಿ/ಕಲ್ಪನೆಯಿದ್ದಲ್ಲಿ ಆಗ ಆ ಶಬ್ದವು ಅವನಲ್ಲಿ ಒಂದು ರೂಪವನ್ನು ಮೂಡಿಸಿ ಸಂವಹನಗೊಳ್ಳುತ್ತದೆ. ಇದನ್ನೇ ಸ್ಫೋಟಸಿದ್ಧಾಂತವೂ ಪ್ರತಿಪಾದಿಸುತ್ತಿದೆ. ಒಂದು ಭೌಗೋಳಿಕ ಪ್ರದೇಶದಲ್ಲಿ , ಅಲ್ಲಿನ ಸಹಜ ಅಂಶಗಳಿಂದಲೇ ರೂಪುಗೊಂಡು ಪ್ರಕಟಗೊಳ್ಳುವ ಶಬ್ದವೊಂದು ಮತ್ತೊಂದು ಭೌಗೋಳಿಕ ಪ್ರದೇಶದಲ್ಲಿ ಆ ಸಹಜವಾದ ಅರ್ಥವು ದೊರೆಯದೇ ಸಂವಹನಗೊಳ್ಳುವದು ಸಾಧ್ಯವಾಗುವದಿಲ್ಲ. ಇದು ಬೇರೇ ಬೇರೇ ಭಾಷೆಯ ವಿಷಯಕ್ಕಿಂತ ಒಂದೇ ಭಾಷೆಯ ಹಲವು ಭಾಗದಲ್ಲಿ ಗೋಚರವಾದಾಗಲಂತೂ , ಮತ್ತೂ ಇ ವಿಷಯ ಗೋಜಲಾಗುತ್ತದೆ.
ಇಲ್ಲಿ ನೇರವಾಗಿ ಲಿಂಗ ಸಂಬಂಧೀ ವಿಷಯವನ್ನೇ ಪ್ರಾಧಾನ್ಯವಾಗಿ ಗಮನಿಸಬೇಕಾಗಿರುವದರಿಂದ . ಪ್ರಕೃತಿ ಸಹಜದ ಹೆಣ್ಣು ಬಯಲು ಸೀಮೆಯಲ್ಲಿ ಸ್ತ್ರೀಲಿಂಗವಾದರೆ ಮಲೆನಾಡು- ಕರಾವಳಿಯಲ್ಲಿ ನಪುಂಸಕಲಿಂಗ. ತೀರ ಇತ್ತೀಚಿನ ವರೆಗೂ ದಕ್ಷಿಣಕನ್ನಡದಲ್ಲಿ ಒಡೆಯರು ಮಾತ್ರ ಪುಲ್ಲಿಂಗ. ಮನೆಯ ಕೆಲಸಕ್ಕೆ ಬರುವ ಆಳೂ ಸಹಿತ ನಪುಂಸಕಲಿಂಗದಲ್ಲಿಯೇ ಕರೆಯಲ್ಪಡುತ್ತಿದ್ದ ಉದಾಹರಣೆಗಳಿವೆ. ಕವಳ ಎನ್ನುವದು ಒಂದು ಕಡೆ ತಾಂಬೂಲವಾದರೆ ಮತ್ತೊಂದೆಡೆ ಅದು ಭಿಕ್ಷೆ! ಇದು ಸಾಮಾಜಿಕ ಸಂಗತಿಯ ಉದಾಹರಣೆಯಾಯಿತು .
