- ಬಿ.ಎನ್. ವಾಸರೆ
ಹಸಿರು ಅರಣ್ಯದಿಂದಾವೃತ್ತವಾಗಿರುವ, ಒಂದು ರೀತಿಯ ಬಯಲು ಸೀಮೆ, ಮತ್ತೊಂದು ಬಗೆಯ ಮಲೆನಾಡಿನ ಸೊಗಡನ್ನು ಕಾಣುವ, ಭಾಗಶಹ ದೇಶದ ಎಲ್ಲ ಜನ ಸಂಸ್ಕøತಿ, ಬಹು ಭಾಷೆ, ವಿಭಿನ್ನ ಉಡುಪು, ತರತರ ಆಹಾರ ಪದ್ದತಿಗಳನ್ನು ಹೊಂದರುವ ದಾಂಡೇಲಿಯನ್ನು ಮಿನಿ ಇಂಡಿಯಾ ಎಂದೇ ಕರೆಯುತ್ತಾರೆ. ಈ ದಾಂಡೇಲಿ ಹಲವು ಸಂಗತಿಗಳಲ್ಲಿ ತನ್ನದೇ ಆದ ವೈಶಿಷ್ಟ್ಯತೆಗಳನ್ನು ಹೊಂದಿದೆ. ಪ್ರವಾಸೋದ್ಯಮ ಇರಬಹುದು. ಬೃಹತ್ ಉದ್ಯಮಗಳೀರಬಹುದು. ಇದೆಲ್ಲದಕ್ಕಿಂತ ಹೆಚ್ಚಾಗಿ ಇಲ್ಲಿಯ ನಿತ್ಯಹರಿದ್ವರ್ಣ ಕಾಡು, ಇಲ್ಲಿಯ ಬೆಲೆಬಾಳುವ ಗಿಡ ಮರ, ಇಲ್ಲಿಯ ಅಪರೂಪದ ವನ್ಯಜೀವಿಗಳು, ಇಲ್ಲಿ ಕಾಣುವ ಚಂದದ ಬಾನಾಡಿಗಳು, ಜಲ ಸಾಹಸ ಕ್ರೀಡೆಗಳು, ಪ್ರವಾಸಿ ಚಟುವಟಿಕೆಗಳೂ ಈ ರಾಜ್ಯ, ದೇಶಕ್ಕಷ್ಟೇ ಅಲ್ಲ ವಿದೇಶಕ್ಕೂ ಪರಿಚಿತ. ಹಾಗಾಗಿಯೇ ದೇಶ-ವಿದೇಶಗಳ ಜನರು ಗೂಗಲ್‍ನಲ್ಲಿ ದಾಂಡೇಲಿಯನ್ನು ಹುಡಿಕಿ ಬರುತ್ತಾರೆ. ತನ್ನ ಗರ್ಬದೊಳಗಿನ ಹಲವು ನಿಸರ್ಗ ಸಂಪತ್ತುಗಳಿಂದ ದಾಂಡೇಲಿ ದೇಶ-ವಿದೇಶಗಳ ಗಮನ ಸೆಳೆದಿದೆ ಎಂದರೆ ಅತಿಶಯೋಕ್ತಿಯೇನೂ ಆಗಲಾರದು.
ಸಾಗವಾನಿ… ತೇಗ… ಈ ಹೆಸರು ಬಾಗಶಹ ಎಲ್ಲರಿಗೂ ತಿಳಿದಿರುವುದೇ ಆಗಿದೆ. ಕಟ್ಟಿಗೆ ಹಾಗೂ ಕಟ್ಟಿಗೆಯಿಂದ ಮಾಡಿಸುವ ಉಪಕರಣಗಳನ್ನು ಬಹುವಾಗಿ ಮೆಚ್ಚುವ ಜನರಿಗಂತೂ ಸಾಗವಾನಿ ಎಂದರೆ ಬಹಳ ಪ್ರೀತಿ. ವೆರ್ಭನಾಸಿ ತಳಿಗೆ ಸೇರಿದ ಈ ಸಾಗವಾನಿ ವಿಶೇಷವಾಗಿ ಮನ್ಸೂನ್ ಕಾಡುಗಳಲ್ಲಿ ಕಂಡು ಬರುತ್ತದೆ. ಆಗ್ನೇಯ ಏಷ್ಯಾ ದೇಶಗಳಲ್ಲಿಯೂ ಸೇರಿದಂದೆ ನಮ್ಮ ದೇಶದ ಹಲವು ಪ್ರದೇಶಗಳಲ್ಲಿ ಈ ಸಾಗವಾನಿ ಮರ ಬೆಳೆಯುತ್ತಿದೆಯಾದರೂ ದಾಂಡೇಲಿ ಟೀಕ್‍ಗೆ ವಿದೇಶಗಳಲ್ಲೂ ಸಾಕಷ್ಟು ಬೇಡಿಕೆಯಿದೆ. ದಾಂಡೇಲಿಯಿಂದ ಸಾಗವಾನಿ ಕಟ್ಟಿಗೆ ಖರೀದಿಸುವ ಹೆಚ್ಚಾನೆಚ್ಚು ಕೇರಳ, ತಮಿಳುನಾಡಿನವರು ಅಲ್ಲಿ ಆಲಂಕಾರಿಕ ಉಪಕರಣ ತಯಾರಿಸಿ ವಿದೇಶಕ್ಕೆ ರಪ್ತು ಮಾಡುತ್ತಾರೆ. ಇದಕ್ಕೆ ವಿದೇಶದಲ್ಲಿ ಎಲ್ಲಿಲ್ಲದ ಬೇಡಿಕೆಯಂತೆ.