ಆದರೆ ಆಧುನಿಕ ನಗರೀಕೃತ ಸಾಮಾಜಿಕ ವ್ಯವಸ್ಥೆಯಲ್ಲಿ ಜೀವನದ ವಿಭಾಜ್ಯ ಅಂಗಗಳೆಂದೇ (ಸಂ)ಭ್ರಮಿಸಲ್ಪಡುತ್ತಲೇ ಕೊಳ್ಳುತ್ತಿರುವ ವ್ಯಾಕ್ಯೂಮ ಕ್ಲೀನರ್/ ಕಾಳಿಂಗ್ ಬೆಲ್/ ಲ್ಯಾಂಡ್ ಫೋನ್/ ಮೋಬೈಲ್/ ಟೀವಿ/ ರಿಮೋಟ್/ ಏರ್ ಕೂಲರ್/ ಏರ್ ಕಂಡೀಶನರ್/ ಕಂಪ್ಯೂಟರ್/ ಲ್ಯಾಪ್ಟಾಪ್/ಮಿಕ್ಸರ್/ಗ್ರೈಂಡರ್/ಕುಕ್ಕರ್/ಓವನ್/ ಲೈಟರ್/ ಗ್ಯಾಸ್ ಸ್ಟೋ/ ಗೀಜರ್/ ಫ್ರಿಜ್/ ಇತ್ಯಾದಿಗಳೆಲ್ಲವೂ ನಪುಂಸಕಲಿಂಗದಲ್ಲಿಯೇ ಬಳಸಲ್ಪಡುತ್ತಿವೆ . ಆದರೆ ಅದೇ ಬೀಸುವಕಲ್ಲು ಜಾನಪದದ ಪ್ರಕೃತಿಯ ಅಂಶವಾಗಿ ಬದುಕಿದ ಗರತಿಗೆ ಅದು ಕಲ್ಲಲ್ಲ , ಬದಲಾಗಿ “ ಕಲ್ಲವ್ವ’ ’’ಮಾತಾಯಿ.( ಮೆಲ್ಲವ್ವ ರಾಗೀಯ”).
ಭಾಷಾಶಾಸ್ತ್ರದ ಹಿನ್ನೆಲೆಯಲ್ಲಿಯೇ ಇದನ್ನು ವಿಶ್ಲೇಶಿಸುವದು ಸಾಧ್ಯವೇ ಎಂದು ಗಮನಿಸಿದಾಗ ಆಶ್ಚರ್ಯವೊಂದು ಗೋಚರಿಸಿತು. ಸಾಂಸ್ಕೃತಿಕ ಆಯಾಮದಲ್ಲಿ , ಸ್ಥಳೀಯವಾಗಿ -ಜೀವನದ ಅವಿಭಾಜ್ಯ ಅಂಗವಾಗಿ -ರೂಪಣೆಗೊಂಡ ಯಾವುದೇ ವಸ್ತು ಕೇವಲ ವಸ್ತುವಾಚಕವಾಗಿ ಉಳಿಯುವದಿಲ್ಲ. ಅದಕ್ಕೊಂದು ವ್ಯಕ್ತಿತ್ವವನ್ನು ಆವಾಹಿಸಿಕೊಂಡು ಸಂಭ್ರಮ ಪಡುತ್ತದೆ. ಆದರೆ ಪರಕೀಯವಾದದನ್ನು ನಪುಂಸಕವೆಂದು ಭಾವಿಸಿ ಕಡೆಗಣಿಸಿ ಬಿಡುತ್ತದೆ ಎನಿಸುತ್ತದೆ. ಹೀಗಾಗಿ ನಮ್ಮ ಇಂದಿನ ನಮ್ಮ ವೈಜ್ಞಾನಿಕ ಬೆಳವಣಿಗೆಯ ತಂತ್ರಜನ್ಯ ಜೀವನವಿಧಾನ ಸಂಪೂರ್ಣವಾಗಿ ನಪುಂಸಕದಿಂದಲೇ ತುಂಬಿದೆ ಎಂದಾಯಿತು.
ಪ್ರಾಚೀನ ಸಮಸ್ಯೆ;
ಹಾಗಾದರೆ ಈ ಲಿಂಗದ ಸಮಸ್ಯೆ ತೀರ ಇತ್ತೀಚಿನದೇ ಎಂದು ಗಮನಿಸಿದರೆ , ಮೊದಲೂ ಈ ಸಮಸ್ಯೆ ಕಾಡಿದೆ ಎಂದಾಯಿತು. “ಇಲ್ಲದ ಲಿಂಗವನಲ್ಲಲ್ಲಿಗೆ ಉಂಟು ಮಾಡುವ ಈ ಲೀಲೆಯ ವಾರ್ತೆ ಎಲ್ಲಿಯದೋ ಗುಹೇಶ್ವರಾ?” (ಅಲ್ಲಮ1171), ಎನ್ನುವ ಈ ಪ್ರಶ್ನೆಯ ಹಿನ್ನೆಲೆಯಲ್ಲಿ ಈ “ಲಿಂಗ ವ್ಯಾಖ್ಯಾನ”ವನ್ನು ವಿಸ್ತರಿಸಬಹುದಾಗಿದೆ. ಅಲ್ಲಮನು ಹೇಳಿದ ಲಿಂಗದ ವಿಷಯದಲ್ಲಿ ಇರುವ ಅಧ್ಯಾತ್ಮಿಕ ಆವರಣವನ್ನು ಬಿಟ್ಟು ಸಾಮಾಜಿಕ ಆವರಣದಲ್ಲಿ ಗಮನಿಸಿದರೆ ಖಂಡಿತ ಉತ್ತರ ದೊರೆಯಬಹುದು.
“ಲೀನಮರ್ಥಂ ಗಮಯತಿತಿಲಿಂಗಂ” ಎನ್ನುವ ವ್ಯುತ್ಪತ್ತಿ ಇದೆ. ಇದನ್ನೇ ಭಾಷಾ ವ್ಯವಸ್ಥೆಯಲ್ಲಿ ಕೇಶೀರಾಜ “ಪುರುಷರೆ ಪುಲ್ಲಿಂಗಂ ಸ್ತ್ರೀಯರೇ ಸ್ತ್ರೀಲಿಂಗಂ ಎಂದು ವರ್ಗೀಕರಿಸಿ ಉಳಿದುದೆಲ್ಲವನ್ನೂ ನಪುಂಸಕವಾಗಿಸಿದ್ದು ಎಲ್ಲರಿಗೂ ತಿಳಿದ ವಿಷಯ. ಅಂದರೆ ಭಾವಪ್ರಪಂಚದಲ್ಲಿ ಭಾಷೆಯ ರೂಪಣೆಗೆ ನಿಯಮಗಳು ಅನಿವಾರ್ಯ ಎನ್ನುವ ಸ್ಥಿತಿಗೋ ಅಥವಾ ಭಾಷೆ ಇನ್ನೂ ಪರಿಪೂರ್ಣವಾಗಬೇಕಾಗಿದೆ ಎನ್ನುವ ವಿಷಯವನ್ನು ತಿಳಿಸುವ ಸಲುವಾಗಿಯೊ ರೂಪಿಸಲ್ಪಟ್ಟ ನಿಯಮಗಳು , ಭಾಷೆಯನ್ನು ವಿಸ್ತರಿಸುವ ಬದಲು ಬಂಧಿಸಿದವೆ ಎನ್ನುವ ಪ್ರಶ್ನೆ ಬರುತ್ತದೆ. ಭಾಷಾಶಾಸ್ತ್ರದ ವರ್ಗೀಕರಣದ ಸೂತ್ರಗಳ ಅನ್ವಯಿಕೆಯ ಆಚೆಯೇ ಇದ್ದು ಬಿಡುವ ಭವಪ್ರಪಂಚ ಈ ನಿಯಮಗಳ ಗೊಡವೆಗೆ ಹೋಗುವದೇ ಇಲ್ಲ. ಈ ನಿಯಮಗಳು ಜನಸಮುದಾಯವನ್ನು ಕಾಡಲೇ ಇಲ್ಲ. ಹೀಗಾಗಿ ಸ್ತ್ರೀಲಿಂಗವಾದ ಹೆಣ್ಣು ನಪುಂಸಕವಾಗಿಯೂ ಕೆಲವೆಡೆ ಪ್ರಚಾರಗೊಂಡಳು. ನಪುಂಸಕವೆಂದು ವರ್ಗೀಕರಿಸಲ್ಪಟ್ಟ ವಸ್ತು-ಪ್ರಾಣಿಗಳು ವ್ಯಕ್ತಿವಾಚಕವಾಗಿ (ಗಂಗೆ, ಗೌರಿ , ಬಸವ , ಹುಲಿಯಪ್ಪ . . . )ಸಂವಹನಗೊಳ್ಳುತ್ತಲೆ ಸಾಂಸ್ಕೃತಿಕ ಆಯಾಮವನ್ನು ಸಮೃದ್ಧಗೊಳಿಸುತ್ತಲೇ ಬಂದವು.