ಗೃಹ ನಿರ್ಮಾಣ, ಅಲಂಕಾರಿಕ ಸಾಧನ, ಪೀಠೋಪಕರಣಗಳಿಗಷ್ಟೇ ಅಲ್ಲದೇ ಇದು ಬಹಳ ಗಟ್ಟಿಯಾದ ಕಟ್ಟಿಗೆಯಾಗಿದ್ದರಿಂದ ಹಡಗು ಕಟ್ಟಲು ಸಹ ಇದು ಬಳಕೆಯಾಗುವುದು ವಿಶೇಷವಾಗಿದೆ. ಈಗೀಗ ಈ ಕಟ್ಟಿಗೆಯನ್ನು ಮನೆಗಳ ಆತಂತರಿಕ ಅಲಂಕಾರಕ್ಕೂ ಬಳಸಲಾಗುತ್ತಿದೆ. ಕಾರಣ ಇದರ ಗಟ್ಟಿತನ ಮತ್ತು ಬಣ್ಣ. ಸಾಗವಾನಿ ಇದು ಜೀನೋಟೈಪ್ ಹಾಗೂ ಸೀನೋ ಟೈಪ್‍ಗಳಲ್ಲಿ ಬೇಡಿಕೆಯುಳ್ಳದ್ದು. ಇದರ ತಳಿಗೂ ಬೇಡಿಕೆ ಹಾಗೂ ಆಕರ್ಷಣೆಗೂ ಬೇಡಿಕೆಯಿದೆ. ಈ ಕಟ್ಟಿಗೆಯೊಳಗಿನ ಆಯಿಲ್ ಕಂಟೆಂಟ್ ( ತೈಲ ಅಂಶ) ನಿಂದಾಗಿ ಈ ಕಟ್ಟಿಗೆಗೆ ಕೀಟ ಭಾದೆಯಿಲ್ಲ. ಹಾಗಾಗಿ ಇದು ಬಹುಕಾಲ ಬಾಳುತ್ತದೆ. ಬೇರೆ ಕಡೆಗಳಿಗಿನ ಸಾಗವಾನಿ ಕಟ್ಟಿಗೆಗೆ ಹೋಲಿಸಿದರೆ ದಾಂಡೇಲಿಯ ಸಾಗವಾನಿಯಲ್ಲಿ ವಿಶೇಷವಾದ ಬಣ್ಣ ಹಾಗೂ ಸುವಾಸನೆಯಿದೆ. ಗಟ್ಟಿತನವೂ ಇದೆ. ಈ ಕಟ್ಟಿಗೆಯ ಕೆತ್ತನೆಯ ನಂತರ ಇದರೊಳಗಡೆ ಸಿಗುವ ಡಿಸೈನ್ ಹಾಗೂ ಹೊಳಪು ಆಕರ್ಷಕವಾಗಿರುತ್ತದೆ. ಇದು ದಾಂಡೇಲಿಯದ್ದೇ ಸಾಗವಾನಿ ಎಂದು ಅದರ ಬಣ್ಣದಿಂದಲೇ ಗುರುತಿಸಬಹುದೆಂದು ಹೇಳುತ್ತಾರೆ ತಿಳಿದವರು.
ಬೇರೆ ಕೆಡೆಯ ಸಾಗವಾನಿಗಳ ಬೆಳವಣಿಗೆಗಿಂತ ದಾಂಡೇಲಿ ಸಾಗವಾನಿಯ ಬೆಳವಣಿಗೆ ನಿಧಾನ. ಹಾಗಾಗಿಯೇ ಇಲ್ಲಿಯ ಸಾಗವಾನಿಯಲ್ಲಿ ಗಟ್ಟಿತನ ಹೆಚ್ಚು. ದಾಂಡೇಲಿ ಅಭಯಾರಣ್ಯದೊಳಗೆ ಹೆಚ್ಚಾನು ಹೆಚ್ಚು ಬೃಹತ್ ಗಾತ್ರದ ಸಾಗವಾನಿ ಮರಗಳೇ ಇದ್ದು, ಈ ಸಾಗವಾನಿ ಮರ ಬೆಳೆಸುವಲ್ಲಿ ಹಾಗೂ ದಾಂಡೇಲಿ ಸಾಗವಾನಿಯ ಬಗ್ಗೆ ಇನ್ನೂ ಹೆಚ್ಚಿನ ಪ್ರಚಾರ ನೀಡುವಲ್ಲಿ ಯೋಜಿತ ಕಾರ್ಯಕ್ರಮವೊಂದನ್ನು ಹಾಕಿಕೊಳ್ಳಬೇಕಾದ ಅಗತ್ಯತೆಯಿದೆ. ಅದೇನೇ ಇರಲಿ ದಾಂಡೇಲಿ ಅಭಯಾರಣ್ಯದಲ್ಲಿ ಬೆಳೆದ ಸಾಗವಾನಿ ಕಟ್ಟಿಗೆ ಹಾಗೂ ಆ ಕಟ್ಟಿಗೆಯಿಂದ ತಯಾರಾದ ಉಪಕರಣಗಳಿಗೆ ನಮ್ಮ ದೇಶವಷ್ಟೇ ಅಲ್ಲ. ವಿದೇಶದಲ್ಲಿಯೂ ಬಹು ಬೇಡಿಕೆಯಿದೆ ಎನ್ನುವುದೇ ನಮ್ಮ ಹೆಗ್ಗಳಿಕೆಯಾಗಿದೆ.