ಕೃಷಿಯಾಧಾರಿತ ಬದುಕಿನಲ್ಲಿ ರಂಟೆ ಪುರುಷ. ಆದರೆ ಅದೇ ಕೆಲಸವನ್ನು ಮಾಡುತ್ತಿರುವ ಟ್ಯ್ರಾಕ್ಟರ್ ನಪುಂಸಕ. ಬಾವಿ ಜಲ ತುಂಬಿ ನಿಂತಾಗ “ಹೊಳೆಗಂಗವ್ವ” . ಆದರೆ ಇದೀಗ ಬರಡಾಗಿ ನಿಂತಿರುವ ಬೋರ್-ವೆಲ್ ಪಂಪ್ “ ಕೂಡ ಹಳ್ಳಿಗಳಲ್ಲಿ “ಹೊಳೆಗಂಗವ್ವನ ರೂಪ ‘ ತಾಳುತ್ತಿದ್ದಾಳೆ. ಇದನ್ನೆಲ್ಲ ದಾಖಲಿಸಬೆಕಾದ ಭಾಷಾ ವ್ಯವಸ್ಥೆ ಮಾತ್ರ ಇಂದು “ನಪುಂಸಕ ವಸ್ತುಗಳ” ಮಧ್ಯೆ ವಿಹರಿಸುತ್ತಿದೆ.
ಆಧುನಿಕ ಸಂಶೋಧನೆಗಳೂ ಸಹಿತ ಭೂಸ್ಪರ್ಶ ಕಳೆದುಕೊಂಡು, ಭಾವರಹಿತ ಪ್ರತಿಪಾದನೆಗಲಿಗೆ ತಮ್ಮನ್ನು ಸೀಮಿತಗೊಳಿಸಿಕೊಳ್ಳುತ್ತಿರುವ ಇಂದಿನ ದಿನಮಾನಗಳಲ್ಲಿ, ಈ ರೀತಿಯ ತೀವ್ರತೆರಣಾದ ವಿಚಲನೆಯ ದಿಕ್ಕನ್ನು ಗುರುತಿಸುವ ಕಾರ್ಯವಾಗಬೇಕಿದೆ. ತೀವ್ರತೆರನಾದ ಪರಿವರ್ತನೆಗಳು , ಅವುಗಳ ಮೂಲಕವಾಗಿ ಸೂಕ್ಷ್ಮವಾಗಿ ರೂಪಾಂತರಗೊಳ್ಳುತ್ತಿರುವ ಸಂಸ್ಕೃತಿಯು , ಭವಪ್ರಪಂಚದಲ್ಲಿ ಜರುಗುವ ಘಟನೆಗಳು ಯಾವ ರೀತಿ ಭಾವಪ್ರಪಂಚದಲ್ಲಿ ಸಂವಹನಗೊಳ್ಳಬೇಕು ಎನ್ನುವದನ್ನು ಪೀಳಿಗೆಗೆ ತಿಳಿಸಿಕೊಡುವ ಕಾರ್ಯ ಮಾಡಬೇಕಾಗಿದೆ.
ಸೆಕ್ಸ= ಭವಲಿಂಗ ಜೆಂಡರ್ = ಭಾವಲಿಂಗ
“ ಭವ ಪ್ರಪಂಚ” (ನಿಸರ್ಗ ಸಹಜ)ದಲ್ಲಿ ರೂಪುಗೊಂಡ ಈ ಲಿಂಗಸಮಸ್ಯೆ “ಸೆಕ್ಸ” ನ್ನು “ಭವಲಿಂಗ”ವೆಂದೂ ಹಾಗೂ ಭಾವ ಪ್ರಪಂಚದಲ್ಲಿ (ಸಾಮಾಜಿಕ ನೆಲೆಯಲ್ಲಿ) “ ಜೆಂಡರ್ ” ನ್ನು “ ಭಾವಲಿಂಗ”ವೆಂತಲೂ ವರ್ಗೀಕರಿಸಬಹುದಾಗಿದೆ. ಭವಪ್ರಪಮಚ ನೈಸರ್ಗಿಕ. ಇಲ್ಲಿ ಹೆಣ್ಣು-ಗಂಡು ಪ್ರಕೃತಿ ನಿರ್ಮಿತ. ವಿಭಾಗಿಕರಣ ಸುಲಭ. ಇನ್ನು ಭಾವನೆಗಳಲ್ಲಿ ಅಭಿವಯಕ್ತಗೊಳ್ಳುತ್ತಿರುವ ಸಮಯದಲ್ಲಿ ಎದುರಾಗಬಹುದಾದ ಸಂದರ್ಭಗಳಲ್ಲಿ ಈಗ ಇಂಗ್ಲೀಷಿನಲ್ಲಿ ಬಳಸಲ್ಪಡುವ ಜೆಂಡರ್ ಗೆ “ಭಾವಲಿಂಗ”ವೆಂದು ನಾಮಕರಣ ಮಾಡಿಕೊಂಡು ಸಂವಹನ ಸುಲಭ ಮಾಡಿಕೊಳ್ಳಬೇಕಿದೆ.
ಮತ್ತೊಂದು ಆಧುನಿಕ ಸಮಸ್ಯೆ;
ತೀರ ತೀರ ಇತ್ತೀಚೆಗೆ ಇಂಗ್ಲೀಷ ಭಾಷೆಯಲ್ಲಿ ತೃತೀಯ ಪುರುಷ ಏಕವಚನದ ಹೀ (ಅವನು) ಶೀ (ಅವಳು) ಇಟ್ (ಅದು) ಜೊತೆಗೆ ಮತ್ತೊಂದು ಸರ್ವನಾಮವನ್ನು ಜೋಡಿಸದ್ದಾರೆ. ಅದು ಉಭಯಲಿಂಗಿಗಳಿಗೆ ಬಳಸಲ್ಪಡಬೇಕಾಗುವ ಶಬ್ದ (ಹೆನ್ನ್) . ಹೀಗಾಗಿ ಪ್ರತಿನಿತ್ಯ ಬದಲಾಗುತ್ತಿರುವ ಿಂದಿನ ಸಂದರ್ಬದಲ್ಲಿ ಭಾಷೆಯನ್ನು ನವೀಕರಿಸಿಕೊಳ್ಳುತ್ತ ಹೊಗಬೇಕಾದ ಒತ್ತಡದಲ್ಲಿ , ಕನ್ನೆಡವನ್ನು ಒಳಗೊಂಡು ಎಲ್ಲ ಭಾರತೀಯ ಭಾಷೆಗಳೂ (ಸಂಸ್ಕೃತವನ್ನು ಹೊರತು ಪಡಿಸಿ) ತೊಡಗಿಕೊಳ್ಳಬೇಕಾಗಿದೆ. ಶಾಸ್ತ್ರೀಯ ಭಾಷಾ ಸ್ಥಾನಮಾನಕ್ಕೆ ಇಂತಹ ಸವಾಲುಗಳು ಸಹಜ. . ಮೊದಲಿನಿಂದಲೂ ಉತ್ತರ ಭಾರತದಿಂದ ಬಂದ ಸಂಸ್ಕೃತದ ನಿಯಮಗಳನ್ನೇ ಅನುಸರಿಸಿಕೊಂಡು , ಇದೀಗ ಮತ್ತೆ ಪಶ್ಚಿಮದಿಂದ ಆಮದಾಗುತ್ತಿರುವ ಇಂಗ್ಲೀಷಿನ ಪರಿಧಿಯಲ್ಲಿಯೇ ನಾವೂ (ನಮ್ಮ ಕನ್ನಡವೂ) ಉಸಿರಾಡುತ್ತಿರುವಾಗ , ಬದುಕಿನ ನೆಲೆಯಲ್ಲಿ ರೂಪಣೆಗೊಳ್ಳಬಹುದಾದ ಭಾವಲಿಂಗಗಳನ್ನು ಆಧುನಿಕ ಭಾಷಾ ಪದ್ಧತಿಗೆ ರೂಪಾಮತರಗೋಲಿಸಕೊಳ್ಳುವ ಸೂತ್ರಗಳನ್ನು ಭಾಷಾಶಾಸ್ತ್ರಜ್ಞರು ನೀಡುವರೇ ಎಂದು ಕಾಯಬೇಕಾಗಿದೆ.
ಈ ವಿಷಯವನ್ನು ಅಲ್ಲಮನಿಂದಲೇ ಪ್ರಾರಂಭಿಸಿದಕ್ಕೆ ಅಲ್ಲಮನ ಮಾತಿನಿಂದಲೇ ಮುಕ್ತಾಯಗೊಳಿಸಬೇಕಿದೆ. “ಮಾತೆಂಬುದು ಜ್ಯೋತಿರ್ಲಿಂಗ” ವಲ್ಲಿ ಮಾತಿನ ಮೂಲಕ ಭಾವಲಿಂಗವನ್ನು ಹೇಳುವ ಅಲ್ಲಮ ಅದೇ ಜ್ಯೊತಿರ್ಲಿಂಗವನ್ನು , ಗುಹೇಶ್ವರಾ ನೀನು ಜ್ಯೋತಿರ್ಲಿಂಗವಾದೆ ಎಂದು ಪುಲ್ಲಿಂಗಭಾವದಲ್ಲಲಿ ಕಡೆದಿದ್ದಾನೆ. ಅಷ್ಟಕ್ಕೆ ನಿಲ್ಲದೆ ಮತ್ತು ಆ ವಿಷಯವನ್ನು ಭವ-ಭಾವ ದಿಮದ ಮುಕ್ತಿಗೊಳಿಸಿ ಅನುಭಾವಕ್ಕೆ ಒಯ್ಯುವ ರೀತಿಯಲ್ಲಿ “ಕಂಗಳಲ್ಲಿ ಜ್ಯೋತಿರ್ಲಿಂಗ” ಎನ್ನುವ ಅಪ್ರತಿಮ ಪ್ರತಿಮೆಯೊಂದನ್ನು ರೂಪಿಸಿದ್ದಾನೆ. ಇಲ್ಲಿ ರೂಪಿತವಾಗಿರುವ ಜ್ಯೋತಿರ್ಲಿಂಗ ಪುಲ್ಲಿಂಗವೂ ಹೌದು. ನಪುಂಸಕಲಿಂಗವೂ ಹೌದು. ಜ್ಯೋತಿಯೆಂದಾದಾಗ ಸ್ತ್ರೀಲಿಂಗವೂ ಹೌದು. ಹೀಗಾಗಿ ಭಾಷಾ ವ್ಯವಸ್ಥೆಯಲ್ಲಿ ಸೃಷ್ಟಿಯಾಗಿಬಹುದಾದ ಈ “ಲಿಂಗ ಸಮಸ್ಯೆ”ಯನ್ನು ಅಲ್ಲಮ ಅನುಭಾವ ಪ್ರಪಂಚದ ಅಂಚಿನಲ್ಲಿ ಪರಿಹರಿಸಿಕೊಳ್ಳಬೇಕಿದೆ. ಅಲ್ಲಮನ ಈ ವಿಚಾರಕ್ಕೆ ಬರೆದಿರುವ ಒಂದು ಟೀಕೆಯಲ್ಲಿ “ಲಿಂಗಕ್ಕೆ ಲಿಂಗವೇ ಲಿಂಗ” ಎನ್ನುವ ವಿವರಣೆ ಇದೆ.
-ಪುಟ್ಟು ಕುಲಕರ್ಣಿ
ಲೇಖಕರ ಪರಿಚಯ: ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ವಾಸವಾಗಿರುವ ಹಿರಿಯ ಸಾಹಿತಿ ಪುಟ್ಟು ಕುಲಕರ್ಣಿಯವರು ತಮ್ಮದೇ ಆಧ ಚಿಂತನಶೀಲ ಬರಹಗಳ ಮೂಲಕ ನಾಡಿನ ಗಮನಸೆಳೆದವರು. ಕುಸುಮ ಸೊರಬರವರ ಸಾರಥ್ಯದ ಸ್ನೇಹಕುಂಜದ ಮೂಲಕ ಜಿಲ್ಲೆಯಲ್ಲಿ ಪರಿಸರ ಚಳುವಳಿಯಲಗಲಿಯೂ ತೊಡಗಿಸಿಕೊಂಡುರುವ ಇವರು ಪ್ರಭುದ್ದ ವಾಗ್ಮಿಗಳು.